ಮೇ 10 ರಂದು ರಾತ್ರಿ ಭಟ್ಕಳದ ಮದೀನಾ ಕಾಲೊನಿಯಲ್ಲಿ ಆಕಸ್ಮಿಕವಾಗಿ ಬಿದ್ದು ಹೆಣ್ಣು ಮಗುವೊಂದರ ಕೈ ಮುರಿತಕ್ಕೊಳಗಾಗಿತ್ತು. ತಕ್ಷಣ ಕುಟುಂಬಸ್ಥರು ಭಟ್ಕಳದ ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಚಿನ್ಮಯ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಉತ್ತರ ಕನ್ನಡ- ಉಡುಪಿ ಚೆಕ್ ಪೋಸ್ಟಿನಲ್ಲಿ ವಾಹನವನ್ನು ತಡೆದ ಸಿಬ್ಬಂದಿ ಮಗುವಿನ ಗಂಭೀರ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮಗುವಿನ ಪರಿಸ್ಥಿತಿ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕಿಂತ ಗಂಭೀರವಾಗಿತ್ತು. ಇದನ್ನು ಗಮನಿಸಿದ ಅಲ್ಲಿನ ವೈದ್ಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿ, ಉಡುಪಿ- ದಕ್ಷಿಣ ಕನ್ನಡ ಜಿಲ್ಲಾ ಚೆಕ್ ಪೋಸ್ಟಿನಲ್ಲಿ ತೋರಿಸುವಂತೆ ಪತ್ರವನ್ನೂ ನೀಡಿದ್ದಾರೆ. ಅದರಂತೆ ಮೇ 11ರ ಬೆಳಗಿನ ಜಾವ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು.
ಅಂದೇ ಬೆಳಿಗ್ಗೆ 9:30 ರ ವೇಳೆಗೆ ಬಾಲಕಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮೂಳೆ ಜೋಡಿಸಲಾಗಿತ್ತು, ಬಳಿಕ ಕರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಬಾಲಕಿ ಮತ್ತು ಬಾಲಕಿಯ ತಾಯಿಯನ್ನು ಐಸೊಲೇಷನ್ನಲ್ಲಿರಿಸಿ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ತಾಯಿ ಮತ್ತು ಮಗುವಿಗೆ ಪರೀಕ್ಷೆಯಲ್ಲಿ ಕರೋನಾ ಸೋಂಕು ಇಲ್ಲದಿರುವುದು ಎಂದು ಪತ್ತೆಯಾಗಿತ್ತು. ಇಷ್ಟರಲ್ಲಿಯೇ ಶಸ್ತ್ರ ಚಿಕಿತ್ಸೆಗೊಳಗಾದ ಮಗು ಚೇತರಿಸಿಕೊಂಡದ್ದರಿಂದ ಮೇ 13 ರಂದು ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಈ ಕುರಿತು, “ಭಟ್ಕಳ ಮೂಲದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಉಳಿದ ರೋಗಿಗಳನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ” ಎನ್ನುವ ತಲೆ ಬರಹದಲ್ಲಿ ವರದಿ ಮಾಡಿದ ರಾಷ್ಟ್ರೀಯ ಆಂಗ್ಲ ಮಾಧ್ಯಮ ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ “ಬಾಲಕಿಯ ಕುಟುಂಬಸ್ಥರು ತಾವು ಭಟ್ಕಳ ಮೂಲದಿಂದ ಬಂದಿದ್ದರ ಕುರಿತು ಮಾಹಿತಿ ನೀಡದೆ ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಬಾಲಕಿಯ ಕುಟುಂಬಸ್ಥರು ಸುಳ್ಳು ಮಾಹಿತಿ ನೀಡಿರುವದರಿಂದ ಅವರ ವಿರುದ್ದ ಪೋಲಿಸರಿಗೆ ದೂರು ನೀಡಲಾಗಿದೆ” ಎಂದು ಸುಳ್ಳು ಮಾಹಿತಿ ಪ್ರಕಟಿಸಿದ್ದಾರೆ.
