ಕರೋನಾ ವೈರಸ್ ಸೋಂಕು ದೇಶದಲ್ಲಿ ಅಬ್ಬರಿಸುವ ಮುಂಚೆಯೇ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು ಲಾಕ್ಡೌನ್ ಆದೇಶ ಮಾಡಿದ್ದರು. ಆದ 21 ದಿನ ಆದ ಬಳಿಕವಾದರೂ ತಮ್ಮ ತವರಿಗೆ ಹೋಗಬಹುದು ಎಂದು ಅದೆಷ್ಟೋ ಕಾರ್ಮಿಕರು ಕನಸು ಕಂಡಿದ್ದರು. ಆದರೆ ಏಪ್ರಿಲ್ 14 ರಿಂದ ಮೇ 3ರ ತನಕ ಮತ್ತೆ 19 ದಿನಗಳ ಕಾಲ ಲಾಕ್ಡೌನ್ ಆದೇಶ ಮಾಡಿದ್ರು. ಇದ್ರಿಂದ ಕಾರ್ಮಿಕರು ಮತ್ತಷ್ಟು ಕಂಗಾಲಾಗಿದ್ದಾರೆ. ಈಗಾಗಲೇ ಕಳೆದೊಂದು ತಿಂಗಳಿಂದ ಕೂಲಿಯೂ ಇಲ್ಲದೆ, ಆಹಾರ ಪದಾರ್ಥಗಳೂ ಇಲ್ಲದೆ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತರಾಗಿದ್ದಾರೆ. ಆದರೆ ಕರ್ನಾಟಕದ ಕಾರ್ಮಿಕ ಸಚಿವರು ಎಲ್ಲಿದ್ದಾರೆ? ಕರ್ನಾಟಕದಿಂದ ಹೊರ ರಾಜ್ಯಗಳಲ್ಲಿ ದುಡಿಯಲು ಹೋಗಿರುವ ಕಾರ್ಮಿಕರ ಬಗ್ಗೆ ನಮ್ಮ ಕಾರ್ಮಿಕ ಸಚಿವರು ಕಿಂಚಿತ್ತಾದಾರು ಚಿಂತಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಶೂನ್ಯ. ನಮ್ಮ ಕಾರ್ಮಿಕ ಸಚಿವರು ಯಾರು ಎಂದು ಈಗ ನೀವು ಚಿಂತಿಸಬೇಡಿ. ಕಾಂಗ್ರೆಸ್ ನಿಂದ ಆಯ್ಕೆಯಾಗಿ ಆಪರೇಷನ್ ಕಮಲಕ್ಕೆ ತುತ್ತಾಗಿ ವನವಾಸದ ಬಳಿಕ ಮತ್ತೆ ಆಯ್ಕೆಯಾಗಿ ಬಂದು ಮಿನಿಸ್ಟರ್ ಆಗಿರುವ ಶಿವರಾಂ ಹೆಬ್ಬಾರ್ ಅವರು.
ರಾಜಸ್ಥಾನದ ಕೂಲಿ ಕಾರ್ಮಿಕರು ನಿಮ್ಮ ಊರುಗಳಲ್ಲಿಯೂ ಸಿಗ್ತಾರೆ. ಕಲ್ಲು ಕೆಲಸ ಮಾಡೋದ್ರಿಂದ ಹಿಡಿದು ಕಟ್ಟಡ ಕಾಮಗಾರಿಯಲ್ಲೂ ರಾಜಸ್ಥಾನದ ಕೂಲಿ ಕಾರ್ಮಿಕರನ್ನು ಕಾಣಬಹುದು. ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುತ್ತಾರೆ. ಇದೇ ರೀತಿ ಲಾಕ್ಡೌನ್ ವೇಳೆ ಗುಜರಾತ್ ನಲ್ಲಿ ಸಾವಿರಾರು ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅತ್ತ ಕೂಲಿಯೂ ಇಲ್ಲದೆ ಸಂಸಾರ ನಡೆಸಲಾಗದೆ ಎಲ್ಲರೂ ರಾಜಸ್ಥಾನದ ಕಡೆಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಸಾಕಷ್ಟು ದೂರ ಕ್ರಮಿಸಿದ ಬಳಿಕ ಗುಜರಾತ್ ಸರ್ಕಾರ, ಬಸ್ ಸೌಲಭ್ಯ ಕಲ್ಪಿಸಿತ್ತು. ಬಡ ಕೂಲಿ ಕಾರ್ಮಿಕರು ನೆಮ್ಮದಿಯಾಗಿ ಹುಟ್ಟೂರು ಸೇರಿಕೊಂಡರು. ಇದೇ ರೀತಿ ರಾಜಸ್ಥಾನದ ಕೋಟಾದಲ್ಲಿ ದೇಶದ ಸಾವಿರಾರು ಪ್ರತಿಭಾನ್ವಿತರು ತರಬೇತಿ ಪಡೆಯುತ್ತಾರೆ. ಇದರಲ್ಲಿ ಉತ್ತರ ಪ್ರದೇಶ 7500ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷಾಂಕ್ಷಿಗಳು ಲಾಕ್ಡೌನ್ ವೇಳೆ ಸಿಕ್ಕಿ ಬಿದ್ದಿದ್ದರು. ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೆ ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಅಭಿಯಾನ ನಡೆಸಿದ್ದರು. ಇದನ್ನು ಗಮನಿಸಿದ ಉತ್ತರ ಪ್ರದೇಶ ಸರ್ಕಾರ ಸುಮಾರು 250ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಿ ತಮ್ಮ ರಾಜ್ಯದ ಸ್ಪರ್ಧಾಳುಗಳನ್ನು ಉತ್ತರ ಪ್ರದೇಶಕ್ಕೆ ವಾಪಸ್ ಕರೆತಂದಿದೆ.
