ಕರೋನಾದಂತಹ ಭೀಕರ ಸೋಂಕು ದೇಶದಾದ್ಯಂತ ಸಾವಿನ ಭೀತಿ ಹುಟ್ಟಿಸಿರುವಾಗ, ಇಡೀ ಜಗತ್ತೇ ತತ್ತರಿಸಿಹೋಗಿರುವಾಗ, ಕೇರಳದ ಪಿಣರಾಯಿ ವಿಜಯನ್ ಅವರಂಥ ಮುಖ್ಯಮಂತ್ರಿಯಿಂದ ಕೆನಡಾ ಪ್ರಧಾನಿಯವರೆಗೆ ಹಲವು ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸು, ಪ್ರತಿಷ್ಠೆ ಮತ್ತು ಸ್ವಾರ್ಥ ಬಿಟ್ಟು ಜನರ ನೋವಿಗೆ ಮಿಡಿಯತೊಡಗಿದ್ದಾರೆ. ಆ ಕಾರಣಕ್ಕೆ ಅವರು ಸಂಕಷ್ಟದ ಹೊತ್ತಲ್ಲಿ ಜನರ ಜೊತೆ ನಿಂತ ನಾಯಕ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಆದರೆ, ಪ್ರಧಾನಿ ಮೋದಿಯವರು, ಕರೋನಾ ಮಹಾಮಾರಿಯಂತಹ ಜಾಗತಿಕ ವಿಪತ್ತಿನ ಹೊತ್ತಿನಲ್ಲಿ ತಮ್ಮ ವರ್ಚಸ್ಸು ವೃದ್ಧಿಯ ಹಪಾಹಪಿಗೆ ಬಿದ್ದಿದ್ದಾರೆ ಎಂಬ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಕರೋನಾ ತಡೆ ಹಿನ್ನೆಲೆಯಲ್ಲಿ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ಸಂತ್ರಸ್ತರಾದವರ ನೆರವಿಗಾಗಿ ಸಾರ್ವಜನಿಕರಿಂದ ಹಣಕಾಸಿನ ದೇಣಿಗೆ ಸಂಗ್ರಹಕ್ಕಾಗಿ ಘೋಷಿಸಿರುವ ‘ಪಿಎಂ-ಕೇರ್’(ಪ್ರೈಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ಸ್ ಫಂಡ್) ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಘೋಷಣೆ ನರೇಂದ್ರ ಮೋದಿಯವರ ಪ್ರಚಾರದ ಹುಚ್ಚಿಗೆ ಮತ್ತೊಂದು ನಿದರ್ಶನ ಎಂದು ಹಲವು ಗಣ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಟೀಕಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುವ ಯಾವುದೇ ವಿಪತ್ತಿನ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ನಿಧಿ ಕ್ರೋಡೀಕರಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಎಂಬುದು ದಶಕಗಳಿಂದ ಇದೆ. ಸಾಂಕ್ರಾಮಿಕ ರೋಗ, ಪ್ರವಾಹ, ಬರ, ಕ್ಷಾಮ, ಭೂಕಂಪದಂತಹ ಸಂದರ್ಭದಲ್ಲಿ ಸಾರ್ವಜನಿಕ ದೇಣಿಗೆಗಳನ್ನು ಆ ನಿಧಿಯ ಮೂಲಕವೇ ಸ್ವೀಕರಿಸಿ, ಸಂತ್ರಸ್ತರ ನೆರವಿಗೆ ಬಳಸಲಾಗುತ್ತಿದೆ. ಇದು ದೇಶ ದಶಕಗಳಿಂದ ರೂಢಿಸಿಕೊಂಡುಬಂದ ಕ್ರಮ ಮತ್ತು ವ್ಯವಸ್ಥಿತವಾಗಿ ರೂಪಿಸಲಾಗಿರುವ ಒಂದು ವ್ಯವಸ್ಥೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಏಕಾಏಕಿಯಾಗಿ ಆ ನಿಧಿಗೆ ಪರ್ಯಾಯವಾಗಿ ಪಿಎಂ-ಕೇರ್ಸ್ ಎಂಬ ನಿಧಿ ಹುಟ್ಟುಹಾಕಿ ಅದರ ಮೂಲಕ ಕರೋನಾ ಲಾಕ್ ಡೌನ್ ಸಂತ್ರಸ್ತರ ನೆರವಿಗೆ ಸಾರ್ವಜನಿ ದೇಣಿಗೆ ಸ್ವೀಕರಿಸುತ್ತಿರುವುದರ ಹಿಂದಿನ ಲಾಜಿಕ್ ಏನು? ಈಗಾಗಲೇ ಇರುವ ಮತ್ತು ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ವ್ಯವಸ್ಥೆಯನ್ನುಬದಿಗೊತ್ತಿ, ಪ್ರಧಾನಿ ಕೇರ್ಸ್ ಎಂಬ ವ್ಯವಸ್ಥೆ ಜಾರಿಯ ಹಿಂದೆ ಜನರ ಹಿತಾಸಕ್ತಿ ಇದೆಯೇ ಅಥವಾ ಮೋದಿಯವರ ವೈಯಕ್ತಿಕ ವರ್ಚಸ್ಸು ವೃದ್ಧಿಯ ಪಿಆರ್ ಸರ್ಕಸ್ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ.
