ಕಾಶ್ಮೀರ ಭಾರತಾಂಬೆಯ ಕಿರೀಟ, ಇದು ಹೇಳುವುದಕ್ಕೆ ಮಾತ್ರ ಸೀಮಿತ. ಯಾಕಂದ್ರೆ ಸದ್ಯ ನಮ್ಮ ಭಾರತದ ಅಸಲಿ ಭೂಪಟದಲ್ಲಿ ಕಾಶ್ಮೀರ ಭಾರತದ ಜೊತೆಗೆ ಇಲ್ಲ. ಕಾಶ್ಮೀರವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಕಾಶ್ಮೀರದ ಒಂದು ಭಾಗವನ್ನು ಐಒಕೆ (ಇಂಡಿಯನ್ ಆಕ್ಯುಪೈಯಿಡ್ ಕಾಶ್ಮೀರ) ಹಾಗು ಇನ್ನೊಂದು ಪಿಒಕೆ (ಪಾಕ್ ಆಕ್ಯುಪೈಯಿಡ್ ಕಾಶ್ಮೀರ) ಎಂದು ಗುರುತಿಸಲಾಗುತ್ತದೆ. ಭಾರತ ಹಾಗು ಪಾಕಿಸ್ತಾನ ಎರಡೂ ರಾಷ್ಟ್ರಗಳು ಕಾಶ್ಮೀರಕ್ಕಾಗಿ ಕದನ ನಡೆಸುತ್ತಲೇ ಇವೆ. 1947ರಲ್ಲಿ ಸ್ವಾತಂತ್ರ್ಯವಾದ ಬಳಿಕ ಕಾಶ್ಮೀರ ಭಾರತಕ್ಕೆ ಸೇರಿರಲಿಲ್ಲ. ಬಳಿಕ 26 ಅಕ್ಟೋಬರ್ 1947ರಲ್ಲಿ ಭಾರತದ ಜೊತೆಗೆ ಸೇರಲು ರಾಜ ಹರಿಸಿಂಗ್ ಸಮ್ಮತಿ ಸೂಚಿಸಿದ್ದ. ಆ ಬಳಿಕ 1954ರಲ್ಲಿ ಭಾರತದ ಸಂವಿಧಾನದ ಆರ್ಟಿಕಲ್ 370ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯ್ತು. ಆಗಸ್ಟ್ 5, 2019ರಂದು ನರೇಂದ್ರ ಮೋದಿ ಸರ್ಕಾರ ಆರ್ಟಿಕಲ್ 370 ರದ್ದು ಮಾಡುವ ನಿರ್ಣಯ ಅಂಗೀಕಾರ ಮಾಡಿ, ಅಕ್ಟೋಬರ್ 31, 2019ರಿಂದ ರಾಜ್ಯ ಸ್ಥಾನಮಾನ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿತ್ತು. ಅಂದಿನಿಂದ ಶುರುವಾದ ಕಾಶ್ಮೀರ ವಿವಾದ ಮಾತ್ರ ಇನ್ನೂ ಇತ್ಯರ್ಥವಾಗಿಲ್ಲ. ಇತ್ಯರ್ಥ ಮಾಡಿಕೊಳ್ಳುವ ಮನಸ್ಸು ನಮ್ಮ ಭಾರತಕ್ಕೆ ಇಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ.
