ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಒಟ್ಟಾಗಿ ಹೋರಾಡಬೇಕಿದ್ದ ಕಾಂಗ್ರೆಸ್, ಜೆಡಿಎಸ್ ಸಂಬಂಧ ಹಳಸಿದೆ. ಬಿಜೆಪಿಗೆ ತಿರುಗೇಟು ನೀಡುವ ಶಕ್ತಿ ಹೊಂದಿರುವ ಕಾರಣದಿಂದಾದರೂ ಕಾಂಗ್ರೆಸ್ ಗಟ್ಟಿಯಾಗಿ ನಿಂತು ಹೋರಾಟ ನಡೆಸಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದ್ದು, ರಾಜಕೀಯ ಸಮರದ ಸೇನಾಪತಿ ಸ್ಥಾನಗಳನ್ನು ಅಲಂಕರಿಸುವವರೇ ಪರಸ್ಪರ ಕಿತ್ತಾಡಿಕೊಂಡು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.
ಕಳೆದೆರಡು ದಿನಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಈ ರೀತಿಯ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಸೇನಾಪತಿ ಸ್ಥಾನಕ್ಕಾಗಿ ಪಕ್ಷದಲ್ಲಿ ನಡೆಯುತ್ತಿರುವ ಪೈಪೋಟಿ ಪಕ್ಷ ಗಟ್ಟಿಗೊಳಿಸುವ ಬದಲು ಬುಡಕ್ಕೇ ಕೊಡಲಿಪೆಟ್ಟು ಹಾಕುವಂತಿದೆ. ಅದರ ಬದಲು ಮೂಲ ಕಾಂಗ್ರೆಸ್ ಮತ್ತು ಬೆರಕೆ ಕಾಂಗ್ರೆಸ್ ಎಂಬ ಎರಡು ಬಣಗಳು ಗಟ್ಟಿಯಾಗುತ್ತಿವೆ. ಈಗಾಗಲೇ ರಾಷ್ಟ್ರೀಯ ಕಾಂಗ್ರೆಸ್ ಮಾಸ್ ಲೀಡರ್ ಇಲ್ಲದೆ ಸೋತು ಸುಣ್ಣಾಗುತ್ತಿದ್ದರೆ, ರಾಜ್ಯದಲ್ಲೂ ಅಂತಹದ್ದೇ ಸ್ಥಿತಿ ತಲುಪುವ ಹಂತಕ್ಕೆ ಹೋಗುವ ಲಕ್ಷಣ ಕಾಣಿಸುತ್ತಿದೆ.
ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ (ಇಡಿ) ಕುಣಿಕೆಯಲ್ಲಿ ಸಿಲುಕಿ ಒದ್ದಾಡುತ್ತಿರುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಗುವ ರೀತಿ ಮುಂದುವರಿಯುತ್ತಿರುವುದು. ಇದರ ಮಧ್ಯೆ ಮುಂಚೂಣಿ ನಾಯಕರಾಗಲು ಪೈಪೋಟಿ ನಡೆಸುತ್ತಿರುವವರು ಶಕ್ತಿಯಿಲ್ಲದಿದ್ದರೂ ಇನ್ನೊಬ್ಬರ ಶಕ್ತಿ ಕುಂದಿಸಿ ಮುನ್ನಲೆಗೆ ಬರಲು ಒದ್ದಾಡುತ್ತಿರುವುದು.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎರಡು ಶಕ್ತಿ ಕೇಂದ್ರಗಳಿವೆ. ಅದರಲ್ಲಿ ಒಂದು ಸಿದ್ದರಾಮಯ್ಯ ಆದರೆ, ಮತ್ತೊಂದು ಡಿ. ಕೆ. ಶಿವಕುಮಾರ್. ಪಕ್ಷದಲ್ಲಿ ಜನ ಸೇರಿಸುವ, ತಾವಾಗಿಯೇ ಜನರು ಬರುವಂತೆ ಮಾಡುವ ನಾಯಕರು ಇವರಿಬ್ಬರು ಮಾತ್ರ. ಉಳಿದ ನಾಯಕರು ಇದ್ದಾರಾದರೂ ಅವರಿಗೆ ಮಾಸ್ ಲೀಡರ್ ಎಂಬ ಹಣೆಪಟ್ಟಿ ಧರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಕಳೆದ ನಾಲ್ಕೈದು ವರ್ಷದಿಂದ ಕಾಂಗ್ರೆಸ್ ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದುದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ಮಾತ್ರ. ಕೆಪಿಸಿಸಿ ಅಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು ಯಾರೇ ಇರಲಿ, ಇವರಿಬ್ಬರ ಮಾತುಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಆಗಲೂ ಮೂಲ ಕಾಂಗ್ರೆಸ್ ಮತ್ತು ಬೆರಕೆ ಕಾಂಗ್ರೆಸ್ ಇದ್ದರೂ ಅವರಿಬ್ಬರ ಪೈಪೋಟಿಯಲ್ಲಿ ಅದು ಎದ್ದು ಕಾಣುತ್ತಿರಲಿಲ್ಲ.
