ಕೊಡಗು ಜಿಲ್ಲೆ ಗುಡ್ಡ ಗಾಡು ಪ್ರದೇಶ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ವಾರ್ಷಿಕ ಮಳೆಯ ಪ್ರಮಾಣವೂ ಜಾಸ್ತಿ. ತಂಪಾದ ಹವಾಗುಣ ಹೊಂದಿರುವ ಕೊಡಗು, ಇಲ್ಲಿನ ಮೈಕೊರೆಯುವ ಚಳಿಯಿಂದಲೇ ಹೆಸರುವಾಸಿ ಆಗಿದೆ. ಈ ಹವಾಗುಣದಿಂದಲೋ ಏನೋ ಇಲ್ಲಿ ಮದ್ಯದ ಬಳಕೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ. ಇಲ್ಲಿನ ಮನೆಗಳಲ್ಲಿ ಸಾಮಾನ್ಯವಾಗಿ ಒಂದೋ ಎರಡೋ ಬಾಟಲ್ ಮದ್ಯ ಇಟುಕೊಳ್ಳುವುದು ಇಲ್ಲಿನ ಮೂಲನಿವಾಸಿಗಳ ಸಂಪ್ರದಾಯವೇ ಆಗಿದೆ. ಅಲ್ಲದೆ ಸಂಜೆ ನಂತರ ಯಾರ ಮನೆಗಾದರೂ ತೆರಳಿದರೆ ಕಾಫಿ ಟೀ ಬದಲು ಮದ್ಯವನ್ನೇ ಆಪರ್ ಮಾಡುವುದೂ ಇಲ್ಲಿನ ಸಂಸ್ಕ್ರತಿ. ಅಲ್ಲದೆ ನಾಮಕರಣ, ಮದುವೆ, ತಿಥಿ ಇಂತಹ ಕೌಟುಂಬಿಕ ಸಮಾರಂಭಗಳಲ್ಲಿ ಕೂಡ ಮದ್ಯವನ್ನು ಅತಿಥಿಗಳಿಗೆ ನೀಡಿ ಸತ್ಕರಿಸಲಾಗುತ್ತದೆ. ಇದು ಇಲ್ಲಿನ ಸಂಪ್ರದಾಯವೂ ಹೌದು.
ವೀರರ ನಾಡಾದ ಕೊಡಗಿನಲ್ಲಿ ಸುಮಾರು 6 ರಿಂದ 8 ಸಾವಿರದಷ್ಟು ನಿವೃತ್ತ ಸೈನಿಕರು ಮತ್ತು ಅಧಿಕಾರಿಗಳಿದ್ದಾರೆ. ಇವರಿಗೆ ದಿನಬಳಕೆಯ ಅಗತ್ಯ ವಸ್ತುಗಳನ್ನು ತೆರಿಗೆ ರಹಿತವಾಗಿ ಸರಬರಾಜು ಮಾಡಲು ಆರ್ಮಿ ಕ್ಯಾಂಟೀನ್ ಕೂಡ ಇದೆ. ಇಲ್ಲಿ ತೆರಿಗೆ ರಹಿತ ಮದ್ಯವನ್ನೂ ನೀಡಲಾಗುತ್ತಿದೆ. ಒಂದು ಬಾಟಲ್ ಮೆಕ್ ಡುವೆಲ್ ಬ್ರಾಂಡಿಯ ದರ ಲಿಕ್ಕರ್ ಅಂಗಡಿಗಳಲ್ಲಿ 650 ರೂಪಾಯಿಗಳಾಗಿದ್ದರೆ ಆರ್ಮಿ ಕ್ಯಾಂಟೀನ್ ನಲ್ಲಿ ಇದನ್ನು ನೂರು ರೂಪಾಯಿಗಳಿಗೇ ವಿತರಿಸಲಾಗುತ್ತಿದೆ. ಹಾಗಾಗಿ ಈ ಮದ್ಯ ಮದ್ಯಪ್ರಿಯರ ಅಚ್ಚುಮೆಚ್ಚು. ತಿಂಗಳಿಗೆ ಒಬ್ಬ ಸೈನಿಕನಿಗೆ ಮೂರು ಬಾಟಲ್ ಗಳಷ್ಟು ಮದ್ಯ ನೀಡಲಾಗುತ್ತದೆ. ಇದನ್ನು ಸಂಗ್ರಹಿಸಿಟ್ಟುಕೊಳ್ಳ್ಳುವ ಮಾಜಿ ಸೈನಿಕ ತನ್ನ ಮನೆಯಲ್ಲಿ ನಡೆಯುವ ಮದುವೆ, ನಾಮಕರಣ, ತಿಥಿ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ ಇದನ್ನು ಅತಿಥಿ ಸತ್ಕಾರಕ್ಕೆ ಬಳಸಿಕೊಳ್ಳುವುದು ವಾಡಿಕೆ.
