ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ನಲ್ಲಿ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಗುಜರಾತ್ ಸರ್ಕಾರದಲ್ಲಿ ಪ್ರಭಾವಿ ಸಚಿವನಾಗಿರುವ ಭೂಪೇಂದ್ರ ಸಿನ್ಹ ಚೂಡಾಸಮ ಶಾಸಕತ್ವದಿಂದ ಅನರ್ಹರಾಗಿದ್ದಾರೆ. ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆಶ್ವಿನ್ ರಾಥೋಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 2017ರಲ್ಲಿ ನಡೆದಿದ್ದು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರ ಸಿನ್ಹ ಚೂಡಾಸಮ, ಧೋಲ್ಕಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕೇವಲ 327 ಮತಗಳ ಅಂತರದಲ್ಲಿ ಜಯಶಾಲಿ ಆಗಿದ್ದ ಭೂಪೇಂದ್ರ ಸಿನ್ಹ ಚೂಡಾಸಮ, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಖಾತೆಗಳನ್ನು ಪಡೆದು ಮಂತ್ರಿಯಾಗಿದ್ದರು. ಕಂದಾಯ, ಶಿಕ್ಷಣ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರ, ಉಪ್ಪು ಕಾರ್ಖಾನೆ, ಪಶುಸಂಗೋಪನೆ ಖಾತೆಗಳನ್ನು ಕೊಡಲಾಗಿತ್ತು. ಇದೀಗ ಶಾಸಕ ಸ್ಥಾನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂಪುಟದ ಪ್ರಭಾವಿ ಸಚಿವ.
2017ರ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ವಂಚನೆ ಆಗಿದೆ ಎನ್ನುವ ಆರೋಪವನ್ನು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಮಾಡಿದ್ದರು. ಕೇವಲ ಆರೋಪ ಅಷ್ಟೇ ಮಾಡದೆ ಕೋರ್ಟ್ನಲ್ಲಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು. ಧೋಲ್ಕಾ ಕ್ಷೇತ್ರದ ಚುನಾವಣಾ ಅಧಿಕಾರಿ ಆಗಿದ್ದ ಧವಲ್ ಜಾನಿ ಉದ್ದೇಶಪೂರ್ವಕವಾಗಿ 429 ಅಂಚೆ ಮತಗಳನ್ನು ಅಸಿಂಧುಗೊಳಿಸಿದ್ದಾರೆ. ಇದೊಂದೇ ಕಾರಣದಿಂದ ನಾನು 327 ಮತಗಳ ಅಂತರದಿಂದ ಸೋಲು ಒಪ್ಪಿಕೊಳ್ಳಬೇಕಾಗಿ ಬಂದಿದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿ ತೀರ್ಪು ನೀಡಿರುವ ಗುಜರಾತ್ ಹೈಕೋರ್ಟ್ ನ್ಯಾ. ಪರೇಶ್ ಉಪಾಧ್ಯಾಯ, ಚುನಾವಣಾ ಆಯೋಗದ ನಿಯಮಗಳು ಮತ ಎಣಿಕೆ ವೇಳೆಯಲ್ಲಿ ಪಾಲನೆ ಆಗಿಲ್ಲ. ಗೆಲ್ಲುವ ಅಭ್ಯರ್ಥಿಗೆ ಪರವಾಗಿ ಆಯೋಗ ನಡೆದುಕೊಂಡಿದೆ. ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆದಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದು, ಶಾಸಕನಾಗಿ ಪ್ರಮಾಣೀಕರಿಸಿದ್ದನ್ನು ರದ್ದು ಮಾಡಿ ಆದೇಶ ನೀಡಿದ್ದಾರೆ.
ಗುಜರಾತ್ ಹೈಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರ, ಚುನಾವಣಾ ಆಯೋಗದ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿ ಮೂವರ ಸಮಿತಿ ರಚನೆ ಮಾಡಿದ್ದಾರೆ. ಸಮಿತಿಯಲ್ಲಿ ಕಾರ್ಯದರ್ಶಿ ಉಮೇಶ್ ಸಿನ್ಹ, ಸಹಾಯಕ ಚುನಾವಣಾ ಆಯುಕ್ತ ಚಂದ್ರ ಭೂಷಣ್ ಹಾಗೂ ನಿರ್ದೇಶಕ (ಕಾನೂನು) ವಿಜಯ್ ಪಾಂಡೆ ತೀರ್ಪಿನ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ವರದಿಯನ್ನು ಕೇಂದ್ರ ಚುನಾವಣಾ ಆಯುಕ್ತರಿಗೆ ಸಲ್ಲಿಸಲಿದ್ದಾರೆ. ಇನ್ನೂ ಮತ್ತೊಂದು ಕಡೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಗುಜರಾತ್ ಸರ್ಕಾರಕ್ಕೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಯಾಗಿರುವ ಅಂದಿನ ಚುನಾವಣಾ ಅಧಿಕಾರಿ ಆಗಿದ್ದ ಧವಲ್ ಜಾನಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚನೆ ಕೊಡಲಾಗಿದೆ. ಈಗಾಗಲೇ ಶಿಸ್ತುಕ್ರಮದ ಪ್ರಕ್ರಿಯೆ ಕೂಡ ಆರಂಭವಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೂ ಈ ಅಧಿಕಾರಿಯನ್ನು ಚುನಾವಣಾ ಕಾರ್ಯದಿಂದ ಹೊರಗಿಡುವಂತೆ ಗುಜರಾತ್ ಹೈಕೋರ್ಟ್ ಮಧ್ಯಂತರ ಆದೇಶದಲ್ಲೂ ತಿಳಿಸಲಾಗಿತ್ತು. ಇದೀಗ ಚುನಾವಣಾ ಆಯೋಗವೇ ಶಿಸ್ತುಕ್ರಮಕ್ಕೆ ಸೂಚನೆ ಕೊಟ್ಟಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲೂ ಮಾದರಿ ಆಗುತ್ತಾ ಗುಜರಾತ್ ಆದೇಶ..?
