ಸೈದ್ಧಾಂತಿಕ ವಿರೋಧಿಗಳು ಹಾಗೂ ಪ್ರತಿಪಕ್ಷಗಳ ನಾಯಕರ ಹೆಸರಿಡಿದು ಹಂಗಿಸುವುದು, ಪೂರ್ವಾಗ್ರಹ ಪೀಡಿತವಾಗಿ ಪ್ರತಿಪಕ್ಷಗಳನ್ನು ಅವಮಾನಿಸುವುದು, ಅನುಕೂಲಕ್ಕೆ ತಕ್ಕಂತೆ ಹಾಗೂ ಅಸತ್ಯಗಳಿಂದ ಕೂಡಿದ ಐತಿಹಾಸಿಕ ವಿಚಾರಗಳನ್ನು ಪ್ರಸ್ತಾಪಿಸುವುದು, ಸರ್ಕಾರಿ ಸಂಸ್ಥೆಗಳ ವ್ಯಾಪಕ ದುರುಪಯೋಗ ಹಾಗೂ ಮಾಧ್ಯಮಗಳ ಮೇಲೆ ಇನ್ನಿಲ್ಲದ ಹಿಡಿತ ಸಾಧಿಸುವ ಮೂಲಕ ಕಳೆದ ಆರು ವರ್ಷಗಳ ಆಡಳಿತದಲ್ಲಿ ದೇಶದ ಜನರು ಸನ್ನಿಗೆ ಒಳಗಾಗಿ ತಮ್ಮನ್ನು ಬೆಂಬಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಮಾರುಕಟ್ಟೆ ಸೃಷ್ಟಿತ ನರೇಂದ್ರ ಮೋದಿಯವರ ವಿರುದ್ಧ ಒಂದು ತಿಂಗಳಿಂದ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಹಾಗೂ ಅದಕ್ಕೆ ಬಿಜೆಪಿ ನಾಯಕತ್ವದ ಅಹಂ, ಉಡಾಫೆಯ ಪ್ರತಿಕ್ರಿಯೆಯಿಂದಾಗಿ ಮೊದಲ ಬಾರಿಗೆ ಮೋದಿ ಭಾರಿ ಹಿನ್ನಡೆ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.
ನರೇಂದ್ರ ಮೋದಿ ಎಂಬ ಬ್ರ್ಯಾಂಡ್ ಅನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವ ಮೂಲಕ ತಂತ್ರ-ಕುತಂತ್ರಗಳಿಂದ ಸರಣಿ ಗೆಲುವು ಪಡೆದು ಮೋದಿಯವರನ್ನು ಬಿಜೆಪಿಯ ಪರಮೋಚ್ಚ ನಾಯಕನ ಸ್ಥಾನಕ್ಕೆ ಏರಿಸಲು ಪ್ರಯತ್ನಿಸಿದ ಬಿಜೆಪಿಯ ಅಧ್ಯಕ್ಷ ಹಾಗೂ ಮೋದಿಯವರ ಆಪ್ತ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಬಲಿತ ಸಂಘಟನೆಗಳು ಮೋದಿ ಹೆಸರಿಗೆ ಮಸಿ ಬಳಿಯುತ್ತಿರುವುದು ಸ್ಪಷ್ಟವಾಗಿದೆ. ತನ್ನನ್ನು ಮೌಲ್ಯಮಾಪನ ಮಾಡದೇ ತಾನು ಹೇಳಿದ್ದನ್ನು ಶಿರಸಾವಹಿಸಿ ಒಪ್ಪುತ್ತಾರೆ ಎಂದು ಭಾವಿಸಿರುವ ಮೋದಿಯುವರು ಎಂದಿನ ದಾಟಿಯಲ್ಲಿಯೇ ಮಾತನಾಡುತ್ತಿರುವುದು ಹಾಗೂ ಮಾತನಾಡಲೇಬೇಕಾದ ಸಂದರ್ಭದಲ್ಲಿ ಮೌನವಹಿಸಿರುವುದು ಅವರೊಬ್ಬ ಕಪಟ ರಾಜಕಾರಣಿ ಎಂಬ ಸ್ಪಷ್ಟ ಸಂದೇಶ ರವಾನೆಯಾಗುವಂತೆ ಮಾಡಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್ ಹಾಗೂ ಬಿಜೆಪಿ ಬೆಂಬಲಿತ ಸಂಘಟನೆಗಳು ಮೆರೆದಿರುವ ಅಟ್ಟಹಾಸ ಮೋದಿ ಹೆಸರಿನ ಬ್ರ್ಯಾಂಡ್ ಗೆ ಭಾರಿ ಹೊಡೆತ ನೀಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪೂರಕ ಎಂಬಂತೆ ಇತ್ತೀಚಿನ ಕೆಲವು ಘಟನೆಗಳು ಮೋದಿ ಹಾಗೂ ಬಿಜೆಪಿಗೆ ಉಂಟುಮಾಡಿರುವ ಹಿನ್ನಡೆ ಸರಿಪಡಿಸಲಾಗದ ಪರಿಸ್ಥಿತಿ ತಂದೊಡ್ಡಿವೆ ಎಂಬುದನ್ನು ಬಿಜೆಪಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ.
ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತದ ಆಶ್ರಯ ಬಯಸುವ ಆರು ಧರ್ಮಗಳ ಜನರಿಗೆ ಪೌರತ್ವ ಕಲ್ಪಿಸುವ ಸಿಎಎ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳ ಮುಂದುವರಿದಿವೆ. ಈ ಸಂದರ್ಭದಲ್ಲಿ ಬಿಜೆಪಿ ಆಡಳಿತದ ಕರ್ನಾಟಕ, ಉತ್ತರ ಪ್ರದೇಶ, ಅಸ್ಸಾಂ, ತ್ರಿಪುರ ಹಾಗೂ ಅಮಿತ್ ಷಾ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಅಮಾನುಷ ದಾಳಿ ಮಾಡಿದ್ದರು. ಕರ್ನಾಟಕದಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ 25 ಮಂದ, ಅಸ್ಸಾಂನಲ್ಲಿ ಏಳು ಮಂದಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇಲ್ಲಿ ಸತ್ತವರ ಬಗ್ಗೆ ಸಹಜವಾದ ಅನುಕಂಪ ವ್ಯಕ್ತಪಡಿಸಬೇಕಾದ ಮೋದಿ ನೇತೃತ್ವದ ಬಿಜೆಪಿ ನಾಯಕತ್ವವು ತನ್ನ ವಿಫಲತೆ ಮುಚ್ಚಿಕೊಳ್ಳುವ ಸಲುವಾಗಿ ಪೊಲೀಸ್ ಅಟ್ಟಹಾಸವನ್ನು ಸಮರ್ಥಿಸಿದೆ. ಸಾರ್ವಜನಿಕ ಆಸ್ತಿಗೆ ನಷ್ಟವಾಗಿದೆ ಎಂಬ ಸಂಕಥನ ಸೃಷ್ಟಿಸುವ ಮೂಲಕ ಚುನಾಯಿತ ಸರ್ಕಾರ ಎಷ್ಟು ಅಮಾನವೀಯವಾಗಿ ನಡೆದುಕೊಳ್ಳಬಹುದು ಎಂಬುದನ್ನು ತೋರ್ಪಡಿಸಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರವು ಆಂತರಿಕ ಒತ್ತಡಕ್ಕೆ ಮಣಿದು ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಅಮಾಯಕರಿಗೆ ಘೋಷಿಸಿದ್ದ ತಲಾ ₹10 ಲಕ್ಷ ಪರಿಹಾರವನ್ನು ಹಿಂಪಡೆಯುವ ಮೂಲಕ ಹೀನ ಹೆಜ್ಜೆ ಇಟ್ಟಿದೆ.
ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಗ್ಧರ ಮನೆಗೆ ನುಗ್ಗಿ ಪೊಲೀಸರು ನಡೆಸಿರುವ ಪೈಶಾಚಿಕ ಕೃತ್ಯ ಸಹಜವಾಗಿ ಬಿಜೆಪಿಯ ಹೆಸರಿಗೆ ಅಪಕೀರ್ತಿ ತಂದಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸಾರ್ವಜನಿಕ ಆಸ್ತಿಗೆ ಆದ ನಷ್ಟವನ್ನು ಪ್ರತಿಭಟನಾಕಾರರಿಂದ ವಶಪಡಿಸಿಕೊಳ್ಳುವ ಕ್ರಮ ಹಾಗೂ ಅದನ್ನು ಬಹಿರಂಗವಾಗಿ ಸಮರ್ಥಿಸಿದ ಮೋದಿಯವರ ನಡೆ ಪ್ರಜ್ಞಾವಂತರಿಗೆ ಒಳ್ಳೆಯ ಸಂದೇಶ ದಾಟಿಸುವುದಾಗಿರಲಿಲ್ಲ.
ಸಿಎಎ ವಿರೋಧಿಸಿ ಅಸ್ಸಾಂನಲ್ಲಿ ಎದ್ದ ಹಿಂಸಾಚಾರ ತಡೆಯಲು ವಿಫಲವಾದ ಸರ್ಕಾರ ವಾರಗಟ್ಟಲೆ ಅಲ್ಲಿನ ಜನರಿಗೆ ಇಂಟರ್ನೆಟ್ ಸೇವೆ ನಿಷೇಧಿಸುವ ಮೂಲಕ ಅವರ ಹಕ್ಕುಗಳನ್ನು ಹತ್ತಿಕ್ಕಿದೆ. ಸಿಎಎ ವಿರೋಧಿಸಿ ಪ್ರತಿಭಟಿಸಿದ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಹತ್ತಾರು ಕಡೆ ಅನವಶ್ಯಕವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದು ಮೋದಿ ಸರ್ಕಾರದ ವರ್ಚಸ್ಸಿಗೆ ಭಾರಿ ಹೊಡೆತ ನೀಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಐದು ತಿಂಗಳಿಂದ ಪ್ರಪಂಚದಿಂದ ದೂರ ಇಟ್ಟಿರುವ ಮೋದಿ ಸರ್ಕಾರದ ನಡೆ ಅಸಮರ್ಥನೀಯ.
ಇದೆಲ್ಲಕ್ಕೂ ಮಿಗಿಲಾದುದು ಜಾಮಿಯಾ ಮತ್ತು ಅಲಿಘಡ, ಈಗ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ನಡೆಸಿರುವ ಅನಾಗರಿಕ ಹಾಗೂ ಕ್ರೌರ್ಯದ ದಾಳಿ. ಇದನ್ನು ಬೆಂಬಲಿಸಿದಂತೆ ನಡೆದುಕೊಳ್ಳುತ್ತಿರುವ ಪೊಲೀಸರು ಜೆಎನ್ ಯುವಿನ ಹಲ್ಲೆಗೊಳಗಾದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿ, ಆರೋಪಿಗಳನ್ನು ಕೈಬಿಟ್ಟಿದ್ದಾರೆ. ದಾಳಿಕೋರರು ಚಹರೆ, ಗುರುತು ಹಾಗೂ ದಾಖಲೆಗಳನ್ನು ಹಲವು ಮಾಧ್ಯಮಗಳು ಮುಂದಿಟ್ಟರೂ ಅತ್ತ ಪೊಲೀಸರು ಕಣ್ಬಿಟ್ಟು ನೋಡುತ್ತಿಲ್ಲ. ಕೇಂದ್ರ ಸಚಿವರೊಬ್ಬರು ಜೆ ಎನ್ ಯು ಘಟನೆಯಲ್ಲಿ ಎಬಿವಿಪಿ ಪಾತ್ರವಿಲ್ಲ ಎಂದು ತನಿಖೆಗೆ ಮುನ್ನವೇ ಹೇಳಿದ್ದಾರೆ. ಆದರೆ, ಹಿಂದೂಪರ ಸಂಘಟನೆಯೊಂದು ಘಟನೆ ತನ್ನ ಉಸ್ತುವಾರಿಯಲ್ಲಿ ನಡೆದಿದೆ ಎಂದು ಹೇಳುತ್ತಿರುವುದು ಮೋದಿಯವರಿಗೆ ಒಳ್ಳೆಯ ಹೆಸರು ತರುತ್ತದೆಯೇ?
