ಅಯೋಧ್ಯೆಯ ಬಾಬರಿ ಮಸೀದಿ ನಿಂತಿದ್ದ ಜಾಗದಲ್ಲಿ ಮತ್ತೊಂದು ಮಸೀದಿಯನ್ನು ನಿರ್ಮಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಜಾಮಿಯತ್ ಉಲೇಮಾ ಹಿಂದ್ ಸುಪ್ರೀಮ್ ಕೋರ್ಟಿಗೆ ಮರುವಿಮರ್ಶಾ ಮನವಿ ಸಲ್ಲಿಸಿದೆ.
ನ್ಯಾಯವಿಲ್ಲದೆ ಶಾಂತಿ ನೆಲೆಸುವುದು ಸಾಧ್ಯವಿಲ್ಲ ಎಂದು ಮನವಿಯಲ್ಲಿ ವಾದಿಸಿರುವ ಜಾಮಿಯತ್, ಇತ್ತೀಚೆಗೆ ಹೊರಬಿದ್ದ ಬಾಬರಿ ಮಸೀದಿ-ರಾಮಜನ್ಮಭೂಮಿ ತೀರ್ಪು ನ್ಯಾಯಯುತವಾಗಿಲ್ಲ ಎಂದಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಹೊರಬಿದ್ದಿದ್ದ ಈ ತೀರ್ಪು 2.70 ಎಕರೆಯಷ್ಟು ವಿವಾದಿತ ಜಮೀನಿನಲ್ಲಿ ರಾಮಮಂದಿರ ನಿರ್ಮಿಸುವಂತೆಯೂ, ಮಸೀದಿ ನಿರ್ಮಾಣಕ್ಕೆ ಆಯೋಧ್ಯೆಯಲ್ಲಿ ಐದು ಎಕರೆಗಳಷ್ಟು ಪ್ರತ್ಯೇಕ ನಿವೇಶನವನ್ನು ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮರುವಿಮರ್ಶಾ ಅರ್ಜಿ ಸಲ್ಲಿಸುವ ಇರಾದೆಯನ್ನು ಈಗಾಗಲೆ ವ್ಯಕ್ತಪಡಿಸಿದೆ. ಆದರೆ ಉತ್ತರಪ್ರದೇಶದ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಮುಂತಾದ ಹಲವು ಮುಸ್ಲಿಂ ಸಂಘಟನೆಗಳು ಮರುವಿಮರ್ಶೆ ಅರ್ಜಿ ಸಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿವೆ.
1934ರಲ್ಲಿ ಬಾಬರಿ ಮಸೀದಿಯ ಗುಮ್ಮಟಗಳಿಗೆ ಹಾನಿ ಉಂಟು ಮಾಡಿದ್ದು, 1949ರಲ್ಲಿ ರಾಮಲಲ್ಲಾ ವಿಗ್ರಹಗಳನ್ನು ರಾತ್ರೋ ರಾತ್ರಿ ತಂದಿರಿಸಿದ್ದು ಹಾಗೂ 1992ರಲ್ಲಿ ಬಾಬರಿ ಮಸೀದಿ ಕೆಡವಿದ್ದು ಕ್ರಿಮಿನಲ್ ಕೃತ್ಯಗಳು ಎಂದು ತಾನೇ ಬಣ್ಣಿಸಿದ ನಂತರವೂ ವಿವಾದಿತ ಜಮೀನನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದ ನ್ಯಾಯಾಲಯದ ತೀರ್ಪು ನಿರಾಶಾದಾಯಕ ಎಂದು ಮನವಿಯಲ್ಲಿ ಹೇಳಲಾಗಿದೆ. ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಸ್ಥಾಪಿಸಲು ಈ ಸೂಕ್ಷ್ಮ ವಿಷಯವನ್ನು ವಿಶ್ರಮಿಸಲು ಬಿಡಬೇಕೆಂಬುದು ಹೌದಾದರೂ, ನ್ಯಾಯವಿಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ ಎಂದು ವಾದಿಸಲಾಗಿದೆ.
ಈ ಮನವಿಯಲ್ಲಿ ಪಟ್ಟಿ ಮಾಡಲಾಗಿರುವ ಸುಪ್ರೀಮ್ ಕೋರ್ಟ್ ತೀರ್ಪಿನ ದೋಷಗಳು ಹೀಗಿವೆ-
ಸುಪ್ರೀಮ್ ಕೋರ್ಟಿನ ತೀರ್ಪು ವಾಸ್ತವವಾಗಿ ಬಾಬರಿ ಮಸೀದಿಯನ್ನು ಕೆಡವಲು ನೀಡಿರುವ ಆದೇಶವಾಗಿದೆ. 1992ರ ಡಿಸೆಂಬರ್ 6ರಂದು ಮಸೀದಿಯನ್ನು ಕೆಡವದೆ ಹೋಗಿದ್ದಿದ್ದರೆ, ಇಂದು ಸುಪ್ರೀಮ್ ಕೋರ್ಟ್ ತೀರ್ಪನ್ನು ಜಾರಿ ಮಾಡುವುದು ಸಾಧ್ಯವಿರುತ್ತಿರಲಿಲ್ಲ. ತೀರ್ಪಿನ ಪ್ರಕಾರ ರಾಮಮಂದಿರ ಕಟ್ಟಲು ಮಸೀದಿಯನ್ನು ಕೆಡವಬೇಕಾಗಿ ಬರುತ್ತಿತ್ತು.
