ಹಿಂದಿ ಚಿತ್ರರಂಗದ ಮೇರು ಪ್ರತಿಭೆ ಎಂದು ಕರೆಸಿಕೊಂಡ ತಾತ ಪೃಥ್ವಿರಾಜ್ ಕಪೂರ್, ಇಬ್ಬರು ಸೂಪರ್ಸ್ಟಾರ್ ಚಿಕ್ಕಪ್ಪಂದಿರು – ಶಮ್ಮಿ ಕಪೂರ್ ಮತ್ತು ಶಶಿಕಪೂರ್, ತಂದೆ ರಾಜ್ ಕಪೂರ್ ‘ಶೋ ಮ್ಯಾನ್’ ಎಂದೇ ಹಿಂದಿ ಚಿತ್ರರಂಗದಲ್ಲಿ ಕರೆಸಿಕೊಂಡವರು. ಇಂಥ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು ರಿಷಿ ಕಪೂರ್. ಈ ಪ್ರಭಾವಳಿಯ ಹೊರತಾಗಿಯೂ ರಿಷಿ ತಮ್ಮ ಪ್ರತಿಭೆಯನ್ನು ಬೆಳ್ಳಿತೆರೆಯಲ್ಲಿ ಸಾಬೀತು ಮಾಡಿದರು. ಮೊನ್ನೆ ಮೊನ್ನೆವರೆಗೂ ಸಿನಿಮಾಗಳಲ್ಲಿ ಉತ್ಸಾಹದಿಂದ ನಟಿಸುತ್ತಿದ್ದ ರಿಷಿ ಇದೀಗ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಜಹ್ರೀಲಾ ಇನ್ಸಾನ್ : ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ರಿಷಿ ಕಪೂರ್ ‘ಬಾಬ್ಬಿ’ ಚಿತ್ರದೊಂದಿಗೆ ಹೀರೋ ಆದರು. ಮೊದಲ ಚಿತ್ರದ ದೊಡ್ಡ ಯಶಸ್ಸಿನ ನಂತರ ಅವರಿಗೆ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಒದಗಿಬಂದಿತು. “ಈ ಹಿಂದೆ ಪುಟ್ಟಣ್ಣನವರ ಸಾಕ್ಷಾತ್ಕಾರ ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಅಭಿನಯಿಸಿದ್ದರು. ಪುಟ್ಟಣ್ಣನವರ ಬಗ್ಗೆ ಪೃಥ್ವಿರಾಜ್ ಕಪೂರ್ ಅವರಿಗೆ ವಿಶೇಷ ಅಭಿಮಾನ. ಮುಂದೆ ಪುಟ್ಟಣ್ಣನವರ ಸೂಪರ್ ಹಿಟ್ ಸಿನಿಮಾ ‘ನಾಗರಹಾವು’ ಹಿಂದಿ ರಿಮೇಕ್ ಜಹ್ರೀಲಾ ಇನ್ಸಾನ್ ಚಿತ್ರದಲ್ಲಿ ರಿಷಿ ಕಪೂರ್ ನಟಿಸಲು ಈ ನಂಟು ಕಾರಣವಾಯ್ತು. ಪುಟ್ಟಣ್ಣನವರ ಮೇಲಿನ ಗೌರವ, ಪ್ರೀತಿಯಿಂದ ರಾಜ್ಕಪೂರ್ ತಮ್ಮ ಪುತ್ರ ರಿಷಿಗೆ ಚಿತ್ರದಲ್ಲಿ ನಟಿಸುವಂತೆ ಸೂಚಿಸಿದರು” ಎನ್ನುತ್ತಾರೆ ಹಿರಿಯ ಕನ್ನಡ ಚಿತ್ರನಿರ್ದೇಶಕ ಪಿ.ಎಚ್.ವಿಶ್ವನಾಥ್. ಪುಟ್ಟಣ್ಣನವರ ಹಲವು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು ವಿಶ್ವನಾಥ್. ತಮ್ಮ ನಿರ್ದೇಶನದ ರಿಷಿ ಕಪೂರ್ ಹಿಂದಿ ಸಿನಿಮಾ ಬಗ್ಗೆ ಪುಟ್ಟಣ್ಣ ಹಂಚಿಕೊಂಡ ನೆನಪುಗಳ ಬಗ್ಗೆ ಅವರು ಮೆಲಕು ಹಾಕುತ್ತಾರೆ.

