• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬುದ್ಧ ಬೇಕು ! ಏಕೆ-ಹೇಗೆ-ಯಾರಿಗೆ ?

ಶಾಂತಿ ಸಹನೆ ಸಂಯಮ ನಿಶ್ಶೇಷವಾಗುತ್ತಿರುವ ಕಾಲಘಟ್ಟದಲ್ಲಿ ಬುದ್ಧನ ಕೂರಿಸುವುದೆಲ್ಲಿ ?

ಪ್ರತಿಧ್ವನಿ by ಪ್ರತಿಧ್ವನಿ
October 27, 2026
in Top Story, ವಿಶೇಷ
0
We need the Buddha! Why—how—for whom?
Share on WhatsAppShare on FacebookShare on Telegram

ಭಾಗ 2

ADVERTISEMENT

ಬುದ್ಧ ಮಾರ್ಗದ ಸಿಕ್ಕುಗಳು

ಅಷ್ಟಾಂಗ ಮಾರ್ಗ-ಪಂಚಶೀಲ ತತ್ವಗಳನ್ನು ಒಪ್ಪಿಕೊಂಡು, 22 ಪ್ರತಿಜ್ಞಾ ವಿಧಿಗಳನ್ನು ಸ್ವೀಕರಿಸಿದರೆ ವ್ಯಕ್ತಿಯ ಧಾರ್ಮಿಕ-ಸಾಮಾಜಿಕ ಅಸ್ಮಿತೆ ಬದಲಾಗುತ್ತದೆ. ಆದರೆ ವ್ಯಕ್ತಿಯೊಳಗೆ ಹುಟ್ಟಿದ ದಿನದಿಂದಲೂ ಪ್ರಯೋಗಿಸಲ್ಪಡುವ ಆಚರಣೆಗಳು, ವಿಧಿ ವಿಧಾನಗಳು, ಕೌಟುಂಬಿಕ ನಂಬಿಕೆಗಳು, ಹಿರಿಯ ತಲೆಮಾರಿನ ಶ್ರದ್ಧೆ ವಿಶ್ವಾಸಗಳು ಇವೆಲ್ಲವೂ ಸ್ವ-ಪ್ರಜ್ಞೆಯಿಂದ ವರ್ಜಿಸಬೇಕಾದ ಧೋರಣೆಗಳು. ಇಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆ ವ್ಯಕ್ತಿಗತ ನೆಲೆಯಲ್ಲಿ ಆಳಕ್ಕಿಳಿಯಬೇಕು. ನಾಸ್ತಿಕತೆಯನ್ನು ಒಪ್ಪದೆ ಬೌದ್ಧನಾಗುವುದೆಂದರೆ ಅದು ಕವಲು ಹಾದಿಯಾಗುತ್ತದೆಯೇ ಹೊರತು, ಬುದ್ಧ ಬೋಧಿಸಿದ ನಿರ್ವಾಣದ ಮಾರ್ಗ ಆಗುವುದಿಲ್ಲ. ದೈವ ನಂಬಿಕೆ ಎನ್ನುವುದು ಪ್ರತಿಮೆ-ಮೂರ್ತಿಗಳ ಮುಖಾಂತರ ವ್ಯಕ್ತವಾದರೂ, ಮೂಲತಃ ಅದರ ಬೇರು ವ್ಯಕ್ತಿಯ ಜೀವನಶೈಲಿಯಲ್ಲಿರುತ್ತದೆ. ಹಾಗಾಗಿ ಸಾಮಾನ್ಯ ಜನರು ತಾವು ಹುಟ್ಟಿ ಬೆಳೆದ ಕೌಟುಂಬಿಕ ಪರಿಸರ ಮತ್ತು ಅಲ್ಲಿನ ಆಚರಣೆಗಳನ್ನು ಮೈಗೂಡಿಸಿಕೊಂಡೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸಹಜ. ವ್ರತ, ಶ್ರಾದ್ಧ, ಪಿಂಡದಾನ, ತಿಥಿ ಮೊದಲಾದ ಆಚರಣೆಗಳು ಪ್ರಭಾವಿಸುವುದು ಇಲ್ಲಿ.