1934, 1949 ಹಾಗೂ 1992ರಲ್ಲಿ ಮಂದಿರವಾದಿಗಳು ಮಾಡಿದ ಅಪರಾಧಗಳಿಗೆ ಬಹುಮಾನವಾಗಿ ನ್ಯಾಯಾಲಯ ಮಂದಿರ ನಿರ್ಮಾಣದ ತೀರ್ಪನ್ನು ನೀಡಿದಂತಾಗಿದೆ.
ವಿವಾದಿತ ಜಮೀನನ್ನು ಮಂದಿರ ನಿರ್ಮಾಣಕ್ಕೆ ನೀಡಿರುವ ತೀರ್ಪಿನಿಂದಾಗಿ ಅಕ್ರಮ ಕೃತ್ಯದಿಂದ ಯಾವ ವ್ಯಕ್ತಿಯೂ ಪ್ರಯೋಜನ ಹೊಂದಲಾರ ಎಂಬ ಮೂಲಭೂತ ತತ್ವದ ಉಲ್ಲಂಘನೆಯಾಗಿದೆ.
ಕಳಂಕಿತ ಕೃತ್ಯವು ಊರ್ಜಿತವಾಗುವುದಿಲ್ಲ ಎಂಬ ಕಾನೂನಿನ ಸ್ಥಾಪಿತ ತತ್ವವನ್ನು ನ್ಯಾಯಾಲಯದ ತೀರ್ಪು ಅನಾದರದಿಂದ ಕಂಡಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಕೆಡವಲಾಗಿದೆ ಎಂದು ತೀರ್ಪಿನಲ್ಲಿ ಒಪ್ಪಿಕೊಂಡಿರುವ ಕಾರಣ, ಕೆಡವಲಾಗಿರುವ ಮಸೀದಿಗೆ ಬದಲಾಗಿ ಅದೇ ಜಾಗದಲ್ಲಿ ಮತ್ತೊಂದು ಮಸೀದಿ ನಿರ್ಮಿಸುವುದರಿಂದ ಮಾತ್ರವೇ ನ್ಯಾಯ ದೊರೆಯುವುದು ಸಾಧ್ಯ.
ವಿವಾದಿತ ಜಾಗದ ಮೇಲಿನ ದಾವೆಯನ್ನು ಹಿಂದು ಅರ್ಜಿದಾರರು ಮುಸ್ಲಿಂ ಅರ್ಜಿದಾರರಿಗಿಂತ ಪರಿಣಾಮಕಾರಿಯಾಗಿ ರುಜುವಾತು ಮಾಡಿದ್ದಾರೆಂದು ತೀರ್ಪಿನಲ್ಲಿ ಹೇಳಲಾಗಿದೆ. ವಿವಾದಿತ ಜಾಗದ ಹೊರಾಂಗಣ ಹಿಂದು ಅರ್ಜಿದಾರರ ವಶದಲ್ಲಿತ್ತು ಮತ್ತು ಒಳಾಂಗಣವು ಮುಸ್ಲಿಮ್ ಅರ್ಜಿದಾರರ ವಶದಲ್ಲಿತ್ತು ಎಂಬ ಅಂಶವನ್ನು ಆಧರಿಸಿ ಈ ಮಾತು ಹೇಳಲಾಗಿರುವುದು ವಿರೋಧಾಭಾಸದ ಸಂಗತಿ.
1857ಕ್ಕೆ ಮುನ್ನ ವಿವಾದಿತ ಜಾಗದ ಒಳಾಂಗಣದ ಕೇವಲ ತಮ್ಮ ವಶದಲ್ಲಿತ್ತು ಎಂಬುದನ್ನು ಮುಸ್ಲಿಂ ಅರ್ಜಿದಾರರು ರುಜುವಾತು ಮಾಡುವಲ್ಲಿ ವಿಫಲರಾಗಿದ್ದಾರೆ. ಆದರೆ ವಿವಾದಿತ ಜಾಗದಲ್ಲಿ ನಿಂತಿದ್ದ ಕಟ್ಟಡವು ಮಸೀದಿಯಾಗಿತ್ತು ಮತ್ತು ಸದಾ ಮುಸ್ಲಿಮರ ವಶದಲ್ಲಿತ್ತು ಎಂಬುದನ್ನು ತೀರ್ಪು ಗುರುತಿಸಿಲ್ಲ.
