ವಿಧಾನಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಟ್ವೀಟ್ ಒಂದನ್ನು ಮಾಡಿದ್ದರು. ‘ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದನ್ನು ನೋಡಿದರೆ, ನನ್ನನ್ನು ಅತಿ ಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡುತ್ತೇವೆ ಎಂದು ಪ್ರಧಾನಿ ನರೆಂದ್ರ ಮೋದಿ ಮತ್ತು ಅಮಿತ್ ಶಾ ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ’ ಎಂದು ಪ್ರಶ್ನಿಸಿದ್ದರು.
ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಾತ್ರವಲ್ಲ, ಜೆಡಿಎಸ್ ಕೂಡ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ನಲ್ಲೂ ಒಂದು ಅರ್ಥವಿದೆ. ಹಾಗೆಂದು ಅವರು ಹೇಳಿದಂತೆ ಸಿದ್ದರಾಮಯ್ಯ ಅವರನ್ನು ಅತಿ ಹೆಚ್ಚು ಟೀಕಿಸಿದರೆ ಬಹುಮಾನ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭರವಸೆ ನೀಡಿದಂತಿದೆ ಎಂಬ ಮಾತು ಸ್ವಲ್ಪ ಹೆಚ್ಚಾಯಿತು ಎನಿಸಿರಬಹುದು.ಆದರೆ, ಎರಡೂ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿ ನಾಯಕರೆಲ್ಲರೂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಮುಗಿಬಿದ್ದಿರುವುದಂತೂ ಸುಳ್ಳಲ್ಲ.
ನನ್ನೊಬ್ಬನ ಮೇಲೇಯೇ ಬಿಜೆಪಿಯವರು ಮುಗಿಬೀಳುತ್ತಿರುವುದೇಕೆ ಎಂಬ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರವೂ ಅವರಲ್ಲೇ ಇದೆ. ಏಕೆಂದರೆ, ಸದ್ಯ ವಿಧಾನಸಭೆ ಉಪ ಚುನಾವಣೆಯಲ್ಲಿ ಪೈಪೋಟಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ. ಕಾಂಗ್ರೆಸ್ ನವರಿಗೆ ಟೀಕಿಸಲು ಬಿಜೆಪಿ ಸರ್ಕಾರವಿದೆ, ಆ ಪಕ್ಷದ ಅನೇಕ ನಾಯಕರಿದ್ದಾರೆ. ಆದರೆ, ಬಿಜೆಪಿಗೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾವ ನಾಯಕರಿದ್ದಾರೆ? ವೋಟು ಗಿಟ್ಟಿಸಬೇಕಾದರೆ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಹೋರಾಡಬೇಕು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತ್ರ. ಕೆಲವು ಮಾಜಿ ಸಚಿವರು ಇದ್ದರೂ ಅವರ ಪ್ರಭಾವ ಹೆಚ್ಚೇನೂ ಇಲ್ಲ. ದಿನೇಶ್ ಗುಂಡೂರಾವ್ ಅಥವಾ ಈಶ್ವರ್ ಖಂಡ್ರೆ ವಿರುದ್ಧ ಮಾತನಾಡಿದರೆ ಹೆಚ್ಚುವರಿಯಾಗಿ ಮತ ಗಿಟ್ಟುವುದ್ಲೇಲ. ಹೀಗಿರುವಾಗ ಅವರ ಬಗ್ಗೆ ಟೀಕಿಸಿ ಪ್ರಯೋಜನವೇನು
ಇನ್ನು ಪಕ್ಷದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ ಸಿಪಿ- ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ. ವೈದ್ಯಕೀಯ ಕಾಲೇಜಿನ ಸೀಟು ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬಳಿಕ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೊರಗೆ ಹೆಚ್ಚೇನೂ ಕಾಣಿಸಿಕೊಳ್ಳುತ್ತಿಲ್ಲ. ಉಳಿದಂತೆ ಪಕ್ಷದ ಹಲವು ಹಿರಿಯ ನಾಯಕರು ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡು ಪ್ರಚಾರದಿಂದಲೇ ದೂರ ಉಳಿದಿದ್ದಾರೆ. ಕೆಲವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರಾದರೂ ಹಾಗೆ ಬಂದು ಹೀಗೆ ಹೋಗುತ್ತಿದ್ದಾರೆ ಎಂಬ ರೀತಿಯಲ್ಲಿದೆ ಅವರ ಕಾರ್ಯವೈಖರಿ,
ಉಳಿದಿರುವುದು ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಮಾತ್ರ. ಅವರು ಕೂಡ ಸಿದ್ದರಾಮಯ್ಯ ಅವರಂತೆ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದೇ ಇದ್ದರೂ ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಓಡಾಡುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿಗೆ ಹೋಗಿ ಬಂದಿರುವ ಶಿವಕುಮಾರ್ ಅವರು ತಮ್ಮ ಮೇಲೆ ಬರುವ ಪ್ರತಿಯೊಂದು ಟೀಕೆಗೂ ತಾವು ಜೈಲಿಗೆ ಹೋಗಿ ಬಂದಿದ್ದನ್ನು ಪ್ರಸ್ತಾಪಿಸಿ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಎಷ್ಟೇ ಕಠಿಣ ಟೀಕೆಗಿಂತಲೂ ಅದಕ್ಕೆ ಬರುವ ಭಾವನಾತ್ಮಕ ಪ್ರತಿಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದರ ಲಾಭ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬಾರದು ಎಂಬ ಕಾರಣಕ್ಕೆ ಬಿಜೆಪಿಯ ಬಹುತೇಕ ನಾಯಕರು ಅವರ ಬಗ್ಗೆ ಟೀಕಿಸುತ್ತಿಲ್ಲ.
