ಕರೋನಾ ಕಾಲದಲ್ಲಿ ಜಗತ್ತಿನಾದ್ಯಂತ ಜನ ದಿಕ್ಕೆಟ್ಟು ಕಂಗಾಲಾಗಿದ್ದಾರೆ. ಪ್ರಾಣಭಯದಿಂದ ಜನಗಳು ಮಾನಸಿಕ ಕ್ಷೋಭೆಗೊಳಗಾಗುತ್ತಿದ್ದಾರೆ. ಹಲವು ಮಾನಸಿಕ ಒತ್ತಡ ಮತ್ತು ಆತಂಕದ ಕಾಯಿಲೆಗಳು ಹೆಚ್ಚುತ್ತಿವೆ ಎಂಬ ವರದಿಗಳಿವೆ.
ಆದರೆ, ಇಂತಹ ಸಂಕಷ್ಟದ ಹೊತ್ತಲ್ಲಿ ಜನರ ಜೀವ ಮತ್ತು ದೇಶದ ಭವಿಷ್ಯ ಕಾಯಬೇಕಾದ ಒಂದು ಸರ್ಕಾರ, ಒಂದು ಸಚಿವಾಲಯ, ಒಬ್ಬ ಸಚಿವರು ಕೂಡ ವಿವೇಚನಾಹೀನರಾಗಿ, ತಮ್ಮ ಹೊಣೆಗಾರಿಕೆಯನ್ನೇ ಮರೆತು ಚಿತ್ರವಿಚಿತ್ರವಾಗಿ ವರ್ತಿಸತೊಡಗಿದರೆ ಏನಾಗಲಿದೆ ಎಂಬುದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯ ಇತ್ತೀಚಿನ ತೀರ್ಮಾನಗಳೇ ಸಾಕ್ಷಿ.
ಪರಿಸರ ಮತ್ತು ಮಾನವ ನಡುವಿನ ಸಂಘರ್ಷದ ಪರಿಣಾಮವೇ ಈ ಭೀಕರ ಕರೋನಾ ಎಂಬ ವಾದ ಎಲ್ಲೆಡೆ ಹರಿದಾಡುತ್ತಿರುವಾಗ, ದೇಶದ ಪರಿಸರ ಸಮತೋಲನ ಕಾಯಬೇಕಾದ, ಸಂರಕ್ಷಣೆ ಮಾಡಬೇಕಾದ ಕೇಂದ್ರ ಪರಿಸರ ಸಚಿವರು ಮತ್ತು ಸ್ವತಃ ಅವರ ಅಧ್ಯಕ್ಷತೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ತೆಗೆದುಕೊಂಡಿರುವ ಪರಿಸರ ವಿರೋಧಿ ತೀರ್ಮಾನಗಳು ಆತಂಕ ಹುಟ್ಟಿಸದೇ ಇರವು. ವನ್ಯಜೀವಿ ಮಂಡಳಿ ಸ್ಥಾಯಿಸಮಿತಿಯ ಯಾವುದೇ ನಿರ್ಧಾರಗಳಲ್ಲಿ ನಿರ್ಣಾಯಕರಾದ ಸದಸ್ಯರು ಮತ್ತು ತಜ್ಞರು ನೇರವಾಗಿ ಭಾಗಿಯಾಗದೇ ಹೋದರೂ ಲಾಕ್ ಡೌನ್ ನಡುವೆಯೇ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಬಹುತೇಕ ಏಕಪಕ್ಷೀಯವಾಗಿ 11 ರಾಜ್ಯಗಳ ವಿವಿಧ ಪರಿಸರ ಮಾರಕ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ವನ್ಯಜೀವಿ ಮಂಡಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಯಾವುದೇ ಚರ್ಚೆ ಇಲ್ಲದೆ, ನಕಾಶೆ, ಯೋಜನೆ ವಿವರಗಳನ್ನು ಪರಿಶೀಲಿಸಿ ಆ ಬಗ್ಗೆ ತಜ್ಞರ ಅಭಿಪ್ರಾಯ ಕೇಳದೆ ಅಭಯಾರಣ್ಯ ಮತ್ತು ವನ್ಯಜೀವಿ ವಲಯಗಳನ್ನು ಸೇರಿದಂತೆ ದಟ್ಟ ಕಾಡಿನ ನಡುವೆ ಅನುಷ್ಠಾನವಾಗಲಿರುವ ಈ ಯೋಜನೆಗಳಿಗೆ ಮಂಡಳಿ ಕಡೆಯಿಂದ ಯಾವುದೇ ಆಕ್ಷೇಪವಿಲ್ಲ ಎಂಬ ಅನುಮೋದನೆ ನೀಡಲಾಗಿದೆ.