ಹಿರಿಯ ನಟ ಶಿವರಾಂ ‘ನಾಗರ ಹಾವು’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದವರು. ‘ಜಹ್ರೀಲಾ ಇನ್ಸಾನ್’ ಸಿನಿಮಾಗೆ ಚಿತ್ರದುರ್ಗ, ಮೈಸೂರಿನಲ್ಲಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಶಿವರಾಂ ಸೆಟ್ಗೆ ಭೇಟಿ ನೀಡಿದ್ದರಂತೆ. ಆಗ ರಿಷಿ ಕಪೂರ್ ಅವರೊಂದಿಗೆ ಸಿನಿಮಾ, ಪಾತ್ರದ ಬಗ್ಗೆ ಚರ್ಚಿಸಿದ್ದಾರೆ. “ಇದು ತುಂಬಾ ಸಂಕೀರ್ಣವಾದ ಪಾತ್ರ. ಮೂಲ ಚಿತ್ರದಲ್ಲಿ ವಿಷ್ಣುವರ್ಧನ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಈ ಪಾತ್ರದಲ್ಲಿ ತುಂಬಾ ಇಷ್ಟಪಟ್ಟು ನಟಿಸುತ್ತಿದ್ದೇನೆ. ಪುಟ್ಟಣ್ಣನವರಂತಹ ನಿರ್ದೇಶಕರಿದ್ದಾಗ ಎಂತಹ ಪಾತ್ರಗಳಾದರೂ ಕಳೆಗಟ್ಟುತ್ತವೆ” ಎಂದು ರಿಷಿ, ಶಿವರಾಂ ಅವರಿಗೆ ಹೇಳಿದ್ದರಂತೆ. “ರಿಷಿ ಆಕರ್ಷಕ ವ್ಯಕ್ತಿತ್ವದ ಮುದ್ದಾದ ನಟ. ಪ್ರಭಾವಿ ಸಿನಿಮಾ ಕುಟುಂಬದ ವ್ಯಕ್ತಿಯಾದರೂ ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದರು. ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಸ್ಮಾರ್ಟ್ ಆಗಿದ್ದ ಅವರು ಕ್ರಮೇಣ ದಪ್ಪಗಾದರು. ಬಹುಶಃ ಅದು ‘ಹೆರಿಡಿಟಿ’ ಇರಬಹುದು. ನಾನು ವೀಕ್ಷಿಸಿದ ಅವರ ಕೊನೆಯ ಸಿನಿಮಾ ‘102 ನಾಟ್ಔಟ್’. ಲವಲವಿಕೆಯಿಂದ ನಟಿಸಿದ್ದರು” ಎಂದು ಅಗಲಿದ ನಟನನ್ನು ಸ್ಮರಿಸುತ್ತಾರೆ ಶಿವರಾಂ.
