ಕರ್ನಾಟಕದ ಉಪಚುನಾವಣೆ ಫಲಿತಾಂಶದ ಕುರಿತು ನಿಮ್ಮ ಅಭಿಪ್ರಾಯವೇನು?
ಫಲಿತಾಂಶದ ಬಗ್ಗೆ ಎರಡು ಮಾತಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲಾ ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ನನ್ನ ವಿಚಾರ ಏನೆಂದರೆ, ಈ ಚುನಾವಣೆ ಅಗತ್ಯವಿತ್ತೇ? ಎನ್ನುವುದು. ಯಾಕಂದರೆ ಒಂದು ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ಮತದಾರರು ಐದು ವರ್ಷಕ್ಕೆಂದು ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಆ ಚುನಾವಣೆಗೆ ಸರ್ಕಾರ ಬಹಳಷ್ಟು ಹಣ ಖರ್ಚು ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಇಷ್ಟೊಂದು ಸದಸ್ಯರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ರಾಜಿನಾಮೆ ಕೊಟ್ಟಿದ್ದು ತಪ್ಪು ಎನ್ನುವುದು ನನ್ನ ವಿಚಾರ. ಆ ತಪ್ಪಿನ ಹಿನ್ನೆಲೆಯಲ್ಲಿ ಈ ಚುನಾವಣೆ ಅಗತ್ಯ ಇರಲಿಲ್ಲ ಎನ್ನುವುದು ಕೂಡ ನನ್ನ ಅನಿಸಿಕೆ. ಯಾಕೆಂದರೆ, ಇವರಿಗೆ ಮತದಾರರು ಮುಂದಕ್ಕೆ ಏನಾದರೂ ಉಪಚುನಾವಣೆಗೆ ನಿಂತಾಗ ಬುದ್ದಿ ಕಲಿಸಬಹುದು ಎನ್ನುವುದು ನನ್ನ ವಿಚಾರವಾಗಿತ್ತು. ಅದರಿಂದ ಇವತ್ತಿನ ಆರ್ಥಿಕ ಪರಿಸ್ಥಿತಿಯಲ್ಲಿ ಚುನಾವಣೆ ಅಗತ್ಯವಿಲ್ಲ ಎನ್ನುವುದು ನನ್ನ ತಿಳುವಳಿಕೆಯಾಗಿತ್ತು.
ಆದರೂ ಕೂಡ ಇವತ್ತಿನ ಫಲಿತಾಂಶದ ಹಿನ್ನಲೆಯಲ್ಲಿ ಮತದಾರರು ಬಹಳಷ್ಟು ಜನ ರಾಜಿನಾಮೆ ಕೊಟ್ಟವರನ್ನು ಮತ್ತೊಮ್ಮೆ ಚುನಾಯಿಸಿದ್ದಾರೆ ಇದು ಮತದಾರರ ಹಕ್ಕು. ಅದರ ಬಗ್ಗೆ ನಾನು ಏನೂ ಹೇಳಲಾಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಚುನಾಯಿಸಲ್ಪಟ್ಟ ಪ್ರತಿನಿಧಿಗೆ ಅವರದ್ದೆ ಆದ ಕೆಲವು ಹಕ್ಕು, ಗೌರವಗಳು ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಆ ಹಿನ್ನಲೆಯಲ್ಲಿ ನಾನು ಅದನ್ನು ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇನೆ. ಆದರೂ ಕೂಡ ನನ್ನ ಮನಸ್ಸಲ್ಲಿ ಈ ಚುನಾವಣೆ ಅಗತ್ಯ ಇತ್ತೇ ಎನ್ನುವುದು ಇವತ್ತು ಕೂಡ ನನ್ನ ಮನಸ್ಸಲ್ಲಿ ಇದೆ. ಆದರೆ ಮುಂದಕ್ಕೆ ಅದರ ಬಗ್ಗೆ ವಾದ ಮಾಡುವ ಸಂದರ್ಭ ಇಲ್ಲ. ಏಕೆಂದರೆ ಚುನಾವಣೆ ಮುಗಿದಿದೆ, ಫಲಿತಾಂಶ ಬಂದಿದೆ, ಮರು ಚುನಾಯಿತರಾಗಿದ್ದಾರೆ, ನನ್ನ ಒಂದೇ ಒಂದು ಕೋರಿಕೆ, ಈ ಚುನಾಯಿತ ಪ್ರತಿನಿಧಿಗಳಲ್ಲಿ, ಇನ್ಮುಂದೆ ತಮ್ಮ ಕ್ಷೇತ್ರ ಮೇಲೆ ಕಳಕಳಿ ಇಟ್ಟುಕೊಳ್ಳಿ. ಯಾವ ಕಾರಣಕ್ಕೂ ಕೂಡ ರಾಜಿನಾಮೆ ಕೊಡಬೇಡಿ. ಒಂದು ವೇಳೆ ರಾಜಿನಾಮೆ ಕೊಡಬೇಕೆನ್ನುವ ಮನೋಭಾವನೆ ನಿಮ್ಮಲ್ಲಿ ಹುಟ್ಟಿದರೆ, ರಾಜಿನಾಮೆ ಬರೀ ಚುನಾಯಿತ ಹುದ್ದೆಗೆ ಮಾತ್ರವಲ್ಲ, ರಾಜಕೀಯಕ್ಕೇ ರಾಜಿನಾಮೆ ಕೊಡಿ, ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಡಿ ಎಂದು ನಾನು ಕೇಳಿಕೊಳ್ಳುತ್ತೇನೆ.
