ಕರೋನಾ ಲಾಕ್ಡೌನ್ ಸಮಯದಲ್ಲೂ ಸಾಮಾಜಿಕ ಹೋರಾಟಗಾರರನ್ನ ಹಾಗೂ ವಿದ್ಯಾರ್ಥಿಗಳನ್ನ ಬಂಧಿಸಿ ದೌರ್ಜನ್ಯ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವ ಸರಕಾರದ ʼದಮನ ನೀತಿʼಯನ್ನ ಯುನೈಟೆಡ್ ಕಿಂಗ್ಡಮ್ ನ 90 ಮಂದಿ ಬುದ್ಧಿಜೀವಿಗಳು ಖಂಡಿಸಿದ್ದಾರೆ. ಅಲ್ಲದೇ ಇದು ನರೇಂದ್ರ ಮೋದಿ ಸರಕಾರದ ʼಕ್ರೂರ ಬೇಟೆʼ ಎಂದು ಲಂಡನ್ ಮೂಲದ ಆ ವಿದ್ವಾಂಸರು ಬಣ್ಣಿಸಿದ್ದಾರೆ.
ವಿಶೇಷವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನ ಗುರಿಯಾಗಿಸಿ ಸರಕಾರ ದ್ವೇಷ ಸಾಧನೆಗೆ ಇಳಿದಿದ್ದು, ನಾಲ್ಕೂವರೆ ತಿಂಗಳ ಗರ್ಭಿಣಿ ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಫೂರಾ ಝರ್ಗಾರ್ , ಉಮರ್ ಖಾಲಿದ್ ಹಾಗೂ ಮೀರನ್ ಹೈದರ್ನಂತಹವರ ಮೇಲೆ ಕಾನೂನು ವಿರೋಧಿ ಚಟುವಟಿಕೆ ಮೇಲೆ ಹೇರಲಾಗುವ ಕಠಿಣ ಕಾಯ್ದೆಗಳನ್ನ ಹಾಕಲಾಗಿದೆ.
Also Read: ತಿಹಾರ್ ಜೈಲಿನಿಂದಲೇ ʼರಂಝಾನ್ʼ ಆರಂಭಿಸುವಂತಾದ CAA ವಿರೋಧಿ ಗರ್ಭಿಣಿ ಹೆಣ್ಣು ಮಗಳು!
ನರೇಂದ್ರ ಮೋದಿ ಸರಕಾರದ ಈ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಆಕ್ಸ್ ಫರ್ಡ್ ಯೂನಿವರ್ಸಿಟಿ, ಕೇಂಬ್ರಿಡ್ಜ್ ಯೂನಿವರ್ಸಿಟಿ ಹಾಗೂ ಇನ್ನಿತರ ಯೂನೈಟೆಡ್ ಕಿಂಗ್ಡಮ್ ನ ಹೆಸರಾಂತ ವಿಶ್ವವಿದ್ಯಾಲಯಗಳ ವಿದ್ವಾಂಸರು ಭಾರತ ಸರಕಾರ ಹೋರಾಟಗಾರರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಹಿ ಸಂಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ರೀತಿ ಹೋರಾಟಗಾರರನ್ನ ಅದರಲ್ಲೂ ವಿದ್ಯಾರ್ಥಿಗಳು ಎಂದೂ ನೋಡದೆ ಲಾಕ್ಡೌನ್ ಸಮಯದಲ್ಲಿಯೇ ಅವರನ್ನ ಬಂಧಿಸಿ ಅಮಾನವೀಯ ದೌರ್ಜನ್ಯವನ್ನ ನಡೆಸುತ್ತಿರುವ ಭಾರತ ಸರಕಾರದ ನಿಲುವನ್ನ ನಾವು ಖಂಡಿಸುತ್ತೇವೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಅವರನ್ನ ಕ್ರೂರ ರೀತಿಯಲ್ಲಿ ಬೇಟೆಯಾಡಿ ಅವರ ಮೇಲೆ UAPA ಯಂತಹ ಕಠಿಣ ಕಾನೂನು ಕ್ರಮ ಹೇರಿರುವುದು ಅಕ್ಷಮ್ಯ. ಆದರೆ ಉಮರ್ ಖಾಲಿದ್ ಇರಲಿ, ಸಫೂರ ಝರ್ಗಾರ್ ಅಥವಾ ಮೀರನ್ ಹೈದರ್ ಇವರು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿರುವ ಇಂಗ್ಲೆಂಡ್ನ ವಿದ್ವಾಂಸರು, ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪೌರತ್ವ ಸಂಬಂಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದೇ ತಪ್ಪೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರನ್ನ ಹೊರಗಿಟ್ಟಿರೋದನ್ನ ಪ್ರಶ್ನಿಸೋದು ತಪ್ಪಾದರೂ ಹೇಗೆ ಎಂದು ಕೇಳಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ʼಹಿಂಸಾಚಾರʼವು ಅದು ಮುಸ್ಲಿಮರ ವಿರುದ್ಧ ಸರಕಾರಿ ಪ್ರಾಯೋಜಿತ ಹಿಂಸಾಚಾರವೇ ಆಗಿತ್ತು ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿ ಹೋರಾಟಗಾರರ ಬಂಧನ ವಿರೋಧಿಸಿ ಸಹಿ ಹಾಕಿರುವ ಲಂಡನ್ ಮೂಲದ 90 ಮಂದಿ ಸದಸ್ಯರ ಪಟ್ಟಿ.