ಬಾಬ್ಬಿ ಔತಣಕೂಟ : ಅದು ರಾಜಕಪೂರ್ ನಿರ್ದೇಶಿಸಿ, ನಿರ್ಮಿಸಿದ ‘ಬಾಬ್ಬಿ’ ಸಿನಿಮಾ ಬಿಡುಗಡೆಯಾದ ಸಂದರ್ಭ. ರಾಜ್ಕಪೂರ್ ಅವರ ಹಿಂದಿ ಚಿತ್ರಗಳನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿದ್ದ ಸದಾನಂದ ರಾವ್ ʼಬಾಬ್ಬಿʼಯನ್ನೂ ಇಲ್ಲಿ ರಿಲೀಸ್ ಮಾಡಿದ್ದರು. ಬಿಡುಗಡೆಯಾದ ದಿನದಂದು ರಾಜ್ಕಪೂರ್ ತಮ್ಮ ಪುತ್ರ, ಚಿತ್ರದ ಹೀರೋ ರಿಷಿಕಪೂರ್ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಬಿಡುಗಡೆಯಾದ ದಿನದಂದು ಸಂಜೆ ಬೆಂಗಳೂರಿನ ಸೆಂಚೂರಿ ಕ್ಲಬ್ನಲ್ಲಿ ರಾಜ್ಕಪೂರ್ ಔತಣಕೂಟ ಏರ್ಪಡಿಸಿದ್ದರು.

“ರಾಜ್ಕಪೂರ್ ಏರ್ಪಡಿಸಿದ್ದ ಔತಣಕೂಟದಲ್ಲಿ ʼಬಾಬ್ಬಿʼ ಸಿನಿಮಾದ ಪ್ರಮುಖರು ಹಾಗೂ ಕನ್ನಡ ಚಿತ್ರರಂಗದ ಪ್ರಮುಖರನೇಕರು ಪಾಲ್ಗೊಂಡಿದ್ದರು. ಇಲ್ಲಿನ ಸಿನಿಮಾ ಪತ್ರಕರ್ತರು, ಛಾಯಾಗ್ರಾಹಕರೊಂದಿಗೆ ರಿಷಿ ಕಪೂರ್ ವಿಶ್ವಾಸದಿಂದ ಮಾತನಾಡಿದ್ದರು. ನನ್ನ ಕ್ಯಾಮರಾಗೆ ಪೋಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ ಅವರಿಗೆ ನಾನು ಶುಭಹಾರೈಸಿದೆ” ಎಂದು ನೆನಪುಗಳನ್ನು ಹಂಚಿಕೊಳ್ಳುತ್ತಾರೆ ಹಿರಿಯ ಸ್ಥಿರಚಿತ್ರ ಸಿನಿಮಾ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ.

ರಿಷಿ ಕಪೂರ್ : ರಾಜ್ ಕಪೂರ್ ಮತ್ತು ಕೃಷ್ಣ ದಂಪತಿಗೆ 1952, ಸೆಪ್ಟೆಂಬರ್ 4ರಂದು ರಿಷಿ ಜನಿಸಿದರು. ತಾರಾ ಕುಟುಂಬದಲ್ಲಿ ಜನಿಸಿದ ರಿಷಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಬಾಲನಟನಾಗಿ. ‘ಮೇರಾ ನಾಮ್ ಜೋಕರ್’(1970) ಚಿತ್ರದಲ್ಲಿ ತನ್ನ ತಂದೆ ರಾಜ್ಕಪೂರ್ರ ಬಾಲ್ಯದ ಪಾತ್ರದಲ್ಲಿ ರಿಷಿ ಕಾಣಿಸಿಕೊಂಡರು. ಈ ಪಾತ್ರಕ್ಕಾಗಿ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯೂ ಸಂದಿತು. ಅದಾಗಿ ಮೂರು ವರ್ಷಗಳ ನಂತರ ‘ಬಾಬ್ಬಿ’ (1973) ಚಿತ್ರದೊಂದಿಗೆ ಅವರು ನಾಯಕನಾದರು. ಚೊಚ್ಚಲ ಪ್ರಯತ್ನದಲ್ಲೇ ಫಿಲ್ಮ್ಫೇರ್ನಿಂದ ಅತ್ಯುತ್ತಮ ನಾಯಕನಟನೆಂದು ಕರೆಸಿಕೊಂಡಿದ್ದು ಅವರಿಗೆ ವರವಾಯ್ತು.

