ವಿಶ್ವದ ವಜ್ರ ಹೊಳಪುಗೊಳಿಸುವ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಗುಜರಾತ್ ನ ವಜ್ರ ಉದ್ಯಮಕ್ಕೆ ಆರ್ಥಿಕ ಹಿಂಜರಿತದ ಸಂಕಷ್ಟ ನಿಧಾನಕ್ಕೆ ಬಿಗಿಯಾಗುತ್ತಿದೆ. ಸೂರತ್ ನಲ್ಲಿ ಕೇಂದ್ರೀಕೃತವಾಗಿರುವ ಈ ಉದ್ಯಮ ಕಳೆದ ಮೂರು ವರ್ಷಗಳಿಂದಲೂ ಹಿಂಜರಿತವನ್ನು ಎದುರಿಸುತಿದ್ದು ಕಳೆದ ಮೂರು ತಿಂಗಳ ಅವಧಿಯಲ್ಲಿ 18 ಕ್ಕೂ ಹೆಚ್ಚು ವಜ್ರ ಕೆಲಸಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
ವಜ್ರೋದ್ಯಮವು ಗುಜರಾತ್ ನ ಸೂರತ್ ನಗರದಲ್ಲಿ ಹೆಚ್ಚು ಕೇಂದ್ರೀಕೃತವಾಗಿದ್ದು ಈ ನಗರವೊಂದರಲ್ಲೇ ಸುಮಾರು 6 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯಮದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ನಗರದಲ್ಲೇ 3500 ಸಣ್ಣ , ಮಧ್ಯಮ ಮತ್ತು ದೊಡ್ಡ ವಜ್ರ ಹೊಳಪುಗೊಳಿಸುವ ಕಾರ್ಖಾನೆಗಳಿದ್ದರೆ ಇಡೀ ಗುಜರಾತ್ ನಲ್ಲಿ ಒಟ್ಟು 15 ಸಾವಿರಕ್ಕೂ ಮಿಕ್ಕಿ ಕಾರ್ಖಾನೆಗಳಿದ್ದು 7 ಲಕ್ಷಕ್ಕೂ ಮಿಕ್ಕಿ ಜನರು ಇದರ ಅವಲಂಬಿತರಾಗಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತ, ಜಿಎಸ್ಟಿ ಜಾರಿ ಮತ್ತು ಬಹು ಮುಖ್ಯವಾಗಿ ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ 60 ಸಾವಿರ ವಜ್ರ ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸೂರತ್ ನಗರವೊಂದರಲ್ಲೇ 13 ಸಾವಿರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. 2017 ರ ದೀಪಾವಳಿ ಹಬ್ಬದ ನಂತರ ನೂರಾರು ವಜ್ರ ಕೈಗಾರಿಕೆಗಳು ಉತ್ಪಾದನೆಯನ್ನು ನಿಲ್ಲಿಸಿವೆ. ದೀಪಾವಳಿ ರಜೆಯ ನಂತರ ಹಣಕಾಸಿನ ಮುಗ್ಗಟ್ಟಿನ ಕಾರಣದಿಂದಾಗಿ ಶೇಕಡಾ 30 ರಷ್ಟು ಕಾರ್ಖಾನೆಗಳು ಪುನಃ ಬಾಗಿಲು ತೆರೆಯಲೇ ಇಲ್ಲ.
ಗುಜರಾತ್ ವಜ್ರ ಕಾರ್ಮಿಕರ ಸಂಘದ ಪ್ರಕಾರ 2018 ರ ವರ್ಷವೊಂದರಲ್ಲೇ ಸುಮಾರು 7 ಕಾರ್ಮಿಕರು ಉದ್ಯೋಗ ನಷ್ಟದ ಕಾರಣದಿಂದಾಗಿ ಅತ್ಮಹತ್ಯೆ ಮಾಡಿಕೊಂಡಿದ್ದು ಈ ವರ್ಷ ಈ ಸಂಖ್ಯೆ 10 ಕ್ಕಿಂತ ಹೆಚ್ಚಗಿದೆ. ಆರ್ಥಿಕ ಹಿಂಜರಿತದಿಂದಾಗಿ ಉದ್ಯಮ ಅತ್ಯಂತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿದೆ. ಈ ನಡುವೆ ಗೀತಾಂಜಲಿ ಜೆಮ್ಸ್ ಕಂಪೆನಿಯ ಪ್ರವರ್ತಕನಾಗಿದ್ದ ವಂಚಕ ನೀರವ್ ಮೋದಿ , ಮೇಹುಲ್ ಚೋಕ್ಸಿ ಮತ್ತು ಜತಿನ್ ಮೆಹ್ತ ಅವರು ಬ್ಯಾಂಕ್ ಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಓಡಿ ಹೋದ ನಂತರ ಬ್ಯಾಂಕುಗಳೂ ಉದ್ಯಮಿಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ.
ಮೊದಲೆಲ್ಲ ವಜ್ರ ಕಾರ್ಖಾನೆಗಳು ದಿನಕ್ಕೆ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತಿದ್ದವು ಜತೆಗೇ ಭರಪೂರ ಕೆಲಸ ಇರುತಿತ್ತು. ಈಗ ಕಾರ್ಖಾನೆಗಳು ಒಂದೇ ಶಿಫ್ಟ್ ಜಾರಿಗೊಳಿಸಿವೆ. ನೂರಾರು ಕಾರ್ಖಾನೆಗಳು ಕೆಲಸದ ಅವಧಿಯನ್ನೇ ಕಡಿತಗೊಳಿಸಿವೆ. ಈಗ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಮಿಕನೂ ಆತಂಕದಿಂದಲೇ ದಿನ ದೂಡುವಂತಾಗಿದೆ. ಏಕೆಂದರೆ ಯಾವುದೇ ಕ್ಷಣದಲ್ಲಿ ಕಾರ್ಖಾನೆಯು ಅವರನ್ನು ವಜಾಗೊಳಿಸಬಹುದು ಅಥವಾ ಕೆಲಸದ ಅವಧಿಯನ್ನೇ ಕಡಿತಗೊಳಿಸಬಹುದು. ಪ್ರಸ್ತುತ ಸಾಮಾನ್ಯ ವಜ್ರ ಕಾರ್ಮಿಕನೊಬ್ಬ ದಿನವೊಂದಕ್ಕೆ ಸುಮಾರು 600 ರೂಪಾಯಿಗಳ ಕೂಲಿ ಪಡೆಯುತಿದ್ದು ತಿಂಗಳಿಗೆ 18 ಸಾವಿರದಷ್ಟಾಗುತ್ತಿದೆ. ದಿಢೀರನೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಕಾರ್ಖಾನೆಗಳ ಮಾಲೀಕರು ಅವರಿಗೆ ಕನಿಷ್ಟ ಪಕ್ಷ ತಿಂಗಳ ಸಂಬಳದ ಪರಿಹಾರವನ್ನೂ ನೀಡುತ್ತಿಲ್ಲ. ಕೊನೆಗೆ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಿಗಳ ಸಂಘಟನೆಯ ಮಾತುಕತೆಯ ನಂತರ ಇದೀಗ ಕೆಲಸದಿಂದ ತೆಗೆಯುವ ಕಾರ್ಮಿಕರಿಗೆ ಎರಡು ತಿಂಗಳ ಸಂಬಳವನ್ನು ಪರಿಹಾರವಾಗಿ ನೀಡಲಾಗುತ್ತಿದೆ. .
ಮೊದಲೆಲ್ಲ ದೀಪಾವಳಿ ಹಬ್ಬ ಬಂತೆಂದಂರೆ ಕಾರ್ಮಿಕರಲ್ಲಿ ಸಂಭ್ರಮ ಮನೆ ಮಾಡಿರುತಿತ್ತು ಏಕೆಂದರೆ ಹಬ್ಬಕ್ಕೆ 2 ವಾರಗಳ ರಜೆ ಸಿಗುತಿತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಖಾನೆಗಳು ಕೆಲಸಗಾರರಿಗೆ ಒಂದು ಅಥವಾ ಎರಡು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡುವ ಪರಿಪಾಠ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಯಾವ ಕಾರ್ಖಾನೆಯೂ ಕಾರ್ಮಿಕರಿಗೆ ಬೋನಸ್ ನೀಡಿಲ್ಲ. ವಜ್ರದ ಬೇಡಿಕೆ ಕುಸಿದಿರುವುದೇ ಇದಕ್ಕೆ ಕಾರಣ.
