ಪೌರತ್ವ ಕಾನೂನನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಬೇಕು, ಇಲ್ಲಿ ಬಹುಸಂಖ್ಯಾತರಿರುವ ಹಿಂದೂಗಳು ಹೇಳಿದ ರೀತಿಯಲ್ಲಿ ಬದುಕಬೇಕು, ನಖರಾ ಆಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ, ಪೌರತ್ವ ಕಾನೂನನ್ನು ವಿರೋಧಿಸುವ ಮುಸ್ಲಿಂರನ್ನು ಗುಂಡಿಟ್ಟು ಹತ್ಯೆ ಮಾಡಿದರೆ ಜನಸಂಖ್ಯೆ ಕಡಿಮೆ ಆಗುತ್ತದೆ ಎಂದೆಲ್ಲಾ ಕೂಗುತ್ತಾ ಕಂಠಶೋಷಣೆ ಮಾಡಿಕೊಂಡಿದ್ದ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಕೇಸು ದಾಖಲಾಗಿದೆ.
ಒಂದು ಎಫ್ಐಆರ್ ದಾಖಲಾದರೆ ಸಾಕೇ? ಅಕ್ರಮ ಗಣಿಗಾರಿಕೆ ಕುಣಿಕೆಯಿಂದ ಹೊರ ಬಂದಿರುವ ವ್ಯಕ್ತಿಗೆ ಇದೊಂದು ಯಕಶ್ಚಿತ್ ಹೇಳಿಕೆ ಕೊಟ್ಟ ಕಾರಣಕ್ಕೆ ದಾಖಲಾಗಿರುವ ಎಫ್ಐಆರ್ ನಿಂದ ಹೊರಬರುವುದು ಕಷ್ಟವೇ?
ಒಂದು ಕಾಲದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಇದೇ ರೆಡ್ಡಿ ಸಹೋದರರು ಬಳ್ಳಾರಿ ರಿಪಬ್ಲಿಕ್ ಅನ್ನು ಆಳಿದವರು. ಸಿಕ್ಕಸಿಕ್ಕವರಲ್ಲಿ ಭೀತಿ ಮೂಡಿಸಿದ್ದವರು. ಆತಂಕ ಸೃಷ್ಟಿ ಮಾಡಿದ್ದವರು. ಗಣಿಗಾರಿಕೆ ಹಣ ಸುರಿದು ಬಿಜೆಪಿ ಜತೆ ಗುರುತಿಸಿಕೊಂಡು ಅಧಿಕಾರದ ಗದ್ದುಗೆಯನ್ನೂ ಹಿಡಿದ ಬಳ್ಳಾರಿಯನ್ನು ತಮ್ಮ ಕಬ್ಜಾದಲ್ಲಿಟ್ಟುಕೊಂಡಿದ್ದವರು. ಈ ಮೂಲಕ ಬಳ್ಳಾರಿಯಲ್ಲಿ ಒಂದು ಕ್ರಿಮಿಯೂ ಸಹ ತಮ್ಮ ಅಣತಿ ಇಲ್ಲದೇ ಅಲುಗಾಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವರು.
ಆದರೆ, ಕಾಲಚಕ್ರ ಉರುಳಿದಂತೆ ಇವರ ಅಕ್ರಮಗಳೆಲ್ಲಾ ಒಂದೊಂದಾಗಿಯೇ ಹೊರ ಬರತೊಡಗಿ, ಅಕ್ರಮ ಗಣಿಗಾರಿಕೆ ಎಂಬ ಬೃಹದಾಕಾರವಾದ ಹಗರಣವೇ ಬಯಲಾಯಿತು. ಸುಪ್ರೀಂಕೋರ್ಟ್ ಮತ್ತು ಸಿಬಿಐ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದೇ, ಬಳ್ಳಾರಿ ರಿಪಬ್ಲಿಕ್ ನಲ್ಲಿ ಇವರ ಅವಸಾನ ಆರಂಭವಾಯಿತು. ಇದೀಗ ಮತ್ತೊಮ್ಮೆ ಬಾಲ ಬಿಚ್ಚಲಾರಂಭಿಸಿರುವ ಸೋಮಶೇಖರರೆಡ್ಡಿ ಬಳ್ಳಾರಿಯಲ್ಲಿ ಎರಡು ಕೋಮುಗಳ ಮಧ್ಯೆ ದ್ವೇಷ ಕದಡುವ ರೀತಿಯಲ್ಲಿ ವರ್ತಿಸಿದ್ದಾರೆ.
ಕಾಂಗ್ರೆಸ್ ನ ಬೇಕೂಫ್ ಗಳ ಮಾತನ್ನು ಕೇಳಿ ಪ್ರತಿಭಟನೆ ಮಾಡೀರಿ ಜೋಕೆ ಎಂದು ಮುಸ್ಲಿಂರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾದರೆ, ಸೋಮಶೇಖರ ರೆಡ್ಡಿ ದ್ವೇಷದ ಬೀಜ ಬಿತ್ತುವಂತಹ ಹೇಳಿಕೆ ಕೊಟ್ಟಿರುವುದಕ್ಕೆ ಏನನ್ನಬೇಕು. ರೆಡ್ಡಿ ಪ್ರಕಾರ ಕಾಂಗ್ರೆಸ್ ನವರು ಬೇಕೂಫ್ ಗಳಾದರೆ ಇವರೇನು? ಒಂದು ವೇಳೆ ಇವರ ಮಾತನ್ನು ಕೇಳಿ ಎರಡೂ ಕೋಮುಗಳ ಮಧ್ಯೆ ಘರ್ಷಣೆಯಾದರೆ ಇದಕ್ಕೆ ರೆಡ್ಡಿಯವರನ್ನೇ ಹೊಣೆ ಮಾಡಲು ಸರ್ಕಾರ ಸಿದ್ಧವಿದೆಯೇ?
ಮಂಗಳೂರಿನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ನೀಡಿದ ಹೇಳಿಕೆಯಿಂದಲೇ ಹಿಂಸಾಚಾರ ನಡೆಯಿತು. ಇದಕ್ಕೆ ಖಾದರ್ ಅವರನ್ನು ಜೈಲಿಗಟ್ಟಬೇಕು ಎಂದೆಲ್ಲಾ ಅರಚಾಡಿದ್ದ ಬಿಜೆಪಿ ನಾಯಕರು ಈಗ ಸೋಮಶೇಖರ್ ರೆಡ್ಡಿಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವರೇ? ಆ ಧೈರ್ಯ ಅವರಿಗಿದೆಯೇ?
ಕಣ್ಣೊರೆಸುವ ತಂತ್ರವೇ?
ಇನ್ನು ಸೋಮಶೇಖರರೆಡ್ಡಿ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ. ಆದರೆ, ಇದು ಕೇವಲ ಕಣ್ಣೊರೆಸುವ ತಂತ್ರದಂತೆ ಕಂಡುಬರುತ್ತಿದೆ.
ಸರ್ಕಾರ ದಾಖಲಿಸಿರುವ ಎಫ್ಐಆರ್ ಕ್ರಮ ಹೇಗಿದೆಯೆಂದರೆ ನಾ ಚಿವುಟಿದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎನ್ನುವಂತಿದೆ. ಒಂದು ವೇಳೆ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂಬ ಇರಾದೆ ಸರ್ಕಾರಕ್ಕೆ ಇದ್ದಿದ್ದರೆ ರೆಡ್ಡಿಯನ್ನು ಕೂಡಲೇ ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಿತ್ತು. ಹೇಗಿದ್ದರೂ ಇನ್ನೂ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ. ಅಷ್ಟರೊಳಗೆ ರೆಡ್ಡಿ ವಿರುದ್ಧದ ಈ ಸಣ್ಣ ಕೇಸನ್ನು ವಾಪಸ್ ತೆಗೆದುಕೊಂಡರಾಯ್ತು ಎಂಬ ಧೋರಣೆ ಸರ್ಕಾರದ್ದಾಗಿದೆ. ಈ ಕೇಸನ್ನು ವಾಪಸ್ ತೆಗೆದುಕೊಳ್ಳುವ ಶಾಸ್ತ್ರವೂ ಸದ್ಯದಲ್ಲೇ ಮುಗಿದು ಹೋಗುವ ಎಲ್ಲಾ ಲಕ್ಷಣಗಳೂ ಇವೆ.
ಕಾಂಗ್ರೆಸ್ ನಿಂದ ದೂರು ದಾಖಲು
ಇನ್ನು ಒಂದು ಸಮರ್ಥ ಪ್ರತಿಪಕ್ಷವಾಗಬೇಕಿದ್ದ ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ತುಮುಲಗಳಲ್ಲೇ ಮುಳುಗಿಹೋಗಿದೆ. ರಾಜ್ಯದಲ್ಲಿ ಎಷ್ಟೇ ಅವಾಂತರಗಳನ್ನು ಬಿಜೆಪಿ ಸರ್ಕಾರ ಸೃಷ್ಟಿ ಮಾಡುತ್ತಿದ್ದರೂ ಅದಕ್ಕೊಂದು ದಿಟ್ಟ ಉತ್ತರ ಅಥವಾ ಪ್ರತಿಭಟನೆಯನ್ನು ನಡೆಸುವಂತಹ ಕಸುವನ್ನೇ ಕಳೆದುಕೊಂಡಿದೆ. ಸೋಮಶೇಖರ ರೆಡ್ಡಿ ಪ್ರಕರಣದಲ್ಲಿ ರೆಡ್ಡಿ ಕೇವಲ ಮುಸಲ್ಮಾನರನ್ನು ಬೈದಿದ್ದರೆ ಕಾಂಗ್ರೆಸ್ ನಾಯಕರು ಹೊರ ಬರುತ್ತಿರಲಿಲ್ಲವೇನೋ? ಆದರೆ, ರೆಡ್ಡಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇಕೂಫ್ ಗಳೆಂದು ಕರೆದಿರುವುದಕ್ಕೆ ಸ್ವಲ್ಪ ಕೆರಳಿದವರಂತೆ ಕಂಡಿರುವ ಕಾಂಗ್ರೆಸ್ ನಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರೆಡ್ಡಿ ವಿರುದ್ಧ ದೂರು ನೀಡುವ ಶಾಸ್ತ್ರವನ್ನಷ್ಟೇ ಮುಗಿಸಿದ್ದಾರೆ.
ಅಲ್ಲಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ಸ್ವಯಂಪ್ರೇರಣೆಯಿಂದ ರೆಡ್ಡಿ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದು ಬಿಟ್ಟರೆ ರಾಜ್ಯ ನಾಯಕರು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲೇ ಇಲ್ಲ. ಕೇವಲ ದೂರು ಕೊಟ್ಟು ಅಲ್ಲೊಂದಿಷ್ಟು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟು ತಮ್ಮ ದೈನಂದಿನ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದರ ಬದಲಾಗಿ ಕಾಂಗ್ರೆಸ್ ನಾಯಕರು ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಹೇಳಿಕೆ ನೀಡಿರುವ ರೆಡ್ಡಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಬಹುದಿತ್ತು. ಆದರೆ, ಅವರಲ್ಲಿ ಆ ಆಸಕ್ತಿಯೇ ಇಲ್ಲದಂತೆ ಕಂಡುಬರುತ್ತಿದೆ.