ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ಸ್ಪಷ್ಟಪಡಿಸಿದೆ. CAA ವಿಚಾರವಾಗಿ ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳದ ನಡುವೆ ಆರಂಭವಾದ ಮನಸ್ಥಾಪ ಇನ್ನೂ ಬಗೆಹರಿದಿಲ್ಲ. 70 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಈ ಚುನಾವಣೆಯ ಫಲಿತಾಂಶ ಫೆಬ್ರವರಿ 11ರಂದು ಹೊರ ಬೀಳಲಿದೆ.
ಶಿರೋಮಣಿ ಅಕಾಲಿ ದಳದ ಶಾಸಕರಾಗಿರುವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಹೇಳಿರುವ ಪ್ರಕಾರ, ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾಗಿ ಪಕ್ಷದ ನಿಲುವನ್ನು ಮರು ಪರಿಶೀಲನೆ ಮಾಡುವಂತೆ ಬಿಜೆಪಿಯು ಚುನಾವಣಾ ಪೂರ್ವ ಸಭೆಯಲ್ಲಿ ಆಗ್ರಹಿಸಿತ್ತು. ಆದರೆ, ಶಿರೋಮಣಿ ಅಕಾಲಿ ದಳ ಪಕ್ಷವು ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. CAAಇಂದ ಮುಸ್ಲೀಂರನ್ನು ಹೊರಗಿಟ್ಟಿರುವುದು ಸರಿಯಲ್ಲ, ಎಂದು ಹೇಳಿದರು.
ಇನ್ನು, ತಮ್ಮ ಪಕ್ಷವು ಯೋಜಿತ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯನ್ನು ಕೂಡ ವಿರೋಧ ಮಾಡುತ್ತಿದ್ದು. ಭಾರತೀಯರು ತಮ್ಮ ಪೌರತ್ವವನ್ನು ಸಾಬೀತು ಪಡಿಸಲು ಸರತಿ ಸಾಲಿನಲ್ಲಿ ನಿಂತುಕೊಳ್ಳುವಂತೆ ಮಾಡುವ ಕಾನೂನು ಈ ದೇಶಕ್ಕೆ ಅಗತ್ಯವಿಲ್ಲ ಎಂದು ಹೇಳಿದರು. ಭಾರತವೊಂದು ಅದ್ಭುತವಾದ ರಾಷ್ಟ್ರ ಇಲ್ಲಿ ಕೋಮುವಾದಕ್ಕೆ ಅವಕಾಶವಿಲ್ಲ ಎಂದು ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಭಾರತವನ್ನು ಧರ್ಮದ ವಿಚಾರದಲ್ಲಿ ಮತ್ತೊಮ್ಮೆ ವಿಭಜನೆಗೊಳ್ಳಲು ಬಿಡುವುದಿಲ್ಲ. ಈ ಕುರಿತಾಗಿ ನಮ್ಮ ನಿಲುವನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ನಮ್ಮ ನಿಲುವು ಬದಲಾಯಿಸಿಕೊಳ್ಳುವ ಬದಲು, ನಾವು ಚುನಾವಣೆಯಿಂದಲೇ ಹಿಂದೆ ಸರಿಯುತ್ತೇವೆ ಎಂದು ಸಿರ್ಸಾ ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ಸುಮಾರು ಹತ್ತು ಲಕ್ಷಕ್ಕೂ ಮಿಕ್ಕಿ ಸಿಖ್ಖ್ ಮತದಾರರಿದ್ದು, ಅಕಾಲಿ ದಳದ ಈ ನಿರ್ಧಾರವು ಚುನಾವಣೆಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಮುಖ್ಯವಾಗಿ ಪಶ್ಚಿಮ ದೆಹಲಿಯ ಸುಮಾರು 10 ಕ್ಷೇತ್ರಗಳಲ್ಲಿ ಸಿಖ್ಖ್ ಸಮುದಾಯದ ಮತದಾರರು ಹೆಚ್ಚಿನ ಪಾಲು ಹೊಂದಿದ್ದಾರೆ. ಇದರಿಂದಾಗಿ, ಬಿಜೆಪಿಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗುವ ಸಂಭವಗಳು ಕೂಡಾ ಜಾಸ್ತಿಯಾಗಿವೆ.
ಇನ್ನು ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ನಿರ್ಮಿಸಿರುವ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಉಳಿದಿದೆ. ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿ ಬರದ ಕಾರಣಕ್ಕೆ, ಈ ವರೆಗೆ ಮೈತ್ರಿಯ ವಿಚಾರವನ್ನು ತಳ್ಳಿ ಹಾಕುತ್ತಾ ಬಂದಿದ್ದ ಜೆಜೆಪಿಯನ್ನು ಬಿಜೆಪಿಯು ಸಂಪೂರ್ಣವಾಗಿ ಕಡೆಗಣಿಸಿ, ಸೋಮವಾರ ರಾತ್ರಿ ತನ್ನ ಕೊನೆಯ ಸ್ಪರ್ಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.
ಈ ಬಾರಿ ದೆಹಲಿಯಲ್ಲಿ ಬಿಜೆಪಿಯೊಂದಿಗೆ ಜೆಡಿಯು ಹಾಗೂ ಎಲ್‌ಜೆಪಿ ಪಕ್ಷಗಳು ಮಾತ್ರ ಮೈತ್ರಿಯನ್ನು ಕಾಪಾಡಿಕೊಂಡು ಬಂದಿದ್ದು, ಉಳಿದ ಪಕ್ಷಗಳಿಗೆ ಕೊಕ್ ನೀಡಲಾಗಿದೆ. ಜೆಡಿಯು ಹಾಗೂ ಎಲ್‌ಜೆಪಿಗೆ ಮೂರು ಸೀಟುಗಳನ್ನು ಬಿಜೆಪಿಯು ಬಿಟ್ಟುಕೊಟ್ಟಿದೆ.
ಮನೋಜ್ ತಿವಾರಿ ನೇತೃತ್ವದಲ್ಲಿ ಈ ಬಾರಿ ಚುನಾವಣೆಗೆ ಸೊರ್ಧಿಸಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ತೊಡಕಾಗಿರುವುದು ತಮ್ಮದೇ ಮೈತ್ರಿ ಪಕ್ಷಗಳು. CAA ವಿಚಾರದಲ್ಲಿ ತಮ್ಮ ಮೈತ್ರಿ ಪಕ್ಷಗಳೊಂದಿಗೆ ಒಮ್ಮತ ಮೂಡಿಸುವಲ್ಲಿ ಬಿಜೆಪಿಯು ಸಂಪೂರ್ಣವಾಗಿ ವಿಫಲವಾಗಿದೆ. ಅರಂವಿದ್ ಕೇಜ್ರಿವಾಲ್ ನೇತೃತ್ವದ ಆಪ್ ಎದುರು ಬಿಜೆಪಿಯು ಮತ್ತೊಮ್ಮೆ ಸೋಲಿನ ಭೀತಿಯನ್ನು ಎದುರು ನೋಡುವ ಎಲ್ಲಾ ಲಕ್ಷಣಗಳು ಕೂಡಾ ದೆಹಲಿಯಲ್ಲಿ ಕಾಣುತ್ತಿವೆ.