ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮರು. ಅವರು ಮತ ನೀಡಿದರೆ ಜನಸೇವಕ ಹುಟ್ಟಿಕೊಳ್ಳುತ್ತಾನೆ. ಈ ಜನಸೇವಕ ಐದು ವರ್ಷಗಳ ಕಾಲ ಮತದಾರ ಪ್ರಭುವಿನ ಸೇವೆಯನ್ನು ಮಾಡಬೇಕಾಗುತ್ತದೆ. ಮತದಾರರಿಂದ ಆಯ್ಕೆಯಾಗಿ ಬರುವ ರಾಜಕೀಯ ಪಕ್ಷಗಳು ರಾಜ್ಯ ಅಥವಾ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಮುನ್ನಡೆಸಬೇಕಾಗುತ್ತದೆ.
ಆದರೆ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕುಲಗೆಟ್ಟು ನಾರುವ ಸ್ಥಿತಿಗೆ ಈ ರಾಜಕೀಯ ಪಕ್ಷಗಳು, ರಾಜಕಾರಣಿಗಳು ತಂದಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾರ ಪ್ರಭುವೇ ಎಂದು ಕೈಕಾಲು ಮುಗಿದು ಓಟು ಪಡೆಯುವ ರಾಜಕಾರಣಿಗಳು ನಂತರದ ಐದು ವರ್ಷಗಳ ಕಾಲ ನಾವಾಡಿದ್ದೇ ಆಟ, ಹೂಡಿದ್ದೇ ಲಗೋರಿ ಎಂಬಂತೆ ವರ್ತಿಸುತ್ತಿದ್ದಾರೆ.
ಒಂದು ಪಕ್ಷದಿಂದ ಆಯ್ಕೆ ಆಗಿ ಬರುವ ಶಾಸಕರು ಆ ಪಕ್ಷದಲ್ಲಿ ತಮಗೆ ಆರ್ಥಿಕ, ರಾಜಕೀಯ ಲಾಭ ದೊರೆಯುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಬೇರೆ ಪಕ್ಷಕ್ಕೆ ಹಾರುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಅಕ್ರಮಗಳನ್ನು ಕಾಪಿಟ್ಟುಕೊಳ್ಳಲೆಂದೇ ಅಧಿಕಾರದಲ್ಲಿರುವ ಪಕ್ಷದ ಬಾಲ ಹಿಡಿದುಕೊಂಡು ಆ ಪಕ್ಷಕ್ಕೆ ಸೇರುತ್ತಾರೆ. ಇನ್ನೂ ಶಾಸಕ ಸ್ಥಾನದ ಅವಧಿ ಇರುವಾಗಲೇ ಆ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಪಕ್ಷಾಂತರ ಮಾಡುತ್ತಿದ್ದಾರೆ.
ಅವರಿಗೆ ರಾಜೀನಾಮೆ ಎಂಬುದು ಒಂದು ರೀತಿಯ ಟಿಶ್ಯೂ ಪೇಪರ್ ಆದಂತಾಗಿದೆ. ಇದೇ ಪರಿಪಾಠ ಕರ್ನಾಟಕದಲ್ಲಿ ಈಗ ನಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ತಮ್ಮನ್ನು ಗೆಲ್ಲಿಸಿದ ಮತದಾರರು ಮತ್ತು ಪಕ್ಷಕ್ಕೆ ದ್ರೋಹ ಬಗೆದು ಆಡಳಿತಾರೂಢ ಬಿಜೆಪಿಗೆ ಸೇರಿದ್ದಾರೆ.
ಅದಕ್ಕೆ ಅವರು ಕೊಟ್ಟಿರುವ ಕಾರಣ ತಾವಿದ್ದ ಪಕ್ಷದಲ್ಲಿ ನಮಗೆ ಮಾನ್ಯತೆ ನೀಡುತ್ತಿರಲಿಲ್ಲ ಮತ್ತು ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ನಾವು ನಮ್ಮ ಕ್ಷೇತ್ರದ ಮತದಾರರ ಅಭಿಪ್ರಾಯದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಹೇಳುವ ಮೂಲಕ ಮತದಾರ ಪ್ರಭುಗಳ ಕಿವಿಗೆ ಹೂವಿಡುವ ಪ್ರಯತ್ನ ಮಾಡಿದ್ದಾರೆ.