ಕರ್ನಾಟಕದಲ್ಲೂ ಚುನಾವಣಾ ಅಕ್ರಮ ಮಾಡಿ ಜಯಗಳಿಸಿದ್ದಾರೆ ಎನ್ನುವ ಆರೋಪ ಇಬ್ಬರು ಶಾಸಕರ ಮೇಲೆ ಬಂದಿತ್ತು. ಒಂದು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಮುನಿರತ್ನಂ ಹಾಗೂ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ಗೌಡ ಪಾಟೀಲ್ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2018ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಮುನಿರತ್ನ ಬಳಿ ನಕಲಿ ಗುರುತಿನ ಚೀಟಿಗಳು, ಮತದಾರರ ಪಟ್ಟಿ ದೊರೆತಿತ್ತು. ಒಂದು ವಾರ ಕಾಲ ಚುನಾವಣೆ ಮುಂದೂಡಿದ್ದ ಚುನಾವಣಾ ಆಯೋಗ ನಂತರ ಚುನಾವಣೆ ನಡೆಸಿತ್ತು. ಮುನಿರತ್ನ ಜಯಭೇರಿ ಬಾರಿಸಿದ್ರು. ಆದರೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಹಾಗೂ ಅಕ್ರಮ ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿ ಸಿಕ್ಕಿದ್ದ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಶಾಸಕತ್ವದಿಂದ ಅನರ್ಹ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಆಗಿದ್ದ ತುಳಸಿ ಮುನಿರಾಜುಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಅತ್ತ ಮಸ್ಕಿಯಿಂದ ಆಯ್ಕೆಯಾಗಿದ್ದ ಪ್ರತಾಪ್ಗೌಡ ಪಾಟೀಲ್, ಕೇವಲ 213 ಮತಗಳ ಅಂತರದಿಂದ ಗೆಲುವು ಸಧಿಸಿದ್ದರು. ಬಿಜೆಪಿ ಅಭ್ಯರ್ಥಿ ಆಗಿದ್ದ ಆರ್. ಬಸವರಾಜು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಇದೀಗ ಗುಜರಾತ್ ಹೈಕೋರ್ಟ್ ಆದೇಶದ ಬಳಿಕ ಕರ್ನಾಟಕ ಪ್ರಕರಣಗಳಿಗೂ ಅನ್ವಯ ಆಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಈ ಎರಡೂ ಕ್ಷೇತ್ರಗಳ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದಾರೆ. ಕಳೆದ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ. ಇದೀಗ ಅರ್ಜಿದಾರರ ಪರವಾಗಿ ತೀರ್ಪು ಬಂದರೂ ಅನರ್ಹ ಶಾಸಕರಾಗಿರುವ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಅಕ್ರಮ ಚುನಾವಣೆ ನಡೆದಿದೆ ಎಂದು ಕೋರ್ಟ್ ತೀರ್ಪು ಕೊಟ್ಟರೂ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎನ್ನುವ ಆಲೋಚನೆಯಲ್ಲಿದ್ದಾರೆ. ಕೋರ್ಟ್ ವಿಚಾರಣೆ ಯಾವ ರೀತಿಯಲ್ಲಿ ನಡೆಯಲಿದೆ ಎನ್ನುವ ಮೇಲೆ ಈ ಇಬ್ಬರು ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅದೇನೇ ಇರಲಿ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಚುನಾವಣಾ ಅಕ್ರಮದಿಂದ ಗೆಲುವು ಸಾಧಿಸಿ ಮಂತ್ರಿ ಮಂಡಲ ಸೇರಿದ್ದ ಭೂಪೇಂದ್ರ ಸಿನ್ಹ ಚೂಡಾಸಮ ಶಾಸಕತ್ವ ರದ್ದು ಮಾಡಿರುವ ಆದೇಶ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಮುಜುಗರದ ವಿಚಾರ ಎನ್ನುವುದರಲ್ಲಿ ನೋ ಡೌಟ್.