ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಅನರ್ಹ ಶಾಸಕರ ಋಣ ತೀರಿಸುವುದು ಬಿಜೆಪಿಗೆ ಅಷ್ಟು ಸುಲಭದ ಮಾತಲ್ಲ.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆಗೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೊಳ್ಳುತ್ತಲೇ ಆರಂಭದಲ್ಲಿ ತೆರೆಮರೆಯಲ್ಲೇ ಆಪರೇಷನ್ ಕಮಲವನ್ನು ಶುರುವಿಟ್ಟುಕೊಂಡಿದ್ದ ಬಿಜೆಪಿ ನಾಯಕರು ಬೆಂಗಳೂರಿನಿಂದ ಮುಂಬೈಗೆ ಶಾಸಕರನ್ನು ರಾಜಾರೋಷವಾಗಿ ಹೊತ್ತೊಯ್ದಿದ್ದದ್ದು ರಾಜ್ಯ ರಾಜಕೀಯದ ಇತಿಹಾಸ ಪುಟಗಳನ್ನು ಸೇರಿದ್ದಾಯ್ತು.
ಇನ್ನು ಬಿಜೆಪಿಯ ಕೇಂದ್ರ ನಾಯಕತ್ವ ಸದ್ದು ಗದ್ದಲವಿಲ್ಲದೇ ಲಕ್ಷ್ಮಣ ಸವದಿ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಂತಹ ಭಾರೀ ಕುಳಗಳನ್ನು ಮುಂದೆ ಬಿಟ್ಟು ಆಪರೇಷನ್ ಕಮಲವನ್ನು ಯಶಸ್ವಿಯಾಗಿಸಿತು. ಅದಕ್ಕೆ ಪ್ರತಿಯಾಗಿ ಈ ಇಬ್ಬರಿಗೂ ಡಿಸಿಎಂ ಪಟ್ಟವನ್ನು ಕರುಣಿಸಿತು.
ಆದರೆ, ಆಪರೇಷನ್ ಕಮಲವನ್ನು ನಾವು ಮಾಡುವುದೇ ಇಲ್ಲ ಎಂದು ಮೇಲಿಂದ ಮೇಲೆ ಕೇಂದ್ರ ಬಿಜೆಪಿ ನಾಯಕರು ಹೇಳಿಕೆ ಕೊಟ್ಟಿದ್ದ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅನರ್ಹ ಶಾಸಕರ ಗುಂಪು ನೇರವಾಗಿ ಆರ್ ಎಸ್ಎಸ್ ಪ್ರಭಾವದಲ್ಲಿರುವ ರಾಜ್ಯದವರೇ ಆದ ಹಿರಿಯ ನಾಯಕರ ಮನೆಯಲ್ಲಿ ಸಭೆ ನಡೆಸಿದ್ದನ್ನು ಗಮನಿಸಿದರೆ ಈ ಆಪರೇಷನ್ ಕಮಲದ ಹಿಂದೆ ಬಿಜೆಪಿಯ ರಾಷ್ಟ್ರೀಯ ನಾಯಕರು ಇದ್ದರು ಎಂಬುದು ಸ್ಪಷ್ಟವಾಗುತ್ತದೆ.
ಇದೇನೇ ಇರಲಿ. ಆಪರೇಷನ್ ಮಾಡುವುದಿಲ್ಲ ಎಂದು ಹೇಳುತ್ತಲೇ ಆಪರೇಷನ್ ಕಮಲ ಮಾಡಿ ಸುಲಭವಾಗಿ ಅಧಿಕಾರದ ಗದ್ದುಗೆಗೇರಿರುವ ಬಿಜೆಪಿ ನಾಯಕರಿಗೆ ಮುಂದಿನ ಹಾದಿ ಸುಗಮವಾಗಿದೆಯೇ ಎಂಬುದನ್ನು ಇಲ್ಲಿ ಗಮನಿಸಿದರೆ, ಹಾದಿ ಮತ್ತಷ್ಟು ಕಠಿಣವಾಗುವುದರಲ್ಲಿ ಅನುಮಾನವಿಲ್ಲ.
ಪ್ರಧಾನಿ ನರೇಂದ್ರ ಮೋದಿ ಹವಾದಲ್ಲಿಯೇ ನಾವು ಚುನಾವಣೆಯನ್ನು ಗೆಲ್ಲಬಹುದೆಂಬ ಇರಾದೆಯಲ್ಲಿ ರಾಜ್ಯ ನಾಯಕರಿದ್ದಾರೆ. ಆದರೆ, ಈಗ ನಡೆಯಲಿರುವ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಿಜವಾಗಿಯೂ ನರೇಂದ್ರ ಮೋದಿ ಅವರ ಅಲೆ ಮೋಡಿ ಮಾಡಲಿದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಿಜೆಪಿ ಪಾಲಿಗೆ ಅತ್ತ ದರಿ ಇತ್ತ ಪುಲಿಯಂತಾಗಿರುವುದು ಸತ್ಯ. ಏಕೆಂದರೆ, ಒಂದು ವೇಳೆ ಸುಪ್ರೀಂ ಕೋರ್ಟ್ ಸ್ಪೀಕರ್ ನೀಡಿದ ಆದೇಶದಂತೆ ಅನರ್ಹತೆ ಜತೆಗೆ ಎಲ್ಲಾ 17 ಶಾಸಕರನ್ನು 2023 ರ ವಿಧಾನಸಭೆ ಚುನಾವಣೆವರೆಗೆ ಸ್ಪರ್ಧಿಸುವುದನ್ನು ನಿಷೇಧಿಸಿದ್ದರೆ ಸುಲಭವಾಗಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕಿತ್ತು. ಆಗ ಮಂತ್ರಿ ಮಂಡಲದಲ್ಲಿ ಆರ್ಹರಿಗೆ ಮಂತ್ರಿಗಿರಿಯನ್ನು ನೀಡಿ ಕೈತೊಳೆದುಕೊಳ್ಳಬಹುದಿತ್ತು. ಆದರೆ, ಇವರೆಲ್ಲರೂ ಅನರ್ಹರಾದರೂ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹಸಿರು ನಿಶಾನೆ ತೋರಿರುವುದರಿಂದ ಎಲ್ಲರನ್ನೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮತ್ತು ಅವರೆಲ್ಲರಿಗೂ ಮಂತ್ರಿ ಸ್ಥಾನ ಮತ್ತು ಪ್ರತಿಷ್ಠಿತ (ಹುಲ್ಲುಗಾವಲಿನಂತಿರುವ) ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲೇಬೇಕಿದೆ.
ಹಾಗಾದರೆ, ಎಲ್ಲಾ 17 ಮಂದಿಯೂ ಗೆದ್ದು ಬಂದಾದಲ್ಲಿ ಅವರೆಲ್ಲರಿಗೂ ಮಂತ್ರಿ ಸ್ಥಾನ ನೀಡಲು ಸಾಧ್ಯವೇ? ರಾಜ್ಯ ಸಚಿವ ಸಂಪುಟ ಗಾತ್ರವೇ 34 ಜನರಿಗೆ ಸೀಮಿತವಾಗಿದೆ. ಹೀಗಿರುವಾಗ 17 ಜನರಿಗೆ ಮಂತ್ರಿ ಸ್ಥಾನ ಕೊಟ್ಟರೆ ತಮ್ಮ ತಮ್ಮ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ನೀರು ಗೊಬ್ಬರ ಹಾಕಿ ಪಕ್ಷವನ್ನು ಕಟ್ಟಿ ಬೆಳೆಸಿ ಶಾಸಕರಾಗಿ ಬಂದಿರುವ ಮೂಲ ಬಿಜೆಪಿಗರಿಗೆ ಅಂದರೆ 105 ಮಂದಿ ಶಾಸಕರ ಪೈಕಿ ಇನ್ನುಳಿದ 17 ಮಂತ್ರಿ ಸ್ಥಾನಗಳನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.