ಆದರೆ, ಈ ಶಾಸಕರ ಹಿನ್ನೆಲೆ ಮತ್ತು ಅವರ ಅಧಿಕಾರದ ಲಾಲಸೆ ಸ್ವಭಾವವನ್ನು ಬುದ್ಧಿವಂತ ಮತದಾರರು ಗ್ರಹಿಸಿಲ್ಲವೆಂದೇನಲ್ಲ.
ಪ್ರಸ್ತುತ ಈ 17 ಶಾಸಕರ ಪೈಕಿ (ಇನ್ನಿಬ್ಬರೂ ಅನರ್ಹರೇ) ರಾಜೀನಾಮೆ ನೀಡಿದರೂ ಅನರ್ಹರು ಎಂಬ ಪಟ್ಟ ಕಟ್ಟಿಕೊಂಡು ಮತ್ತೆ ಚುನಾವಣೆ ಹೊಸ್ತಿಲಲ್ಲಿ ನಿಂತು ಮತ ಭಿಕ್ಷೆ ಎತ್ತುತ್ತಿದ್ದಾರೆ.
ಇವರಿಗೆ ಬೇಕಿತ್ತೇ ಈ ಬೃಹನ್ನಾಟಕ?
ಈ ಅನರ್ಹರು ಒಂದು ಸರ್ಕಾರವನ್ನೇ ಬೀಳಿಸಿ ಮತ್ತೊಂದು ಸರ್ಕಾರವನ್ನು ಅಸ್ತಿತ್ವಕ್ಕೆ ಬರುವಂತೆ ಮಾಡಿದ್ದಾರೆ. ಇದಕ್ಕಾಗಿ ಹಲವಾರು ಬಗೆಯ ಆಸೆ ಆಮಿಷಗಳಿಗೆ ಒಳಗಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆಯಾದರೂ, ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ನಾಯಕರು ಮತ್ತು ಈ ಅನರ್ಹ ಶಾಸಕರಿಗೇ ಗೊತ್ತು ಆ ಆಸೆ ಆಮಿಷಗಳು ಏನೆಂದು.
ಇದೇನೇ ಇರಲಿ. ಮತದಾರರ ಅಭಿಪ್ರಾಯದಂತೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುತ್ತಿರುವುದಾಗಿ ಹೇಳಿಕೊಳ್ಳುವ ಈ 15 ಅನರ್ಹರಲ್ಲಿ ಒಬ್ಬರಾದರೂ ಹೌದು ನಿಜವಾಗಿಯೂ ನಾನು ನಮ್ಮ ಕ್ಷೇತ್ರದ ಮತದಾರರ ಸಭೆ ಕರೆದು ಅವರ ಅಣತಿ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆಂದು ಎದೆ ಮುಟ್ಟಿಕೊಂಡು ಹೇಳಲಿ. ಒಬ್ಬರಿಂದಲೂ ಈ ಧೈರ್ಯ ಬರುವುದಿಲ್ಲ. ಇವರ ಪಾಲಿಗೆ ಮತದಾರರು ಎಂದರೆ ತಮ್ಮ ಬೆಂಬಲಿಗರು. ಅಲ್ಲಲ್ಲಿ ಬೆಂಬಲಿಗರ ಒಂದೆರಡು ಸಭೆಗಳನ್ನು ನಡೆಸಿ ಪಕ್ಷ ಬದಲಿಸುವ ನಿರ್ಧಾರವನ್ನು ಪ್ರಕಟಿಸುತ್ತಾರೆ. ಅದಕ್ಕೆ ಜೀ ಹುಜೂರ್ ಎಂಬಂತಿರುವ ಕಾರ್ಯಕರ್ತರು ಮತ್ತು ಬೆಂಬಲಿಗರು ಗೋಣು ಹಾಕುತ್ತಾರೆ.