ಹೀಗಾಗಿ ಸದ್ಯ ಬಿಜೆಪಿಯವರ ಟೀಕೆಗೆ ಸಿಗುತ್ತಿರುವುದು ಸಿದ್ದರಾಮಯ್ಯ ಅವರು ಮಾತ್ರ ಎನ್ನುವಂತಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷವೇ ಆಗಿದೆ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮುನಿಸಿಕೊಂಡಿರುವ ಹಿರಿಯ ನಾಯಕರಾರೂ ಚುನಾವಣೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಲ್ಲದೇ ಇದ್ದಿದ್ದರೆ ಸಿದ್ದರಾಮಯ್ಯ ಅಕ್ಷರಶಃ ಏಕಾಂಗಿ ಎನ್ನುವಂತಾಗುತ್ತಿತ್ತು.
ಏಕಾಂಗಿಯಾದರೂ ಸಿದ್ದರಾಮಯ್ಯ ಅವರು ಬಿಜೆಪಿ ಮಾತ್ರವಲ್ಲ, ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಠಕ್ಕರ್ ಕೊಡುವಷ್ಟು ಪ್ರಬಲ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ರಾಜ್ಯದಲ್ಲಿ ಮುಂಚೂಣಿ ಮಾಸ್ ಲೀಡರ್ ಗಳು ಎಂದರೆ ಅದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಾತ್ರ. ಯಡಿಯೂರಪ್ಪ ಅವರಿಗೆ ಪಕ್ಷದ ನಾಯಕರು, ಸಚಿವರು ಸಾಥ್ ನೀಡುತ್ತಿದ್ದರೆ, ಸಿದ್ದರಾಮಯ್ಯ ಅವರಿಗೆ ಪಕ್ಷದ ನಾಯಕರ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದು, ಅದಕ್ಕೆ ತಕ್ಕಂತೆ ಏಕಾಂಗಿ ಸಿದ್ದರಾಮಯ್ಯ ಅವರ ಮೇಲೆಯೇ ಬಿಜೆಪಿಯ ಎಲ್ಲಾ ನಾಯಕರು ಮುಗಿಬೀಳುತ್ತಿದ್ದಾರೆ.
ಸಿದ್ದರಾಮಯ್ಯ ವರ್ಸಸ್ ಶ್ರೀರಾಮುಲು
ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಬಳಿಕ ಮಾಸ್ ಲೀಡರ್ ಎನಿಸಿಕೊಂಡಿರುವುದು ಸಚಿವ ಶ್ರೀರಾಮುಲು. ಅದರಲ್ಲೂ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರ ಕಡು ರಾಜಕೀಯ ವೈರಿ ಎಚ್.ವಿಶ್ವನಾಥ್ ಅವರನ್ನು ಹುಣಸೂರು ಕ್ಷೇತ್ರದಲ್ಲಿ ಗೆಲ್ಲಿಸುವ ಜವಾಬ್ದಾರಿಯನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಕುರುಬ ಸಮುದಾಯದಷ್ಟೇ ಜನಸಂಖ್ಯೆ ಶ್ರೀರಾಮುಲು ಅವರ ಪರಿಶಿಷ್ಟ ಪಂಗಡದವರದ್ದೂ ಇದೆ. ಹೀಗಾಗಿ ಯಡಿಯೂರಪ್ಪ ಅವರ ಜತೆಗೆ ಶ್ರೀರಾಮುಲು ಅವರನ್ನೂ ಸಿದ್ದರಾಮಯ್ಯ ಟಾರ್ಗೆಟ್ ಮಾಡಿದ್ದಾರೆ.
ಇವರಿಬ್ಬರ ವಾಕ್ಸಮರ ದಿನಕಳೆದಂತೆ ತೀವ್ರಗೊಳ್ಳುತ್ತಿದೆ. ತೀರಾ ವೈಯಕ್ತಿಕ ಮಟ್ಟಕ್ಕೂ ಇಳಿಯುತ್ತಿದೆ. ಒಬ್ಬರು ಏತಿ ಅಂದರೆ ಇನ್ನೊಬ್ಬರು ಪ್ರೇತಿ ಎನ್ನುತ್ತಿದ್ದಾರೆ. ಬಹಿರಂಗವಾಗಿ ಮಾತ್ರವಲ್ಲ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ಇವರಿಬ್ಬರು ಮಾತಿನ ಸಮರದಲ್ಲಿ ತೊಡಗಿಕೊಂಡಿದ್ದಾರೆ. ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಈ ವಾಕ್ಸಮರ ಇನ್ನೂ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಯಾರು ಏನೇನು ವಿಷಯಗಳನ್ನು ಇಟ್ಟುಕೊಂಡು ಪರಸ್ಪರ ಕಾಲೆಳೆದುಕೊಳ್ಳುತ್ತಾರೋ? ಇದರಿಂದ ಅಭ್ಯರ್ಥಿಗಳಿಗೆ ಎಷ್ಟು ಲಾಭ-ನಷ್ಟಗಳಾಗುತ್ತದೋ ಗೊತ್ತಿಲ್ಲ. ಜನರಿಗಂತೂ ಪುಕ್ಕಟೆ ಮನರಂಜನೆ ಸಿಗುವುದಂತೂ ಖಂಡಿತ.