`ರಫೂ ಚಕ್ಕರ್’ (1975) ಚಿತ್ರದಲ್ಲಿ ಅವರು ಸಂಗೀತಗಾರನಾಗಿ ನಟಿಸಿದರು. ಇದೇ ವರ್ಷದಲ್ಲಿ ರಿಷಿ ಮತ್ತು ನೀತೂ ಸಿಂಗ್ ಜೋಡಿಯ `ಖೇಲ್ ಖೇಲ್ ಮೇ’ ಚಿತ್ರ ತೆರೆಕಂಡಿತು. 70ರ ದಶಕದಲ್ಲಿ ರಿಷಿ ಆಗಿನ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ರೊಂದಿಗೆ ನಟಿಸಿದರು. ಯಶ್ ಚೋಪ್ರಾ ನಿರ್ದೇಶನದ `ಕಭೀ ಕಭೀ’ (1976) ಚಿತ್ರದಲ್ಲಿ ರಾಖಿ ಮತ್ತು ಶಶಿ ಕಪೂರ್ ಪುತ್ರನಾಗಿ ರಿಷಿ ನಟಿಸಿದ್ದರು. 1977ರಲ್ಲಿ ತೆರೆಕಂಡ ಅವರ `ಹಮ್ ಕಿಸಿ ಸೆ ಕಮ್ ನಹೀ’, `ಅಮರ್ ಅಕ್ಬರ್ ಆ್ಯಂಥೋಣಿ’ ದೊಡ್ಡ ಯಶಸ್ಸು ಕಂಡವು.
ಸುಭಾಷ್ ಘಾಯ್ ನಿರ್ದೇಶನದ `ಕರ್ಝ್’, ರಮೇಶ್ ಸಿಪ್ಪಿಯವರ `ಸಾಗರ್’ (1985), ಶ್ರೀದೇವಿ ಜತೆಗಿನ `ನಗೀನಾ’ (1986), ಶ್ರೀದೇವಿ ನಾಯಕಿಯಾಗಿದ್ದ `ಚಾಂದಿನಿ’ ರಿಷಿ ಕಪೂರ್ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಸಿನಿಮಾಗಳು. ರಿಷಿ ನಟಿಸಿದ್ದ `ಹೆನ್ನಾ’ (1991) ರಾಜ್ಕಪೂರ್ರ ಕೊನೆಯ ಚಿತ್ರವಾಯ್ತು. ಈ ಸಿನಿಮಾ ಚಿತ್ರೀಕರಣದ ವೇಳೆಯಲ್ಲೇ ರಾಜ್ಕಪೂರ್ ಕೊನೆಯುಸಿರೆಳೆದರು. ನಂತರ ರಣಧೀರ್ ಕಪೂರ್ ಈ ಚಿತ್ರವನ್ನು ಪೂರ್ಣಗೊಳಿಸಿದರು. 1992ರಲ್ಲಿ ಶಾರುಖ್ ಖಾನ್ ನಟಿಸಿದ್ದ `ದೀವಾನಾ’ ಚಿತ್ರದಲ್ಲಿ ರಿಷಿ ನಟಿಸಿದರು. ಇದೇ ಅವಧಿಯಲ್ಲಿ ನಟಿ ಜ್ಯೂಹಿ ಅವರೊಂದಿಗೆ ರಿಷಿ ನಟಿಸಿದ `ಬೋಲ್ ರಾಧಾ ಬೋಲ್’ ಚಿತ್ರವೂ ಯಶಸ್ಸು ಕಂಡಿತು.

ಮುಂದಿನ ದಿನಗಳಲ್ಲಿ ರಿಷಿ ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಪೋಷಕ ಪಾತ್ರಗಳತ್ತ ಹೊರಳಿದರು. `ರಾಜು ಚಾಚಾ’ (2000), `ಕುಚ್ ಕಟ್ಟೀ ಕುಚ್ ಮೀಠಿ’ (2001), `ಹಮ್ ತುಮ್’ (2004), `ಫನಾ’ (2006), ಡಿಂಪಲ್ ಕಪಾಡಿಯಾ ಜೊತೆಗೆ ನಟಿಸಿದ `ಪ್ಯಾರ್ ಮೇ ಟ್ವಿಸ್ಟ್’ (2005) ಪೋಷಕ ನಟನಾಗಿ ರಿಷಿಯ ಪ್ರಮುಖ ಸಿನಿಮಾಗಳು.
