ಪರಿಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಭಾರಿ ಚರ್ಚೆಗೆ ತುತ್ತಾಗಿದ್ದ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ, ಈಗ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಾತ್ಯಂದ ಪರೀಕ್ಷೆಗಳು ನಡೆಯುತ್ತಿದ್ದು, ಬುಧವಾರ (12/2/2020) ನಡೆದ ಜೀವಶಾಸ್ತ್ರ (Biology) ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕಳೆದ ವರ್ಷವೇ ತಯಾರಿಸಲಾಗಿತ್ತು. ಇದು ಅಚ್ಚರಿಯಾದರೂ ನಿಜ.
ಕಳೆದ ಬಾರಿ ನೀಡಲಾಗಿದ್ದ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಯಥಾವತ್ತಾಗಿ ಈ ಬಾರಿ ಮೈಸೂರು ಜಿಲ್ಲೆಗೆ ನೀಡಲಾಗಿದೆ ಎಂಬುದನ್ನು 2019 ಮತ್ತು 2020ರ ಪ್ರಶ್ನೆ ಪತ್ರಿಕೆಗಳು ಹೇಳುತ್ತಿವೆ. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆಯನ್ನು ಮಾತ್ರ ತಿರುವು ಮುರುವಾಗಿ ಕೇಳಲಾಗಿದ್ದು, ಉಳಿದಂತೆ ಎಲ್ಲಾ ಪ್ರಶ್ನೆಗಳು ಕ್ರಮಾಂಕ ಸಹಿತವಾಗಿ ಕಳೆದ ಬಾರಿಯ ಪ್ರಶ್ನಾ ಪತ್ರಿಕೆಯ ಪಡಿಯಚ್ಚು ಎಂದರೆ ತಪ್ಪಾಗಲಾರದು. ಪ್ರಶ್ನೆ ಪತ್ರಿಕೆಯಲ್ಲಿ ನಾಲ್ಕು ಭಾಗಗಳಿದ್ದು, ಒಟ್ಟು 37 ಪ್ರಶ್ನೆಗಳಿವೆ. ಈ ಎಲ್ಲಾ ಪ್ರಶ್ನೆಗಳು ಕೂಡಾ ಕಳೆದ ಬಾರಿ ನೀಡಿದ ಪ್ರಶ್ನೆ ಪತ್ರಿಕೆಯಲ್ಲಿದ್ದವು. ಇನ್ನು ಪ್ರಶ್ನೆ ಸಂಖ್ಯೆ 26ರ ಪದಗಳನ್ನು ಮಾತ್ರ ಬದಲಾಯಿಸಿ ಮೂಲ ಪ್ರಶ್ನೆಯನ್ನು ಯಥಾವತ್ತಾಗಿ ಕೇಳಲಾಗಿದೆ.
ಈಗ ಲಭ್ಯವಾಗಿರುವ 2019ರ ಪ್ರಶ್ನೆ ಪತ್ರಿಕೆಯಲ್ಲಿ ಒಸ್ವಾಲ್ಡ್ ಎನ್ನುವ ಖಾಸಗಿ ಕೋಚಿಂಗ್ ಸೆಂಟರ್ ಒಂದರ ಮುದ್ರೆಯಿದ್ದು, ಒಂದು ವೇಳೆ ಖಾಸಗಿ ಕೋಚಿಂಗ್ ಸೆಂಟರ್ಗಳು ತಮ್ಮಲ್ಲಿ ಬರುವ ವಿದ್ಯಾರ್ಥಿಗಳಿಗೆ ನೀಡುವ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪಿಯು ಮಂಡಳಿಯ ಪ್ರಶ್ನೆ ಪತ್ರಿಕೆ ತಯಾರಿಕಾ ಸಮಿತಿ ಯಥಾವಚ್ಚು ಕಾಪಿ ಮಾಡುತ್ತಿದೆಯೇ? ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ಮೈಸೂರು ಜಿಲ್ಲೆಯ ಡಿಡಿಪಿಯು ನಾಗರತ್ನ ಅವರು, ಈ ಕುರಿತಾಗಿ ತಮಗೆ ಮಾಹಿತಿ ಲಭಿಸಿದ್ದು ಪ್ರಶ್ನೆ ಪತ್ರಿಕೆಯನ್ನು ನೋಡಿದ ನಂತರವೇ. ಪ್ರಶ್ನೆ ಪತ್ರಿಕೆಯನ್ನು ನಮಗೆ ರಾಜ್ಯ ಪಿಯು ಮಂಡಳಿಯಿಂದ ನೀಡಲಾಗುತ್ತದೆ, ಆ ಪತ್ರಿಕೆಯನ್ನು ನಾವು ಎಲ್ಲಾ ಕಾಲೇಜುಗಳಿಗೆ ತಲುಪಿಸುತ್ತೇವೆ. ಈ ವಿಷಯವನ್ನು ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಇನ್ನು ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪರಿಕ್ಷಾ ವಿಭಾಗದ ಜಂಟಿ ನಿರ್ದೇಶಕರಾದ ಕಲ್ಲಯ್ಯ ಅವರು, ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸುವುದಕ್ಕಾಗಿ ಒಂದು ಸಮಿತಿಯ ರಚನೆಯಾಗುತ್ತದೆ. ಆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ. ಅವರು ತಯಾರಿಸಿರುವ ಪ್ರಶ್ನೆ ಪತ್ರಿಕೆಯನ್ನು ಮಂಡಳಿಯ ಯಾವ ಸದಸ್ಯರು ಕೂಡಾ ತೆರೆದು ನೋಡುವುದಿಲ್ಲ. ಹಾಗಾಗಿ, ಈ ರೀತಿಯ ತಪ್ಪುಗಳು ನಡೆದಿರುವುದು ಪರಿಕ್ಷೆ ನಡೆದ ನಂತರವೇ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.
“ಕಳೆದ ಬೇರೆ ಜಿಲ್ಲೆಗೆ ನೀಡಿರುವ ಪ್ರಶ್ನೆ ಪತ್ರಿಕೆಯನ್ನು ವರ್ಷ ಮೈಸೂರಿಗೆ ನೀಡಲಾಗಿದೆ. ಹಾಗಾಗಿ ಅದರಲ್ಲೇನು ಸಮಸ್ಯೆಯಿರುವುದಿಲ್ಲ,” ಎಂದು ಕಲ್ಲಯ್ಯ ಹೇಳಿದ್ದಾರೆ.
ಹಾಗಿದ್ದಲ್ಲಿ, ಪ್ರತಿ ವರ್ಷ ಪದವಿ ಪೂರ್ವ ಶಿಕ್ಷಣ ಮಂಡಳಿಯು ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಪ್ರಶ್ನಾ ಪತ್ರಿಕೆ ತಯಾರಿಸುವ ಮಂಡಳಿಯನ್ನು ರಚಿಸುವುದೇಕೆ? ಸಮಿತಿ ರಚನೆಯಾದ ಮೇಲೆ ಆ ಸಮಿತಿಯ ಸದಸ್ಯರು ಅಚ್ಚುಕಟ್ಟಾಗಿ ಪ್ರಶ್ನೆ ಪತ್ರಿಕೆಯನ್ನು ರಚಿಸುವುದು ಅವರ ಕರ್ತವ್ಯವಲ್ಲವೇ? ಇನ್ನು ವಿದ್ಯಾರ್ಥಿಗಳು, ಪ್ರತೀ ಬಾರಿಯೂ ಪರೀಕ್ಷೆಗೆ ತಯಾರಿ ನಡೆಸುವಾಗ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸುವುದು ಸಾಮಾನ್ಯ. ಹಾಗಾಗಿ, ವಿದ್ಯಾರ್ಥಿಗಳಿಗೆ ಈ ಬಾರಿಯೂ ಕಳೆದ ಬಾರಿಯ ಪ್ರಶ್ನೆ ಪತ್ರಿಕೆಯನ್ನು ನೀಡಿದರೆ, ಪರೀಕ್ಷೆ ನಡೆಸುವುದರ ಉದ್ದೇಶವನ್ನು ಪೂರೈಸಿದಂತಾಗುತ್ತದೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಈಗಾಗಿರುವ ಅಚಾತುರ್ಯಕ್ಕೆ ಹೊಣೆಗಾರರು ಯಾರು ಎಂಬುದನ್ನು ಪಿಯು ಪರಿಕ್ಷಾ ವಿಭಾಗ ಇನ್ನೂ ಸ್ಪಷ್ಟಪಡಿಸಿಲ್ಲ. ಈ ಕುರಿತಾಗಿ ಮಾಹಿತಿ ಕಲೆ ಹಾಕಿ ಇಂತಹ ತಪ್ಪು ನಡೆಯಲು ಕಾರಣವೇನು ಎಂಬುದನ್ನು ತಿಳಿಯುವ ಪ್ರಯತ್ನವನ್ನು ನಡೆಸುತ್ತೇವೆ ಎಂಬ ಮಾತುಗಳನ್ನು ಕೂಡಾ ಪಿಯು ಮಂಡಳಿಯ ಅಧಿಕಾರಿಗಳು ಹೇಳಲಿಲ್ಲ. ಹಾಗಾದರೆ, ಇಂತಹ ತಪ್ಪುಗಳು ಮತ್ತೆ ಮತ್ತೆ ನಡೆಯಲು ಪಿಯು ಮಂಡಳಿ ಅನುಮತಿಯನ್ನು ನೀಡುತ್ತಿದೆಯೇ?
ಏನಿದ್ದರೂ, ಈ ಬಾರಿಯ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ತರ ನೀಡಿಯಾಗಿದೆ. ಆದರೆ ಮುಂದೆ ನಡೆಯುವ ಪರೀಕ್ಷೆಗಳಲ್ಲಿ ಇಂತಹ ಪ್ರಮಾದ ಜರುಗದಂತೆ ಪಿಯು ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ.