ಮೊದಲೆಲ್ಲಾ ಮಲೆನಾಡು ಎಂದರೆ ಅಡಕೆ ನಾಡು ಎಂದಷ್ಟೇ ಅನ್ವರ್ಥಕವಾಗಿತ್ತು, ಆದರೆ ದಶಕಗಳ ಹಿಂದೆಯೇ ಲಗ್ಗೆ ಇಟ್ಟ ಶುಂಠಿ ಬೆಳೆ ರೈತರಿಗೆ ಲಾಭ ಮಾಡಿಕೊಟ್ಟಿದ್ದು ಇಂದಿಗೂ ಲಾಟರಿ ಬೆಳೆ ಎಂದೇ ಕರೆಯಲ್ಪಡುತ್ತಿದೆ. ಕೇರಳದ ಎರವಲು ಬೆಳೆ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಹಾವೇರಿ ಹಾಗೂ ದಾವಣಗೆರೆಯಲ್ಲೂ ಘಾಟು ಹೊಡೆಸುತ್ತಿದೆ, ಮೂರು ವರ್ಷಗಳಿಂದ ಬಂಪರ್ ಬೆಲೆಯನ್ನೇ ನೀಡುತ್ತಿದೆ. ಶುಂಠಿ ಬೆಳೆಯನ್ನ ಮಳೆ ಹಾಳುಗೆಡವಿದರೂ ದರಕ್ಕೇನು ಕಡಿಮೆಯಾಗಿಲ್ಲ. ಸದ್ಯ ಕ್ವಿಂಟಾಲ್ ಶುಂಠಿ ನಾಲ್ಕುವರೆ ಸಾವಿರ ರೂಪಾಯಿ ಮುಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ತಿಂಗಳ ಮೊದಲೇ ಬೆಲೆ ಏರಿಕೆಯಾಗಿದೆ. ಮೂರು ತಿಂಗಳವರೆಗೆ ದಾಸ್ತಾನಿಟ್ಟರೆ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರ ಹಾಗೂ ಬೀಜದ ಶುಂಠಿಗೆ ಮೂರು ಪಟ್ಟಾಗಬಹುದು ಎಂಬ ಅಂದಾಜು ರೈತರು ಹಾಗೂ ದಲ್ಲಾಳಿಗಳಿಗಿದೆ. ಆದರೂ ಕಾಪಿಡುವಂತಿಲ್ಲ..!
ಆಗಸ್ಟ್ ಮಹಾಮಳೆ ಮಲೆನಾಡಿನ ಎಲ್ಲಾ ವಾಣಿಜ್ಯ ಬೆಳೆಗಳಿಗೆ ಮಾರಕವಾದರೆ ಸೆಪ್ಟಂಬರ್‌ನಿಂದ ಶುರುವಾದ ಅಕಾಲಿಕ ಮಳೆ ಹಾಗೂ ಬದಲಾಗುತ್ತಿರುವ ವಿಚಿತ್ರ ವಾತಾವರಣ ಈ ಬೆಳೆಗಳನ್ನ ಮರಣಶ್ಯಯದಲ್ಲಿ ಮಲಗಿಸಿದೆ, ಅಡಕೆ, ಜೋಳ, ಭತ್ತದ ಜೊತೆ ಶುಂಠಿ ಬೆಳೆಗಾರರೂ ಕೂಡ ಸಾಕಷ್ಟು ಪೆಟ್ಟು ತಿಂದಿದ್ದಾರೆ, ಮಳೆ ಹೋಗಿ ಬಿಸಿಲು ಬಂತು ಎಂದುಕೊಂಡಿದ್ದವರಿಗೆ ಸದ್ಯ ಶೀತವಾತಾವರಣ ಹಾಗೂ ದಿಢೀರ್ ಮಳೆ ಚಿಂತೆಗೀಡುಮಾಡಿದೆ. ಆಗಸ್ಟ್‌ನಿಂದ ಶುಂಠಿಗೆ ನಿಧಾನವಾಗಿ ಹಳದಿಕೊಳೆ ತಗಲಿತ್ತು, ಹತ್ತಾರು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದವರು ಆತಂಕದದಲ್ಲಿ ಹಸಿ ಶುಂಠಿಯನ್ನು ಕಿತ್ತು ಕೊಡಲಾರಂಭಿಸಿದರು, ಆಗ ಶುಂಠಿ ಬೆಲೆ ಎರಡು ಸಾವಿರಂದಚಿನಲ್ಲಿತ್ತು. ಪುನಃ ಮಲೆನಾಡಿನಲ್ಲಿ ಮಧ್ಯರಾತ್ರಿವರೆಗೆ ಗುಡುಗು ಸಿಡಿಲಿನ ಆರ್ಭಟ ಏಳುತ್ತಿದ್ದಂತೆ ಸಣ್ಣ ಹಿಡುವಳಿದಾರರೂ ಕೂಡ ಶಿಕಾರಿಪುರ, ಸೊರಬದಿಂದ ಗುತ್ತಿಗೆ ಆಧಾರದಲ್ಲಿ ಜನರನ್ನ ತರಿಸಿ ಕೀಳಲಾರಂಭಿಸಿದ್ದಾರೆ.
