ಜಗತ್ತಿನಾದ್ಯಂತ ತನ್ನ ಭೀಕರ ಪರಿಣಾಮ ಬೀರುತ್ತಿರುವ ಕರೋನಾ ಸೋಂಕಿನ ವಿರುದ್ಧ ಜಗತ್ತಿನ ದೇಶಗಳೆಲ್ಲವೂ ತನ್ನ ಹೋರಾಟ ದಾಖಲಿಸುತ್ತಿದೆ. ಆದರೆ ಭಾರತದ ಜನರು ಕರೋನಾದ ಜತೆಗೆ ಕೋಮುವಾದವನ್ನೂ ಎದುರಿಸಬೇಕಾದಂತಹ ನಿರ್ಣಾಯಕ ಘಟ್ಟದಲ್ಲಿದ್ದಾರೆ. ಕರೋನಾ ಸೋಂಕಿನ ಸೋಗಿನಲ್ಲಿ ಮುಸ್ಲಿಂ ಸಮುದಾಯದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಇಲ್ಲಿನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಹರಿಯಬಿಡಲಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಪ್ರತ್ಯೇಕಿಸುವ ದುರುದ್ದೇಶದಿಂದಲೇ ಬಹುತೇಕ ಆಳುವ ಪಕ್ಷದ ಪರವಾಗಿರುವ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸರಿಸುತ್ತಿವೆ.
ಎಪ್ರಿಲ್ 12 ರಂದು ಪ್ರಮುಖ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ “ದೈನಿಕ್ ಭಾಸ್ಕರ್” ಲಂಡನ್‌ನ ಮಹಿಳಾ ವೈದ್ಯೆಯೊಬ್ಬರು ಸಂಪರ್ಕತಡೆಯನ್ನು ಉಲ್ಲಂಘಿಸಿದ ವರದಿ ಮಾಡಿತ್ತು.ಲಂಡನ್‌ನಿಂದ ಹಿಂದಿರುಗಿದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವೈದ್ಯೆಗೆ 14 ದಿನಗಳ ಕಾಲ ಮನೆಯೊಳಗೆ ಇರಲು ಸೂಚಿಸಿದಾಗ್ಯೂ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದಾರೆ. ಪುರಸಭೆ ಕಳುಹಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ತನ್ನನ್ನು ಪರೀಕ್ಷಿಸಲು ನಿರಾಕರಿಸಿದ್ದರಿಂದ ಅವರು ಹಿಂತಿರುಗಿ ಹೋಗಿದ್ದಾರೆ ಎಂದು “ಜವಾಬ್ದಾರಿಯುತ ಪ್ರಜೆಯ” ಹೆಸರಿನಲ್ಲಿ ಕಲೆಕ್ಟರ್ ಕಛೇರಿಯಲ್ಲಿ ದೂರು ದಾಖಲಾಗಿತ್ತು.
ಮಹಿಳಾ ವೈದ್ಯೆ ಮಾರ್ಚ್ 7 ರಂದು ಭಾರತಕ್ಕೆ ಬಂದಿದ್ದು, ಅವರಲ್ಲಿ ಸಂಪರ್ಕ ತಡೆಗೆ ಸೂಚಿಸಿರಲಿಲ್ಲ, ವಿಮಾನ ನಿಲ್ದಾಣದಲ್ಲಿಯೇ ಆ ವೈದ್ಯರನ್ನು ಪರೀಕ್ಷಿಸಲಾಗಿತ್ತು, ರೋಗ ಲಕ್ಷಣಗಳು ಇಲ್ಲದ್ದರಿಂದ ಅವರನ್ನು ಮನೆಗೆ ಹೋಗಲು ಅನುಮತಿಸಲಾಗಿತ್ತು. ಅಲ್ಲದೆ ಆ ಸಮಯದಲ್ಲಿ ಇಂಗ್ಲೆಂಡಿನಿಂದ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಿರಲಿಲ್ಲ. ಈ ಮಾಹಿತಿಯನ್ನು ವರದಿಯು ತನ್ನ ಓದುಗರಿಂದ ಅಡಗಿಸಿಟ್ಟಿತ್ತು.
ಪ್ರಯಾಣಿಕರ ವಿವರಗಳನ್ನು ಪಡೆದಿದ್ದ ಸ್ಥಳೀಯ ಆಡಳಿತವು ಮಾರ್ಚ್ 14 ರಂದು ಕಲೆಕ್ಟರ್ ಕಛೇರಿಯಿಂದ ವೈದ್ಯೆಯನ್ನು ಸಂಪರ್ಕಿಸಿ ರೋಗಲಕ್ಷಣಗಳು ಕಂಡುಬಂದರೆ ವರದಿ ಮಾಡುವಂತೆ ಸೂಚಿಸಿತ್ತು. ಯಾವುದೇ ಲಕ್ಷಣಗಳು ಕಂಡುಬಾರದ್ದರಿಂದ ಕ್ವಾರಂಟೈನ್‌ಗೆ ಒಳಗಾಗಲು ಸಿದ್ಧಪಡಿಸಿದ ಪಟ್ಟಿಯಲ್ಲಿ ಇವರ ಹೆಸರು ಸೇರಿಸಿರಲಿಲ್ಲ.