ಪ್ರಧಾನಮಂತ್ರಿಗಳೇ ಸ್ವತಃ ಮುಖ್ಯಸ್ಥರಾಗಿರುವ ಪಿಎಂ ಕೇರ್ಸ್ ಫಂಡ್ ಟ್ರಸ್ಟಿನಲ್ಲಿ ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಹಣಕಾಸು ಸಚಿವರು ಸದಸ್ಯರಾಗಿದ್ಧಾರೆ. ಪಿಎಂಎನ್ ಆರ್ ಎಫ್ ಸಕ್ರಿಯವಾಗಿರುವಾಗ ಮತ್ತು ಜನ ಅದರ ಮೇಲೆ ನಂಬಿಕೆ ಇಟ್ಟು ನೂರಾರು ಕೋಟಿ ರೂ. ದೇಣಿಗೆ ನೀಡುತ್ತಿರುವಾಗ, ತೀರಾ ಹಳೆಯ ಯೋಜನೆ, ಕಾರ್ಯಕ್ರಮ, ಸ್ಮಾರಕ- ಭವನಗಳಿಗೆಲ್ಲಾ ತಮ್ಮದೇ ಅಜೆಂಡಾದ ಹೊಸ ಹೆಸರುಗಳನ್ನು ಮರುನಾಮಕರಣ ಮಾಡುವ ಖಯಾಲಿ ಅಂಟಿಸಿಕೊಂಡಿರುವ ಮೋದಿಯವರು, ಇದರ ಹೆಸರನ್ನೂ ಬದಲಿಸಿ ಮುಂದುವರಿಸಿಕೊಂಡು ಹೋಗಬಹುದಿತ್ತು. ಆದರೆ, ಬದಲಾಗಿ ಪ್ರತ್ಯೇಕ ಸಾರ್ವಜನಿಕ ಟ್ರಸ್ಟ್ ರೂಪಿಸುವ ಜರೂರು ಏನಿತ್ತು ಎಂಬ ಪ್ರಶ್ನೆ ಎದ್ದಿದೆ.
ಪ್ರಮುಖವಾಗಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಈ ಬಗ್ಗೆ ಟ್ವಿಟರ್ ಮೂಲಕ ಪ್ರಧಾನಿಗಳನ್ನು ನೇರವಾಗಿ ಪ್ರಶ್ನಿಸಿದ್ದು, ನಿಮ್ಮ ಹೊಸ ಪಿಎಂ ಕೇರ್ಸ್ ರೀತಿ-ರಿವಾಜುಗಳು ಮತ್ತು ಹಣಕಾಸಿನ ಬಗ್ಗೆ ಹಲವು ಗೊಂದಲಗಳಿವೆ. ಅದು ಪಾರದರ್ಶಕವಾಗಿಲ್ಲ. ಹಳೆಯ ಪಿಎಂಎನ್ ಆರ್ ಎಫ್ ವ್ಯವಸ್ಥೆ ಇರುವಾಗ ಹೊಸದಾಗಿ ಈ ವ್ಯವಸ್ಥೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಿಎಂಎನ್ ಆರ್ ಎಫ್ ನಲ್ಲಿ ಸದ್ಯ ಸುಮಾರು 2200 ಕೋಟಿಯಷ್ಟು ಹಣ ಬಳಕೆಯಾಗದೆ ಬಿದ್ದಿದೆ. ಹಾಗಿದ್ದರೂ ಈ ಹೊಸ ಟ್ರಸ್ಟ್ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವುದು ಏಕೆ ಎಂಬುದನ್ನು ದೇಶದ ಜನತೆಗೆ ತಾವು ವಿವರಿಸಬೇಕು ಎಂದೂ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಇದೇ ಅಭಿಪ್ರಾಯವನ್ನು ಅನುಮೋದಿಸಿರುವ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಕೂಡ, ದೇಶ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಕೇರಳದ ಮಾದರಿಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಸರಿಯಾದ ಯೋಜನೆ ಮತ್ತು ಚಿಂತನೆ ಇಲ್ಲದೆ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ದೇಶದ ಕಾರ್ಮಿಕರು ಮತ್ತು ಬಡವರನ್ನು ಸಂಕಷ್ಟದ ಕೂಪಕ್ಕೆ ದೂಡಲಾಗಿದೆ. ಆ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ಸಾರ್ವಜನಿಕ ದೇಣಿಗೆ ಸಂಗ್ರಹದ ಉದ್ದೇಶದಿಂದ ಆರಂಭಿಸಿರುವ ‘ಪಿಎಂ ಕೇರ್ಸ್’ ನಿಧಿಯ ಹೆಸರನ್ನು ‘ಇಂಡಿಯಾ ಕೇರ್ಸ್’ ಎಂದು ಇಡಬೇಕಿತ್ತು. ಆಗ ನಿಜಕ್ಕೂ ಇಡೀ ದೇಶದ ಕಾಳಜಿಯನ್ನು ಅದು ಪ್ರತಿನಿಧಿಸುತ್ತಿತ್ತು. ಅದಕ್ಕೆ ಬದಲಾಗಿ ಪ್ರಧಾನಿಯವರು ತಮ್ಮ ವ್ಯಯಕ್ತಿಕ ಪ್ರತಿಷ್ಠೆಗಾಗಿ ಈ ನಿಧಿಗೆ ಪ್ರಧಾನಮಂತ್ರಿ ಕೇರ್ಸ್ ಎಂದು ಇಟ್ಟಿರುವುದು ವಿಪರ್ಯಾಸ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ಡಾ ರಾಮಚಂದ್ರ ಗುಹಾ ಮತ್ತಿತರ ದೇಶದ ಬುದ್ಧಿಜೀವಿಗಳು, ಲೇಖಕರುಗಳು ಕೂಡ ಪ್ರಧಾನಮಂತ್ರಿಗಳ ಈ ಹೊಸ ಟ್ರಸ್ಟ್ ಮತ್ತು ನಿಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಈಗಾಗಲೇ ಜಾರಿಯಲ್ಲಿರುವಾಗ ಅದೇ ಉದ್ದೇಶದ ಮತ್ತೊಂದು ಫಂಡ್ ಹುಟ್ಟುಹಾಕುವ ಅಗತ್ಯವೇನಿತ್ತು? ಅದೂ ಆ ನಿಧಿಗೆ ಸ್ವಪ್ರತಿಷ್ಠೆಯ, ಸ್ವ ಪ್ರಚಾರದ ಪಿಎಂ –ಕೇರ್ಸ್ ಎಂಬ ಹೆಸರನ್ನೇ ಏಕೆ ಇಡಲಾಗಿದೆ? ಒಂದು ಭೀಕರ ರಾಷ್ಟ್ರೀಯ ದುರಂತ ಕೂಡ ವ್ಯಕ್ತಿ ಆರಾಧನೆ ಮತ್ತು ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಕೆಯಾಗುತ್ತಿದೆಯೇ? ಎಂದು ಡಾ ರಾಮಚಂದ್ರ ಗುಹಾ ತಮ್ಮ ಟ್ವೀಟರ್ ಖಾತೆಯಲ್ಲಿ ಕಟು ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ, ಪಿಎಂ ಕೇರ್ಸ್ ಫಂಡ್ ಮೂಲಕ ಲಾಕ್ ಡೌನ್ ಸಂತ್ರಸ್ರರ ನೆರವಿಗೆ ಹಲವು ಉದ್ಯಮಿಗಳು, ಚಿತ್ರನಟರು, ಕ್ರೀಡಾಪಟುಗಳು, ವಿವಿಧ ಸಂಘಸಂಸ್ಥೆಗಳು ಮುಂದೆ ಬಂದಿವೆ. ಆದರೆ, ಜನಸಾಮಾನ್ಯರ ನಡುವೆ ಗೊಂದಲ ಮುಂದುವರಿದಿದ್ದು, ಪಿಎಂಎನ್ ಆರ್ ಎಫ್ ಅಥವಾ ಪಿಎಂ ಕೇರ್ಸ್ ನಡುವೆ ಯಾವುದರ ಮೂಲಕ ಸಂತ್ರಸ್ತರಿಗೆ ನೆರವಾಗುವುದು ಎಂಬ ವಿಷಯದಲ್ಲಿ ಸ್ಪಷ್ಟತೆ ಇಲ್ಲದಾಗಿದೆ.