ಆದರೆ ಕಳೆದ ಅಕ್ಟೋಬರ್ 23 ರಂದು ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಅವರು ಸುತ್ತೋಲೆಯೊಂದನ್ನು ಹೊರಡಿಸಿದ್ದು ರಕ್ಷಣಾ ಇಲಾಖೆಯಿಂದ ಸರಬರಾಜಾಗುವ ಮದ್ಯವನ್ನು ಮತ್ತು ಗೋವಾ ದಿಂದ ತರಲಾದ ಮದ್ಯವನ್ನು ಸಮಾರಂಭಗಳಲ್ಲಿ ಬಳಸದಂತೆ ಮತ್ತು ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇದು ಜಿಲ್ಲೆಯ ಮದ್ಯ ಪ್ರಿಯರ ಕಣ್ಣು ಕೆಂಪಗಾಗಿಸಿದೆ. ಈ ಸುತ್ತೋಲೆಗೆ ಜಿಲ್ಲೆಯ ಹತ್ತಾರು ಮಾಜಿ ಸೈನಿಕರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರತಿಧ್ವನಿಯೊಂದಿಗೆ ಮಾತನಾಡಿದ ಜಿಲ್ಲಾ ಮಾಜಿ ಸೈನಿಕರ ಸಂಘದ ಅದ್ಯಕ್ಷ ಮೇಜರ್ ಜನರಲ್ ನಿವೃತ್ತ ಬಿ ಏ ಕಾರಿಯಪ್ಪ ಅವರು “ತಮ್ಮ ದೀರ್ಘ ಕಾಲದ ಸೇವೆಗೆ ಸರ್ಕಾರ ನೀಡಿರುವ ಸವಲತ್ತು ತೆರಿಗೆ ರಹಿತ ವಸ್ತುಗಳು. ಇದನ್ನು ನಿತ್ಯ ಮನೆಯಲ್ಲಿ ಬಳಸದೇ ತನ್ನ ಮಗಳ ಮದುವೆಗೆ ಬಂದ ಅತಿಥಿಗಳಿಗೆ ನೀಡುವುದು ಹೇಗೆ ಕಾನೂನಿನ ಉಲ್ಲಂಘನೆ ಆಗುತ್ತದೆ ಎಂದು ಪ್ರಶ್ನಿಸುತ್ತಾರೆ.
ಸೋಮವಾರಪೇಟೆ ಮಾಜಿ ಸೈನಿಕರ ಸಂಘದ ಅದ್ಯಕ್ಷ ಈರಪ್ಪ ಅವರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. “ಅಬಕಾರಿ ಇಲಾಖೆಯು ಮದ್ಯ ವರ್ತಕರಿಂದ ಬಂದಿರುವ ದೂರಿನ ಮೇರೆಗೆ ರಕ್ಷಣಾ ಮದ್ಯವನ್ನು ಸಭೆ ಸಮಾರಂಭಗಳಲ್ಲಿ ನಿರ್ಬಂಧಿಸುವುದಾದರೆ, ಮದ್ಯದ ಅಂಗಡಿಯವರೇ ಕಾನೂನು ಉಲ್ಲಂಘಿಸಿ ಚಿಲ್ಲರೆ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸುವುದು ಯಾವಾಗ” ಎಂದು ಪ್ರಶ್ನಿಸುತ್ತಾರೆ. ಕೊಡಗಿನ ಬಹುತೇಕ ಎಲ್ಲ ಮದ್ಯದ ಅಂಗಡಿಗಳಲ್ಲೂ ಚಿಲ್ಲರೆ ಮದ್ಯವನ್ನು ರಾಜಾ ರೋಷವಾಗೇ ಮಾರಾಟ ಮಾಡಲಾಗುತ್ತಿದೆ. ಹೀಗಿರುವಾಗ ಕೇವಲ ಮಾಜಿ ಸೈನಿಕರಿಗೆ ತೊಂದರೆ ಆಗುವಂತೆ ಸುತ್ತೋಲೆ ಹೊರಡಿಸುವುದು ಸರಿಯಲ್ಲ ಎಂದು ಅವರು ಹೇಳುತ್ತಾರೆ. ಇಂದು ಸರ್ಕಾರ ಮದ್ಯದ ಮೇಲೆ ಯದ್ವಾ ತದ್ವಾ ತೆರಿಗೆ ಹಾಕಿದ್ದು ಮದ್ಯ ವಿಪರೀತ ದುಬಾರಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದ್ಯಮ ವರ್ಗದ ಮಾಜಿ ಸೈನಿಕರಿಗೆ ರಕ್ಷಣಾ ಇಲಾಖೆಯ ಮದ್ಯವೇ ಕೌಟುಂಬಿಕ ಸಮಾರಂಭಗಳಿಗೆ ಬಳಕೆ ಮಾಡುವುದು ಎಷ್ಟೋ ಅನುಕೂಲಕಾರಿ. ಇಂದಿನ ಕಾಲದಲ್ಲಿ ಮಾಜಿ ಸೈನಿಕನೊಬ್ಬ ದುಬಾರಿ ಬೆಲೆಯ ಮದ್ಯ ನೀಡಿ ಅತಿಥಿ ಸತ್ಕರ ಸಾದ್ಯವಿದೆಯೇ ಎಂದು ಪ್ರಶ್ನಿಸುತ್ತಾರೆ.
ಈ ಕುರಿತು ಅಬಕಾರಿ ಜಿಲ್ಲಾಧಿಕಾರಿ ಬಿಂದು ಶ್ರೀ ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ ಜಿಲ್ಲೆಯ ಮದ್ಯ ವರ್ತಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಈ ರೀತಿ ಆದೇಶ ಹೊರಡಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಅಲ್ಲದೆ ಕೌಟುಂಬಿಕ ಸಮಾರಂಭಗಳಲ್ಲಿ ಅಗ್ಗದ ದರದ ಗೋವಾದಲ್ಲಿ ಉತ್ಪಾದನೆ ಆಗಿರುವ ಮದ್ಯವನ್ನೂ ಬಳಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು ಇದರಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಅಪಾರ ಪ್ರಮಾಣದ ತೆರಿಗೆ ನಷ್ಟವಾಗುತ್ತಿದೆ. ಅಲ್ಲದೆ, ಹೊರ ರಾಜ್ಯದಿಂದ ನಕಲಿ ಮದ್ಯವೂ ಸರಬರಾಜಾಗುವ ಸಾಧ್ಯತೆ ಇದೆ. ಇಂತಹ ನಕಲಿ ಮದ್ಯ ಕುಡಿದು ಜನರು ಮೃತರಾದರೆ ಪುನಃ ದೂಷಿಸುವುದು ಅಬಕಾರಿ ಇಲಾಖೆಯನ್ನೇ ಅಲ್ಲವೇ ಹಾಗಾಗಿ ರಕ್ಷಣಾ ಮತ್ತು ಹೊರರಾಜ್ಯದ ಮದ್ಯ ವಿತರಿಸಲು ನಿರ್ಭಂದಿಸಲಾಗಿದ್ದು ತಮ್ಮ ಮನೆಗಳಲ್ಲಿ ಸೇವನೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದರು.
ಅಲ್ಲದೆ ರಕ್ಷಣಾ ಮತ್ತು ಹೊರ ರಾಜ್ಯದ ಮದ್ಯ ವಿತರಣೆ ಮಾಡುವ ಸ್ಥಳದ ಮಾಲೀಕರ ವಿರುದ್ದ ಮೊಕದ್ದಮೆ ದಾಖಲಿಸಲಾಗುವುದು. ಅಲ್ಲದೆ, ಅಂತಹ ಕಲ್ಯಾಣ ಮಂಟಪದ ಲೈಸನ್ಸ್ ರದ್ದುಗೊಳಿಸಲೂ ಶಿಫಾರಸು ಮಾಲಾಗುವುದು ಎಂದು ಎಚ್ಚರಿಸಿದರು.
ಒಟ್ಟಿನಲ್ಲಿ ಅಬಕಾರಿ ಇಲಾಖೆಯ ನೂತನ ಸುತ್ತೋಲೆ ಇಲ್ಲಿನ ಸಂಪ್ರದಾಯಕ್ಕೆ ಒಂದಷ್ಟು ಧಕ್ಕೆ ತಂದಿದೆ ಎನ್ನುವುದು ಸತ್ಯ.