ವಿದೇಶದಿಂದ ಭಾರತಕ್ಕೆ ಬಂದು ಐದು ವಾರಗಳು ಕಳೆದರೂ ಅವರಲ್ಲಿ ಯಾವ ರೋಗಲಕ್ಷಣ ಕಂಡು ಬಂದಿರಲಿಲ್ಲ, ಹಾಗೂ ಕಲೆಕ್ಟರ್ ಕಛೇರಿಯಲ್ಲಿ ದೂರು ದಾಖಲಿಸುವ ಮೊದಲು ಯಾರೊಬ್ಬರೂ ಅವರನ್ನು ಸಂಪರ್ಕಿಸಿರಲಿಲ್ಲ. ಇಲ್ಲಿ ಕತೆಯ ತಿರುವು ಪಡೆದುಕೊಳ್ಳುತ್ತದೆ.
ಕಲೆಕ್ಟರ್ ಕಛೇರಿಯಲ್ಲಿ ದೂರು ದಾಖಲಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲದೆ ವೈದ್ಯೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತಿಯೇ ಆಗಿದ್ದಾರೆ. ದಂಪತಿ ಸದ್ಯ ವಿಚ್ಛೇದನ ಕೋರಿ ತಮ್ಮ ಒಂಬತ್ತು ವರ್ಷದ ಮಗನನ್ನು ಸುಪರ್ದಿಗೆ ಕೊಡುವ ಬಗ್ಗೆ ಮೊಕದ್ದಮೆ ದಾಖಲಿಸಿದ್ದರು.
ಮಾರ್ಚ್ 12 ರಂದು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠವು ಮಗುವಿನ ಪಾಲನೆಯನ್ನು ತಾಯಿಗೆ ಹಸ್ತಾಂತರಿಸುವಂತೆ ಸೂಚಿಸಿತ್ತು. ಮಗುವನ್ನು ತನ್ನ ಸುಪರ್ದಿಗೆ ಪಡೆಯಲು ಲಂಡನಿಂದ ಹಿಂದಿರುಗಿದ ವೈದ್ಯೆಗೆ ಮಗುವನ್ನು ಹಸ್ತಾಂತರಿಸಲು ನಿರಾಕರಿಸಿದ ಪತಿಯು ಉನ್ನತ ನ್ಯಾಯಲಯಕ್ಕೆ ಹೋಗಲು ಉದ್ದೇಶಿಸಿದ್ದರು.
ಮಗುವನ್ನು ಹಸ್ತಾಂತರಿಸಲು ಮನಸಿಲ್ಲದ ಗಂಡ ತನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆಂದು ಸ್ಥಳೀಯ ಮಾಧ್ಯಮದವರೊಂದಿಗೆ ಹೇಳಿಕೊಂಡ ವೈದ್ಯೆ ತನ್ನ ತಾಯಿ ಹಿಂದೂ ಹಾಗೂ ತಂದೆ ಮುಸ್ಲಿಂ ಆಗಿರುವುದು ತನ್ನ ಗಂಡನಿಗೆ, ಗಂಡನ ಕುಟುಂಬ ಹಾಗೂ ಗೆಳೆಯರಿಗೆ ಗೊತ್ತಿದ್ದೇ ಮದುವೆಯಾಗಿದ್ದು ನಂತರ ಉದ್ದೇಶಪೂರ್ವಕವಾಗಿ ತನ್ನ ತಂದೆಯ ಧರ್ಮವನ್ನು ಉಲ್ಲೇಖಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ.
ವೈದ್ಯೆಯ ಹೆಸರು ಮತ್ತು ಉಪನಾಮ ಮುಸ್ಲಿಂ ಗುರುತನ್ನು ಹೊಂದಿಲ್ಲದರಿಂದ ಹಾಗೂ ಮುಸ್ಲಿಂ ಸಮುದಾಯದವಳಾಗಿ ತನ್ನನ್ನು ಪರಿಚಯಿಸಿ ಪ್ರಕರಣವನ್ನು ಗಂಭೀರಗೊಳಿಸುವ ಉದ್ದೇಶದಿಂದ ತನ್ನ ತಂದೆಯ ಹೆಸರನ್ನು ದೂರಿನಲ್ಲಿ ಸೇರಿಸಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ.
