ಕರೋನಾ ಸೋಂಕು ಹರಡುತ್ತಿರುವ ವೇಗಕ್ಕೆ ಇಡೀ ವಿಶ್ವವೇ ನಿಬ್ಬೆರಗು ಆಗಿ ನೋಡುವಂತಾಗಿತ್ತು. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಸಾವಿರಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಸಾಗಿತ್ತು. ಸಾವಿನ ಸಂಖ್ಯೆಯೂ ದಿನ ದಿನದಿಂದ ಏರಿಕೆಯಾಗುತ್ತಿದ್ದದ್ದನ್ನು ಕಂಡು ಜನರು ದಿಗಿಲುಗೊಂಡಿದ್ದರು. ಇಡೀ ಜಗತ್ತಿನ ವಿಜ್ಞಾನಿಗಳೇ ಔಷಧಿ ಪತ್ತೆ ಮಾಡಲು ಹಗಲು ರಾತ್ರಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈಗಾಗಲೇ ಇಂಗ್ಲೆಂಡ್ ನ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಕರೋನಾ ಓಡಿಸುವ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಆದರೆ ವಿಜ್ಞಾನಿಗಳು ಕರೋನಾ ಸೋಂಕಿನ ವಿರುದ್ಧ ತಯಾರಿಸುತ್ತಿರುವ ಲಸಿಕೆ ಯಶಸ್ಸು ಸಾಧಿಸಿದರೆ, ಈ ವರ್ಷದ ಅಂತ್ಯ ಅಥವಾ 2021ರಲ್ಲಿ ಜನರ ಕೈಗೆ ಲಸಿಕೆ ಲಭ್ಯವಾಗಲಿದೆ. ಕೇವಲ 1 ಸಾವಿರ ರೂಪಾಯಿಗೆ ಲಭ್ಯವಾಗುವಂತೆ ಭಾರತದಲ್ಲಿ ತಯಾರು ಮಾಡುವುದಕ್ಕೆ ಪುಣೆಯ ಸೆರಮ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಆದರೆ ಚಿಕಿತ್ಸೆ ಲಭ್ಯವಾಗುವ ಮುನ್ನವೇ ಕರೋನಾ ಸೋಂಕಿನಲ್ಲಿ ಅಡಕವಾಗಿದ್ದ ಭೀತಿಯನ್ನು ಓಡಿಸಲು ವೈದ್ಯಲೋಕ ಸಿದ್ಧತೆ ನಡೆಸಿದೆ.

ಕೋವಿಡ್ – 19 ನಿಯಂತ್ರಣಕ್ಕಾಗಿ ಭಾರತದಲ್ಲಿ ಪ್ಲಾಸ್ಮಾ ಥೆರಪಿ ಶುರು ಮಾಡಲಾಗಿದೆ. ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕವಾಗಿ ತುಂಬಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಈ ನಡುವೆ ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿದ್ದ 49 ವರ್ಷದ ರೋಗಿ ಚೇತರಿಕೆ ಕಾಣಿಸಿಕೊಂಡಿದ್ದಾರೆ ಎನ್ನುವ ವರದಿ ವೈದ್ಯಲೋಕಕ್ಕೆ ನೆಮ್ಮದಿ ತರಿಸಿದೆ. ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದ ರೋಗಿಗೆ ಪ್ಲಾಸ್ಮಾ ಥೆರೆಪಿ ಮಾಡುವಂತೆ ಕುಟುಂಬಸ್ಥರೇ ಮನವಿ ಮಾಡಿದ್ದರು. ಆ ಬಳಿಕ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಇದೀಗ ರೋಗಿಯು ಚೇತರಿಸಿಕೊಂಡಿದ್ದು, ಇದೀಗ ವೆಂಟಿಲೇಟರ್ ತೆಗೆಯಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪ್ಲಾಸ್ಮಾ ಥೆರಪಿಯಿಂದ ಚೇತರಿಸಿಕೊಂಡ ಭಾರತದ ಮೊದಲ ಕರೋನಾ ಪೀಡಿತ ಎಂದು ಹೇಳಿಕೊಂಡಿದೆ. ಏಪ್ರಿಲ್ 4 ರಂದು ಆಸ್ಪತ್ರೆಗೆ ಬಂದಿದ್ದ ರೋಗಿ ಅಂದಿನಿಂದಲೂ ಮ್ಯಾಕ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ದೇಹದ ಸ್ಥಿತಿ ಗಂಭೀರ ಆಗಿದ್ದರಿಂದ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು.