ವಜ್ರ ಪಾಲಿಷ್ ಮಾಡುವ ಉದ್ಯಮವು ಕೇಂದ್ರ ಸರ್ಕಾರದಿಂದ ಸಂಪೂರ್ಣ ಜಿಎಸ್ಟಿ ತೆರಿಗೆ ರದ್ದು ಮಾಡಿ ಉದ್ಯಮದ ಬೆಳವಣಿಗೆಗೆ ಸಹಕರಿಸಬೇಕೆಂದು ಒತ್ತಾಯಿಸುತ್ತಿದೆ . ಆದರೆ ಸರ್ಕಾರ ಕಚ್ಚಾ ವಜ್ರಗಳಿಗೆ ಶೇಕಡಾ 0.25 ರಷ್ಟು ಮತ್ತು ಪಾಲಿಷ್ ಮಾಡಿದ ವಜ್ರಗಳಿಗೆ ಶೇಕಡಾ 3 ರಷ್ಟು ತೆರಿಗೆ ವಿಧಿಸುತ್ತಿದೆ. ಕಚ್ಚಾ ವಜ್ರಗಳನ್ನು ವಾಣಿಜ್ಯ ನಗರಿ ಮುಂಬೈನಿಂದ ಕೊರಿಯರ್ ಮೂಲಕ ಸೂರತ್ ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಪಾಲಿಷ್ ಮಾಡಿ ಪುನಃ ಮುಂಬೈಗೆ ಕೊರಿಯರ್ ಮೂಲಕ ಕಳಿಸಲಾಗುತ್ತಿದೆ. ಆದರೆ ತೆರಿಗೆಯ ಬಿಸಿ ತಪ್ಪಿಸಿಕೊಳ್ಳಲು ಅಕ್ರಮವಾಗಿ ವಜ್ರಗಳನ್ನು ಸಾಗಿಸುವ ಪ್ರಕರಣಗಳೂ ಹೆಚ್ಚಾಗಿವೆ.
“ವಜ್ರ ಉದ್ಯಮವು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2019 ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ರಫ್ತು 12% ನಷ್ಟು ಕುಸಿತವನ್ನು ನಾವು ದಾಖಲಿಸಿದ್ದೇವೆ. ಕೆಲವು ವಿಷಯಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಕ್ಕಟ್ಟು ಉಲ್ಪಣಗೊಳ್ಳಲಿದೆ ಎಂದು ಉದ್ಯಮಿಗಳ ಅಭಿಪ್ರಾಯವಾಗಿದೆ.
ಭಾರತವು ವಜ್ರ ಮತ್ತು ಅಭರಣ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು ಈ ರಂಗವು ದೇಶದ ಜಿಡಿಪಿಯಲ್ಲಿ ಶೇಕಡಾ ೭ ರಷ್ಟು ಪಾಲನ್ನು ಹೊಂದಿದೆ. ದೇಶದ ಒಟ್ಟು ರಫ್ತಿನಲ್ಲಿ ಇದರ ಪಾಲು ಶೇಕಡಾ 15 ರಷ್ಟಿದೆ. ವಿಶ್ವದ ವಜ್ರ ಮಾರುಕಟ್ಟೆಯಲ್ಲಿ ಸಿಂಹ ಪಾಲನ್ನು ಭಾರತ ಹೊಂದಿದ್ದು ಕೌಶಲ್ಯವುಳ್ಳ ಲಕ್ಷಾಂತರ ಕಾರ್ಮಿಕರು ಇಲ್ಲಿ ದುಡಿಯುತಿದ್ದಾರೆ. ವಿಶ್ವದಲ್ಲಿ ಮಾರಾಟವಾಗುವ ಶೇಕಡಾ ೭೫ ರಷ್ಟು ವಜ್ರಗಳು ಭಾರತದಲ್ಲೇ ಸಂಸ್ಕರಣಗೊಂಡಿರುತ್ತವೆ ಇದು ದೇಶದ ಹೆಗ್ಗಳಿಕೆ. ದಿನೇ ದಿನೇ ಹಿಗ್ಗುತ್ತಿರುವ ಈ ರಂಗದಲ್ಲಿ ಸರ್ಕಾರ ಶೇಕಡಾ ನೂರರಷ್ಟು ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿ ಕೊಟ್ಟಿದೆ.
ಆರ್ಥಿಕ ಹಿಂಜರಿತ ಇರದಿದ್ದರೆ ದೇಶದ ವಜ್ರ ಸಂಸ್ಕರಣಾ ಉದ್ಯಮವು 2022 ರ ವೇಳೆಗೆ 12 ಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡಲಿರುವದಾಗಿ ಉದ್ಯಮ ಮೂಲಗಳು ತಿಳಿಸಿವೆ. ಆದರೆ ಹಿಂಜರಿತದಿಂದಾಗಿ ಉದ್ಯೋಗ ಹೆಚ್ಚಳಗೊಳ್ಳುವುದು ಕನಸಿನ ಮಾತಾಗಿದ್ದು ಇರುವ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗದಂತೆ ತಡೆಯಲು ಕೇಂದ್ರ ಸರ್ಕಾರ ಕೂಡಲೇ ಉತ್ತೇಜಕ ಕ್ರಮಗಳನ್ನು ಪ್ರಕಟಿಸಬೇಕಿದೆ. ಇಲ್ಲದಿದ್ದರೆ ರೈತರ ಆತ್ಮಹತ್ಯೆಗಳಂತೆ ಇದೂ ಕೂಡ ಮುಂದುವರೆಯುವುದು ಖಚಿತವಾಗಿದೆ.