ಕನ್ನಡದ ಪ್ರಖ್ಯಾತ ದಿನಪತ್ರಿಕೆ ಪ್ರಜಾವಾಣಿ “ಕಂಗಾಲಾದ ವೈದ್ಯರು, ರೋಗಿಗಳಿಗೆ ಕ್ವಾರಂಟೈನ್” ಎನ್ನುವ ಶೀರ್ಷಿಕೆಯಡಿಯಲ್ಲಿ ಬಾಲಕಿಯ ಕುಟುಂಬಸ್ಥರು ಸುಳ್ಳು ಮಾಹಿತಿ ನೀಡಿ ದಾಖಲಿಸಿರುವುದರಿಂದ “ಆಸ್ಪತ್ರೆಯಲ್ಲಿ ಎರಡು ದಿನದಿಂದ ಶಸ್ತ್ರ ಚಿಕಿತ್ಸೆ ವೈದ್ಯರು, ಸಿಬ್ಬಂದಿ ಯಾರೂ ಇಲ್ಲವಾಗಿದೆ” ಎಂದು ವರದಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿನಿ ಆಸ್ಪತ್ರೆಯ ಹೆಸರಿನಲ್ಲಿ, ಡೆಕ್ಕನ್ ಹೆರಾಲ್ಡ್ ವರದಿಯ ಮಾಹಿತಿಗಿಂತ ವ್ಯತಿರಿಕ್ತವಾದ ಪತ್ರಿಕಾ ಪ್ರಕಟನೆಯೊಂದು ಹರಿದಾಡುತ್ತಿದ್ದು ಅದರಲ್ಲಿ ಕುಟುಂಬಸ್ಥರ ವಿರುದ್ಧ ಪೋಲಿಸರಿಗೆ ದೂರು ನೀಡಲಾಗಿರುವುದು, ಸಿಬ್ಬಂದಿ ಮತ್ತು ಉಳಿದ ರೋಗಿಗಳನ್ನು ಕ್ವಾರಂಟೈನ್ನಲ್ಲಿರಿಸಿದೆ ಎನ್ನುವ ಯಾವ ವಿಷಯವನ್ನು ಉಲ್ಲೇಖಿಸಿಲ್ಲ. ಅಲ್ಲದೆ ಬಾಲಕಿ ಕುಟುಂಬಸ್ಥರು ಯಾವುದೇ ಮಾಹಿತಿಯನ್ನೂ ಗೌಪ್ಯವಾಗಿಡದೆ ತಮ್ಮ ಆಧಾರ್ ಕಾರ್ಡ್ ನೀಡಿದ್ದರೆಂದು ಸ್ಪಷ್ಟೀಕರಣ ನೀಡಲಾಗಿದೆ.
ಈ ಪತ್ರಿಕಾ ಪ್ರಕಟಣೆಯನ್ನು ಧೃಡೀಕರಿಸಲು “ಪ್ರತಿಧ್ವನಿ”ಯು ತೇಜಸ್ವಿನಿ ಆಸ್ಪತ್ರೆಯನ್ನು ಸಂಪರ್ಕಿಸಿದೆ. ತೇಜಸ್ವಿನಿ ಆಸ್ಪತ್ರೆಯ ವ್ಯವಸ್ಥಾಪಕರಾದ ನವೀನ್ ಅವರು, ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸುವಾಗಲೇ ಕುಟುಂಬಸ್ಥರು ತಮ್ಮ ಆಧಾರ್ ಕಾರ್ಡನ್ನು ನೀಡಿದ್ದರು. ಆಸ್ಪತ್ರೆಯ ಯಾವ ಸಿಬ್ಬಂದಿ ಅಥವಾ ರೋಗಿಯನ್ನು ಇವರ ಕಾರಣದಿಂದಾಗಿ ಕ್ವಾರಂಟೈನ್ನಲ್ಲಿರಿಸಲಾಗಿಲ್ಲ ಎಂದು ಹೇಳಿದ್ದಾರೆ.
ಹೆಸರಾಂತ ಪತ್ರಿಕೆಗಳು ಸುಳ್ಳು ಸುದ್ದಿ ಪ್ರಕಟಿಸಿರುವುದರಿಂದ ಬಾಲಕಿಯ ಕುಟುಂಬಸ್ಥರಿಗೆ ತೀವ್ರ ಆಘಾತವಾಗಿದೆ. ಭಟ್ಕಳದ ಹೆಸರನ್ನು ಕೆಡಿಸಲೆಂದೆ ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ ಎಂದು ಭಟ್ಕಳ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೋವು ಹಂಚಿಕೊಳ್ಳುತ್ತಿದ್ದಾರೆ. ಭಟ್ಕಳ ನಿವಾಸಿಗಳ ಬೆಂಬಲಕ್ಕೆ ನಿಂತ ನೆಟ್ಟಿಗರು ಟ್ವಿಟರ್ನಲ್ಲಿ #stopdefamingbhatkal ಹಾಗೂ #deccanheraldlies ಎಂದು ಜಂಟಿ ಹ್ಯಾಷ್ ಟ್ಯಾಗ್ ಟ್ರೆಂಡ್ ಶುರು ಮಾಡಿದ್ದಾರೆ.
ಮೇ 18 ರ ಸಂಜೆ 4 ವೇಳೆಗೆ ಶುರುವಾದ ಈ ಹ್ಯಾಷ್ಟ್ಯಾಗ್ ಸಂಜೆ 7:30 ವೇಳಗೆ ಕರ್ನಾಟಕದಲ್ಲಿ ಹಾಗೂ U.A.E ಯಲ್ಲಿ ಅಗ್ರ ಹತ್ತು ಟ್ರೆಂಡ್ಗಳಲ್ಲಿ ಸ್ಥಾನ ಪಡೆದಿದೆ.