ಇದೊಂದು ಸಣ್ಣ ಉದಾಹರಣೆ ಅಷ್ಟೇ. ಕರ್ನಾಟಕದ ಸಾವಿರಾರು ಕಾರ್ಮಿಕರು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವಾರು ಭಾಗಗಲ್ಲಿ ಸಿಲುಕಿ ಲಾಕ್ಡೌನ್ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಮುಂಬೈ ನಗರದಲ್ಲಿ ಕರೋನಾ ವೈರಸ್ ತನ್ನ ಪ್ರಾಣಹರಣ ಸಂತತಿಯನ್ನು ವೃದ್ಧಿಸಿಕೊಂಡೇ ಸಾಗುತ್ತಿದೆ. ಎಲ್ಲಿ ಹೊರಗೆ ಬಂದರೆ ಪ್ರಾಣ ಪಕ್ಷಿ ಹಾರಿ ಹೋಗುತ್ತದೆಯೋ ಎನ್ನುವ ಆತಂಕ ಮನೆ ಮಾಡಿದೆ. ಮನೆಯೊಳಗೆ ಇರೋಣವೆಂದರೆ ಕುಂತು ತಿನ್ನುವಷ್ಟು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಕಳೆದ ತಿಂಗಳು ಸರಿಯಾಗಿ ಕೆಲಸ ಮಾಡಿಲ್ಲವಾದ್ದರಿಂದ ಸಂಬಳವೂ ಬಂದಿಲ್ಲ. ಹೋಟೆಲ್, ಕ್ಯಾಂಟೀನ್ಗಳಲ್ಲಿ ಕೆಲಸ ಮಾಡುವ ಸಾವಿರಾರು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಚಿಂತಿಸುತ್ತಿಲ್ಲ. ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ವಿಜಯಪುರ ಭಾಗದ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ಹತ್ತಿರದಲ್ಲೇ ಇರುವ ಕಾರಣಕಷ್ಟವೋ ಸುಖವೋ ತಮ್ಮ ಊರು ಸೇರಿಕೊಂಡಿದ್ದಾರೆ. ಆದರೆ ಹಳೇ ಮೈಸೂರು ಸೇರಿದಂತೆ ಉಳಿದ ಕಡೆಯ ಕೂಲಿ ಕಾರ್ಮಿಕರು ಮನೆಯಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.