ಸಿದ್ದರಾಮಯ್ಯ ಸ್ವಯಂಕೃತಾಪರಾಧವೇ ಕಾರಣವೇ?
ಇದಕ್ಕೆ ಸಿದ್ದರಾಮಯ್ಯ ಅವರ ಸ್ವಯಂಕೃತಾಪರಾಧವೂ ಕಾರಣ ಎನ್ನಬಹುದು. ಡಿ. ಕೆ. ಶಿವಕುಮಾರ್ ಅವರು ಇಡಿ ಕುಣಿಕೆಯಲ್ಲಿ ಸಿಕ್ಕಿಕೊಂಡ ಮೇಲೆ ಅವರು ಏಕಮೇವ ನಾಯಕರಾಗಲು ಹೊರಟಿರುವುದು ಮೂಲ ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೈತ್ರಿ ಸರ್ಕಾರ ಉರುಳಲು ಕಾರಣರಾದವರು ಸಿದ್ದರಾಮಯ್ಯ ಅವರ ಸುತ್ತ ಮುತ್ತ ಓಡಾಡುತ್ತಿದ್ದವರು. ಇದು ಒಂದೆಡೆಯಾದರೆ, ಕೋಲಾರದಲ್ಲಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೇಂದ್ರದ ಮಾಜಿ ಸಚಿವ ಕೆ. ಎಚ್. ಮುನಿಯಪ್ಪ ಕಳೆದ ಲೋಕಸಬೆ ಚುನಾವಣೆಯಲ್ಲಿ ಸೋಲಲು ಕಾರಣವಾಗಿದ್ದು ಕೂಡ ಇದೇ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದವರು. ಮೈಸೂರು, ಮಂಡ್ಯ ಭಾಗದಲ್ಲಿ ಸಿದ್ದರಾಮಯ್ಯ ಪ್ರಭಾವಿ ನಾಯಕರಾದರೂ ಆ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ದಕ್ಕಲಿಲ್ಲ. ಅಷ್ಟೆಲ್ಲಾ ಆದರೂ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಯಾರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವಕಾಶ ನೀಡಿರಲಿಲ್ಲ.
ಈಗಲೂ ಮೌನವಾಗಿದ್ದರೆ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿಯಾಗಬಹುದು ಎಂಬ ಕಾರಣಕ್ಕೆ ಇವೆಲ್ಲವೂ ಈಗ ಹೊರಬರುತ್ತಿದೆ. ಹೊರಗಿನಿಂದ ಬಂದವರು ನಮ್ಮಲ್ಲಿ ಮೆರೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಸಮರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರ ಪರಿಣಾಮವೇ ಗುರುವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಕೆ. ಎಚ್. ಮುನಿಯಪ್ಪ ಮತ್ತು ಬಿ. ಕೆ. ಹರಿಪ್ರಸಾದ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದು. ಏಕವಚನದಲ್ಲಿ ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದು.
ಲೋಕಸಭೆ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಹಿರಂಗವಾಗಿಯೇ ಕೆ. ಎಚ್. ಮುನಿಯಪ್ಪ ಅವರಿಗೆ ತಿರುಗಿ ಬಿದ್ದಿದ್ದರು. ಇತರ ಕೆಲವರು ಕೂಡ ತಿರುಗಿ ಬಿದ್ದಿದ್ದರಾದರೂ ಅವರೆಲ್ಲರ ನಾಯಕತ್ವ ವಹಿಸಿಕೊಂಡಿದ್ದು ರಮೇಶ್ ಕುಮಾರ್. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆ. ಎಚ್. ಮುನಿಯಪ್ಪ ಅವರು ಕೆಪಿಸಿಸಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು. ಆದರೆ, ರಮೇಶ್ ಕುಮಾರ್ ವಿರುದ್ಧ ಕ್ರಮ ಜರುಗಿಸುವ ಬದಲು ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರನ್ನು ಜತೆಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಇಂದ್ರ, ಚಂದ್ರ ಎಂದೆಲ್ಲಾ ಹೊಗಳುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕೆ. ಎಚ್. ಮುನಿಯಪ್ಪ ವಾಗ್ದಾಳಿ ನಡೆಸಲು ಇದುವೇ ಮುಖ್ಯ ಕಾರಣವಾಗಿತ್ತು. ಇದಕ್ಕೆ ಬಿ. ಕೆ. ಹರಿಪ್ರಸಾದ್ ಅವರಿಂದ ಸಾಥ್ ಸಿಕ್ಕಿತ್ತು.
