ರಾಜ್ಯದಲ್ಲಿ ಚಳಿಗಾಲದ ವಾತಾವರಣ ನಿಧಾನವಾಗಿ ಆರಂಭವಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಬೆಳಗಿನ ಜಾವ ಚಳಿ ಮತ್ತು ಮಂಜು ಆವರಿಸುತ್ತಿದೆ. ರಾಜಧಾನಿ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಂಪಿನ ಅನುಭವ ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 4.7 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ.
ಸೋಮವಾರ ರಾಜ್ಯದ 15 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆಯಾಗಿ ದಾಖಲಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು, ಇದು ಸಾಮಾನ್ಯಕ್ಕಿಂತ 4.7 ಡಿಗ್ರಿ ಕಡಿಮೆಯಾಗಿದೆ. ಗದಗದಲ್ಲಿ ಕನಿಷ್ಠ 15.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ವಾಡಿಕೆಗಿಂತ 4.1 ಡಿಗ್ರಿ ಕಡಿಮೆಯಾಗಿದೆ.
ಇನ್ನು ಧಾರವಾಡದಲ್ಲಿ 15.4 ಡಿಗ್ರಿ, ಬೆಳಗಾವಿಯಲ್ಲಿ 15.6 ಡಿಗ್ರಿ, ಬಾಗಲಕೋಟೆಯಲ್ಲಿ 16.5 ಡಿಗ್ರಿ ಹಾಗೂ ರಾಯಚೂರಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಳಗಿನ ಜಾವ ಚಳಿ ಹೆಚ್ಚಾಗುತ್ತಿರುವುದರಿಂದ ಜನರು ಬೆಚ್ಚಗಿನ ಉಡುಪುಗಳ ಮೊರೆ ಹೋಗುತ್ತಿದ್ದಾರೆ.

ಮುಂದಿನ ಏಳು ದಿನಗಳ ಹವಾಮಾನ ಹೇಗಿರಲಿದೆ?
ಮುಂದಿನ ಏಳು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬೆಳಗಿನ ವೇಳೆಯಲ್ಲಿ ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಹಗಲಿನಲ್ಲಿ ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ತಿಳಿಸಿದೆ.
ಈ ವರ್ಷದ ಚಳಿಗಾಲದಲ್ಲಿ ಚಳಿಯ ತೀವ್ರತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಇರಬಹುದು ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಎಲ್ನಿನೊ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ವೇಳೆ ಚಳಿಗಾಲದಲ್ಲಿಯೂ ತೀವ್ರ ಚಳಿ ಕಂಡುಬರುವ ಸಾಧ್ಯತೆ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.

ಹಿಂಗಾರು ಮಳೆಯ ಅವಧಿಯ ಈ ತಿಂಗಳ ಮಳೆ ಬಹುತೇಕ ಮುಕ್ತಾಯಗೊಂಡಿದ್ದು, ನವೆಂಬರ್ ಎರಡನೇ ವಾರದವರೆಗೆ ರಾಜ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದೆ ಎಂದು ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಬೆಳಗಿನ ಜಾವ ಚಳಿ ಹೆಚ್ಚಾಗಿ ಅನುಭವಕ್ಕೆ ಬಂದರೂ, ಹಗಲಿನ ವೇಳೆಯಲ್ಲಿ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬೆಳಗಿನ ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯುವ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳ ಬಗ್ಗೆ ಜನರು ಗಮನಹರಿಸುವುದು ಅಗತ್ಯವಾಗಿದೆ.