ಆದರೂ ಶುಂಠಿ ದರ ಏರುಗತಿಯಲ್ಲೇ ಇದೆ ಅಂದರೆ ಮಾರುಕಟ್ಟೆಗೆ ಬರುವ ಶುಂಠಿ ಪ್ರಮಾಣ ಕಡಿಮೆ ಇದೆ ಎಂದೇ ಅರ್ಥ. ಶುಂಠಿಯನ್ನ ಹತ್ತು ತಿಂಗಳ ಕಾಲ ಭೂಮಿಯಲ್ಲಿಯೇ ಬಿಡಬಹುದು, ಸಾಮಾನ್ಯವಾಗಿ ನವೆಂಬರ್ ತಿಂಗಳಂತ್ಯಕ್ಕೆ ಶುಂಠಿ ಚೆನ್ನಾಗಿದ್ದರೆ ಹಸಿರಾಗಿ ಹೊರಹೊಮ್ಮಿದ ಶುಂಠಿಯ ಮೇಲೆ ತೆಳು ಮಣ್ಣು ಹಾಕಿ ಸಂಕ್ರಾಂತಿ ಹಬ್ಬದವರೆಗೆ ಇಡುವುದು ವಾಡಿಕೆ. ಕಳೆದ ವರ್ಷ ಬೀಜದ ಶುಂಠಿ ವಹಿವಾಟಿನ ಸಮಯ ಫ್ರೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಎಂಟರಿಂದ ಹತ್ತು ಸಾವಿರ ಕ್ವಿಂಟಾಲ್‌ಗೆ ಖರೀದಿಯಾಗಿತ್ತು. ಈ ವರ್ಷ ಈ ಬೆಲೆ ಇನ್ನಷ್ಟು ಏರಿಕೆಯಾಗಲಿದ್ದು ಹದಿನೈದು ಸಾವಿರ ಮುಟ್ಟಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಮಧ್ಯವರ್ತಿಗಳು. ಮಾರುಕಟ್ಟೆಯನ್ನ ಅಂದಾಜಿಸಿ ಆಸೆಗಣ್ಣಿನಿಂದ ನೋಡಲಾಗದು, ಸದ್ಯ ಸಾಕಷ್ಟು ಜಮೀನಿನಲ್ಲಿ ಶುಂಠಿಯನ್ನ ಭೂಮಿಯಲ್ಲಿಡಲು ಸಾಧ್ಯವಾಗದ ಸ್ಥಿತಿ ಇದೆ. ಮಾರಣಾಂತಿಕ ಮಳೆಯ ಆದಿಯಲ್ಲಿ ಹಸಿರುಕೊಳೆ ಬಾಧಿಸಿದರೆ ಈಗ ಹಳದಿಕೊಳೆ, ಗಡ್ಡೆಸಣಿಸುವಿಕೆ, ಎಲೆಬಾಡುವ ರೋಗಗಳೆಲ್ಲಾ ರೈತರನ್ನ ಕಂಗಾಲು ಮಾಡಿವೆ.