1528-1856 ನಡುವೆ ಬಾಬರಿ ಮಸೀದಿಯಲ್ಲಿ ನಮಾಜು ನಡೆಯುತ್ತಿತ್ತು ಎಂದು ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಸೀದಿಯನ್ನು ಕಟ್ಟಿಸಿದ್ದು 1528ರಲ್ಲಿ. ಮಸೀದಿಯು ನಮಾಜಿಗೆಂದೇ ಗುರುತಾಗಿರುವ ಪ್ರದೇಶ. 1500 ಚದರ ಗಜಗಳಲ್ಲಿ ನಿಂತಿರುವ ಭಾರೀ ಮಸೀದಿಯನ್ನು 1528-1856 ನಡುವಣ ಮುಸ್ಲಿಂ ಆಡಳಿತದ ಅವಧಿಯಲ್ಲಿ ನಮಾಜಿಗೆ ಬಳಸಿಲ್ಲ ಎಂದು ಬಗೆಯುವುದು ಸೂಕ್ತವಲ್ಲ.
ವಿವಾದದ ಇತ್ಯರ್ಥ ವಿಳಂಬ ಕುರಿತು ಹಿಂದೂಗಳಲ್ಲಿ ಅಸಹನೆ ಬೆಳೆಯುತ್ತಿದೆ ಎಂಬ ಕಾರಣವನ್ನು ರಾಮಲಲ್ಲಾ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ ನಮೂದಿಸಲಾಗಿತ್ತು. ಅಸಹನೆಯ ಆಧಾರದ ಕೇಸನ್ನು ಆರಂಭದಲ್ಲಿಯೇ ವಜಾ ಮಾಡಬೇಕಿತ್ತು. ಯಾಕೆಂದರೆ ಯಾವುದೇ ಅಹವಾಲಿಗೆ ಅಸಹನೆಯ ಕಾರಣ ನೀಡಲು ಬರುವುದಿಲ್ಲ.
ಯಾತ್ರಿಕರ ಬರೆಹಗಳು ಮತ್ತು ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನು ನ್ಯಾಯಾಲಯ ಆಧರಿಸಿತು. ಯಾತ್ರಿಕರ ಪ್ರವಾಸ ಬರೆಹಗಳೇ ನಿರ್ಣಾಯಕ ಅಲ್ಲ ಮತ್ತು ಪುರಾತತ್ವ ಸಾಕ್ಷ್ಯಾಧಾರಗಳು ನ್ಯಾಯನಿರ್ಣಯದ ಆಧಾರ ಆಗಲಾರವು ಎಂದು ನ್ಯಾಯಾಲಯ ತಾನೇ ಹೇಳಿದೆ. 1856ರಲ್ಲಿ ಅವಧ ರಾಜ್ಯವನ್ನು ವಜೀದ ಅಲಿ ಶಾ ನಿಂದ ಬ್ರಿಟಿಷರ ವಶಪಡಿಸಿಕೊಂಡ ನಂತರದ ವಾಸ್ತವಾಂಶಗಳನ್ನು ಆಧರಿಸಿ ನ್ಯಾಯನಿರ್ಣಯ ಮಾಡಲಾಗುವುದು ಎಂದೂ ನ್ಯಾಯಾಲಯ ಹೇಳಿತ್ತು. ಆದರೆ ತದ್ವಿರುದ್ಧವಾಗಿ 1856ಕ್ಕಿಂತ ಹಿಂದಿನ ಅಂಶಗಳನ್ನೇ ಆಧರಿಸಿಲಾಗಿದೆ.
ಹಿಂದುಗಳು ನಡೆಸಿದ ವಿಧ್ವಂಸ ಮತ್ತು ಅತಿಕ್ರಮಣದ ಕೃತ್ಯಗಳನ್ನೇ ವಿವಾದಿತ ಜಾಗದ ಮೇಲಿನ ದಾವೆಯ ಸಮರ್ಥನೆ ಎಂದು ನ್ಯಾಯಾಲಯವು ಬಗೆದಿದೆ.
ಜಾಮಿಯತ್ ನ ಈ ನಡೆಯನ್ನು ಪ್ರಮುಖ ಹಿಂದೂ ಸಂಘಟನೆಗಳು ಖಂಡಿಸಿವೆ. ರಾಮಮಂದಿರ ನಿರ್ಮಾಣಕ್ಕೆ ತಡೆ ಒಡ್ಡುವ ವಿಳಂಬ ತಂತ್ರವಿದು. ಹಿಂದೂಗಳು ಮತ್ತು ಮುಸಲ್ಮಾನರ ನಡುವಣ ಸಾಮರಸ್ಯದ ಭಾವನೆಯನ್ನ ಕದಡುವ ಪ್ರಯತ್ನವಿದು. ಆದರೆ ಇದರಿಂದಾಗಿ ಅಯೋಧ್ಯೆ ಕುರಿತ ತೀರ್ಪಿನ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎಂದು ರಾಮಜನ್ಮಭೂಮಿ ನ್ಯಾಸದ ಮುಖ್ಯಸ್ಥ ಮಹಂತ ನೃತ್ಯ ಗೋಪಾಲ ದಾಸ ಮತ್ತು ವಿಶ್ವಹಿಂದೂ ಪರಿಷತ್ತಿನ ಪ್ರಾದೇಶಿಕ ವಕ್ತಾರ ಶರದ್ ಶರ್ಮ ಹೇಳಿದ್ದಾರೆ.