ಈ ಕಾರಣಕ್ಕಾಗಿಯೇ ನಾವು ಬುದ್ಧನನ್ನು ಸಂತೆಯಲಿ ನಿಂತ ಕಬೀರನ ಹಾಗೆ ನೋಡಬೇಕು. ಡಾ. ಟಿ. ಪದ್ಮಶ್ರೀ ತಮ್ಮ ಲೇಖನದಲ್ಲಿ ಹೇಳುವಂತೆ “ ಇಂದು ನಾವು ಬುದ್ಧನನ್ನು ಅಂಬೇಡ್ಕರರ ಕಣ್ಣೋಟದಿಂದಲೇ ನೋಡಬೇಕಿದೆ.” (ಪುಟ 31 ಸಂವಾದ ಪತ್ರಿಕೆ ಅಕ್ಟೋಬರ್ 2026). ಆದರೆ ಹೀಗೆ ನೋಡುವಾಗ ಡಾ. ಅಂಬೇಡ್ಕರ್ ತಮ್ಮ ʼ ಬುದ್ಧ ಅಂಡ್ ಹಿಸ್ ಧಮ್ಮ ʼ ಕೃತಿಯಲ್ಲಿ “ ಧರ್ಮಗ್ರಂಥಗಳು ದೋಷಾತೀತವೆಂದು ನಂಬುವುದು ಧರ್ಮವಲ್ಲ ” ಎಂದು ಹೇಳಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ದೋಷಾತೀತವಾಗಿ ಕಾಣುವ ಯಾವುದೇ ಗ್ರಂಥ ಪ್ರಶ್ನಾತೀತವೂ ಆಗಿಬಿಡುತ್ತದೆ. ಬುದ್ಧನ ಅನುಯಾಯಿಗಳು ಮೊದಲು ಧಿಕ್ಕರಿಸಬೇಕಿರುವುದು ʼ ಪ್ರಶ್ನಾತೀತತೆಯನ್ನು ʼ. ಆದರೆ ಸ್ಥಾವರ ರೂಪದ ಬೌದ್ಧ ಸ್ಥೂಪವಾಸಿ ಬುದ್ಧ ಸದಾ ಆದರಣೀಯವಾಗಿ ಪೂಜನೀಯವಾಗಿ ಕಾಣುವುದರಿಂದ ಪ್ರಶ್ನಾತೀತನಾಗಿಬಿಡುತ್ತಾನೆ.

ಭಾರತದ ಸಾಂಸ್ಕೃತಿಕ ಪ್ರಭಾವಳಿಯಲ್ಲಿ

ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಈ ಬೆಳವಣಿಗೆಯೇ ಹಿಂದೂ ವೈದಿಕಶಾಹಿಯ ಪುನರುತ್ಥಾನಕ್ಕೆ ದಾರಿ ಮಾಡಿಕೊಡುತ್ತದೆ. ಇತ್ತೀಚೆಗೆ ನವಬೌದ್ಧ ಚಿಂತಕರು, ಸಂಘಟನೆಗಳು ಎಲ್ಲ ರೀತಿಯ ಹಿಂದೂ ಧಾರ್ಮಿಕ ಆಚರಣೆಗಳಿಗೂ ಬುದ್ಧನಲ್ಲಿ ಅಥವಾ ಬೌದ್ಧ ಧಮ್ಮದಲ್ಲಿ ಪರ್ಯಾಯವನ್ನು ಶೋಧಿಸಿ, ಸಾರ್ವಜನಿಕ ಆಚರಣೆಗೊಳಪಡಿಸುತ್ತಿದ್ದಾರೆ. ಯುಗಾದಿ, ವಿಜಯದಶಮಿ, ದೀಪಾವಳಿ ಇತ್ಯಾದಿ. ಎಲ್ಲವೂ ವೇದಗಳಲ್ಲಿತ್ತು ಎಂಬ ವೈದಿಕಶಾಹಿಯ ಹುಂಬತನವನ್ನು ಅನುಕರಿಸಿ ಎಲ್ಲವೂ ಬೌದ್ಧ ಮತದಲ್ಲಿತ್ತು ಎಂಬ ವಾದಗಳೂ ಹೆಚ್ಚಾಗುತ್ತಿವೆ. ಇಲ್ಲಿ ಗ್ರಹಿಸಬೇಕಾದ ಸೂಕ್ಷ್ಮ ಎಂದರೆ ಬೌದ್ಧ ಧಮ್ಮ ಹಿಂದೂ ಧರ್ಮದ ಪರ್ಯಾಯವಲ್ಲ ಬದಲಾಗಿ ಸಮಾನಾಂತರವಾಗಿ (Parrallel) ರೂಪುಗೊಂಡ ಪ್ರಾಯೋಗಿಕ ಧಮ್ಮ. ಬುದ್ಧನನ್ನು ಹತ್ತನೆ ಅವತಾರ ಮಾಡಿದ ಹಿಂದೂ ವೈದಿಕಶಾಹಿಗೆ ಈ ಪರ್ಯಾಯ ಧಾರ್ಮಿಕ ಆಚರಣೆಗಳು ಅಪ್ಯಾಯಮಾನವಾಗಿ ಕಾಣುವುದು ಸಹಜ.

ಆದರೆ ಹಿನ್ನಡೆಯಾಗುವುದು ಅಂಬೇಡ್ಕರ್ ಆಶಿಸಿದ ಬೌದ್ಧಯಾನಕ್ಕೆ. ಒಂದು ನಿರ್ದಿಷ್ಟ ನಂಬಿಕೆ ಅಥವಾ ಶ್ರದ್ಧೆಯನ್ನು ಆಧರಿಸಿದ ಯಾವುದೇ ಆಚರಣೆಯನ್ನು ಸಾಂಸ್ಥೀಕರಿಸಿದಾಗ ಅಲ್ಲಿ ವಿವೇಕ-ವಿವೇಚನೆಯ ಜಾಗವನ್ನು ಭಕ್ತಿ-ಉನ್ಮಾದ ಆಕ್ರಮಿಸುತ್ತದೆ. ಈಗಾಗಲೇ ಬೇರೂರಿರುವ ಸಾಂಪ್ರದಾಯಿಕತೆ ಇಂತಹ ಅವಕಾಶವನ್ನೇ ಬಳಸಿಕೊಂಡು, ಪರ್ಯಾಯಗಳೆಲ್ಲವನ್ನೂ ತನ್ನದಾಗಿಸಿಕೊಳ್ಳಲು ನೆರವಾಗುತ್ತದೆ. ಮೈಸೂರಿನಲ್ಲಿ ಪೌರಾಣಿಕ ಮಹಿಷನನ್ನು ಚಾರಿತ್ರಿಕ ವ್ಯಕ್ತಿಯಾಗಿ ಬಿಂಬಿಸುತ್ತಿರುವುದರ ಪರಿಣಾಮ, ಮಹಿಷ ಮರ್ದಿನಿ ಚಾಮುಂಡಿಯೂ ಚಾರಿತ್ರಿಕ ಅಸ್ತಿತ್ವ ಪಡೆದುಕೊಳ್ಳುತ್ತಿದ್ದಾಳೆ. ಬೌದ್ಧ ಅನುಯಾಯಿಗಳೇ ಪ್ರಧಾನವಾಗಿರುವ ಸಾಮುದಾಯಿಕ ಪರಿಸರದಲ್ಲಿ ಮಹಿಷ ವರ್ಷಕ್ಕೊಮ್ಮೆ ಆಚರಿಸಲ್ಪಟ್ಟರೆ, ಚಾಮುಂಡೇಶ್ವರಿ, ವರಮಹಾಲಕ್ಷ್ಮಿ, ಗೌರಿ ಮೊದಲಾದ ವೈದಿಕ ದೇವತೆಗಳು ನಿತ್ಯ ಆಚರಿಸಲ್ಪಡುತ್ತಾರೆ. ತತ್ಪರಿಣಾಮವಾಗಿ ಕೆಲವೇ ಕುಟುಂಬಗಳಲ್ಲಿ ವ್ರತದಂತೆ ಆಚರಿಸಲ್ಪಡುತ್ತಿದ್ದ ವರಮಹಾಲಕ್ಷ್ಮಿ ಈಗ ದಲಿತ ಸಮಾಜಗಳಲ್ಲೂ ಸಾರ್ವಜನಿಕ ಆಚರಣೆಗೊಳಪಡುತ್ತಿದ್ದಾಳೆ.

ಆಚರಣೆ ಮತ್ತು ಅನುಸರಣೆಯ ದ್ವಂದ್ವ

ಈ ಅಪಾಯವನ್ನು ನಾವು ಗಂಭೀರವಾಗಿ ನೋಡುತ್ತಿಲ್ಲ ಎನ್ನುವುದು ಅಪವಾದ ಎನಿಸಬಹುದು. ಆದರೆ ಶೋಚನೀಯ ಸಂಗತಿ ಎಂದರೆ, ಬೌದ್ಧರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಜನರು ಅತೀತ ಶಕ್ತಿಗಳ ನಂಬಿಕೆಗಳಿಂದ ಮುಕ್ತರಾಗಲು, ಭಕ್ತಿ-ಉನ್ಮಾದದ ಚೌಕಟ್ಟಿನಿಂದ ಹೊರಬರಲು, ಆಚರಣಾತ್ಮಕ ಪ್ರದರ್ಶನಗಳಿಂದ (Ritualistic Spectacles) ದೂರವಾಗಲು ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮ ನಡುವೆ ಚರ್ಚೆಗೊಳಗಾಗಿಯೇ ಇಲ್ಲ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸುವುದೆಂದರೆ ಮೂಢ ನಂಬಿಕೆಗಳ ವಿರುದ್ಧ, ಮೌಢ್ಯಾಚರಣೆಗಳ ವಿರುದ್ಧ ಸಮರ ಸಾರುವುದು. ಯಾವುದೇ ರೀತಿಯ ಆಚರಣಾತ್ಮಕ ಸಂಹಿತೆಗಳು (Ritualistic Codes) ಅವೈಜ್ಞಾನಿಕ ನಂಬಿಕೆಗಳನ್ನು , ಮೌಢ್ಯವನ್ನು ಹುಟ್ಟುಹಾಕುತ್ತವೆ. ಧೂಪ ದೀಪ ಭಜನೆಗಳಿಂದ ಆರಾಧಿಸಲ್ಪಡುವ ಬುದ್ಧ ಸಹ ಅತೀತ ಶಕ್ತಿಯಾಗಿಯೇ ಕಾಣುತ್ತಾನೆ.