ಈ ವಿಷಯವನ್ನು ಸ್ವತಃ ಸಚಿವರೇ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದು, “ಒಟ್ಟು 11 ರಾಜ್ಯಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದೆ. ಆ ಮೂಲಕ ಗೋವಾದ ಹೆದ್ದಾರಿ ಮತ್ತು ವಿದ್ಯುತ್ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಗೋವಾದ ಪ್ರವಾಸೋದ್ಯಮಕ್ಕೆ ಇದೊಂದು ದೊಡ್ಡ ಪ್ರೇರಣೆಯ ಕ್ರಮ” ಎಂದು ಹೇಳಿದ್ದಾರೆ.
ಅಂದರೆ; ಸಚಿವರ ಆ ಟ್ವೀಟ್ ನಲ್ಲಿ ವ್ಯಕ್ತವಾಗಿರುವ ಸಂಭ್ರಮ ಗಮನಿಸಿದರೆ, ತಾವು ಹೊಣೆಹೊತ್ತಿರುವ ಪರಿಸರ ಸಂರಕ್ಷಣೆಗಿಂತ ಅವರಿಗೆ ಗೋವಾದ ಪ್ರವಾಸೋದ್ಯಮವೇ ಮುಖ್ಯ. ತಾವು ಕಾಪಾಡಬೇಕಾದ ಪರಿಸರ- ಅರಣ್ಯವನ್ನು ಬಲಿಕೊಟ್ಟು ಪ್ರವಾಸೋದ್ಯಮಕ್ಕೆ ಪ್ರೇರಣೆ ನೀಡಲು ಅವರು ಹೆಚ್ಚು ಕಾಳಜಿ ವಹಿಸಿದ್ದಾರೆ ಎಂಬುದು ಮನವರಿಕೆಯಾಗದೇ ಇರದು. ನಿಯಮದ ಪ್ರಕಾರ ಸ್ಥಾಯಿ ಸಮಿತಿಯಲ್ಲಿ ಪರಿಸರ ಸಚಿವರು ಅಧ್ಯಕ್ಷರಾಗಿದ್ದರೆ, ಖಾತೆಯ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ, ಇಲಾಖೆಯ ಮೂವರು ಉನ್ನತ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಜೊತೆಗೆ ವನ್ಯಜೀವಿ ಕ್ಷೇತ್ರದ ತಜ್ಞರು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಂತೆ ಹತ್ತು ಮಂದಿ ಸದಸ್ಯರು ಇರಬೇಕು. ಆದರೆ, 2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ ಕೇವಲ ಮೂವರು ಸದಸ್ಯರನ್ನು ಮಾತ್ರ ನೇಮಕ ಮಾಡಿದ್ದು, ಉಳಿದ ಏಳು ಮಂದಿ ಸ್ಥಾನಗಳನ್ನು ಖಾಲಿ ಬಿಡಲಾಗಿದೆ.
ಹಾಗಾಗಿ ಮಾರ್ಚ್ 7ರ ಮಂಗಳವಾರ ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ಹನ್ನೊಂದು ರಾಜ್ಯಗಳಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಯೋಜನೆಗಳಿಗೆ ಅನುಮತಿ ಕೊಡುವಾಗ, ಭಾಗವಹಿಸಿದ್ದು ಕೇವಲ ಮೂವರು ಸದಸ್ಯರು ಮಾತ್ರ. ಆದರೆ, ಆ ತಜ್ಞರಿಗೂ ಯೋಜನೆಗಳ ನಕ್ಷೆ, ಪರಿಸರ ಹಾನಿ ಪ್ರಮಾಣ ಮುಂತಾದ ವಿವರಗಳನ್ನು ಗಮನಿಸಲು ಅವಕಾಶವಾಗಿಲ್ಲ ಮತ್ತು ಕನಿಷ್ಠ ತಮ್ಮ ಅನುಮಾನಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸುವ ಅವಕಾಶ ಕೂಡ ಸಿಗಲಿಲ್ಲ. ಹಾಗಾಗಿ ಇಡೀ ಪ್ರಕ್ರಿಯೆ ಒಂದು ರೀತಿಯಲ್ಲಿ ಸಚಿವರ ಏಕಪಕ್ಷೀಯ ತೀರ್ಮಾನವಾಗಿತ್ತು ಎಂಬುದನ್ನು ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದ ತಜ್ಞರಲ್ಲಿ ಒಬ್ಬರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮಿತಿಯಲ್ಲಿ ಸದ್ಯ ಖ್ಯಾತ ವನ್ಯಜೀವಿ ತಜ್ಞರಾದ ಡಾ ಎಚ್ ಎಸ್ ಸಿಂಗ್, ಆರ್ ಸುಕುಮಾರ್ ಮತ್ತು ಡಾ ಆರ್ ಡಿ ಖಾಂಬೋಜ್ ಸದಸ್ಯರಾಗಿದ್ದಾರೆ.
ರಾಜ್ಯದ ಶರಾವತಿ ಕೊಳ್ಳದ ಶರಾವತಿ ಅಭಯಾರಣ್ಯದ ನಟ್ಟನಡುವೆ ದುರ್ಗಮ ಮಳೆಕಾಡಿನಲ್ಲಿ ನಿರ್ಮಾಣವಾಗಲಿರುವ ಶರಾವತಿ ಭೂಗರ್ಭ ವಿದ್ಯುದಾಗಾರ ಯೋಜನೆ ಕೂಡ ಕೇಂದ್ರ ಪರಿಸರ ಸಚಿವರು ಅತ್ಯುತ್ಸಾಹದಿಂದ ಅನುಮೋದನೆ ನೀಡಿರುವ ಪರಿಸರ ಮಾರಕ ಯೋಜನೆಗಳ ಪಟ್ಟಿಯಲ್ಲಿದೆ. ಆದರೆ, ಸಚಿವರು ಟ್ವಿಟರಿನಲ್ಲಿ ಹೆಸರಿಸುವಾಗ, ಗೋವಾದ ಹೆದ್ದಾರಿ ಮತ್ತು ವಿದ್ಯುತ್ ಮಾರ್ಗ, ನಾಗ್ಪುರ- ಮುಂಬೈ ಸೂಪರ್ ಹೈವೇ, ರಾಜಸ್ತಾನದ ಕೋಟಾದ ಕಲ್ಲುಗಣಿಗಾರಿಕೆ, ಮಧ್ಯಪ್ರದೇಶ ಮತ್ತು ತೆಲಂಗಾಣದ ವಿವಿಧ ರೈಲ್ವೆ ಸೇತುವೆ ಕಾಮಗಾರಿಗಳು, ತೆಲಂಗಾಣ ಮತ್ತು ಉತ್ತರಾಖಂಡದ ನೀರಾವರಿ ಯೋಜನೆಗಳನ್ನು ಆಯಾ ರಾಜ್ಯವಾರು ಹೆಸರಿಸಿದ್ದರೆ, ಭೂಗರ್ಭ ವಿದ್ಯುತ್ ಯೋಜನೆಯನ್ನು ಮಾತ್ರ ಯಾವ ಸ್ಥಳ, ಯಾವ ರಾಜ್ಯವೆಂಬುದನ್ನು ನಮೂದಿಸದೇ ಹೆಸರಿಸಿದ್ದಾರೆ!
ಶರಾವತಿ ಕಣಿವೆಯ ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕಣ್ಣಳತೆ ದೂರದಲ್ಲಿ ಬರೋಬ್ಬರಿ 800 ಎಕರೆಯಷ್ಟು ದಟ್ಟ ಕಾನನದ ನಡುವೆ ಈ ಶರಾವತಿ ಭೂಗರ್ಭ ವಿದ್ಯುದಾಗಾರ ಯೋಜನೆ ತಲೆ ಎತ್ತಲಿದೆ. ವಾಸ್ತವವಾಗಿ ಇದು ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ)ಯ ಯೋಜನೆ. ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಬೃಹತ್ ಭೂಗತ ವಿದ್ಯುದಾಗಾರ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿದ್ದು, ಸ್ವತಃ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಳೆದ ಅಕ್ಟೋಬರಿನಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ರಾಜ್ಯದ ಪ್ರಮುಖ ವನ್ಯಜೀವಿ ತಜ್ಞರ ಉಪಸ್ಥಿತಿಯಲ್ಲಿಯೇ ಅನುಮೋದನೆ ನೀಡಲಾಗಿತ್ತು. ಜಗತ್ತಿನ ಮಾನವ ಪ್ರವೇಶವೇ ಇರದ ಕೆಲವೇ ಕೆಲವು ಪ್ರದೇಶಗಳಲ್ಲಿ ಒಂದಾದ, ತಲಕಳಲೆ ಮತ್ತು ಗೇರುಸೊಪ್ಫಾ ಜಲಾಶಯಗಳ ನಡುವಿನ ದಟ್ಟ ಕಾಡಿನ ನಡುವೆ ಸುಮಾರು 6,000 ಕೋಟಿ ರೂ. ವೆಚ್ಚದ ಈ ಯೋಜನೆ ಜಾರಿಗೆ ಅನುಮೋದನೆ ನೀಡಿದ ರಾಜ್ಯ ವನ್ಯಜೀವಿ ಮಂಡಳಿಯ ನಡೆ ಆಗಲೇ ಸಾಕಷ್ಟು ಟೀಕೆ ಮತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಆದರೆ, ಲಾಭಿಕೋರರ ಒತ್ತಡ ಮತ್ತು ಸ್ವತಃ ಸಿಎಂ ಯಡಿಯೂರಪ್ಪ ಅವರ ಒತ್ತಡ ಮತ್ತು ಪ್ರಭಾವಕ್ಕೆ ಮಣಿದು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದ್ದರೂ, ಕೇಂದ್ರ ಪರಿಸರ ಇಲಾಖೆ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಅಭಯಾರಣ್ಯದ ನಟ್ಟನಡುವೆ ಇಂತಹದ್ದೊಂದು ಯೋಜನೆಗೆ ಅವಕಾಶ ನೀಡಲಾರದು. ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟದ ಹೃದಯದಂತಿರುವ ಶರಾವತಿ ಕೊಳ್ಳದ ಪರಿಸರ ಮತ್ತು ನದಿಯ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುವ ಈ ಯೋಜನೆಯ ಅಪಾಯಗಳನ್ನು ಕೇಂದ್ರ ಮಂಡಳಿ ವಿವೇಚಿಸದೇ ಇರದು ಎಂಬ ವಿಶ್ವಾಸ ರಾಜ್ಯದ ಅಸಲೀ ಪರಿಸರ ಕಾಳಜಿಯ ಮಂದಿ ಮತ್ತು ಶರಾವತಿ ಕೊಳ್ಳದ ಜನರದ್ದಾಗಿತ್ತು. ಆದರೆ, ಇದೀಗ ಕೇಂದ್ರ ಸಚಿವರು, ಕರೋನಾ ಲಾಕ್ ಡೌನ್ ನಡುವೆ, ತರಾತುರಿಯಲ್ಲಿ ಯಾವುದೇ ಸಮಯೋಚಿತ ಚರ್ಚೆ, ಸಂವಾದವೂ ಇಲ್ಲದೆ ಬಹುತೇಕ ಏಕಪಕ್ಷೀಯವಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದ್ದೇ ಅಲ್ಲದೆ, ಅದನ್ನು ಬಹಳ ಹೆಮ್ಮೆಯಿಂದ ಒಂದು ಮಹತ್ಸಾಧನೆ ಎಂಬಂತೆ ಟ್ವಿಟರಿನಲ್ಲಿ ಹಂಚಿಕೊಂಡಿದ್ಧಾರೆ!
ಹಾಗಾಗಿ ಸಹಜವಾಗೇ ಸಚಿವರ ಈ ನಡೆ ಮೂಲಭೂತವಾಗಿ ಕೇಂದ್ರ ವನ್ಯಜೀವಿ ಮಂಡಳಿ ಮತ್ತು ಪರಿಸರ ಇಲಾಖೆಯ ಜವಾಬ್ದಾರಿ ಮತ್ತು ಹೊಣೆಗಾರಿಕೆ ಏನು ಮತ್ತು ಆ ಬಗ್ಗೆ ಸ್ವತಃ ಸಚಿವರಿಗೆ ಅರಿವು ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿ ರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಾದ ಸಚಿವರು, ಗೋವಾ ಪ್ರವಾಸೋದ್ಯಮ ಸಚಿವರಂತೆಯೋ, ಕರ್ನಾಟಕದ ಇಂಧನ ಸಚಿವರಂತೆಯೋ ಈ ಯೋಜನೆಗಳಿಗೆ ಅನುಮತಿ ನೀಡಿದ್ದೇವೆ ಎಂದು ಸಂಭ್ರಮಿಸುವುದು ತೀರಾ ವಿವೇಚನಾಹೀನ ನಡೆಯಂತೆ ಕಾಣುತ್ತಿದೆ.