ಯೋಜನಾಬದ್ಧವಲ್ಲದ ಲಾಕ್ಡೌನ್ ಜಾರಿಯಿಂದಾಗಿ ಭಾರತದಲ್ಲಿ ಈಗಾಗಲೇ ದಿನಗೂಲಿ ಹಾಗೂ ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಮಧ್ಯೆಯೇ ಹೋರಾಟಗಾರ್ತಿ, ಗರ್ಭಿಣಿ ಹೆಣ್ಣು ಮಗಳು ಸಫೂರಾ ಝರ್ಗಾರ್ ಅವರನ್ನ ತಿಹಾರ್ ಜೈಲಿನಲ್ಲಿ ಕೂಡಿಟ್ಟಿರುವುದು ಆತಂಕಕಾರಿ ಎಂದು ಲಂಡನ್ ಮೂಲದ 90 ವಿದ್ವಾಂಸರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರ ಮೇಲಿನ ಪ್ರಕರಣ ಕೈ ಬಿಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುವ ಆನ್ಲೈನ್ ಅಭಿಯಾನದಲ್ಲೂ ನಾವುಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ.
LOCKDOWN FASCISM…, BE THE VOICE OF DISSENT:
ಈಗಾಗಲೇ ಸಫೂರಾ ಝರ್ಗಾರ್ ಹಾಗೂ ಇನ್ನಿತರರ ಬಂಧನ ಹಾಗೂ ಕಠಿಣ ಮೊಕದ್ದಮೆ ದಾಖಲು ಮಾಡಿರುವ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಆನ್ಲೈನ್ ಮೂಲಕ ಅಭಿಯಾನ ಆರಂಭಿಸಿದೆ. BE THE VOICE OF DISSENT ಅನ್ನೋ ಘೊಷವಾಕ್ಯದಡಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರಂಭಿಸಿರುವ ಆನ್ಲೈನ್ ಅಭಿಯಾನಕ್ಕೆ ಹಲವು ಮಂದಿ ಕೈ ಜೋಡಿಸಿದ್ದಾರೆ. ಕರ್ನಾಟಕದಲ್ಲೂ ಪ್ರಗತಿಪರ ಚಿಂತಕರು, ಹೋರಾಟಗಾರರು, ವಿದ್ಯಾರ್ಥಿ ನಾಯಕರು, ಉಪನ್ಯಾಸಕರು, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಪಾಲ್ಗೊಳ್ಳುವಿಕೆಯನ್ನ ಫೋಟೋ ಸಮೇತ ಪ್ರದರ್ಶಿಸಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ವಿದ್ಯಾರ್ಥಿ ಹೋರಾಟಗಾರರ ಮೇಲಿನ ಕೇಸು ವಾಪಾಸ್ ಪಡೆಯುವಂತೆ ಒತ್ತಡ ಹೇರತೊಡಗಿದ್ದಾರೆ.
ಇನ್ನೊಂದೆಡೆ ಮುಸ್ಲಿಂ ಸಮುದಾಯದ ಪ್ರಬಲ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ LOCKDOWN FASCISM; UNMASK THE HIDDEN AGENDA ಘೋಷವಾಕ್ಯದಡಿ ಟ್ವಿಟ್ಟರ್, ಯೂಟ್ಯೂಬ್, ಫೇಸ್ಬುಕ್ ನಂತಹ ಜಾಲತಾಣಗಳಲ್ಲಿ ಕೇಂದ್ರ ಸರಕಾರದ ದಮನ ನೀತಿ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಅಲ್ಲದೇ ಲಾಕ್ಡೌನ್ ಮುಗಿದ ನಂತರ ದೇಶದ ಪ್ರಮುಖ ಬೀದಿಗಳಲ್ಲಿ ಇಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ CAA, NRC ಹಾಗೂ NPR ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಅನ್ನೋ ಕಾರಣಕ್ಕಾಗಿ ವಿದ್ಯಾರ್ಥಿ ಹೋರಾಟಗಾರರ ಮೇಲೆ ಉಗ್ರರ ಹಾಗೂ ಕುಖ್ಯಾತ ಕ್ರಿಮಿನಲ್ಗಳ ಮೇಲೆ ಹಾಕಲ್ಪಡುವಂತಹ UAPA ಕಠಿಣ ಕಾನೂನುಗಳನ್ನ ಹೇರಿ ಬೆದರಿಸುವ ತಂತ್ರಗಾರಿಕೆಯನ್ನ ಲಾಕ್ಡೌನ್ ಸಮಯದಲ್ಲಿ ಪಾಲಿಸುತ್ತಿರುವ ಕೇಂದ್ರ ಸರಕಾರ ತನ್ನೆಲ್ಲಾ ಅಧಿಕಾರವನ್ನ ಬಳಸಿ ಈ ಪ್ರಯತ್ನಕ್ಕೆ ಇಳಿದಿದೆ. ಆದರೆ ಲಾಕ್ಡೌನ್ ಮುಗಿದ ನಂತರ ಇದು ದೇಶದ ಹಲವೆಡೆ ʼಶಾಹಿನ್ ಬಾಗ್ʼ ಮಾದರಿ ಹೋರಾಟಗಳನ್ನ ಹುಟ್ಟು ಹಾಕಿದರೆ ಅಚ್ಚರಿಯಿಲ್ಲ.