ಕರೋನಾ ವೈರಸ್ ದಾಳಿಗೆ ಸಿಲುಕಿ ಸಾವಿನ ಅಂಚಿಗೆ ತೆರಳಿದ್ದ 19 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಯ ಸಾಮಾನ್ಯ ಕೊಠಡಿಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನೂ ಸಾಮಾನ್ಯರಿಗೆ ನೀಡುವಂತ ಆಹಾರವನ್ನು ನೀಡಲಾಗ್ತಿದೆ. ದಿನದ 24 ಗಂಟೆಗಳ ಕಾಲ ರೋಗಿಯ ಬಗ್ಗೆ ನಿಗಾ ವಹಿಸಿದ್ದು ಪ್ಲಾಸ್ಮಾ ಥೆರಪಿ ಬಳಿಕ ಏನೆಲ್ಲಾ ಬೆಳವಣಿಗೆಗಳು ಸಂಭವಿಸುತ್ತವೆ ಎನ್ನುವ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಗ್ರೂಪ್ ಡೈರೆಕ್ಟರ್ ಸಂದೀಪ್ ಬುಧಿರಾಜ್ ತಿಳಿಸಿದ್ದಾರೆ. ಜೊತೆಗೆ ಈ ಪ್ರಕರಣ ಕರೋನಾ ಸಂಕಷ್ಟದಲ್ಲಿರುವ ದೇಶದ ಜನರಿಗೆ ಹೊಸ ಆಶಾಕಿರಣವಾಗಿದೆ ಎಂದಿದ್ದಾರೆ. ಆದರೆ ಇದು ಕರೋನಾ ವೈರಸ್ಗೆ ಮ್ಯಾಜಿಕ್ ಬುಲೆಟ್ ಎಂದು ಭಾವಿಸಲು ಸಾಧ್ಯವಿಲ್ಲ. ನಾವು ಆಸ್ಪತ್ರೆಯ ಇತರೆ ಚಿಕಿತ್ಸೆ ಜೊತೆಗೆ ಪ್ಲಾಸ್ಮಾ ಥೆರೆಪಿ ನೀಡಿದ್ದು ಯಶಸ್ಸು ತಂದಿದೆ. ಹಾಗಾಗಿ ಸಂಪೂರ್ಣ ಫಲಿತಾಂಶದ ಹೊಣೆಯನ್ನು ಪ್ಲಾಸ್ಮಾ ಥೆರಪಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಡೇಂಘಿಯಂತೆ ಕರೋನಾ ಕೂಡ ಮತ್ತೊಂದು ಜ್ವರ ಅಷ್ಟೇನಾ..!?