ಈ ಫಲಿತಾಂಶ ಪಕ್ಷಾಂತರಕ್ಕೆ ಪ್ರೇರಣೆ ಕೊಟ್ಟ ಹಾಗೆ ಆಗುತ್ತೆ ಅಲ್ವಾ?
ಹೌದು ಆಗಬಹುದು. ಅದು ತಪ್ಪು ಕೂಡ. ಇವತ್ತು 10 ಶೆಡ್ಯೂಲ್ ನಲ್ಲಿ ಇಂತಹ ಪಕ್ಷಾಂತರ ಚಟುವಟಿಕೆಯನ್ನು ನಿಲ್ಲಿಸುವುದಕ್ಕೆ ಕಾನೂನು ಮಾಡಿದ್ದಾರೆ. ಆದರೆ ಆ ಕಾನೂನು ಸರಿಯಾಗಿ ಜಾರಿಗೆ ಬಂದಿಲ್ಲವೆಂದು ಕಾಣಿಸುತ್ತಿದೆ. ಇದಕ್ಕಿಂತ ಕಠಿಣವಾದ ಮಾಡಬೇಕಾಗುತ್ತದೆ.
ಜನಮತವನ್ನು ಕಡೆಗಣಿಸಿ ಪಕ್ಷಾಂತರ ಮಾಡುವುದು ಎಷ್ಟು ಮಟ್ಟಿಗೆ ಸರಿ?
ರಾಜಕೀಯದಲ್ಲಿ, ಪ್ರಜಾಪ್ರಭುತ್ವದಲ್ಲಿ ಇದು ಸಂಪೂರ್ಣ ತಪ್ಪು ಎನ್ನುವುದು ನನ್ನ ಅನಿಸಿಕೆ. ಆದರೆ ಕೊನೆಗೆ ಚುನಾವಣೆಗೆ ನಿಂತ ನಂತರ ಗೆಲ್ಲಿಸುವುದು ಸೋಲಿಸುವುದು ಮತದಾರರಿಗೆ ಬಿಟ್ಟದ್ದು. ಅದರ ಬಗ್ಗೆ ನಾವು ಏನನ್ನೂ ಹೇಳಲಾಗದು. ಹೀಗಾಗಿ ಚುನಾವಣೆಯ ಫಲಿತಾಂಶದ ಬಗ್ಗೆ ನಾನು ಏನು ಹೇಳಲಾಗುವುದಿಲ್ಲ.
ಪಕ್ಷಾಂತರ ನಿಷೇಧ ಕುರಿತು ಯಾವ ರೀತಿ ಕಾನೂನು ಬರಬೇಕು?
ನಾನು ನೋಡಿರುವ ಹಾಗೆ 10ನೇ ಶೆಡ್ಯೂಲ್ ಕಾನೂನು ಬಂದಿದೆ. ಸುಮಾರು 10 ವರ್ಷ ಆಯಿತು ಈ ಕಾನೂನು ಬಂದು. ಆದರೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ ಎನ್ನುವುದು ನನ್ನ ಅನಿಸಿಕೆ. ಇದರ ಬಗ್ಗೆ ಸಾಮಾಜಿಕ ಚರ್ಚೆಗಳು ನಡೆದರೆ, ಹೊಸ ಕಾನೂನಿಗೆ ಬೇರೆ ದಾರಿಯನ್ನು ಕಂಡುಕೊಳ್ಳಬಹುದು ಎನ್ನುವುದು ನನ್ನ ವಿಚಾರ.