ರಾಜ್ಯದ ಜನತೆ ತಲೆ ಮೇಲೆ 30 ಕೋಟಿ ಹೊರೆ!
ಈ 15 ಅನರ್ಹರು ಈಗ ಚುನಾವಣೆ ಹೊಸ್ತಿಲಲ್ಲಿ ನಿಂತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಷಾಂತರ ಮಾಡಿರುವ ಇವರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಂದರೆ ಜನತೆ ತಲೆ ಮೇಲೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಅಧಿಕ ಹೊರೆ ಬೀಳುತ್ತದೆ. ಹೌದು. ಒಂದು ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ನಡೆಸಬೇಕಾದರೆ ಕನಿಷ್ಠ ಒಂದೂವರೆಯಿಂದ ಎರಡು ಕೋಟಿ ರೂಪಾಯಿಗಳನ್ನು ಚುನಾವಣೆ ಆಯೋಗ ಖರ್ಚು ಮಾಡುತ್ತದೆ. ಹೀಗೆ ಲೆಕ್ಕ ಹಾಕಿದರೆ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಕನಿಷ್ಠ 30 ಕೋಟಿ ರೂಪಾಯಿ ಹಣವನ್ನು ವ್ಯಯಿಸಬೇಕಾಗುತ್ತದೆ. ಇಷ್ಟೊಂದು ಹಣ ಯಾರದ್ದು? ನಮ್ಮ ರಾಜ್ಯದ ಜನರ ತೆರಿಗೆ ಹಣ!
ಚುನಾವಣೆಗೆ ತಯಾರಿಗೆ, ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣೆ ಸಿಬ್ಬಂದಿಗೆ ಕನಿಷ್ಠ ಎರಡು ದಿನಗಳ ತರಬೇತಿ, ಚುನಾವಣೆ ಹಿಂದಿನ ದಿನ ಚುನಾವಣೆ ಸಿಬ್ಬಂದಿಗೆ ವಾಸ್ತವ್ಯ, ಇಂಕು, ಪೋಸ್ಟರ್ ಗಳು ಸೇರಿದಂತೆ ಮುದ್ರಣ ಸಾಮಗ್ರಿಗಳಿಗೆ, ಚುನಾವಣೆಗೆ ಸಂಬಂಧಿಸಿದ 25 ರಿಂದ 30 ಅರ್ಜಿಗಳು ಮತ್ತು ಕಿರುಹೊತ್ತಗೆಗಳನ್ನು ಮುದ್ರಣ ಮಾಡುವುದು, ಚುನಾವಣಾ ಸಿಬ್ಬಂದಿಗೆ ಊಟೋಪಚಾರ, ಚುನಾವಣೆ ಕಾರ್ಯಕ್ಕೆ ಮತ್ತು ಭದ್ರತೆಗೆ ಬಳಸಿಕೊಳ್ಳಲು ವಾಹನಗಳನ್ನು ಬಾಡಿಗೆ ಪಡೆಯುವುದು, ಚುನಾವಣೆ ಆದ ಬಳಿಕ ಮತಗಳ ಎಣಿಕೆ ದಿನದ ಎಲ್ಲಾ ಖರ್ಚುಗಳು ಹೀಗೆ ಹಲವಾರು ಬಗೆಯ ಖರ್ಚು-ವೆಚ್ಚಗಳಿಗಾಗಿ ಆಯೋಗ ಕೋಟ್ಯಂತರ ರೂಪಾಯಿ ಹಣವನ್ನು ವಿನಿಯೋಗಿಸುತ್ತದೆ.
ಈ ಹಣವನ್ನು ಚುನಾವಣೆ ಆಯೋಗವೇ ನೀಡುತ್ತದಾದರೂ ರಾಜ್ಯ ಸರ್ಕಾರ ಈ ಹಣವನ್ನು ಆಯೋಗಕ್ಕೆ ಬಿಡುಗಡೆ ಮಾಡುತ್ತದೆ.
ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣವೊಡ್ಡಿ ರಾಜೀನಾಮೆ ನೀಡಿರುವ ಈ ಅನರ್ಹರು ಚುನಾವಣೆ ವೆಚ್ಚವಾಗಿ ಪ್ರತಿ ಕ್ಷೇತ್ರಕ್ಕೆ ಮಾಡಲಾಗುತ್ತಿರುವ ತಲಾ 2 ಕೋಟಿ ರೂಪಾಯಿ ಹಣದಲ್ಲಿ ತಮ್ಮ ಕ್ಷೇತ್ರದ ಕನಿಷ್ಠ ಐದಾರು ಗ್ರಾಮಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿಸಬಹುದಿತ್ತು.
ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಿಂದ ನೆರೆ ಬಂದು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಅವರು ನಡೆಸುತ್ತಿರುವ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸ್ವೇಚ್ಛೆಯ ದೊಂಬರಾಟ ನಡೆಸುವ ಮೂಲಕ ಸಂತ್ರಸ್ತ ಜನರನ್ನೇ ಮರೆತ್ತಿದ್ದಾರೆ.
ಅದೇನೋ ದೊಡ್ಡದಾಗಿ ನಾವು ಸರ್ಕಾರವನ್ನು ಅಸ್ತಿರಗೊಳಿಸುವುದಿಲ್ಲ, ಆಪರೇಷನ್ ಕಮಲ ಮಾಡುವುದೇ ಇಲ್ಲ ಎಂದು ಹೇಳಿಕೊಳ್ಳುತ್ತಾ ಬಂದಿದ್ದ `ಶಿಸ್ತುಬದ್ಧ’ ಪಕ್ಷ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಿಜೆಪಿ ಅದೇ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿತು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಠೀಂಕರಿಸಿದ್ದ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿವರೆಗೆ ಆಪರೇಷನ್ ಕಮಲದ ಬಾಲ ಹಿಡಿದುಕೊಂಡೇ ಓಡಾಡುತ್ತಿದ್ದಾರೆಯೇ ಹೊರತು ನೆರೆ ಸಂತ್ರಸ್ತರ ಗೋಳು ಕೇಳುವ ಗೋಜಿಗೆ ಹೋಗಿಲ್ಲ. ಅದರ ಬದಲಾಗಿ ಅಧಿಕಾರಕ್ಕೆ ಬರುವಂತೆ ಮಾಡಿದ `ಅನರ್ಹ’ರ ಹೊಟ್ಟೆ ತುಂಬಿಸುವತ್ತ ಗಮನ ಹರಿಸಿದ್ದಾರೆ.
ಕಳೆದ ಮೂರು ತಿಂಗಳಿಂದಲೂ ಒಣ ರಾಜಕೀಯ ಮಾಡುತ್ತಲೇ ಬಂದಿರುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ದೊಂಬರಾಟ ಇನ್ನೂ ಒಂದು ತಿಂಗಳು ನಡೆಯುತ್ತದೆ. ಇದಾದ ಬಳಿಕ ಇರುವ ಮೂರು ಪಕ್ಷಗಳು ಪರಸ್ಪರ ಕಾಲೆಳೆಯುವುದರಲ್ಲೇ ಮಗ್ನವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಮುಂದಿನ ಮೂರೂವರೆ ವರ್ಷಗಳ ಕಾಲ ಕಳೆಯುತ್ತವೆ. ಅಲ್ಲಿಗೆ ಮತ ಕೊಟ್ಟ ಮತದಾರನ ಪರಿಸ್ಥಿತಿ ಅಯೋಮಯ. ಮತ್ತೆ ಚುನಾವಣೆ ಬರುತ್ತದೆ, ಅದರೊಟ್ಟಿಗೆ ದೊಂಬರಾಟವೂ ಬರುತ್ತದೆ. ಇದು ನಿರಂತರ…..!