ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಹದ್ದುಬಸ್ತಿನಲ್ಲಿಡಲು ಮೂವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಬಿಜೆಪಿ ಕೇಂದ್ರ ನಾಯಕತ್ವ ಸೃಷ್ಟಿಸುವ ಮೂಲಕ ರಾಜ್ಯ ನಾಯಕರಲ್ಲಿ ಆಕ್ರೋಶ ಹರಳುಗಟ್ಟುವಂತೆ ಮಾಡಿದೆ. ಈಗ ಮಾಜಿ ಕಾಂಗ್ರೆಸಿಗ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾ ನೀಡುವ ಮೂಲಕ ಅವರ ಋಣ ಸಂದಾಯ ಮಾಡುವ ಒತ್ತಡಕ್ಕೆ ಸಿಲುಕಿರುವ ಬಿಎಸ್ವೈ ಅವರೇ ಹಿಂದೆ ಹೇಳಿಕೊಂಡಂತೆ “ಕೆಂಡದ ಮೇಲೆ ನಡಿಗೆ” ಇಡುವ ಸ್ಥಿತಿ ತಂದೊಡ್ಡುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್, ಮಾಜಿ ಡಿಸಿಎಂಗಳಾದ ಒಕ್ಕಲಿಗ ನಾಯಕ ಆರ್ ಅಶೋಕ, ಕುರುಬ ಸಮುದಾಯದ ಕೆ ಎಸ್ ಈಶ್ವರಪ್ಪನಂಥ ನಾಯಕರನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟು ಚುನಾವಣೆಯಲ್ಲಿ ಸೋತ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ರಾಜಕೀಯವಾಗಿ ಈಗಷ್ಟೆ ಗುರುತಿಸಿಕೊಳ್ಳುತ್ತಿರುವ ಒಕ್ಕಲಿಗ ಸಮುದಾಯದ ಅಶ್ವತ್ ನಾರಾಯಣ ಅವರಿಗೆ ಡಿಸಿಎಂ ಪಟ್ಟ ಕಟ್ಟುವ ಮೂಲಕ ರಾಜ್ಯ ನಾಯಕತ್ವದಲ್ಲಿ ಎಲ್ಲವನ್ನೂ ತಲೆಕೆಳಕಾಗಿಸಿರುವ ಬಿಜೆಪಿಯು ದೀರ್ಘವಾಧಿಯಲ್ಲಿ ಮತ್ತಷ್ಟು ಸಮಸ್ಯೆ ತಂದೊಡ್ಡುಕೊಳ್ಳಲು ಸಿದ್ಧವಾದಂತಿದೆ.
ಹೆಚ್ಚೂ ಕಡಿಮೆ ಕೊನೆಯ ಬಾರಿಗೆ ಸಿಎಂ ಆಗಿರುವ ಬಿಎಸ್ವೈ ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ರಾಜಕೀಯಕ್ಕೆ ಮರಳಿದರೆ ಅಂಥ ಸಂದರ್ಭದಲ್ಲಿ ಪ್ರಬಲ ವಿರೋಧ ಎದುರಾಗುವುದನ್ನು ತಡೆಯುವ ಉದ್ದೇಶದಿಂದ ಕಿರಿಯ ಹಾಗೂ ಪ್ರಭಾವಿಯಲ್ಲದವರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಎನ್ನುವ ಗುಮಾನಿಯಿದೆ.
ಕೇಂದ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಚುನಾವಣೆಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವುದರಿಂದ ಈ ಸಂದರ್ಭದಲ್ಲಿ ಬಾಯ್ಬಿಟ್ಟು ಇರುವುದನ್ನು ಕಳೆದುಕೊಳ್ಳಲು ಈ ಅವಕಾಶವಾದಿ ಹಾಗೂ ಅವಮಾನಿತ ನಾಯಕರು ಸಿದ್ಧರಿಲ್ಲ. ಮತ್ತೊಂದು ಕಡೆ ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿರುವ, ಕೋಮು ದ್ವೇಷದ ಮೂಲಕ ಸಂಘ-ಪರಿವಾರದ ಕೃಪಾಶೀರ್ವಾದ ಪಡೆಯಲು ಯತ್ನಿಸಿ ವಿಫಲರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಪಕ್ವ ನಾಯಕ ಎಂ ಪಿ ರೇಣುಕಾಚಾರ್ಯ, ಹಿಂದೆ ಹಲವು ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಲು ಬಿಎಸ್ವೈ ವಿಫಲರಾದಾಗ ಪತ್ರ ಸಮರ ಸಾರಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಬಹಿರಂಗವಾಗಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಕಿತ್ತುಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಧ್ವನಿಯನ್ನು ಸಮರ್ಥಿಸಲೂ ಆಗದೆ, ತಳ್ಳಿಹಾಕಲು ಆಗದ ದಯನೀಯ ಸ್ಥಿತಿಗೆ ಅಧಿಕಾರದ ದಾಹಕ್ಕೆ ತುತ್ತಾದ ಯಡಿಯೂರಪ್ಪ ಬಂದು ನಿಂತಿದ್ದಾರೆ.
ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಮಾಜಿ ಕಾಂಗ್ರೆಸ್ಸಿಗ ರಮೇಶ್ ಜಾರಕಿಹೊಳಿ ಅವರಿಗೆ ಬಿಎಸ್ವೈ ಅವರು ಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದ್ದಾರೆ ಎನ್ನಲಾಗಿದೆ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಲ್ಮೀಕಿ ಸಮುದಾಯದ ಬಿ ಶ್ರೀರಾಮುಲು ಅವರನ್ನು ಸ್ಪರ್ಧೆಗೆ ಹೂಡಿದ್ದ ಬಿಜೆಪಿಯು ಶ್ರೀರಾಮುಲುಗೆ ಉನ್ನತ ಸ್ಥಾನ ನೀಡುವ ಭರವಸೆ ನೀಡಿತ್ತು. ಈಗ ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ. ಜನಾಕರ್ಷಣೆಯ ವಿಚಾರದಲ್ಲಿ ರಾಮುಲುಗೆ ಇರುವ ಪ್ರಭಾವಳಿ ರಮೇಶ್ ಗೆ ಇಲ್ಲ ಎಂಬುದು ವಾಸ್ತವ. ಇಂಥ ಸಂದರ್ಭದಲ್ಲಿ ರಮೇಶ್ ಗೆ ಸಾಂವಿಧಾನಿಕವಾಗಿ ಮಹತ್ವವಿಲ್ಲದ ಡಿಸಿಎಂ ಹುದ್ದೆ ನೀಡಿದರೆ ಶ್ರೀರಾಮುಲು ಮತ್ತಷ್ಟು ಕುದ್ದು ಹೋಗಲಿದ್ದಾರೆ. ಆಗಿಂದಾಗ್ಗೆ ವಾಲ್ಮೀಕಿ ಸಮುದಾಯದ ಸ್ವಾಭಿಮಾನದ ಬಗ್ಗೆ ಮಾತನಾಡುವ ಶ್ರೀರಾಮುಲು ರಮೇಶ್ ಗೆ ನೀಡಲಾಗುವ ಸ್ಥಾನಮಾನಗಳನ್ನು ಸಹಿಸುವುದು ಕಡಿಮೆ. ಈ ಬಗ್ಗೆ ಬಳ್ಳಾರಿಯ ಶಾಸಕ ಸೋಮಶೇಖರ್ ರೆಡ್ಡಿಯೂ ರಾಮುಲು ಪರವಾಗಿ ಧ್ವನಿ ಎತ್ತಿದ್ದಾರೆ.
ಇನ್ನು ರಮೇಶ್ ಆಗಮನವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿರುವ ಉಮೇಶ್ ಕತ್ತಿ ಹಾಗೂ ಬಿಜೆಪಿಯ ಹಿರಿಯ ನಾಯಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯಲ್ಲಿ ಅತ್ಯಂತ ಹಿರಿಯ ಶಾಸಕ ಬೆಳಗಾವಿಯ ಉಮೇಶ್ ಕತ್ತಿ ಅವರನ್ನು ಬಿಜೆಪಿ ನಾಯಕತ್ವ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಲಿಂಗಾಯತ ಸಮುದಾಯದ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂಬುದು ಕತ್ತಿ ಆಸೆಯಾದರೂ ತನ್ನ ಸ್ಥಾನಮಾನದ ಜೊತೆ ಎಷ್ಟು ದಿನ ಅವರು ರಾಜೀ ಮಾಡಿಕೊಳ್ಳಬಲ್ಲರು? ರಾಜಕಾರಣ ಸಾಧ್ಯತೆಗಳ ಕಣ. ವ್ಯವಹಾರವಾಗಿ ಬದಲಾಗಿರುವ ರಾಜಕಾರಣದಲ್ಲಿ ತಮ್ಮ ಲಾಭ-ನಷ್ಟಗಳನ್ನಷ್ಟೇ ಎಲ್ಲರೂ ನೋಡುವುದು.
ಪರಿಸ್ಥಿತಿ ಹೀಗಿರುವಾಗ ರಾಜಕೀಯವಾಗಿ ಮಹತ್ತರ ಆಸೆ ಇಟ್ಟುಕೊಂಡಿರುವ, ಅವಕಾಶ ಸಿಕ್ಕಾಗಲೆಲ್ಲಾ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಬಲವಾಗಿ ಧ್ವನಿ ಎತ್ತುವ ಉಮೇಶ್ ಕತ್ತಿ ಸುಮ್ಮನಿರುವರೇ? ಎದೆ ಬಗೆದರೆ ಸಿದ್ದರಾಮಯ್ಯನವರೇ ಕಾಣುತ್ತಾರೆ ಎಂದು ಹೇಳುತ್ತಿದ್ದ ಎಂಟಿಬಿ ನಾಗರಾಜ್, ಸಿದ್ದು ಅಧಿಕಾರಾವಧಿಯಲ್ಲಿ ಆರ್ಥಿಕವಾಗಿ ಪ್ರಬಲರಾದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಕೆ ಸುಧಾಕರ್ ಅವರಂಥವರು ಎಲ್ಲಿದ್ದಾರೆ?
ಅಧಿಕಾರ ದಾಹಕ್ಕೆ ಸಿಲುಕಿ ಬಿಜೆಪಿಯನ್ನು ನಾನಾ ರೀತಿಯಲ್ಲಿ ಸ್ಫೋಟಗೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸಿರುವ ಯಡಿಯೂರಪ್ಪ ಪಕ್ಷದ ವರ ಮತ್ತು ಶಾಪ ಎರಡೂ ಹೌದು. ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈಹಾಕುವುದರೊಂದಿಗೆ ಬಿಜೆಪಿಗೆ ಹೊಸ ತಲೆನೋವುಗಳು ಆರಂಭವಾಗಲಿವೆ. ಹಲವು ಶಕ್ತಿಕೇಂದ್ರಗಳು ಏಕಕಾಲಕ್ಕೆ ಕಾರ್ಯಾರಂಭಿಸಿದರೆ ಸಂಘರ್ಷ ಖಚಿತ. ಸಂದಿಸುವ ಬಿಂದು ಸ್ಫೋಟ ನಿರ್ಧರಿಸಲಿದೆ.