ಬಹುಮುಖ್ಯವಾಗಿ ಜಾಮಿಯಾ, ಅಲಿಗಢ, ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ಕ್ರೌರ್ಯವನ್ನು ಮೋದಿ, ಶಾ ಅಥವಾ ಮಾನವ ಸಂಪನ್ಮೂಲ ಸಚಿವರಾದ ರಮೇಶ್ ಪೋಕ್ರಿಯಾಲ್ ರಂಥವರು ಕಟುವಾಗಿ ವಿರೋಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಬೆನ್ನಿಗೆ ನಿಲ್ಲುವ ಮಾತುಗಳನ್ನಾಡಿಲ್ಲ. ಸರ್ಕಾರದ ನಡೆ ವಿರೋಧಿಸಿ ಬಾಲಿವುಡ್ ನ ದೀಪಿಕಾ ಪಡುಕೋಣೆ, ಅಲಿಯಾ ಭಟ್, ಟ್ವಿಂಕಲ್ ಖನ್ನಾ, ಸೋನಂ ಕಪೂರ್, ಅನಿಲ್ ಕಪೂರ್ ರಂಥ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿಎಎ ಕುರಿತು ವಿಚಾರ-ವಿನಿಮಯ ಮಾಡಿಕೊಳ್ಳಲು ಈಚೆಗೆ ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಕರೆದಿದ್ದ ಸೆಲಿಬ್ರಿಟಿಗಳ ಸಭೆಗೆ ಪ್ರಮುಖರು ಗೈರಾಗಿರುವುದು ನಿಸ್ಸಂಶಯವಾಗಿ ಮೋದಿ ಸರ್ಕಾರಕ್ಕೆ ಹಿನ್ನಡೆ ಉಂಟುಮಾಡಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರು “ನಾನು ಜೆ ಎನ್ ಯು ವಿನಲ್ಲಿ ಕಲಿಯುತ್ತಿದ್ದಾಗ ತುಕಡೇ ತುಕಡೇ ಗ್ಯಾಂಗ್ ಇರಲಿಲ್ಲ” ಎನ್ನುವ ಅಸೂಕ್ಷ್ಮ ಪ್ರತಿಕ್ರಿಯೆ ನೀಡುವ ಮೂಲಕ ಮೋದಿಯವರ ಸಮರ್ಥನೆಗೆ ಇಳಿದಿದ್ದಾರಾದರೂ ಅವರು ಭಾವಿಸಿರುವಂತೆ ಅದು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಪ್ರತಿಕ್ರಿಯೆ ಖಂಡಿತಾ ಅಲ್ಲ. ವಿನಮ್ರತೆ ಕಳೆದುಕೊಂಡು ಅಧಿಕಾರದ ಮತ್ತಿನಲ್ಲಿ ಬಿಜೆಪಿ ನಾಯಕತ್ವ, ಅದರ ಬೆಂಬಲಿತ ಸಂಘಟನೆಗಳು ನಡೆದುಕೊಳ್ಳುತ್ತಿರುವುದು ಅಂತಿಮವಾಗಿ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಅಸಹನೆ ಹರಳುಗಟ್ಟುವಂತೆ ಮಾಡಿದೆ. ಅಡ್ವಾಣಿ ನೇತೃತ್ವದ ಮಾರ್ಗದರ್ಶನ ಮಂಡಳಿ ಎಂಬುದು ವಯೋವೃದ್ಧರನ್ನೊಳಗೊಂಡ ನಿಷ್ಕ್ರಿಯ ತಂಡ ಎಂಬ ಮಾತು ಬಿಜೆಪಿಯಲ್ಲಿಯೇ ಜನಜನಿತವಾಗಿದ್ದು, ಸಲಹೆ, ಸೂಚನೆಗಳಿಗೆ ಕಿವಿಗೊಡುವ ಮಟ್ಟದಲ್ಲಿ ಮೋದಿ-ಶಾ ನಾಯಕತ್ವದ ಬಿಜೆಪಿ ಇಲ್ಲ.