ಮಧ್ಯ ಏಷ್ಯಾ ಶುಂಠಿಯ ಮೂಲವೆಂದು ಕರೆದರೂ ಭಾರತದಲ್ಲಿ ಅದರ ವ್ಯಾಪ್ತಿ ಹೆಚ್ಚೇ ಇದೆ. ಅತೀಹೆಚ್ಚು ಶುಂಠಿ ಬೆಳೆಯುವ ರಾಜ್ಯಗಳು ಮೇಘಾಲಯ ಹಾಗೂ ಕೇರಳ. ಭೌಗೋಳಿಕವಾಗಿ ವೈನಾಡು ಹಾಗೂ ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಪೂರಕವಾದ ವಾತಾವರಣವಿದೆ. ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮ ರಾಜ್ಯಕ್ಕೆ ಶುಂಠಿ ಎರವಲು ಬೆಳೆ. ಇದು ಕೇರಳಿಗರ ಕೊಡುಗೆ. ವಿಪರ್ಯಾಸ ಎಂದರೆ ಅವರಿಗಿಂತಲೂ ಅಧಿಕ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದ್ದೇವೆ. ಕೇರಳದವರು ರಬ್ಬರ್ ಪ್ಲಾಂಟೇಷನ್ ಹೆಸರಲ್ಲಿ ಕಾಡನ್ನ ನಿರ್ನಾಮ ಮಾಡಿ ಅದರ ಮಧ್ಯೆ ಮಡಿಗಳಲ್ಲಿ ವಿದೇಶಿ ಮಾದರಿಯಲ್ಲಿ ಔಷಧೋಪಚಾರ ಮಾಡಿ ಶುಂಠಿ ಬೆಳೆದರು. ನಿವೃತ್ತ ಅಧಿಕಾರಿಗಳು, ಶ್ರೀಮಂತರು, ವಿದೇಶದಲ್ಲಿ ಹಣ ಮಾಡಿಕೊಂಡವರು ಭೂಮಿಗಾಗಿ ಮಲೆನಾಡು ಭಾಗಕ್ಕೆ ವಲಸೆ ಬಂದರು. ಖಾತೆ ಹಾಗೂ ಅರಣ್ಯ ದಂಚಿನ ಉತ್ಕೃಷ್ಟ ಭೂಮಿಯನ್ನ ಭೋಗ್ಯಕ್ಕೂ ಪಡೆದು ಶುಂಠಿ ಬೆಳೆದರು. ಕೆಲವಡೆ ಬಗರ್‌ಹುಕುಂ ಜಮೀನಿನನ್ನ ಒಂದು ವರ್ಷದ ಅವಧಿಗೆ ಬಾಡಿಗೆ ಪಡೆದು ಅಲ್ಲಿ ಬೋರ್‌ವೆಲ್ ಕೊರೆಸಿ ಅದನ್ನ ರೈತರಿಗೇ ಬಿಟ್ಟುಕೊಡುವ ಆಮಿಷ ತೋರಿಸಿ ಸೈ ಎನಿಸಿಕೊಂಡರು, ಹಾಗೆಯೇ ಭೂಮಿ ಬರಡಾಗಿಸಿದರು.
ಈ ಬೆಳೆ ನಿಧಾನವಾಗಿ ಮಲೆನಾಡಿನ ರೈತರನ್ನ ಆಕರ್ಷಿಸಿತು, ವರ್ಷ ಮುಗಿದ ಮೇಲೆ ಅವರಿಂದಲೇ ಬೀಜ ಪಡೆದು ಉಳಿದ ಜಾಗಕ್ಕೆ ಕೃಷಿ ಮಾಡುತ್ತಾ ಬಂದರು, ಈಗ ಶುಂಠಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ವ್ಯಾಪಿಸಿಕೊಂಡಿದೆ. ಕೇರಳದಲ್ಲಿ ಶುಂಠಿ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಕಾರಣ ಕೆಲಸಗಾರರು ಸಿಗುತ್ತಿಲ್ಲ, ಭೂಮಿ ಬೆಲೆ ಹೆಚ್ಚಾಗಿದೆ, ಔಷಧೋಪಚಾರದಿಂದ ಭೂಮಿ ಬರಡಾಗುತ್ತೆ ಎಂದು ಬೆಳೆಗಾರರಿಗೆ ನೀಡುತ್ತಿಲ್ಲ, ಆದರೆ ಇಲ್ಲಿ ಇಪ್ಪತ್ತು ಮೂವತ್ತು ಎಕರೆಯಲ್ಲಿ ಬೆಳೆದವರೂ ಇದ್ದಾರೆ. ಮಧ್ಯಪ್ರಾಚ್ಯಕ್ಕೆ ರಫ್ತಾಗುವ ಶುಂಠಿಗೆ ಬಹಳ ಬೇಡಿಕೆ ಇದೆ, ಅದರಲ್ಲೂ ಕೊಚ್ಚಿ ಶುಂಠಿ ಅಂತರ್ಜಾಲದಲ್ಲೂ ಮಾರಾಟವಾಗುತ್ತೆ, ಇಷ್ಟಾದರೂ ನಾವು ಜಗತ್ತಿನಲ್ಲಿ ಶುಂಠಿ ಬೇಡಿಕೆಯ ಮೂರನೇ ಒಂದರಷ್ಟನ್ನ ಮಾತ್ರ ಪೂರೈಸುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು. ಸದ್ಯ ರಾಜ್ಯದಲ್ಲಿ ಕೂರ್ಗ್, ಮಲೆನಾಡು ಹಾಗೂ ಹಾವೇರಿಯಲ್ಲಿ ಶುಂಠಿ ಬೆಳೆ ಇದೆ.