ಹೀಗಾಗಿ, ಬಿಜೆಪಿ ಆಂತರ್ಯದ ಮಾತುಗಳಲ್ಲಿ ಹೇಳುವುದಾದರೆ ಸದ್ಯಕ್ಕೆ ನಮಗೆ ಅಗತ್ಯವಿರುವ 8-10 ಮಂದಿ ಮಾತ್ರ ಗೆದ್ದು ಬಂದರೆ ಸಾಕು. ಹೇಗೋ ಹಾಗೆ ಅಧಿಕಾರದ ಉಳಿದ ಅವಧಿಯನ್ನು ಮುಗಿಸಿಕೊಳ್ಳಬಹುದು. ಇಂತಹ ಅಲೋಚನೆಗಳು ಬಿಜೆಪಿಯಲ್ಲಿ ಆಂತರಿಕವಾಗಿ ನಡೆಯುತ್ತಿವೆ.
ಬಿಜೆಪಿಯ ಈ ಆಲೋಚನೆಯಂತೆ ನಡೆದು ಫಲಿತಾಂಶ ಬಂದರೆ ರಾಜೀನಾಮೆ ಕೊಡುವ ಮುನ್ನ ನಡೆದ ಮಾತುಕತೆಯಂತೆ ಕನಿಷ್ಠ 10 ಮಂತ್ರಿ ಸ್ಥಾನಗಳನ್ನು ಈ ಅನರ್ಹ ಶಾಸಕರಿಗೆ ನೀಡಲಾಗುತ್ತದೆ. ಇನ್ನುಳಿದಂತೆ ಸೋಲನುಭವಿಸುವವರಿಗೆ ಕೆಲವೊಂದು ನಿಗಮ ಮಂಡಳಿಯಲ್ಲಿ ಸ್ಥಾನ ಕೊಟ್ಟು ಕೈತೊಳೆದುಕೊಳ್ಳಲಾಗುತ್ತದೆ.
ಹಲವು ದಶಕಗಳಿಂದ ಸಂಘಪರಿವಾರದೊಂದಿಗೆ ಒಡನಾಟ ಇಟ್ಟುಕೊಂಡು ಬಿಜೆಪಿಯನ್ನು ಕಟ್ಟಿ ಬೆಳೆಸಿಕೊಂಡು ಬಂದು ಕನಿಷ್ಠ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ 56 ಮಂದಿ ಬಿಜೆಪಿಯಲ್ಲಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿರುವ ಮೂಲ ಬಿಜೆಪಿ ನಾಯಕರನ್ನು ಕಡೆಗಣಿಸಲು ಸಾಧ್ಯವಾಗಲಾರದು. ಒಂದು ವೇಳೆ ಕಡೆಗಣಿಸಿದರೆ ಅವರಲ್ಲಿ ಕೆಲವರು ಬಂಡಾಯವೇಳುವುದನ್ನು ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕತ್ವ ಚುನಾವಣೆಯಲ್ಲಿ ಗೆದ್ದು ಬರುವ 10 ಮಂದಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿಯುವ ನಾಲ್ಕು ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ಹಂಚಿಕೆ ಮಾಡಲಿದೆ. ಅಲ್ಲದೇ, ಈಗಿರುವ ಮಂತ್ರಿಗಳಲ್ಲಿ ಕೆಲವರಿಂದ ರಾಜೀನಾಮೆ ಪಡೆದು ಬಂಡಾಯ ಏಳಬಹುದಾದ ಮತ್ತೆ ಕೆಲವು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನವನ್ನು ಕೊಡುವ ಸಾಧ್ಯತೆಗಳಿವೆ.
ಚುನಾವಣೆ ಸುಲಭವೇ?
