ಇಲ್ಲೊಂದು ಘಟನೆ ನಿಮ್ಮ ಕರುಳು ಕಿವುಚಿ ಬಿಡಬಹುದು. ಕಣ್ಣಾಲಿಯಲ್ಲಿ ನೀರು ತುಂಬಿಕೊಳ್ಳಬಹುದು. ಆಕೆಯದ್ದು ಕೇವಲ 26 ವರ್ಷ ವಯಸ್ಸು. ಹೊಟ್ಟೆಪಾಡಿಗಾಗಿ ತವರಿನಿಂದ ದೂರದ ಊರಿಗೆ ತೆರಳಿ ದುಡಿಯುತ್ತಿದ್ದಳು. ಇದ್ದಿಕ್ಕಿದ್ದ ಹಾಗೆ ಬಂದಪ್ಪಳಿಸಿದ ಲಾಕ್ ಡೌನ್ ಆಕೆಯನ್ನೂ ಕಂಗೆಡಿಸಿ ಬಿಟ್ಟಿತು. ಎಲ್ಲರಂತೆ ಆಕೆಯೂ ಇಲ್ಲಿದ್ದೇನು ಮಾಡುವುದು ಎಂಬ ಯೋಚನೆಯಡಿ ತನ್ನವರೊಂದಿಗೆ ತವರಿಗೆ ಹೊರಟಳು. ಅದು ಕೂಡ ಕಾಲ್ನಡಿಗೆಯಲ್ಲಿ. ಸುಡು ಬಿಸಿಲಿಗೆ ನೂರಾರು ಕಿಲೋಮೀಟರ್ ದೂರ ನಡೆದುಕೊಂಡು ಹೋಗುವುದೇ ಒಂದು ಸಾಹಸ. ಅಂತಹದ್ರಲ್ಲಿ ತುಂಬು ಗರ್ಭಿಣಿಯಾಗಿದ್ದರೆ.? ಹೇಗೆ ಆ ಜೀವ ತಡೆದುಕೊಳ್ಳಬೇಕು ಅಲ್ಲವೇ..? ನಿಜ. ಆ 26 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಳು. ಆಗಲೇ ಆಕೆಗೆ ಎಂಟುವರೆ ತಿಂಗಳು ತುಂಬಿತ್ತು. ಮನೆ ಸೇರುವ ತವಕದಲ್ಲಿ ಅದನ್ನೂ ಲೆಕ್ಕಿಸದೆ ತವರಿನ ದಾರಿ ಹಿಡಿದಿದ್ದಳು.
ಅಂದಾಜು 500 ಕೀ.ಮೀ ದಾಟಿರಬಹುದು. ಮಧ್ಯಪ್ರದೇಶ ಮತ್ತು ಉತ್ತರಪ್ರದೆಶದ ಗಡಿ ಭಾಗದ ಬಲಾಭೀತ್ ಎಂಬ ಜಾಗಕ್ಕೆ ತಲುಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜೊತೆಗಿದ್ದ ಮಹಿಳೆಯರು ಅಲ್ಲೇ ರಸ್ತೆ ಪಕ್ಕದಲ್ಲಿದ್ದ ಒಂದು ಮರದ ಕೆಳಗೆ ಕೂರಿಸಿದ್ದಾರೆ. ಆದರೆ ನೋವಿನ ತೀವ್ರತೆ ತಡೆಯಲಾರದ ಮಹಿಳೆ ಅಲ್ಲೇ ಮರದ ತಳಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.
ಹೀಗೊಂದು ಸುದ್ದಿ ಪಕ್ಕದ ಬಲಾಭಿತ್ ಹಳ್ಳಿಯ ಜನರ ಕಿವಿಗೆ ಬೀಳುತ್ತಿದ್ದಂತೆ ಊರಿನ ಕೆಲವರು ಬೇಕಾದ ಚಿಕಿತ್ಸೆಗೆ ಏರ್ಪಾಡು ಮಾಡಿ ಮಾನವೀಯತೆ ಮೆರೆದರು. ಅಲ್ದೇ ಮಗುವನ್ನು ಪಕ್ಕದ ಆಸ್ಪತ್ರೆಗೆ ಕೊಂಡೊಯ್ದು ಐಸಿಯುನಲ್ಲಿ ಇರಿಸಿದರು. ಇಂತಹಾ ದುರಿತ ಸಮಯದಲ್ಲೂ ಅಲ್ಲಿನ ಕೆಲವು ಮಾನವೀಯ ಹೃದಯಗಳ ಕಾರಣಕ್ಕೆ ತಾಯಿ ಮಗುವಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ಮೇಲ್ವಾಚರಣೆ ಸಿಕ್ಕಿತು. ಮೇ 10ರಂದೇ ಮಗು ಮತ್ತು ತಾಯಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಆಂಬುಲೆನ್ಸ್ ಮೂಲಕ ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಪ್ರತಾಪ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದಹಾಗೆ ಈಕೆ ಉತ್ತರ ಪ್ರದೇಶದ ಬರ್ಕಾರಿಯಾದ ಮೂಲದವರು. ಮಧ್ಯಪ್ರದೇಶದ ಧಾರ್ ಎಂಬಲ್ಲಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತನ್ನವರ ಜೊತೆ ಗಂಟು ಮೂಟೆಯೊಂದಿಗೆ ಊರ ದಾರಿ ಹಿಡಿದಿದ್ದರು.