ತನ್ನ ಗಂಡನ ಸುಳ್ಳು ದೂರನ್ನು ನಂಬಿ ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ಎಪ್ಪತ್ತು ವರ್ಷದ ತನ್ನ ತಾಯಿ,ಮಗು ಹಾಗೂ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪದೆ ಪದೆ ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ಅಕ್ಕಪಕ್ಕದ ಮನೆಯವರು ನನಗೆ ಸೋಂಕಿರುವುದಾಗಿ ಅನುಮಾನಿಸತೊಡಗಿದ್ದಾರೆಂದರು. ಪತ್ರಿಕೆಯಲ್ಲಿ ವರದಿಯಾದ ಲೇಖನಗಳು ಸಮಾಜದಲ್ಲಿ ನನ್ನ ಘನತೆಯನ್ನು ಕುಗ್ಗಿಸಿದೆ. ನನ್ನ ಹಾಗೂ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಆಲೋಚಿಸದೆ ತನ್ನ ಪತಿ ದೂರು ನೀಡಿದ್ದಾರೆಂದು ವರದಿಗಾರರ ಬಳಿ ಹೇಳಿಕೊಂಡಿದ್ದಾರೆ.
ಹೆಂಡತಿಯನ್ನು ಅವಮಾನಿಸುವುದಕ್ಕಾಗಿಯೇ ಆಕೆಯ ತಂದೆಯ ಧರ್ಮವನ್ನು ಎಳೆದುತಂದು ದೂರು ದಾಖಲಿಸಿದ ಪತಿ ಹಾಗೂ ಆರೋಪಿತಳ ಪ್ರಯಾಣದ ವಿವರ ಹಾಗೂ ಪರೀಕ್ಷಿಸಿದ ಬಗ್ಗೆ ತಾನೇ ತಯಾರಿಸಿದ ದಾಖಲೆ ಪಟ್ಟಿಯನ್ನು ಪರಿಶೀಲಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದ ನಾಗ್ಪುರ ಸ್ಥಳೀಯ ಆಡಳಿತವು ಸಾಮಾನ್ಯ ಗಂಡನೊಬ್ಬನ ಹೆಂಡತಿಯ ಮೇಲಿನ ದ್ವೇಷವನ್ನು ಒಂದು ಸಮುದಾಯದ ಘನತೆಯನ್ನು ಕುಗ್ಗಿಸುವ ಮಟ್ಟಿಗೆ ಕೊಂಡು ಹೋಯಿತು.
ತಾನೇ ಸಿದ್ಧಪಡಿಸಿದ ದಾಖಲೆಗಳನ್ನು ಪರಿಶೀಲಿಸದೆ ಸಾಮಾನ್ಯ ದೂರುದಾರರ ದೂರನ್ನು ಆಧಾರವಾಗಿಟ್ಟುಕೊಂಡು ಮಹಿಳಾ ವೈದ್ಯೆಯನ್ನು ಪರೀಕ್ಷಿಸಲು ಆದೇಶ ಹೊರಡಿಸಿದ ಕುರಿತು ಕಲೆಕ್ಟರ್ ರವೀಂದ್ರ ಠಾಕ್ರೆಯ ಬಳಿ ಕೇಳಿದಾಗ ಪುರಸಭೆಯ ಆಯುಕ್ತರ ಮೇಲೆ ಜವಾಬ್ದಾರಿ ಹೊರಿಸಿ ತನಗೆ ಈ ಬಗ್ಗೆ ಮಾಹಿತಿಯಿಲ್ಲವೆಂದು ನುಣುಚಿಕೊಂಡರು.
ಸಾಮಾನ್ಯ ಗಂಡನೊಬ್ಬನ ಹೆಂಡತಿಯ ಮೇಲಿನ ತನ್ನ ವೈಯಕ್ತಿಕ ದ್ವೇಷವನ್ನು ಒಂದು ಕೋಮುವಿನ ಮೇಲೆ ಅಪನಂಬಿಕೆ ಬರುವಂತೆ ವರದಿ ಮಾಡಿದ ಮಾಧ್ಯಮವು ಪ್ರಕರಣದ ವಾಸ್ತವಾಂಶವನ್ನು ಪೂರ್ವಾಗ್ರಹ ಪೀಡಿತವಾಗಿ ಜನರಿಂದ ಮುಚ್ಚಿಟ್ಟಿತು. ಭಾರತ ಕರೋನಾ ಸೋಂಕಿನ ವಿರುದ್ಧ ಹೋರಾಡುವುದರೊಂದಿಗೆ ಅದಕ್ಕಿಂತಲೂ ಭೀಕರವಾಗಿ ಹರಡುತ್ತಿರುವ ಕೋಮುದ್ವೇಷದ ಹಾಗೂ ಸುಳ್ಳು ಸುದ್ದಿಯ ವಿರುದ್ಧವೂ ಹೋರಾಡಬೇಕಿರುವ ಅನಿವಾರ್ಯತೆ ಇದೆ.