ಇದು ಅನರ್ಹರ ಗೆಲುವೋ ಸುಭದ್ರ ಸರ್ಕಾರಕ್ಕೆ ಸಿಕ್ಕಿದ ಜನಾಭಿಪ್ರಾಯವೋ? ಪ್ರಭಾವಿಯಾಗಿದಾದರೆ ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ವ್ಯಕ್ತಿ ಆಧಾರಿತ ರಾಜಕಾರಣ ವ್ಯವಸ್ಥೆಗೆ ಸಿಕ್ಕಿದ ಜನಮನ್ನಣೆಯೋ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ರಾಜ್ಯದಲ್ಲಿ ಯಾವತ್ತೂ ಜನಬೆಂಬಲವಿದೆ ಎಂಬ ಸಂದೇಶವೋ? ಮರುಮೈತ್ರಿ ಮಾಡಿಕೊಳ್ಳಲು ಯೋಚನೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮತದಾರರಿಂದ ಸಿಕ್ಕಿದ ಮರ್ಮಾಘಾತವೋ?
ಇಷ್ಟೆಲ್ಲಾ ಪ್ರಶ್ನೆಗಳಿಗೆ ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಉತ್ತರ ಕೊಟ್ಟಿದ್ದು, ಬಿಜೆಪಿ 12, ಕಾಂಗ್ರೆಸ್ 2 ಮತ್ತು ಪಕ್ಷೇತರರು ಒಂದು ಸ್ಥಾನದಲ್ಲಿ ಗೆದ್ದಿದ್ದರೆ, ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. 222 ಸದಸ್ಯ ಬಲದ ವಿಧಾನಸಭೆಯಲ್ಲಿ (ಒಟ್ಟು 224 ಸ್ಥಾನಗಳಿದ್ದು, ಇನ್ನು ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ) ಆಡಳಿತಾರೂಢ ಬಿಜೆಪಿಯ ಒಟ್ಟು ಸದಸ್ಯಬಲ 117ಕ್ಕೇರಿದೆ. ಇವರೊಂದಿಗೆ ಒಬ್ಬ ಪಕ್ಷೇತರ ಶಾಸಕರ ಬೆಂಬಲವೂ ಇರುವುದರಿಂದ ಸರ್ಕಾರದ ಬಲ 118 ಆಗಿದೆ. ಕಾಂಗ್ರೆಸ್ ಸದಸ್ಯ ಬಲ 68ಕ್ಕೆ, ಜೆಡಿಎಸ್ ಸ್ಥಾನಗಳು 34ಕ್ಕೆ ಕುಸಿದಿದೆ. ಇತರರು ಇಬ್ಬರಿದ್ದಾರೆ.
ಅಥಣಿ (ಮಹೇಶ್ ಕುಮುಟಳ್ಳಿ), ಕಾಗವಾಡ (ಶ್ರೀಮಂತ ಪಾಟೀಲ್), ಗೋಕಾಕ್ (ರಮೇಶ್ ಜಾರಕಿಹೊಳಿ), ಯಲ್ಲಾಪುರ (ಶಿವರಾಮ ಹೆಬ್ಬಾರ್), ಹಿರೇಕೆರೂರು (ಬಿ.ಸಿ.ಪಾಟೀಲ್), ರಾಣೆಬೆನ್ನೂರು (ಅರುಣ್ ಕುಮಾರ್), ವಿಜಯನಗರ (ಹೊಸಪೇಟೆ) (ಆನಂದ್ ಸಿಂಗ್), ಚಿಕ್ಕಬಳ್ಳಾಪುರ (ಡಾ.ಕೆ.ಸುಧಾಕರ್), ಕೆ.ಆರ್.ಪುರ (ಭೈರತಿ ಬಸವರಾಜು), ಯಶವಂತಪುರ (ಎಸ್.ಟಿ.ಸೋಮಶೇಖರ್), ಮಹಾಲಕ್ಷ್ಮಿ ಲೇಔಟ್ (ಕೆ.ಗೋಪಾಲಯ್ಯ), ಕೆ.ಆರ್.ಪೇಟೆ (ನಾರಾಯಣಗೌಡ) ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಹಾಗೂ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಗೆಲುವಿನ ಸಂಭ್ರಮದಲ್ಲೂ ಯಡಿಯೂರಪ್ಪ ಅವರಿಗೆ ನಿರಾಶೆ
ಉಪ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಮಧ್ಯೆಯೂ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಸೋತಿರುವುದು ಮತ್ತು ಬಿಜೆಪಿಯಿಂದ ಉಚ್ಛಾಟನೆಗೊಂಡ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರಾಶೆ ತಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶತಾಯ-ಗತಾಯ ವಿರೋಧಿಸುತ್ತಿದ್ದ ಎಂ.ಟಿ.ಬಿ. ನಾಗರಾಜ್ ಅವರನ್ನು ಗೆಲ್ಲಿಸಲು ಯಡಿಯೂರಪ್ಪ ಹೆಚ್ಚು ಪ್ರಯತ್ನ ಮಾಡಿದ್ದರು. ಇತರೆ ಕ್ಷೇತ್ರಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಹೊಸಕೋಟೆಗೆ ಕೊಟ್ಟಿದ್ದರು. ತಮ್ಮ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಅನೇಕ ನಾಯಕರನ್ನು ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದರು. ಆದರೆ, ಅದಾವುದೂ ಫಲ ನೀಡದ ಕಾರಣ ಗೆಲುವಿನ ಸಂಭ್ರಮದಲ್ಲೂ ಯಡಿಯೂರಪ್ಪ ಅವರಿಗೆ ನಿರಾಶೆ ಕಾಡುವಂತಾಗಿದೆ.
ಆದರೆ, ಕಾಗವಾಡ, ರಾಣೆಬೆನ್ನೂರು ಕ್ಷೇತ್ರದಲ್ಲಿ ಗೆಲುವು ಕಷ್ಟಸಾಧ್ಯವೆಂದೇ ಭಾವಿಸಲಾಗಿತ್ತಾದರೂ ಬಿಜೆಪಿ ಅಭ್ಯರ್ಥಿಗಳು ಸುಲಭ ಗೆಲುವು ಸಾಧಿಸಿರುವುದು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಹುಣಸೂರು ಕ್ಷೇತ್ರದ ಸೋಲು ಮೊದಲೇ ನಿರೀಕ್ಷಿತವಾಗಿದ್ದರಿಂದ ಈ ಫಲಿತಾಂಶ ಯಾವುದೇ ಪರಿಣಾಮ ಬೀರಿಲ್ಲ. ಈ ಮಧ್ಯೆ ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಮತ್ತು ಶಿವಾಜಿನಗರ (ನಾಲ್ಕು ಕ್ಷೇತ್ರಗಳು) ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ರಾಜಧಾನಿಯಲ್ಲಿ ಬಿಜೆಪಿ ಶಕ್ತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಮುಖಭಂಗ
ಈ ಉಪ ಚುನಾವಣೆ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗ ಉಂಟುಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅನರ್ಹಗೊಂಡ ಶಾಸಕರನ್ನು ಸೋಲಿಸಲೇ ಬೇಕು. ಇದು ತಮ್ಮ ಗೌರವದ ಪ್ರಶ್ನೆ ಎಂಬ ಪಟ್ಟು ಹಿಡಿದು ಪ್ರಚಾರ ನಡೆಸಿದ್ದ ಈ ಇಬ್ಬರಿಗೆ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಗೌರವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್ ಇಲ್ಲದ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ರಾಜ್ಯದಲ್ಲಿ ಶಕ್ತಿಯುತವಾಗಲು ಸಾಧ್ಯವಿಲ್ಲ ಎಂಬ ಸಂದೇಶವೂ ಈ ಫಲಿತಾಂಶದಿಂದ ರವಾನೆಯಾಗಿದೆ.
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯ ಮತ್ತು ಇತರ ಹಿರಿಯ ಕಾಂಗ್ರೆಸ್ಸಿಗರ ಮಧ್ಯೆ ಒಮ್ಮತ ಮೂಡಿರಲಿಲ್ಲ. ಇದರ ಪರಿಣಾಮ ಬಹುತೇಕ ಹಿರಿಯ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಡಾ.ಜಿ.ಪರಮೇಶ್ವರ್, ದಿನೇಶು ಗುಂಡೂರಾವ್ ಪ್ರಚಾರ ಪರಿಣಾಮ ಬೀರಲಿಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋಲುವಂತೆ ಮಾಡಿತು.
ಇದರ ಮಧ್ಯೆಯೂ ಹುಣಸೂರಿನಲ್ಲಿ ತಮ್ಮ ರಾಜಕೀಯ ಕಡುವೈರಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅದೇರೀತಿ ಹೊಸಕೋಟೆಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ ಎ.ಟಿ.ಬಿ.ನಾಗರಾಜ್ ಅವರನ್ನು ಸೋಲಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ ಹಿರಿಯ ನಾಯಕರ ವಿರೋಧದ ನಡುವೆಯೂ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಇದಷ್ಟೇ ಸಿದ್ದರಾಮಯ್ಯ ಅವರಿಗೆ ಸಮಾಧಾನದ ಸಂಗತಿ.
ಅದೇರೀತಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈ ಚುನಾವಣೆ ಫಲಿತಾಂಶ ಆಘಾತ ತಂದಿದೆ. ಇದಕ್ಕೆ ಕಾರಣ ಶೂನ್ಯ ಫಲಿತಾಂಶ ಸಿಕ್ಕಿರುವುದರ ಜತೆಗೆ ಅನರ್ಹರನ್ನು ಸೋಲಿಸಲೇ ಬೇಕು ಎಂಬ ಪ್ರಯತ್ನ ಈಡೇರದೇ ಇರುವುದು. ಕೆ.ಆರ್.ಪೇಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಪಕ್ಷದ ಅಭ್ಯರ್ಥಿಗಳು ಇಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ ಎಂಬುದಷ್ಟೇ ಸಮಾಧಾನ. ಜತೆಗೆ ಹೊಸಕೋಟೆಯಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲ್ಲುವುದರೊಂದಿಗೆ ಎಂ.ಟಿ.ಬಿ.ನಾಗರಾಜ್ ವಿರುದ್ಧ ಸೇಡು ತೀರಿಸಿಕೊಂಡ ತೃಪ್ತಿಯಷ್ಟೇ ಅವರಿಗೆ ಉಳಿದುಕೊಂಡಿದೆ.
ಸೋಲಿನಲ್ಲೂ ಸಮಾಧಾನ ಕಂಡ ಕಾಂಗ್ರೆಸ್ ಹಿರಿಯರು
ಉಪ ಚುನಾವಣೆಯಲ್ಲಿ ಸೋಲಿನ ಬೇಸರದಲ್ಲೂ ಕಾಂಗ್ರೆಸ್ ಹಿರಿಯ ನಾಯಕರು ಸಾಮಾಧಾನಗೊಂಡಿದ್ದಾರೆ ಎಂಬುದು ಫಲಿತಾಂಶದ ಮತ್ತೊಂದು ವಿಶೇಷ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಹಿಡಿತವನ್ನು ಕಡಿಮೆ ಮಾಡಬೇಕು ಎಂದು ಹಿರಿಯ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದರು. ಈ ವಿಚಾರವನ್ನು ಹೈಕಮಾಂಡ್ ವರೆಗೂ ಕೊಂಡೊಯ್ದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅದರ ಬದಲು ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಮೇಲುಸ್ತುವಾರಿಯೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿತ್ತು. ಇದರಿಂದ ಮತ್ತಷ್ಟು ಅಸಮಾಧಾನಗೊಂಡಿದ್ದ ಹಿರಿಯ ನಾಯಕರು ಚುನಾವಣೆಯಲ್ಲಿ ದೂರವೇ ಉಳಿದಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು ಸಿದ್ದರಾಮಯ್ಯ ಅವರ ಸೋಲು ಎನ್ನುತ್ತಿರುವ ಹಿರಿಯ ಕಾಂಗ್ರೆಸ್ಸಿಗರು ಸ್ವಲ್ಪ ಸಮಾಧಾನಗೊಂಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಹೈಕಮಾಂಜ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಲಾಬಿ ನಡೆಸಲು ಮುಂದಾಗಿದ್ದಾರೆ.