ಬೇಸಿಗೆ ಮುಗಿಸಿ ಮಳೆಗಾಲ ಶುರುವಾಗುತ್ತಿದ್ದ ಹಾಗೆ ಎಲ್ಲೆಡೆ ಸೊಳ್ಳೆಗಳ ಹಾವಳಿ ಶುರುವಾಗುತ್ತದೆ. ಶೀತ, ಕೆಮ್ಮು, ಜ್ವರದಿಂದ ಆರಂಭವಾಗುವ ವೈರಲ್ ಜ್ವರ ಡೇಂಘಿ ಕೂಡ ಒಬ್ಬರಿಂದ ಒಬ್ಬರಿಗೆ ಹರಡುವ ವೈರಲ್ ಫೀವರ್. ಆದರೆ ಸೊಳ್ಳೆಗಳಿಂದ ಹರಡುತ್ತದೆ ಅಷ್ಟೆ. ಡೇಂಘಿ ಕೂಡ ಚಿಕಿತ್ಸೆ ಇಲ್ಲದ ಜ್ವರ. ಕರೋನಾ ಸೋಂಕಿತರಂತೆಯೇ ಐಸೊಲೇಟ್ ವಾರ್ಡ್ ನಲ್ಲೇ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ರೋಗಿಯ ರಕ್ತದಲ್ಲಿ ಪ್ಲೇಟಲೇಟ್ಸ್ ಪ್ರಮಾಣ ಕುಸಿಯುತ್ತಾ ಹೋದಂತೆ ಆರೋಗ್ಯ ಸ್ಥಿತಿ ವಿಷಮ ಸ್ಥಿತಿಗೆ ಹೋಗುತ್ತದೆ. ಆಗ ಬೇರೊಬ್ಬರ ರಕ್ತದಿಂದ ಪ್ಲೇಟಲೇಟ್ಸ್ ತೆಗೆದು ಡೇಂಘಿ ಪೀಡಿತರಿಗೆ ನೀಡಲಾಗುತ್ತದೆ. ಅದೇ ರೀತಿ ಕರೋನಾ ಪೀಡಿತರಿಗೆ ಪ್ಲಾಸ್ಮಾ ಕೊಡುವ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದರೆ ಡೇಂಘಿ ಜ್ವರ ಪೀಡಿತರಿಗೆ ಯಾರಾದರೂ ಪ್ಲೇಟಲೇಟ್ಸ್ ಕೊಡಬಹುದು. ಆದರೆ ಕರೋನಾ ಪೀಡಿತರಿಗೆ ಕರೋನಾದಿಂದ ಗುಣಮುಖರಾದವರೇ ಪ್ಲಾಸ್ಮಾ ದಾನ ಮಾಡಬೇಕು ಅಷ್ಟೆ.
ಪ್ಲಾಸ್ಮಾ ಥೆರಪಿಯಿಂದ ಕರೋನಾ ಪೀಡಿತರನ್ನು ರಕ್ಷಣೆ ಮಾಡಬಹುದು ಎನ್ನುವ ಮಾತಿಗೆ ದೆಹಲಿ ಪ್ರಕರಣದಿಂದ ಸ್ವಲ್ಪ ಧೈರ್ಯ ಸಿಕ್ಕಿದೆ. ಆದರೆ ಮ್ಯಾಕ್ಸ್ ಆಸ್ಪತ್ರೆಯ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಇನ್ನೂ ಕೂಡ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಕೊಡುತ್ತಿದೆ. ಪ್ಲಾಸ್ಮಾ ಥೆರಪಿಯಿಂದ ಗುಣವಾಗಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷಿಯಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಯಿಂದ ಗುಣವಾಗಿದೆ ಎಂದು ತಿಳಿಯುತ್ತಿದ್ದಂತೆ ಮುಂಬೈನಲ್ಲಿ ಪ್ಲಾಸ್ಮಾ ದಾನ ಮಾಡಲು ಸಾಕಷ್ಟು ಜನರು ಮುಂದೆ ಬಂದಿದ್ದರು. ಆದರೆ ಪ್ಲಾಸ್ಮಾ ಥೆರಪಿಗೆ ಭಾರತದಲ್ಲಿ ಇನ್ನೂ ಕೂಡ ಮಾನ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ICMR ಕೂಡ ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಭಾರತದಲ್ಲಿ ಪ್ಲಾಸ್ಮಾ ಥೆರಪಿ ಪ್ರಾಯೋಗಿಕ ಹಂತದಲ್ಲಿದೆ. ಕರೋನಾ ವೈರಸ್ ಗೆ ಯಾವುದೇ ಥೆರಪಿಗೆ ಇಲ್ಲಿವರೆಗೂ ಯಾವುದೇ ಮಾನ್ಯತೆಯಿಲ್ಲ. ಪ್ಲಾಸ್ಮಾ ಥೆರಪಿ ಕೂಡ ಮಾನ್ಯತೆ ಪಡೆದಿಲ್ಲ. ಇನ್ನೂ ಪ್ರಯೋಗ ಎಂದಿದೆ.