ಮಂಡ್ಯ ಜಿಲ್ಲೆಯಲ್ಲಿ ಕರೋನಾ ಸೋಂಕು ಉಲ್ಬಣಿಸಿದೆ. ದಿನನಿತ್ಯ ನೂರಾರು ಜನರು ಮುಂಬೈನಿಂದ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಕಾರಣ ಸೋಂಕು ಉಲ್ಬಣಿಸಿದೆ ಎನ್ನುವುದು ಮಂಡ್ಯ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಅವರ ಮಾತು. ಸಾವಿರಾರು ಜನರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಜಿಲ್ಲಾಡಳಿತ ವಿಫಲವಾಗಿದ್ದು, ಇದೇ ಕಾರಣಕ್ಕೆ ಮಹಾರಾಷ್ಟ್ರದಿಂದ ಬಂದಿರುವ ಎಲ್ಲರಿಗೂ ಸೋಂಕು ನಿಸ್ಸಂದೇಹವಾಗಿ ಹರಡುತ್ತಿದೆ ಎನ್ನುವ ಆರೋಪಗಳೂ ಅಲ್ಲಲ್ಲಿ ಕೇಳಿ ಬರುತ್ತಿದೆ. ಬಹುತೇಕ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳಲ್ಲಿ ಮುಂಬೈನಿಂದ ಬಂದಿರುವ ಜನರ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಶಾಲಾ ಕೊಠಡಿಯಲ್ಲಿ ಎರಡ್ಮೂರು ಕುಟುಂಬಗಳನ್ನು ಇರಿಸಿರುವ ಕಾರಣ ಸೋಂಕು ಉಲ್ಬಣವಾಗುತ್ತಿದೆ ಎನ್ನುವುದು ಭಾಗಶಃ ಸತ್ಯ. ಆದರೆ ಈ ನಡುವೆ ಜಿಲ್ಲಾಡಳಿತ ಮತ್ತೊಂದು ಎಡವಟ್ಟು ಮಾಡಿದೆ.
ಮೇ 19ರಂದು ಮಂಡ್ಯ ಜಿಲ್ಲೆಯೊಂದರಲ್ಲೇ ಬರೋಬ್ಬರಿ 71 ಹೊಸ ಕರೋನಾ ಕೇಸ್ಗಳು ಪತ್ತೆಯಾಗಿದ್ದವು. ಆ ನಂತರ ಮೇ 20 ರಂದು 8 ಕೇಸ್ ಗಳು ಪತ್ತೆಯಾಗಿದ್ದವು. ಮೇ 21ರಂದು ಮತ್ತೆ ಹೊಸದಾಗಿ 15 ಜನರಿಗೆ ಸೋಂಕು ಹರಡಿದೆ. ಇನ್ನೂ ಕನಿಷ್ಠ 500 ಜನರಲ್ಲಿ ಸೋಂಕು ಇರಬಹುದು ಎನ್ನುವುದು ಜಿಲ್ಲಾಡಳಿತದಲ್ಲಿ ಇರುವ ಅಧಿಕಾರಿಗಳ ಗುಮಾನಿ. ಹೇಗಿದ್ದರೂ ಸೋಂಕಿನ ಲಕ್ಷಣ ಜಾಸ್ತಿ ಇಲ್ಲದಿರುವ ಕಾರಣ ಪರೀಕ್ಷೆಯನ್ನು ನಿಧಾನವಾಗಿ ಮಾಡಿ ಎಂದು ಸ್ವತಃ ಜಿಲ್ಲಾಧಿಕಾರಿಗಳೇ ಮೌಖಿಕ ಆದೇಶ ನೀಡಿದ್ದಾರೆ ಎನ್ನುವುದು ಪರೀಕ್ಷಾ ಕೇಂದ್ರದ ಮೂಲಗಳ ಮಾಹಿತಿ. ಒಂದೇ ಬಾರಿಗೆ ಸೋಂಕು ಕಾಣಿಸಿಕೊಂಡರೆ ಜಿಲ್ಲೆಯ ಜನರಲ್ಲಿ ಭಯ ಜಾಸ್ತಿ ಆಗಲಿದೆ. ಜೊತೆಗೆ ಮುಂಬೈಯಿಂದ ಬಂದವರನ್ನು ಜಿಲ್ಲಾಡಳಿತ ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವ ಮಾಹಿತಿ ರಾಜ್ಯ ಸರ್ಕಾರದ ಕೈ ಸೇರಲಿದ್ದು, ರಾಜ್ಯದಲ್ಲಿ ಕೆಟ್ಟ ಹೆಸರು ಪಡೆದು ಕುಖ್ಯಾತಿ ಗಳಿಸಬೇಕಾಗುತ್ತದೆ. ಹೀಗಾಗಿ ನಿಧಾನವಾಗಿ ಟೆಸ್ಟ್ ಗಳನ್ನು ಮಾಡಿಕೊಂಡು ಹೋಗುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ ಎನ್ನುವ ಸಂದೇಶ ಹರಿದಾಡುತ್ತಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಾಗಮಂಗಲ ಶಾಸಕ ಸುರೇಶ್ಗೌಡ, ‘ಸೂಟು, ಬೂಟು ಹಾಕ್ಕೊಂಡು, ಹರಿಕಥೆ ಹೇಳಿದ್ರೆ ಆಗುತ್ತಾ’ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಕಾರ್ಯವೈಖರಿಗೆ ಅಸಮಾಧಾನ ಹೊರ ಹಾಕಿದ್ದಾರೆ. ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯ್ತು. ಸಭೆಯಲ್ಲಿ ಕರೋನಾ ನಿಯಂತ್ರಿಸುವ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡಲಾಯ್ತು. ಇದು ಸರ್ಕಾರಿ ಸಭೆಯೋ..? ಅಥವಾ ಮತ್ಯಾವುದೋ ಸಭೆಯೋ..? ಎಂಬುದೇ ಅರ್ಥವಾಗಲಿಲ್ಲ ಎಂದು ನಾಗಮಂಗಲ JDS ಶಾಸಕರಾಗಿರುವ ಸುರೇಶ್ ಗೌಡ ದೂರಿದ್ದಾರೆ.
Also Read: ಮಂಡ್ಯ ಜಿಲ್ಲೆಯ ಕ್ವಾರೆಂಟೈನ್ ಸೆಂಟರ್ ಕುರಿತು ಶಾಸಕ ಸುರೇಶ್ ಗೌಡ ಕಿಡಿ
ಕರೋನಾ ನಿಯಂತ್ರಣ ಕುರಿತು ಚರ್ಚಿಸಬೇಕಾದ ಸಭೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳ ಸಭೆಯಲ್ಲಿ ಸಚಿವ ನಾರಾಯಣಗೌಡ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು. ಆದಿಚುಂಚನಗಿರಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿ ನಮ್ಮ ಬಾಯಿ ಕಟ್ಟಿಹಾಕಿದ್ದಾರೆ. ನಾವೇನಾದ್ರು ಹೇಳಿದ್ರೆ ರಾಜಕೀಯ ಮಾಡುತ್ತಿದ್ದಾರೆ ಅಂತ ಹೇಳುತ್ತಾರೆ. “ಜಿಲ್ಲೆಯಲ್ಲಿ ಆಗಿರುವ ಅನಾಹುತದ ಹೊಣೆಯನ್ನು