ಇನ್ನು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಕೂಡ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರುತ್ತಾ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಹತ್ತಿರವಾಗಿದ್ದ ಮತ್ತು ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊಂದಿದ್ದ ಡಾ. ಪರಮೇಶ್ವರ್ ಅವರಿಗೆ ಇದರಿಂದ ಇನ್ನಷ್ಟು ಶಕ್ತಿ ಬಂದಂತಾಗಿದೆ. ಆದರೆ, ನೇರವಾಗಿ ಸಿದ್ದರಾಮಯ್ಯ ಅವರನ್ನು ಎದುರಿಸಿ ಗೆಲ್ಲುವ ಶಕ್ತಿ ಮತ್ತು ಧೈರ್ಯ ಅವರಲ್ಲಿ ಇಲ್ಲ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಯಾರೆಲ್ಲಾ ಸೆಟೆದು ನಿಲ್ಲುತ್ತಾರೋ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇವೆಲ್ಲಕ್ಕೂ ಕಾರಣ ಸಿದ್ದರಾಮಯ್ಯ ಅವರ ಸ್ವಯಂಕೃತಾಪರಾಧವೇ ಹೊರತು ಬೇರೇನೂ ಅಲ್ಲ. ಏಕೆಂದರೆ, ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷದ ಹಿರಿಯ ನಾಯಕರನ್ನೆಲ್ಲಾ ಬದಿಗಿಟ್ಟು ಕೆಲವು ಶಾಸಕರ ಗುಂಪು ಕಟ್ಟಿಕೊಂಡರೆ ನಾಯಕು ಎಷ್ಟು ದಿನ ಎಂದು ಸುಮ್ಮನಿರಲು ಸಾಧ್ಯ? ಇದರ ಪರಿಣಾಮವೇ ಈಗಿನ ಅಸಮಾಧಾನ ಸ್ಫೋಟ.
ಪಕ್ಷ ಎಂದ ಮೇಲೆ ಇಂತಹ ಗಲಾಟೆ, ಗದ್ದಲ ಇದ್ದದ್ದೇ ಹೌದಾದರೂ ರಾಜ್ಯದಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಿ ನಿಲ್ಲಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮಲ್ಲೇ ಪರಸ್ಪರ ಹೊಡೆದಾಡಿಕೊಂಡರೆ ಪಕ್ಷದ ಸ್ಥಿತಿ ಏನಾದೀತು? ಇಬ್ಬರು ‘ಮಾಸ್ ಲೀಡರ್’ಗಳ ಪೈಕಿ ಡಿ. ಕೆ. ಶಿವಕುಮಾರ್ ಇಡಿ ಬಲೆಯಲ್ಲಿ ಒದ್ದಾಡುತ್ತಿರುವಾಗ ಉಳಿದಿರುವ ಸಿದ್ದರಾಮಯ್ಯ ವಿರುದ್ಧ ಏಕಾಏಕಿ ಸಮರ ಸಾರಿ ಅವರನ್ನು ಏಕಾಂಗಿಯಾಗಿ ದೂರವಿಟ್ಟರೆ ನಾಳೆ ಬಿಜೆಪಿ ವಿರುದ್ಧ ಜನ ಸೇರಿಸುವವರು ಯಾರು?
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಲ್ಪ ಮಟ್ಟಿಗೆ ಈ ಸಾಮರ್ಥ್ಯ ಇದೆಯಾದರೂ ಜಾತಿ, ವಯಸ್ಸು ಮತ್ತಿತರೆ ಕಾರಣಗಳು ಮುಂಚೂಣಿ ನಾಯಕರಾಗಿ ನಿಲ್ಲಲು ಸಹಕರಿಸುವುದಿಲ್ಲ. ಇನ್ನು ಡಾ. ಪರಮೇಶ್ವರ್, ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್ ಅವರಾರಿಗೂ ಪಕ್ಷ ಸಂಘಟಿಸುವ ಶಕ್ತಿ ಇಲ್ಲ. ಹೀಗಿರುವಾಗ ಹೈಕಮಾಂಡ್ ಮೂಲಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಬದಲು ನೇರವಾಗಿ ಅವರೊಂದಿಗೆ ಜಗಳಕ್ಕಿಳಿದರೆ ಅದರ ಪರಿಣಾಮವನ್ನು ಮೂಲ ಕಾಂಗ್ರೆಸ್ಸಿಗರು ಸೇರಿದಂತೆ ಪಕ್ಷ ಎದುರಿಸಬೇಕಾಗುತ್ತದೆ. ಬಿಜೆಪಿಗೆ ಬೇಕಾಗಿರುವುದು ಕೂಡ ಅದೇ ಆಗಿದೆ. ಕಾಂಗ್ರೆಸ್ ನಲ್ಲಿ ಒಡಕು ಸೃಷ್ಟಿಯಾಗಬೇಕು ಎಂಬ ಬಿಜೆಪಿ ಬಯಕೆಯನ್ನು ಕಾಂಗ್ರೆಸ್ ತಾನಾಗಿಯೇ ಫಲ, ತಾಂಬೂಲದೊಂದಿಗೆ ನೀಡುತ್ತಿದೆ.