ಹಾಗೆ ನೋಡಿದರೆ, ಸಣ್ಣಪುಟ್ಟ ಅರಣ್ಯವಾಸಿ ಬುಡಕಟ್ಟು ಜನರು, ಕಾಡಂಚಿನ ರೈತರು, ಅರಣ್ಯ ಉತ್ಪನ್ನಗಳ ಸಂಗ್ರಾಹಕರ ವಿಷಯದಲ್ಲಿ ಕಠಿಣ ಪರಿಸರ ನಿಯಮ ಪಾಲಕರಾಗುವ ಬಿಜೆಪಿ ಮತ್ತು ಅದರ ಸಂಘಪರಿವಾರದ ಮಂದಿ ಕೂಡ ಇಂತಹ ವಿಷಯದಲ್ಲಿ ಜಾಣಮೌನಕ್ಕೆ ಶರಣಾಗುವುದು ಕೂಡ ವಿಚಿತ್ರವೇ. ಅದರಲ್ಲೂ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸದಾ ರೈತರ ಒತ್ತುವರಿ ವಿಷಯದಲ್ಲಿ ಉಗ್ರ ಹೋರಾಟಗಾರರ ವೇಷ ತೊಡುವ ಅನಂತ ಹೆಗಡೆ ಆಶೀಸರ ಅವರು, ಇದೀಗ ಕೆಲವು ದಿನಗಳ ಹಿಂದೆ ರಾಜ್ಯ ವನ್ಯಜೀವಿ ಮಂಡಳಿ ಕೂಡ (ಬಹುತೇಕ ಸಿಎಂ ಅವರೇ ಏಕಪಕ್ಷೀಯವಾಗಿ) ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗಕ್ಕೆ ಅನುಮತಿ ನೀಡಿದ ವಿಷಯದಲ್ಲಾಗಲೀ, ಇದೀಗ ಶರಾವತಿ ಭೂಗರ್ಭ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ನೀಡಿರುವ ಅನುಮತಿಯ ವಿಷಯದಲ್ಲಾಗಲೀ ಉಸಿರೆತ್ತದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಸ್ವತಃ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿರುವ ಆಶೀಸರ ಸೇರಿದಂತೆ ಹಲವು ಪರಿಸರವಾದಿಗಳ ಮತ್ತು ವನ್ಯಜೀವಿ ತಜ್ಞರ(ಕೆಲವರು ಸ್ವತಃ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿದ್ದಾರೆ) ಅವರಂಥವರ ಮೌನ ವಿವರಣೆಗೆ ಸಿಗದಾಗಿದೆ.
ಆ ಹಿನ್ನೆಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವನ್ಯಜೀವಿ ಮಂಡಳಿಗಳು, ಜೀವ ವೈವಿಧ್ಯ ಮಂಡಳಿಗಳು ಮತ್ತು ಸ್ವತಃ ಪರಿಸರ ಇಲಾಖೆ ಇರುವುದು ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಹಿತರಕ್ಷಣೆಗಾಗಿಯೋ ಅಥವಾ ಪರಿಸರ ಮಾರಕ ಯೋಜನೆಗಳಿಗೆ ರಹದಾರಿ ನೀಡುವ ಏಜೆನ್ಸಿಗಳಾಗಿ ಕೆಲಸ ಮಾಡುವುದಕ್ಕಾಗಿಯೋ ಎಂಬ ಪ್ರಶ್ನೆ ಕೂಡ ಎದ್ದಿದೆ. ಸರ್ಕಾರಿ ವೇತನ, ದುಬಾರಿ ಭತ್ಯೆ, ಐಷಾರಾಮಿ ಸೌಲಭ್ಯ, ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡಿ ತಜ್ಞರು, ಪರಿಸರವಾದಿಗಳನ್ನು ಈ ಮಂಡಳಿಗಳಿಗೆ, ಸ್ಥಾನಮಾನಗಳಿಗೆ ನೇಮಿಸುವುದು ಜನರ ತೆರಿಗೆ ಹಣದಲ್ಲಿ ಮೋಜು ಮಾಡಲು ಮಾತ್ರವೇ? ಅಥವಾ ಪ್ರಭಾವಿಗಳಲ್ಲದ ಕೇವಲ ಬಡವರು, ದುರ್ಬಲ ವರ್ಗಗಳ ವಿರುದ್ಧದ ಜನವಿರೋಧಿ ನೀತಿ-ಕಾನೂನುಗಳನ್ನು ರೂಪಿಸಲು ಮಾತ್ರವೇ ? ಎಂಬ ಪ್ರಶ್ನೆಗಳೂ ಎದ್ದಿವೆ.