ಯಾರು ಹೊರುತ್ತಿಲ್ಲ. WHO ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿಲ್ಲ. ಮುಂಬೈನಿಂದ ಬಂದವರನ್ನ ಕುರಿ ತುಂಬಿದಂತೆ ಒಂದು ಹಾಸ್ಟೆಲ್ನಲ್ಲಿ ಕೂಡಿ ಹಾಕುತ್ತಿದ್ದಾರೆ. ಯಾವ ರೀತಿ ಕ್ವಾರಂಟೈನ್ ಮಾಡಿದ್ದಾರೆ ತಿಳಿಯುತ್ತಿಲ್ಲ. ಮಂಡ್ಯದಲ್ಲಿ ಸರಿಸುಮಾರು 1000 ಮಂದಿಗೆ ಸೋಂಕು ತಗುಲಲಿದೆ ಎನ್ನುವ ಮಾಹಿತಿ ಇದೆ. ಸಮುದಾಯಕ್ಕೂ ಕರೋನಾ ಹರಡುವ ಭೀತಿ ಎದುರಾಗಿದೆ. ಪಕ್ಕದ ಮೈಸೂರಿನಲ್ಲಿ ಯಾವೆಲ್ಲಾ ಕ್ರಮಕೈಗೊಂಡಿದ್ದರೂ ಅದೇ ರೀತಿ ಕೆಲಸ ಮಂಡ್ಯ ಜಿಲ್ಲೆಯಲ್ಲೂ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಏಕಾಏಕಿ ಒಂದೇ ದಿನ 71 ಜನರಲ್ಲಿ ಸೋಂಕು ಕಾಣಿಸಿದ್ದು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿದೆ ಎನ್ನುವುದು ಸತ್ಯವಾದ ಸಂಗತಿ. ʼಬಾಂಬೆ ಇಂದ ಬಂದವರುʼ ಎಂದ ಮಾತ್ರಕ್ಕೆ ಸೋಂಕಿತರಾಗಿಯೇ ಇರಬೇಕು ಎನ್ನುವುದು ಕಡ್ಡಾಯವಲ್ಲ. ಮುಂಬೈಯಿಂದ ಆಗಮಿಸಿರುವ ಜನರನ್ನು ನಿರ್ವಹಣೆ ಮಾಡುವುದರಲ್ಲಿ ಎಡವಿದೆ ಎನ್ನುವುದು ಸತ್ಯವಾದ ಸಂಗತಿ. ಯಾಕಂದ್ರೆ ಒಬ್ಬರಿಗೆ ಸೋಂಕು ಬರಬಹುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರೆ ಸೋಂಕು ಇಡೀ ಕುಟುಂಬಕ್ಕೆ ಹರಡುವುದಾದರೂ ಹೇಗೆ ಅಲ್ಲವೇ..? ಸಚಿವ ನಾರಾಯಣಗೌಡ ಮಾತ್ರ ದರ್ಪದ ಮಾತುಗಳನ್ನೇ ಆಡುತ್ತಿದ್ದಾರೆ. ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಇನ್ನೇನು ಮಾಡಬೇಕು ಎಂದು ಬೇಜವಾಬ್ದಾರಿಯುತ ಮಾತುಗಳನ್ನೇ ಆಡಿಕೊಂಡು ತಿರುಗುತ್ತಿದ್ದಾರೆ. ಇದೀಗ ಟೆಸ್ಟ್ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳು ಮೌಖಿಕ ಸಂದೇಶ ಕೊಟ್ಟಿದ್ದಾರೆ ಎನ್ನುವ ಮಾತು ಸತ್ಯವೇ ಆಗಿದ್ದರೆ, ಟೆಸ್ಟ್ ಮಾಡುವ ಮೊದಲೇ ಜನರು ಸಾವಿನ ಮನೆ ಸೇರುವುದು ಖಚಿತವಾಗುತ್ತದೆ.