ರಿಷಿ ಕಪೂರ್ ಅಭಿನಯಕ್ಕೆ ಹೆಚ್ಚು ಅವಕಾಶವಿರುವಂಥ ಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವುದು ವಿಶೇಷ. `ಲಕ್ ಬೈ ಛಾನ್ಸ್’ನಲ್ಲಿ (2009) ಚಿತ್ರ ನಿರ್ಮಾಪಕ, `ದಿಲ್ಲಿ 6′ (2009) ಚಿತ್ರದಲ್ಲಿ ಅವಿವಾಹಿತ ವ್ಯಕ್ತಿಯ ಪಾತ್ರದಲ್ಲಿ ಮಿಂಚಿದ್ದರು. ಇದೇ ವರ್ಷ ತೆರೆಕಂಡ `ಲವ್ ಆಜ್ ಕಲ್’ ಮತ್ತು `ಚಿಂಟೂಜಿ’ಯಲ್ಲಿಯೂ ಅವರಿಗೆ ಉತ್ತಮ ಪಾತ್ರಗಳಿದ್ದವು. ಮನಮೋಹನ್ ದೇಸಾಯಿ, ರಾಜ್ ಖೋಸ್ಲಾ, ಯಶ್ ಚೋಪ್ರಾ, ಸುಭಾಷ್ ಘಾಯ್, ನಾಸಿರ್ ಹುಸೇನ್, ರವಿ ಟಂಡನ್, ರಮೇಶ್ ಸಿಪ್ಪಿ, ಬಿ.ಆರ್.ಚೋಪ್ರಾ, ರಾಕೇಶ್ ರೋಷನ್, ರಾಜ್ಕುಮಾರ್ ಸಂತೋಷಿ, ಡೇವಿಡ್ ಧವನ್, ರಾಜ್ ಕಪೂರ್… ಹೀಗೆ ಘಟಾನುಘಟಿ ನಿರ್ದೇಶಕರ ಚಿತ್ರಗಳಲ್ಲಿ ರಿಷಿ ಅಭಿನಯಿಸಿದ್ದಾರೆ.
ರಿಷಿ ಕಪೂರ್ 1980ರಲ್ಲಿ ನಟಿ ನೀತೂ ಸಿಂಗ್ ಅವರನ್ನು ವರಿಸಿದರು. ಅವರಿಗೆ ರಣಬೀರ್ ಮತ್ತು ರಿಧಿಮಾ ಕಪೂರ್ ಇಬ್ಬರು ಮಕ್ಕಳು. 2016ರಲ್ಲಿ ತೆರೆಕಂಡ ‘ಕಪೂರ್ ಅಂಡ್ ಸನ್ಸ್’ ಚಿತ್ರದ ಉತ್ತಮ ನಟನೆಗೆ ರಿಷಿ ಫಿಲ್ಮ್ಫೇರ್ ಅತ್ಯುತ್ತಮ ಪೋಷಕನಟ ಗೌರವಕ್ಕೆ ಪಾತ್ರರಾದರು. ‘102 ನಾಟ್ಔಟ್’ನಲ್ಲಿನ ಅವರ ಪಾತ್ರಕ್ಕೆ ಸಿನಿಮಾಪ್ರೇಮಿಗಳು ಫಿದಾ ಆಗಿದ್ದರು. ಇಳಿವಯಸ್ಸಿನಲ್ಲೂ ತುಂಬು ಉತ್ಸಾಹಿಯಾಗಿದ್ದ ರಿಷಿ ಇನ್ನುಮುಂದೆ ನೆನಪು ಮಾತ್ರ.