ಈ ಕೆಲಸವನ್ನು ಸ್ವತಃ ಮುಖ್ಯಮಂತ್ರಿಯೇ ಮಾಡಬೇಕು ಎಂದರೆ ನಿರೀಕ್ಷೆ ತಪ್ಪು ಎನ್ನಬಹುದು. ಯಾಕಂದ್ರೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಯಾರೇ ಆಗಿರಲಿ ಇಷ್ಟು ಪ್ರಮಾಣದಲ್ಲಿ ಚಿಂತೆ ಮಾಡುವಷ್ಟ ಸಮಯಾವಕಾಶ ಇರುವುದಿಲ್ಲ. ಆದರೆ, ಕಾರ್ಮಿಕರ ಹಿತ ಕಾಯುವ ಉದ್ದೇಶದಿಂದ ಕಾರ್ಮಿಕ ಸಚಿವರೇ ಒಬ್ಬರು ಇರುತ್ತಾರೆ. ಅವರು ಏನು ಮಾಡುತ್ತಾರೆ? ಕಾರ್ಮಿಕರನ್ನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳಬಹುದಾದ ಅವಕಾಶ ಬಂದಿರುವುದೆ ಈಗ. ಈ ಸಮಯದಲ್ಲಿ ನಮ್ಮ ರಾಜ್ಯದ ಹಿತ ಕಾಯದ ಕಾರ್ಮಿಕ ಸಚಿವರು ಇನ್ಯಾವ ಕೆಲಸ ಮಾಡಿಯಾರು? ಸಚಿವ ಶಿವರಾಮ್ ಹೆಬ್ಬಾರ್ ಸಾಹೇಬರಿಗೆ ಇದೆಲ್ಲಾ ಕಾಣದಿರುವುದೇ ವಿಪರ್ಯಾಸ. ವಿಶೇಷ ಎಂದರೆ ಮುಂಬೈ ಮಹಾನಗರಿಯಲ್ಲಿ ಗಲ್ಲಿ ಗಲ್ಲಿಯನ್ನು ಸುತ್ತಾಡಿರುವ ಸಚಿವ ನಾರಾಯಣಗೌಡರೂ ಇದ್ದಾರೆ. ಇವರದ್ದೇ ಸಾಕಷ್ಟು ಹೋಟೆಲ್ ಉದ್ಯಮವಿದೆ. ಮುಂಬೈನಲ್ಲಿ ಕನ್ನಡಿಗರ ಸಂಘವನ್ನೇ ಕಟ್ಟಿ ಕನ್ನಡ ಬೆಳೆಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ನಾರಾಯಣಗೌಡರು ಮುಂಬೈನಿಂದ ಕನ್ನಡಿಗರನ್ನು ವಾಪಸ್ ಕರೆದುಕೊಂಡು ಬರುವ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ?
ಮುಂಬೈನಲ್ಲಿ ಕರೋನಾ ವೈರಸ್ ಅಟ್ಟಹಾಸ ಮಾಡುತ್ತಿದೆ. ಸದ್ಯಕ್ಕಂತು ಕರೋನಾ ಕಂಟ್ರೋಲ್ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಿರುವಾಗ ಕನ್ನಡಿಗರು ಮುಂಬೈನಲ್ಲೇ ಸಾಯಬೇಕಾ? ಜೀವನ ನಡೆಸುವ ಉದ್ದೇಶದಿಂದ ಮುಂಬೈ ನಗರ ಸೇರಿರುವ ಜನರನ್ನು ಕರೆತಂದು ಕ್ವಾರಂಟೈನ್ನಲ್ಲಿ ಇಟ್ಟು, ಆ ಬಳಿಕ ಮನೆಗಳಿಗೆ ಕಳುಹಿಸುವ ಕೆಲಸ ಮಾಡಬೇಕಿದೆ. ಇದೇ ರೀತಿ ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ನವೋದಯ ವಿದ್ಯಾಲಯದ ಮಕ್ಕಳು ಒಂದು ವರ್ಷದ ಕಲಿಕೆಗಾಗಿ ತೆರಳಿದ್ದರು. ಶೈಕ್ಷಣಿಕ ವರ್ಷ ಮುಕ್ತಾಯವಾಗಿದ್ದು, ಸರ್ಕಾರದ ಸೌಲಭ್ಯವೂ ಇಲ್ಲದೆ ಪೋಷಕರ ಕಾಣಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ನೂರಾರು ಮಕ್ಕಳು. ಆ ಮಕ್ಕಳನ್ನು ಕರೆತಂದು ಪೋಷಕರ ಮಡಿಲು ಸೇರಿರಬೇಕಿದೆ. ಸರ್ಕಾರ ಕೇವಲ ಬಾಯಿ ಮಾತಿನಲ್ಲಿ ಸವಲತ್ತು ಕೊಡುತ್ತೇವೆ ಎನ್ನುವುದನ್ನು ಬಿಟ್ಟು ಸಂಕಷ್ಟದಲ್ಲಿರುವ ಕಾರ್ಮಿಕರು, ವಿದ್ಯಾರ್ಥಿಗಳ ನೆರವಿಗೆ ಬರಬೇಕಿದೆ. ಸಂಬಂಧಪಟ್ಟ ಸಚಿವರು ಮುಖ್ಯಮಂತ್ರಿಗಳ ಗಮನಸೆಳೆದು ಈ ಬಗ್ಗೆ ಕೆಲಸ ಮಾಡಬೇಕಿದೆ.