ಈಗಾಗಲೇ ನಾಗಮಂಗಲದ ಸೋಮನಹಳ್ಳಿ ಕ್ವಾರಂಟೈನ್ ನಲ್ಲಿದ್ದ 66 ವರ್ಷದ ವೃದ್ಧೆ ಸಾವನ್ನಪ್ಪಿದ್ದರು. ಮೇ 19ರಂದು ಕ್ವಾರಂಟೈನ್ ಕೇಂದ್ರದಲ್ಲಿ ಕೋವಿಡ್ 19 ಟೆಸ್ಟ್ ಒಳಗಾದ ದಿನವೇ ಸಂಜೆ ಸಾವನ್ನಪ್ಪಿದ್ದಾರೆ. ಇನ್ನಷ್ಟೇ ವರದಿ ಬರಬೇಕಿದೆ. ಕೋವಿಡ್-19 ನಿಂದಲೇ ಸಾವನ್ನಪ್ಪಿದ್ದಾರೋ..? ಅಥವಾ ಬಳಲಿಕೆಯೋ..? ಇನ್ಯಾವುದೋ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆಯೋ ಎನ್ನುವ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಅಂತ್ಯಕ್ರಿಯೆ ವೇಳೆಯಲ್ಲೂ ಜಿಲ್ಲಾಡಳಿತ ಎಡವಟ್ಟು ಮಾಡಿದ್ದು, ಆಂಬ್ಯುಲೆನ್ಸ್ ನಲ್ಲಿ ಶವ ತಂದಾಗ ಒಡವೆಗಳನ್ನು ಬಿಚ್ಚಿಕೊಳ್ಳುವ ಉದ್ದೇಶದಿಂದ ಮೃತ ವೃದ್ಧೆಯ ಪತಿಯನ್ನೇ ಆಂಬ್ಯುಲೆನ್ಸ್ ಗೆ ಹತ್ತಿಸಿ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಳವಳ್ಳಿಯ CDPO ಅಧಿಕಾರಿಗೆ ಸೋಂಕು ಕಾಣಿಸಿಕೊಂಡಿದೆ. ಬಹುತೇಕ ಸರ್ಕಾರಿ ಅಧಿಕಾರಿಗಳು ಸೋಂಕಿತ ಅಧಿಕಾರಿಯ ಸಂಪರ್ಕದಲ್ಲಿ ಇರುವುದು ಗೊತ್ತಾಗಿದೆ. ಇಷ್ಟು ಸಾಲದ್ದು ಎಂಬಂತೆ ಮೊನ್ನೆಯಷ್ಟೇ ತಾಲೂಕು ಆಡಳಿತ ಅಧಿಕಾರಿಗಳಿಗೆ ಸೋಂಕಿತ ವ್ಯಕ್ತಿಯೇ ಔತಣಕೂಟ ಏರ್ಪಡಿಸಿದ್ದು, ಮತ್ತೊಂದು ಸಂಕಷ್ಟ ತಂದೊಡ್ಡುವ ಅಪಾಯದ ಮುನ್ಸೂಚನೆ ಕೊಡುತ್ತಿದೆ. ಇಷ್ಟು ಸಾಲದ್ದು ಎಂಬಂತೆ ಸೋಂಕಿತ ಅಧಿಕಾರಿಯ ಇಡೀ ಕುಟುಂಬ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನುವುದು ಚಾಮರಾಜನಗರಕ್ಕೂ ಆತಂಕ ಹುಟ್ಟಿಸಿದೆ. ಇತ್ತೀಚಿಗಷ್ಟೇ ಕಿರುಗಾವಲಿನಲ್ಲಿ ಮನೆಯ ಗೃಹಪ್ರವೇಶ ಮಾಡಿ ಊರಿನ ಜನರಿಗೆಲ್ಲಾ ಔತಣಕೂಟ ಏರ್ಪಡಿಸಿದ್ದರು ಎನ್ನಲಾಗಿದ್ದು, ಯಾರಿಗೆಲ್ಲಾ ಸೋಂಕು ಹರಡಿದೆಯೋ ಎನ್ನುವಂತಾಗಿದೆ. ಒಟ್ಟಾರೆ ಜಿಲ್ಲಾಡಳಿತ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಲೇ ಇದೆ. ಪಾಂಡವಪುರಕ್ಕೆ ಸೋಂಕಿತ ಮೃತದೇಹ ತರುವುದಕ್ಕೆ ಅವಕಾಶ ಕೊಟ್ಟು ಆ ನಂತರ ನಾಲ್ವರಿಗೆ ಸೋಂಕು ಹರಡಲು ಕಾರಣವಾಗಿತ್ತು. ಇದೀಗ ಸೋಂಕಿತರನ್ನು ಟೆಸ್ಟ್ ಮಾಡದೆ ನಿಧಾನವಾಗಿ ತಪಾಸಣೆ ಮಾಡುವಂತೆ ಸೂಚಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.