ಇಷ್ಟೆಲ್ಲಾ ಹೊಂದಾಣಿಕೆ ನಡುವೆ ನಡೆಯಲಿರುವ ಉಪಚುನಾವಣೆ ಬಿಜೆಪಿಗೆ ಸುಲಭದ ತುತ್ತಾಗಲಿದೆಯೇ? ಕೆಲವೊಂದು ಕ್ಷೇತ್ರಗಳಲ್ಲಿ ಸುಲಭದ ತುತ್ತಾದರೂ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಬೆವರಿಳಿಸಲೇಬೇಕಾಗುತ್ತದೆ. ಏಕೆಂದರೆ, ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಕಾಂಗ್ರೆಸ್/ಜೆಡಿಎಸ್ ಅಭ್ಯರ್ಥಿ ಪರವಾಗಿಯೇ ಈ ಉಪಚುನಾವಣೆಯಲ್ಲಿ ಕೆಲಸ ಮಾಡಲು ಕೆಲವು ಪರಾಜಿತ ಬಿಜೆಪಿ ಅಭ್ಯರ್ಥಿಗಳು ಒಪ್ಪಲಾರರು. ಹಾಗೊಂದು ವೇಳೆ ಪಕ್ಷದ ನಾಯಕತ್ವದ ಆದೇಶಕ್ಕೆ ಕಟ್ಟು ಬಿದ್ದು ಒಪ್ಪಿದರಾದರೂ ಚುನಾವಣೆ ಪ್ರಚಾರದ ವೇಳೆ ಅಥವಾ ಮತದಾನದ ವೇಳೆ ತಮ್ಮ `ಆಟ’ವನ್ನು ಪ್ರದರ್ಶಿಸಬಹುದು.
ಈಗಾಗಲೇ ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರು ತಮ್ಮ ವರಸೆ ತೋರಿಸಿಯಾಗಿದೆ. ಅಲ್ಲಿ ಸ್ಥಳೀಯ ರಾಜಕಾರಣ ಮೇಳೈಸಿದ್ದು ತಮ್ಮ ಮಗ ಶರತ್ ಬಚ್ಚೇಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಎಂ.ಟಿ.ಬಿ.ನಾಗರಾಜ್ ವಿರುದ್ಧ ಕಣಕ್ಕಿಳಿಸಿದ್ದಾರೆ. ಇಂತಹ ಪ್ರಕರಣಗಳು ಇನ್ನೂ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಕಂಡುಬರಲಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಲಿದೆ.
ಮೋದಿ ಹವಾಕ್ಕೇನು ಕೆಲಸ?
ಅಂದ ಹಾಗೆ ಬಿಜೆಪಿಯಲ್ಲಿ ಬಹುತೇಕ ನಾಯಕರು ಪ್ರಧಾನಿ ನರೇಂದ್ರ ಮೋದಿ ಜಪ ಮಾಡುತ್ತಿದ್ದಾರೆ. ಯಾರನ್ನು ಪಕ್ಷದಿಂದ ಕಣಕ್ಕಿಳಿಸಿದರೂ ಪ್ರಧಾನಿ ಮುಖ ನೋಡಿ ಮತದಾರರು ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲವೂ ಕಳೆದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಂತೆಯೇ ಆಗುತ್ತದೆ ಎಂದು ಭಾವಿಸಿದಂತಿದೆ.
ಆದರೆ, ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ ಎಂಬುದನ್ನು ಮರೆತಂತಿದೆ. ವಿಧಾನಸಭೆ ಚುನಾವಣೆ ಸ್ಥಳೀಯ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ.
ಹಾಗೊಂದು ವೇಳೆ ಮೋದಿ ಹವಾ ಇದ್ದಿದ್ದರೆ ಹರ್ಯಾಣದಲ್ಲಿ ಬಿಜೆಪಿಗೆ ಉಪಚುನಾವಣೆಯಲ್ಲಿ ಹಿನ್ನಡೆಯಾಗುತ್ತಿರಲಿಲ್ಲ. ಅಲ್ಲಿಯೂ ಆಪರೇಷನ್ ಕಮಲ ಮಾಡಿದ್ದ ಬಿಜೆಪಿಗೆ ಮತದಾರರು ತಕ್ಕ ಶಾಸ್ತಿ ಮಾಡಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾಗಿ ಬೇರೆ ಬೇರೆ ಪಕ್ಷಗಳಿಂದ ಬಂದಿದ್ದ 11 ಮಂದಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರಾದರೂ ಗೆದ್ದದ್ದು ಏಕೈಕ ಅಭ್ಯರ್ಥಿ ಮಾತ್ರ!
ಇಲ್ಲಿ ಮೋದಿಗಿಂತ ಹೆಚ್ಚಾಗಿ ಸ್ಥಳೀಯ ವಿಚಾರಗಳು ಲೆಕ್ಕಕ್ಕೆ ಬರುತ್ತವೆ. ರಾಜೀನಾಮೆ ಕೊಟ್ಟು ಚುನಾವಣೆಗೆ ಕಾರಣರಾಗಿರುವ 17 ಮಂದಿ ಕ್ಷೇತ್ರಗಳ ಪೈಕಿ 7 ಕ್ಕೂ ಹೆಚ್ಚು ಕ್ಷೇತ್ರಗಳು ಉತ್ತರ ಕರ್ನಾಟಕ ಭಾಗಕ್ಕೆ ಸೇರಿವೆ. ಇಲ್ಲಿ ಕಳೆದ ಎರಡು ತಿಂಗಳಿಂದ ಮಳೆ ಇನ್ನಿಲ್ಲದಂತೆ ಜನರನ್ನು ಕಾಡುತ್ತಲೇ ಇದೆ. ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ಜನರ ಸಂಕಷ್ಟಕ್ಕೆ ಸರ್ಕಾರ ಬಂದಿಲ್ಲ ಎಂಬ ಆಕ್ರೋಶ ಎಲ್ಲೆಡೆ ಮನೆ ಮಾಡಿದೆ. ಉತ್ತರ ಕರ್ನಾಟಕದ್ದು ಈ ಕತೆಯಾದರೆ, ಉಳಿದ ಕ್ಷೇತ್ರಗಳಲ್ಲಿ ಅವುಗಳದ್ದೇ ಆದ ಜಟಿಲ ಸಮಸ್ಯೆಗಳಿವೆ. ಈ ಕ್ಷೇತ್ರಗಳ ಮತದಾರರು ತಮ್ಮ ಜನಪ್ರತಿನಿಧಿಯನ್ನು ನೋಡದೇ ಎರಡು ತಿಂಗಳುಗಳೇ ಆಗಿವೆ. ಹೀಗಾಗಿ ಸಮಸ್ಯೆಗಳು ಉಲ್ಬಣಗೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುವಂತಹ ಪರಿಸ್ಥಿತಿ ಎದುರಾಗಿದೆ.
ಹೀಗಾಗಿ ಬಿಜೆಪಿಗೆ ಚುನಾವಣೆ ಗೆಲ್ಲುವುದೆಂದರೆ ಆಪರೇಷನ್ ಕಮಲ ಮಾಡಿದಷ್ಟೇ ಸುಲಭವಲ್ಲ.
ಕಾಂಗ್ರೆಸ್ ಮೈಚಳಿ ಬಿಟ್ಟರೆ ಕಮಲಕ್ಕೆ ಆಘಾತ!
ಇನ್ನು ಆಪರೇಷನ್ ಕಮಲದ ಅಪವಾದ ಹೊತ್ತು ಚುನಾವಣೆ ಎದುರಿಸುತ್ತಿರುವ ಅನರ್ಹ ಶಾಸಕರು ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ತಮಗಿರುವ ಮೈಚಳಿ ಮತ್ತು ಸ್ವಪ್ರತಿಷ್ಠೆಯನ್ನು ಬಿಟ್ಟು ಚುನಾವಣೆ ಅಖಾಡಕ್ಕಿಳಿದರೆ ಚುನಾವಣೆಯನ್ನು ಬಿಜೆಪಿಗೆ ಮತ್ತಷ್ಟು ಕಠಿಣವನ್ನಾಗಿಸಬೇಕಾಗಿದೆ.
ಪರಸ್ಪರ ಕಾಲೆಳೆಯುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ ಒಗ್ಗಟ್ಟಿನಿಂದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಬಹುದು. ಒಂದು ವೇಳೆ ಹೀಗೆ ವರ್ತಿಸದಿದ್ದಲ್ಲಿ ಬಿಜೆಪಿಗೆ ಹಣ್ಣು ಕಾಯಿ ಕೊಟ್ಟು ಅದರ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾಂಗ್ರೆಸ್ ನ ನಾಯಕರೇ ಪರೋಕ್ಷವಾಗಿ ಕಾರಣರಾಗಬೇಕಾಗುತ್ತದೆ!