ಹಾಗೆ ನೋಡಿದರೆ, ದೇಶದ ಬಡವರು, ಕೂಲಿಕಾರ್ಮಿಕರು, ವಲಸೆ ಕೂಲಿಗಳು ದಿಢೀರ್ ಲಾಕ್ ಡೌನ್ನಿಂದಾಗಿ ಸಾವುಬದುಕಿನ ಅಂಚಿಗೆ ಬಂದು ನಿಂತಿದ್ದಾರೆ. ಮುಖ್ಯವಾಗಿ ಆ ವರ್ಗದ ಜನರ ಬಗ್ಗೆ ಯೋಚನೆಯನ್ನೇ ಮಾಡದೇ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಈಗಾಗಲೇ ಹಲವರು ಹಸಿವಿನಿಂದ, ಬರಿಗಾಲು ಪ್ರಯಾಣದ ದಣಿವಿನಿಂದ ಸಾವು ಕಂಡಿದ್ದಾರೆ. ಈ ನಡುವೆ ಪೊಲೀಸ್ ಲಾಠಿ ಏಟಿಗೂ ಜನ ಜೀವ ಬಿಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿಗಳು ಮಾತ್ರ ಅಂತಹ ಜನರ ಬಗ್ಗೆ ಸ್ಪಷ್ಟ ಯೋಜನೆ- ಕಾರ್ಯಕ್ರಮಗಳ ಮೂಲಕ ಜನರ ನೆರವಿಗೆ ಬರುವ ಬದಲಾಗಿ, ಕರೋನಾದಂತಹ ಪರಿಸ್ಥಿತಿಯಲ್ಲೂ ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಆದರೆ ಈಗಲೂ ಅಂತಹ ಜನಗಳಿಗೆ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆ, ಲಾಕ್ ಡೌನ್ ಅವಧಿಯಿಡೀ ಸುರಕ್ಷಿತ ಬದುಕಿನ ವ್ಯವಸ್ಥೆ ಮಾಡುವಲ್ಲಿ ಕೇಂದ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸುತ್ತಿಲ್ಲ. ಹಾಗೆ ನೋಡಿದರೆ ಸರ್ಕಾರದ ಮುಂದೆ ಲಾಕ್ ಡೌನ್ ಘೋಷಣೆ ವೇಳೆಯಲ್ಲೂ ಇಂಥ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸ್ಪಷ್ಟ ಯೋಜನೆ- ಮಾರ್ಗಸೂಚಿಗಳಿರಲಿಲ್ಲ; ಈಗಲೂ ಇಲ್ಲ. ಹಾಗಾಗಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣಗಳಲ್ಲಿ, ಮನ್ ಕಿ ಬಾತ್ ನಲ್ಲಿ ಮೋದಿಯವರ ಕಾಳಜಿಯ ಮಾತುಗಳು, ಕೇವಲ ಬಾಯುಪಚಾರದ ಮಾತುಗಳು, ದೇಶದ ಜನರ ಕಣ್ಣಲ್ಲಿ ತಮ್ಮನ್ನು ತಾವು ಮಹಾನ್ ನಾಯಕನಾಗಿ ಬಿಂಬಿಸಿಕೊಳ್ಳುವ ಯತ್ನಗಳಷ್ಟೇ ಎಂಬ ಟೀಕೆಗಳೂ ಕೇಳಿಬಂದಿವೆ.