ಕರೋನಾ ಇಡೀ ದೇಶವನ್ನೇ ಕಂಗಾಲಾಗಿಸಿದೆ. ಸೋಂಕಿತರು ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸೋಂಕಿತರ ಸಂಪರ್ಕದಲ್ಲಿ ಇದ್ದವರೂ ಹಾಗೂ ಅಂತರ್ ರಾಜ್ಯ ಹಾಗೂ ವಿದೇಶದಿಂದ ಆಗಮಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಅಂದರೆ ಸರ್ಕಾರದ ಉಸ್ತುವಾರಿಯಲ್ಲಿ ಕ್ವಾರಂಟೈನ್ ಮಾಡುವ ವ್ಯವಸ್ಥೆ ದೇಶದಲ್ಲಿ ಜಾರಿಯಲ್ಲಿದೆ. ಸಾವಿರಾರು ಕ್ವಾರಂಟೈನ್ ಕೇಂದ್ರಗಳಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಕರೋನಾ ಸೋಂಕಿನ ಆಪತ್ತಿನಲ್ಲೂ ಕರೋನಾ ಸೋಂಕಿತರು ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರನ್ನು ಉಪಚರಿಸಲು ಸಾಕಷ್ಟು ಜನರು ಶ್ರಮ ಪಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪೊಲೀಸರು, ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರನ್ನು ‘ಕರೋನಾ ವಾರಿಯರ್ಸ್’ ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದರು. ನಂತರ ವೈದ್ಯರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಎಲ್ಲೆಡೆ ಗೌರವವೂ ಹರಿದು ಬಂದಿತ್ತು. ಆದರೆ ಇನ್ನೂ ಕೂಡ ಎಲೆಮರೆ ಕಾಯಿಯಂತೆ ಕರೋನಾ ಸೋಂಕಿತರು ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಉಪಚಾರಕ್ಕಾಗಿ ಕರೋನಾ ಭೀತಿಯಲ್ಲೂ ಕೆಲಸ ಮಾಡುವ ಜನರಿಗೆ ಗೌರವ ಸಿಗುವುದು ದೂರದ ಮಾತು. ಆದರೆ ಅವಮಾನ ಮಾತ್ರ ಎಗ್ಗಿಲ್ಲದೆ ನಡೀತಿದೆ.
ದೇವರನಾಡು, ಚಾರ್ಧಾಮ್ ಕ್ಷೇತ್ರ ಎಂದು ದೇಶದಲ್ಲಿ ಖ್ಯಾತಿ ಪಡೆದಿರುವ ಉತ್ತರಾಖಂಡ್ ರಾಜ್ಯದಲ್ಲಿ ನೈನಿತಾಲ್ ನಲ್ಲಿ ಕರೋನಾ ಸಂಕಷ್ಟದ ಕಾಲದಲ್ಲೂ ಜಾತಿ ಎನ್ನುವ ಪಿಡುಗು ತಾಂಡವಾಡುತ್ತಿದೆ. ಕರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡಿದ್ದ ಕೇಂದ್ರದಲ್ಲಿ ದಲಿತ ಮಹಿಳೆ ಅಡುಗೆ ಬಾಣಸಿಗರಾಗಿದ್ದು, ಆಹಾರವನ್ನು ದಲಿತ ಮಹಿಳೆ ಮುಟ್ಟಿದ್ದರು ಎನ್ನುವ ಕಾರಣಕ್ಕೆ 23 ವರ್ಷದ ಯುವಕ ಊಟವನ್ನೇ ನಿರಾಕರಿಸಿದ್ದಾನೆ. ಊಟ ಹಾಗೂ ನೀರು ಕುಡಿಯಲು ನಿರಾಕರಿಸಿ ದಲಿತ ಮಹಿಳೆಯನ್ನು ಅವಮಾನಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ದಿನೇಶ್ ಚಂದ್ರ ಮಿಲ್ಕಾಣಿ ಹಾಗೂ ಅವರ ಸಂಬಂಧಿ 12 ವರ್ಷದ ಬಾಲಕ ಹಾಗೂ ಇತರೆ ಮೂವರು ಕರೋನಾ ಸೋಂಕಿನಿಂದ ಕ್ವಾರಂಟೈನ್ ಆಗಿದ್ದರು. ಮೇ 15 ರಿಂದಲೂ ಕ್ವಾರಂಟೈನ್ ಆಗಿದ್ದು, ದಲಿತ ಸಮುದಾಯಕ್ಕೆ ಸೇರಿದ ಭವಾನಿ ದೇವಿಯನ್ನು ಅಡುಗೆ ತಯಾರಿಕೆಗೆ ನೇಮಿಸಲಾಗಿತ್ತು.