ರಕ್ಷಣಾ ಇಲಾಖೆಗೆ ಭಾರತ ಸರ್ಕಾರ ಬಜೆಟ್ ಶೇಕಡ 30ಕ್ಕೂ ಹೆಚ್ಚು ಹಣವನ್ನು ವಿನಿಯೋಗ ಮಾಡುತ್ತಿದೆ. ವಾರ್ಷಿಕ ನೂರಾರು ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಅದರಲ್ಲೂ ಕಾಶ್ಮೀರ ವಿವಾದ ಬಗೆಹರಿದರೆ ಜಮ್ಮು ಕಾಶ್ಮೀರ ಭದ್ರತೆಗೆ ವೆಚ್ಚವಾಗುತ್ತಿರುವ ಕೋಟ್ಯಂತರ ರೂಪಾಯಿ ಹಣವನ್ನು ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದು. ಆದರೆ, ನಮ್ಮ ದೇಶದಲ್ಲಿ ಯಾವುದೇ ಸರ್ಕಾರಗಳು ಅಸ್ತಿತ್ವಕ್ಕೆ ಬಂದರೂ ವಿವಾದ ಮಾತ್ರ ಹಾಗೆಯೇ ಉಳಿದುಕೊಳ್ಳುತ್ತಿದೆ. ಮಾತುಕತೆ ನಡೆಯುತ್ತೆ, ಕೆಲವೊಂದು ಒಪ್ಪಂದಗಳನ್ನು ಮಾಡಿಕೊಂಡು ಆ ಬಳಿಕ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆಗಳಿಗೂ ಬ್ರೇಕ್ ಬಿದ್ದಿದ್ದೆ. ಎರಡು ದೇಶಗಳ ನಡುವೆ ದ್ವೇಷ ಭಾವನೆ ಉತ್ತಂಗಕ್ಕೆ ಏರಿದೆ. ಭಾರತ ಮಾತ್ರ ಪಾಕಿಸ್ತಾನದ ಜೊತೆಗೆ ಮಾತುಕತೆಗೆ ನಕಾರ ವ್ಯಕ್ತಪಡಿಸುತ್ತಿದೆ. ಭಾರತೀಯರಾಗಿ ನಮ್ಮ ದೇಶದ ನಿಲುವನ್ನು ಒಪ್ಪಿಕೊಂಡರೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪರಾಮರ್ಶೆ ಮಾಡಬೇಕಿದೆ ಎನಿಸುತ್ತಿದೆ.
ಪಾಕಿಸ್ತಾನ ಹಾಗು ಭಾರತದ ನಡುವೆ ಶತ್ರುತ್ವ ಭಾವನೆ ಹುಟ್ಟಿಸಿರುವ ಕಾಶ್ಮೀರ ವಿವಾದವನ್ನು ಬಗೆಹರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸುವುದಾಗಿ ಘೋಷಣೆ ಮಾಡಿದ್ದರು. ಕಳೆದ ವರ್ಷ ಒಸಾಕ್‌ನಲ್ಲಿ ನಡೆದ ಜಿ-20 ಶೃಂಗಸಭೆ ಬಳಿಕ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಕಾಶ್ಮೀರ ವಿಚಾರವನ್ನು ಬಗೆಹರಿಸುವ ಬಗ್ಗೆ ಮಾತನಾಡಿದ್ದರು. ಆದರೆ ದೊಡ್ಡಣ್ಣನ ಪ್ರಸ್ತಾವನೆಯನ್ನು ಭಾರತ ಸರ್ಕಾರ ತಿರಸ್ಕರಿಸಿತ್ತು. ಕಾಶ್ಮೀರ ವಿಚಾರದಲ್ಲಿ ಮೂರನೆ ವ್ಯಕ್ತಿಯ ಮಧ್ಯಸ್ಥಿಕೆ ನಮಗೆ ಬೇಕಿಲ್ಲ ಎಂದು ಹೇಳಿತ್ತು. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ. ಈ ವಿಚಾರದಲ್ಲಿ ಯಾವುದೇ ದೇಶದ ಮಧ್ಯಪ್ರವೇಶವನ್ನು ನಾವು ಅಪೇಕ್ಷಿಸುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎನ್ನುವ ಮೂಲಕ ಕಡ್ಡಿ ತುಂಡಾದಂತೆ ಉತ್ತರಿಸಿತ್ತು. ಎರಡನೇ ಬಾರಿ ಡೊನಾಲ್ಡ್ ಟ್ರಂಪ್ ಪ್ರಸ್ತಾಪ ಇಟ್ಟಾಗಲು ಭಾರತದ ಕಡೆಯಿಂದ ಸಿದ್ಧ ಉತ್ತರ, ಮಧ್ಯಪ್ರವೇಶ ಬೇಕಿಲ್ಲ ಎನ್ನುವುದೇ ಆಗಿತ್ತು. ಆದರೆ ಇದೀಗ ಮತ್ತೆ ವಿಶ್ವಸಂಸ್ಥೆ ಕಡೆಯಿಂದ ಮಧ್ಯಸ್ಥಿಕ ಆಹ್ವಾನ ಬಂದಿದೆ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರಸ್ ಪ್ರಸ್ತಾಪಿಸಿದ್ದಾರೆ. ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ವಿಶ್ವಸಂಸ್ಥೆ ಕಾರ್ಯದರ್ಶಿ, ಭಾರತ ಪಾಕಿಸ್ತಾನ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ. ಆದರೆ ಮತ್ತೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವಶ್ಯಕತೆಯಿಲ್ಲ ಎನ್ನುವ ಸಂದೇಶ ಕಳುಹಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಆಡಳಿತ ಪಕ್ಷಕ್ಕೆ ಆಸಕ್ತಿ ಇಲ್ಲ. ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ ಎನ್ನುವ ಆರೋಪಗಳು ಕೇಳಿಬರುತ್ತವೆ. ಕಾಶ್ಮೀರ ಸಮಸ್ಯೆ ಬಗೆಹರಿದರೆ ರಾಜಕೀಯ ಮಾಡಲು ಯಾವುದೇ ಪ್ರಕರಣ ಸಿಗುವುದಿಲ್ಲ, ಅದೇ ಕಾರಣಕ್ಕೆ ಕಾಶ್ಮೀರ ವಿಚಾರ ಜೀವಂತವಾಗಿ ಇರುವಂತೆ ನೋಡಿಕೊಂಡು ರಾಜಕೀಯ ನಾಯಕರು ಬೇಳೆ ಬೇಯಿಸಿಕೊಳ್ತಾರೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಭಾರತ, ಪಾಕಿಸ್ತಾನ ನಡುವೆ ಸಂಧಾನಕ್ಕೆ ನಾವು ಸಿದ್ದ, ಕುಳಿತು ಮಾತುಕತೆ ನಡೆಸಿ ಶಾಂತಿ ಸ್ಥಾಪನೆ ಮಾಡೋಣ ಎನ್ನುವ ಪ್ರಸ್ತಾಪವನ್ನು ಭಾರತ ಸರ್ಕಾರ ತಿರಸ್ಕರಿಸುವುದನ್ನು ನೋಡಿದ್ರೆ, ಮೇಲಿನ ಆರೋಪಗಳು ಸತ್ಯ ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಶ್ಮೀರ ವಿಚಾರದಲ್ಲಿ ದೇಶದ ಜನರನ್ನು ಸೆಳೆಯುವ ಉದ್ದೇಶದಿಂದಲೇ ಇದನ್ನು ಸುಖಾಸುಮ್ಮನೆ ಮುಂದುವರಿಸುತ್ತಿದ್ದಾರೆ ಎನಿಸುತ್ತದೆ. ಆದರೆ 1972ರಲ್ಲಿ ಪಾಕಿಸ್ತಾನದ ಜೊತೆ ಯುದ್ಧ ಗೆದ್ದು ಬಾಂಗ್ಲಾದೇಶ ರಚನೆಯಾದಾಗ ಶಿಮ್ಲಾ ಒಪ್ಪಂದ ಏರ್ಪಟ್ಟಿತ್ತು. ಈ ವೇಳೆ ಭವಿಷ್ಯದಲ್ಲಿ ಎರಡು ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾದಾಗ, ಯಾವುದೇ ದೇಶದ ಮಧ್ಯಪ್ರವೇಶ ಇಲ್ಲದಂತೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಕ್ಕೆ ಜುಲೈ 2, 1972 ರಂದು ಇಂದಿರಾ ಗಾಂಧಿ ಮತ್ತು ಅಂದಿನ ಪಾಕಿಸ್ತಾನ ಅಧ್ಯಕ್ಷ ಭುಟ್ಟೋ ಸಹಿ ಮಾಡಿದ್ದರು. ಈ ಒಪ್ಪಂದದ ಪ್ರಕಾರ, ಉಭಯ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಅಥವಾ ಇನ್ನಾವುದೇ ಶಾಂತಿಯುತ ವಿಧಾನಗಳ ಮೂಲಕ ಬಗೆಹರಿಸಿಕೊಳ್ಳಲು ಪರಸ್ಪರ ಒಪ್ಪಿಗೆ ಸೂಚಿಸಿವೆ. ಈ ಒಪ್ಪಂದವನ್ನೇ ಪಾಲಿಸಿಕೊಂಡು ಬರುತ್ತಿರುವ ಭಾರತ, ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ.