ರಾಜ್ಯದಲ್ಲಿ ಅಲ್ಪಮತದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಕಾಂಗ್ರೆಸ್-ಜೆಡಿಎಸ್ ಮರುಮೈತ್ರಿಯ ಭವಿಷ್ಯಗಳನ್ನು ನಿರ್ಧರಿಸಲಿದೆ ಎನ್ನಲಾಗುತ್ತಿರುವ ಉಪ ಚುನಾವಣೆ ಸಮರ ನಾಳೆ (ಗುರುವಾರ) ನಡೆಯುತ್ತಿದೆ. ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದ್ದರೆ, ಅನರ್ಹರಿಗೆ ಸೋಲಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಬೊಬ್ಬಿರಿಯುತ್ತಿವೆ. ಆದರೆ, ಉಪ ಚುನಾವಣೆ ಅಂದುಕೊಂಡಂತಿಲ್ಲ. ಗೆಲುವು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೊದಲೇ ನಿರ್ಧರಿಸಿದ್ದರೇ?
ರಾಜ್ಯಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸದೆ ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗಲು ಕಾರಣವಾದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಹೀಗೊಂದು ಪ್ರಶ್ನೆ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಮರುಮೈತ್ರಿಗೆ ರಾಜ್ಯಸಭೆ ಚುನಾವಣೆ ಕೊಳ್ಳಿ ಇಟ್ಟಿದೆ ಎಂಬ ಮಾತುಗಳೂ ಕೇಳಿಬರಲಾರಂಭಿಸಿದೆ.
ಒಟ್ಟು 224 ಸದಸ್ಯರ ವಿಧಾನಸಭೆಯಲ್ಲಿ 17 ಶಾಸಕರು ಅನರ್ಹರಾದ ಬಳಿಕ ಸದ್ಯದ ಬಲಾಬಲ 207 ಇದೆ. ಇದರಲ್ಲಿ ಒಬ್ಬ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ 106 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ಶಾಸಕ ಮಹೇಶ್ ಸೇರಿ 101 ಮಂದಿ ಇದ್ದಾರೆ. 15 ಕ್ಷೇತ್ರಗಳಿಗೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಬಳಿಕ ವಿಧಾನಸಭೆ ಸದಸ್ಯ ಬಲ 222ಕ್ಕೆ ಏರುತ್ತದೆ. ಇದರ ಆಧಾರದ ಮೇಲೆ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ 112 ಸಂಖ್ಯಾಬಲ ಬೇಕಾಗುತ್ತದೆ.
ಸದ್ಯ 106 (ಪಕ್ಷೇತರ ಸದಸ್ಯ ಸೇರಿ) ಸದಸ್ಯ ಬಲ ಹೊಂದಿರುವ ಬಿಜೆಪಿ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಆರು ಸ್ಥಾನಗಳನ್ನು ಗೆದ್ದರೆ ಸರಳ ಬಹುಮತ ಬಂದಂತಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 112 ಸ್ಥಾನಗಳನ್ನು ಪಡೆಯಬೇಕಾದರೆ 11 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆಗ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಂತಾಗುತ್ತದೆ. ಜತೆಗೆ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಕೂಡ ಸಾಧ್ಯವಾಗುತ್ತಿತ್ತು.
ಈ ಲೆಕ್ಕಾಚಾರ ಆಧರಿಸಿಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮರುಮೈತ್ರಿ ಕುರಿತು ಮೊದಲು ಪ್ರಸ್ತಾಪಿಸಿದ್ದರು. ಜೆಡಿಎಸ್ ಮೂರು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಏಳು ಸ್ಥಾನ ಗೆದ್ದರೆ ಆಗ ಒಟ್ಟು ಹತ್ತು ಮಂದಿ ಆಗುತ್ತಾರೆ. ಬಿಜೆಪಿ-ಜೆಡಿಎಸ್ ಒಟ್ಟು ಸೇರಿ 111 ಸ್ಥಾನಗಳಾಗುತ್ತವೆ. ಆಗ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಎನ್.ಮಹೇಶ್ ಅವರನ್ನು ಒಲಿಸಿಕೊಳ್ಳಬಹುದು. ಹೇಗೂ ರಾಜ್ಯಸಭೆ ಚುನಾವಣೆಯ ಮತದಾನ ನಡೆಯುವುದು ಡಿಸೆಂಬರ್ 11ಕ್ಕೆ. ಡಿ. 9ಕ್ಕೆ ಉಪ ಚುನಾವಣೆ ಫಲಿತಾಂಶ ಬರಲಿದ್ದು, ನೂತನವಾಗಿ ಆಯ್ಕೆಯಾದವರು ತಕ್ಷಣ ಪ್ರಮಾಣವಚನ ಸ್ವೀಕರಿಸಿದರೆ ಮತದಾನ ಮಾಡಬಹುದಾಗಿದೆ. ಆಗ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ಜತೆಗೆ ಸರ್ಕಾರವನ್ನೂ ಅಲ್ಪಮತಕ್ಕೆ ತಳ್ಳಬಹುದು ಎಂದು ಲೆಕ್ಕ ಹಾಕಿದ್ದರು. ಅದಕ್ಕೆ ತಕ್ಕಂತೆ ಉದ್ಯಮಿ ಅಥವಾ ಕಾಂಗ್ರೆಸ್ ಪಕ್ಷದಲ್ಲಿರುವ ಗಟ್ಟಿ ಕುಳವೊಂದನ್ನು ರಾಜ್ಯಸಭೆಗೆ ಕಳುಹಿಸಬಹುದು ಎಂದುಕೊಂಡಿದ್ದರು,
ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟು ಸೇರಿ 11 ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ಕಾಂಗ್ರೆಸ್ ನಾಯಕರು ದೇವೇಗೌಡರ ರಾಜ್ಯಸಭೆ ಲೆಕ್ಕಾಚಾರಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲುವ ಜವಾಬ್ದಾರಿ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಚರ್ಚಿಸುವ ಆಸಕ್ತಿಯನ್ನೂ ತೋರಿಸಲಿಲ್ಲ. ಇದರಿಂದಾಗಿ ರಾಜ್ಯಸಭೆಗೆ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿ ಹಾಕಲು ಸಾಧ್ಯವಾಗಲಿಲ್ಲ ಎಂಬ ಚರ್ಚೆ ಉಭಯ ಪಕ್ಷಗಳಲ್ಲಿ ಜೋರಾಗಿ ನಡೆಯುತ್ತಿದೆ.
ಈ ಅಂಶವೇ ಮರುಮೈತ್ರಿಗೆ ಕೊಳ್ಳಿ ಇಟ್ಟಿತು
ಯಾವಾಗ ರಾಜ್ಯಸಭೆಯ ತಮ್ಮ ಲೆಕ್ಕಾಚಾರಕ್ಕೆ ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಒಪ್ಪಲಿಲ್ಲವೋ ದೇವೇಗೌಡರು ಆಕ್ರೋಶಗೊಂಡರು. ಮರುಮೈತ್ರಿ ಸಾಧ್ಯವೇ ಇಲ್ಲ ಎಂದು ಘೋಷಿಸಿದರು. ಜತೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದುವರಿಯಲಿ ಎಂದು ಫರ್ಮಾನೂ ಹೊರಡಿಸಿದರು.
ಇದಕ್ಕೆ ಕೆಲವೇ ದಿನ ಮೊದಲು ಉಪ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆ ಕುರಿತು ಸೋನಿಯಾ ಗಾಂಧಿ ಏನು ಹೇಳುತ್ತಾರೋ ನೋಡೋಣ ಎಂದು ಮರುಮೈತ್ರಿಯ ಬಗ್ಗೆ ಪ್ರಸ್ತಾಪಿಸಿದ್ದ ಅದೇ ದೇವೇಗೌಡರೇ, ಎರಡು ಬಾರಿ ಕಾಂಗ್ರೆಸ್ ಸಹವಾಸ ಮಾಡಿ ಸಾಕಾಗಿದೆ. ಅವರು ಆಡಿದ ಆಟಗಳೆಲ್ಲಾ ಸಾಕು. ಇನ್ನು ಯಾರೊಂದಿಗೂ ಮೈತ್ರಿ ಮಾತೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅಲ್ಲಿಗೆ ಮರುಮೈತ್ರಿಯ ಬಗ್ಗೆ ಕಾಂಗ್ರೆಸ್ ಒಲವು ಹೊಂದಿದ್ದರೂ ಜೆಡಿಎಸ್ ಬಾಗಿಲು ಮುಚ್ಚಿದರು.
ಸಿದ್ದರಾಮಯ್ಯ ಅವರ ಯೋಚನೆಯೇ ಬೇರೆಯಾಗಿತ್ತು
ಜೆಡಿಎಸ್ ಜತೆ ಮರು ಮೈತ್ರಿಗೆ ಕಾಂಗ್ರೆಸ್ ನ ಬಹುತೇಕ ಎಲ್ಲಾ ನಾಯಕರ ಸಹಮತ ಇದ್ದರೂ ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇರಲಿಲ್ಲ. ಇಲ್ಲಿ ಸಿದ್ದರಾಮಯ್ಯ ಅವರ ಸ್ವಾರ್ಥವೂ ಇತ್ತು, ಪಕ್ಷದ ಇನ್ನಷ್ಟು ಶಾಸಕರು ರಾಜೀನಾಮೆ ನೀಡದಂತೆ ತಡೆಯುವ ಉದ್ದೇಶವೂ ಇತ್ತು. ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದು ಮತ್ತೆ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿದರೂ ಅದು ಹೆಚ್ಚು ಕಾಲ ಉಳಿಯುವ ಲಕ್ಷಣ ಇರಲಿಲ್ಲ. ಕಾಂಗ್ರೆಸ್ಸಿನ ಇನ್ನೂ ಮೂರ್ನಾಲ್ಕು ಶಾಸಕರು ಬಿಜೆಪಿಯತ್ತ ಹೋಗಲು ಸಿದ್ಧವಾಗಿದ್ದರು.
ಅಷ್ಟೇ ಅಲ್ಲದೆ, ಮೈತ್ರಿ ಸರ್ಕಾರ ಬಂದರೆ ತಮ್ಮನ್ನು ದೂರವಿಟ್ಟೇ ಸರ್ಕಾರ ರಚಿಸಲಾಗುತ್ತದೆ. ಯಾವ ಅಧಿಕಾರವೂ ಸಿಗುವುದಿಲ್ಲ. ಅದರ ಬದಲು ಬಿಜೆಪಿ ಸರ್ಕಾರ ಮುಂದುವರಿದರೆ ಪ್ರತಿಪಕ್ಷ ಸ್ಥಾನ ತಮಗೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ಆ ಗೆಲುವಿನಲ್ಲಿ ತಮ್ಮ ಪಾತ್ರ ಹೆಚ್ಚಾಗಿದ್ದರೆ ಮತ್ತೆ ಮುಖ್ಯಮಂತ್ರಿ ಪದವಿ ದಕ್ಕುತ್ತದೆ. ಈ ಕಾರಣಕ್ಕಾಗಿ ರಾಜ್ಯಸಭೆ ಚುನಾವಣೆ ಹಾಗೂ ಮರುಮೈತ್ರಿ ಪ್ರಸ್ತಾಪದ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ.
ದೊಡ್ಡಗೌಡರ ಲೆಕ್ಕಾಚಾರಕ್ಕೆ ಬಿಎಸ್ ವೈ ಮಾಸ್ಟರ್ ಪ್ಲಾನ್
ಉಪ ಚುನಾವಣೆಯಲ್ಲಿ ಸರ್ಕಾರ ಉಳಿಸಿಕೊಳ್ಳಬೇಕಾದ ಮ್ಯಾಜಿಕ್ ನಂಬರ್ ಗಳಿಸಬಹುದು ಎಂಬ ವಿಶ್ವಾಸವಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಳಗೊಳಗೇ ಆತಂಕವಿತ್ತು. ಇದರ ಮಧ್ಯೆ ದೇವೇಗೌಡರ ರಾಜ್ಯಸಭೆ ಲೆಕ್ಕಾಚಾರದ ಮಾಹಿತಿಯೂ ಅವರಿಗೆ ಸಿಕ್ಕಿತ್ತು. ಈ ಕಾರಣಕ್ಕಾಗಿಯೇ ಅವರು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದರು. ಬಿಎಸ್ಪಿಯ ಉಚ್ಛಾಟಿತ ಶಾಸಕ ಎನ್.ಮಹೇಶ್ ಅವರನ್ನು ತಮ್ಮ ಆಪ್ತರ ಮೂಲಕ ಸಂಪರ್ಕಿಸಿ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮಹೇಶ್ ಅವರ ಬಾಯಲ್ಲಿ ಹೇಳಿಸಿದರು. ಆ ಮೂಲಕ ದೇವೇಗೌಡರ ಲೆಕ್ಕದಲ್ಲಿದ್ದ ಮಹೇಶ್ ಅವರನ್ನು ಬಿಜೆಪಿ ಪರ ಎಂದು ಬಿಂಬಿಸಿದರು.
ಇಲ್ಲದೇ ಇದ್ದಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದು, ಪಕ್ಷ ಸೂಚನೆ ಕೊಟ್ಟಿತು ಎಂಬ ಕಾರಣಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದ, ಬಿಜೆಪಿಯನ್ನು ಯಾವತ್ತೂ ವಿರೋಧಿಸಿಕೊಂಡು ಬಂದಿದ್ದ ಎನ್. ಮಹೇಶ್ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬೇಕು. ಸದೃಢ ಸರ್ಕಾರ ಬೇಕು. ಅದಕ್ಕಾಗಿ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಒಟ್ಟಿನಲ್ಲಿ ರಾಜ್ಯಸಭೆ ಚುನಾವಣೆ ವಿಷಯ ಮರುಮೈತ್ರಿಗೆ ಕಡಿವಾಣ ಹಾಕಿದ್ದಂತೂ ಸತ್ಯ.