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಹಿಳೆ ಭವಾನಿ ದೇವಿ, ಮೊದಲು ನಮಗೆ ಊಟ ಬೇಡ, ನಮ್ಮ ಮನೆಯಿಂದ ಊಟ ಬರುತ್ತದೆ ಎಂದರು. ನಾನು ಸಾಮಾನ್ಯ ಸಂಗತಿ ಎಂದು ಸುಮ್ಮನಾಗಿದ್ದೆ. ಆದರೆ ಆ ಬಳಿಕ ನಾನು ತಂದಿಟ್ಟ ನೀರನ್ನೂ ಕುಡಿಯಲು ನಿರಾಕರಿಸಿದರು. ಆ ಬಳಿಕ ಊರಿನ ಮುಖ್ಯಸ್ಥರಿಗೆ ವಿಚಾರ ಗೊತ್ತಾಗಿ, ಮುಖೇಶ್ ಚಂದ್ರ ಭೌದ್ ಈ ಬಗ್ಗೆ ವಿಚಾರಿಸಿದಾಗ ದಲಿತ ಮಹಿಳೆ ಎನ್ನುವ ಕಾರಣಕ್ಕೆ ನಿರಾಕರಿಸುತ್ತಿದ್ದಾರೆ ಎನ್ನುವುದು ಸಾಬೀತಾಯಿತು. ಆ ಬಳಿಕ ಅಧಿಕಾರಿಗಳಿಗೆ ತಿಳಿಸಿ ದೂರು ಕೊಟ್ಟಿದ್ದೇವೆ ಎಂದಿದ್ದಾರೆ. ಆದರೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ದಿನೇಶ್ ಚಂದ್ರ ಮಿಲ್ಕಾಣಿ, ನಾನು ಆರೋಗ್ಯ ಕಾಳಜಿ ಹಾಗೂ ದೇಹದ ಉತ್ಕೃಷ್ಟತೆ ಕಾಪಾಡುವ ಉದ್ದೇಶದಿಂದ ಮನೆಯ ಊಟವನ್ನಷ್ಟೇ ಸೇವಿಸುತ್ತೇನೆ. ದಲಿತ ಮಹಿಳೆ ಅನ್ನೋ ಕಾರಣಕ್ಕೆ ತಿರಸ್ಕರಿಸಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದೀಗ ದಿನೇಶ್ ಚಂದ್ರ ಮಿಲ್ಕಾಣಿ ಸಾಂಕ್ರಾಮಿಕ ಸೋಂಕು ಹರಡುವಲ್ಲಿ ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಸೆಕ್ಷನ್ 269, ಕ್ವಾರಂಟೈನ್ ಕೇಂದ್ರದ ನಿಯಮ ಉಲ್ಲಂಘನೆಗಾಗಿ ಸೆಕ್ಷನ್ 271 ಮತ್ತು ಎಸ್ಸಿ/ಎಸ್ಟಿ ಕಾನೂನು ಅನ್ವಯ ದೂರು ದಾಖಲು ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ನೈನಿತಾಲ್ ಜಿಲ್ಲಾಧಿಕಾರಿ ಸವಿನ್ ಬನ್ಸಾಲ್ ಮಾತಾನಾಡಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ತನಿಖಾ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ತಪ್ಪು ಮಾಡಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ತನಿಖೆ, ಶಿಕ್ಷೆ ಬೇರೆ ವಿಚಾರ; ಮಾನವೀಯತೆಗೆ ಬೆಲೆ ಇಲ್ಲವೇ..?
ಓರ್ವ ಮಹಿಳೆ ಕರೋನಾ ಸಂಕಷ್ಟದಲ್ಲಿ ಸಿಲುಕಿದವರ ಉಪಚಾರಕ್ಕಾಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ ಆಕೆ ದಲಿತ ಸಮುದಾಯಕ್ಕೆ ಸೇರಿದವಳು ಎನ್ನುವ ಕಾರಣಕ್ಕೆ ಊಟ, ನೀರು ನಿರಾಕರಿಸಿದ್ದಾರೆ. ಆದರೆ ಕರೋನಾ ಸೋಂಕು ವಿಪರೀತವಾಗಿ ಉಲ್ಬಣವಾಗಿ ಆಸ್ಪತ್ರೆಗೆ ದಾಖಲಾಗುವ ಸಮಯ ಒಂದೊಮ್ಮೆ ಒದಗಿ ಬಂದರೆ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಯಾವ ಜಾತಿ ಧರ್ಮ ಎಂದು ನೋಡಿಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವೇ..? ಸಂಕಷ್ಟದ ಸಮಯದಲ್ಲಿ ಆಹಾರ ಸೇರಿದಂತೆ ಊಟೋಪಚಾರ ಮಾಡಲು ಬಂದಿದ್ದ ಮಹಿಳೆಯನ್ನು ಗೌರವಿಸುವ ಕೆಲಸ ಆಗಬೇಕಿತ್ತು. ಆದರೆ ಆಕೆಯ ಜಾತಿಯ ಆಧಾರದಲ್ಲಿ ಆಕೆಯನ್ನು ಅವಮಾನಿಸಿರುವುದು ಅಕ್ಷಮ್ಯ ಅಪರಾಧವೇ ಸರಿ. ಮಾನವೀಯತೆ ಬೆಲೆ ಕೊಡುವುದನ್ನು ಭಾರತ ರೂಢಿಸಿಕೊಳ್ಳುವ ತನಕ ಈ ದೇಶ ಮತ್ತೊಂದು ಮಜಲನ್ನು ಮುಟ್ಟುವುದಕ್ಕೆ ಸಾಧ್ಯವೇ ಇಲ್ಲ ಎನಿಸುತ್ತದೆ.