ಈ ಸಾಂಸ್ಥೀಕರಣದ ಪರಿಣಾಮವಾಗಿ, ಬುದ್ಧನನ್ನು ತಲುಪಬೇಕಾದರೆ ಧಮ್ಮ ಕೇಂದ್ರಗಳು ಅಧ್ಯಾತ್ಮ ಸ್ಥಾವರಗಳು ಅನಿವಾರ್ಯ ಎನಿಸಿಬಿಡುತ್ತವೆ. ಬೌದ್ಧ ಧಮ್ಮ ಸ್ವೀಕಾರ ಎಂದರೆ ʼಧಮ್ಮ ದೀಕ್ಷೆ ʼ ಅವಶ್ಯ ಎನಿಸಿಬಿಡುತ್ತದೆ. ಬಂತೇಜಿ ಅಥವಾ ಧಮ್ಮ ಭಿಕ್ಕುಗಳ ಮೂಲಕ ದೀಕ್ಷೆ ಪಡೆದು ಬೌದ್ಧರಾಗುವುದೆಂದರೆ, ನಮಗೇ ಅರಿವಿಲ್ಲದೆ ನಾವು ಶ್ರೇಣೀಕರಣಕ್ಕೆ ಒಳಗಾಗಿರುತ್ತೇವೆ. ರೂಪಾಂತರ ಹೊಂದಿದ ಪುರೋಹಿತಶಾಹಿಯನ್ನು ಸೃಷ್ಟಿಸಿರುತ್ತೇವೆ. ಒಂದು ಪ್ರಾಯೋಗಿಕ ಧಮ್ಮವಾಗಿ ಬೌದ್ಧ ಧಮ್ಮ ಈ ರೀತಿಯ ಮಧ್ಯವರ್ತಿ ಏಜೆಂಟರನ್ನು ಅಪೇಕ್ಷಿಸುವುದಿಲ್ಲ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಅತೀತ ದೈವ ಮತ್ತು ಲೌಕಿಕ ಮನುಷ್ಯರ ನಡುವೆ ಪುರೋಹಿತಶಾಹಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಬೌದ್ಧ ಧಮ್ಮದಲ್ಲಿ ಅತೀತ ಎನ್ನುವುದೇ ಇಲ್ಲದಿರುವಾಗ ಯಾರಿಗಾಗಿ ಮಧ್ಯವರ್ತಿಗಳಿರಬೇಕು ?

ಅಷ್ಟಾಂಗ ಮಾರ್ಗ, ಪಂಚಶೀಲ ತತ್ವ ಮತ್ತು ಪ್ರತಿಜ್ಞಾವಿಧಿಗಳನ್ನು ಗ್ರಾಂಥಿಕ ಪಠಣ ಕ್ರಮವಾಗಿ ಅಥವಾ ಅನುಸರಣ ಮಾರ್ಗಗಳಾಗಿ ಅಳವಡಿಸಿಕೊಂಡರೆ ವ್ಯಕ್ತಿ ಬೌದ್ಧನಾಗಲು ಸಾಧ್ಯವೇ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಮತ್ತೊಮ್ಮೆ ಡಾ. ಟಿ. ಪದ್ಮಶ್ರೀ ಅವರ ಲೇಖನವನ್ನೇ ಉಲ್ಲೇಖಿಸುವುದಾದರೆ “ ಅವೈಜ್ಞಾನಿಕ, ಅವೈಚಾರಿಕ ಕಾಲಘಟ್ಟದಲ್ಲಿ ವಿಜ್ಞಾನವನ್ನು ಪರಿಚಯಿಸಿದವರು ಬುದ್ಧ, ವಿಚಾರವಂತಿಕೆ, ಬೌದ್ಧಿಕತೆ, ಪ್ರಶ್ನಿಸುವ ಮನೋಭಾವ ಕಲಿಸಿದವರು ಬುದ್ಧ ” ಎಂದು ಹೇಳುತ್ತಾರೆ (ಸಂವಾದ ಅಕ್ಟೋಬರ್ 2026 ಪುಟ 31). ಇದರಲ್ಲಿ ತತ್ಯಾಂಶವಿದೆ. ಅಂಬೇಡ್ಕರ್ ಅವರೂ ಇದನ್ನು ಮತ್ತೆ ಮತ್ತೆ ಹೇಳುತ್ತಾರೆ. ಆದರೆ ವರ್ತಮಾನ ಡಿಜಿಟಲ್ ಯುಗದಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವವನ್ನು ತಳಮಟ್ಟದ ಸಮಾಜಕ್ಕೂ ತಲುಪಿಸುವ ಜವಾಬ್ದಾರಿಯನ್ನು ಯಾರು ಹೊರಬೇಕು ?

ವಿಜ್ಞಾನ ಮತ್ತು ವೈಜ್ಞಾನಿಕ ಆಲೋಚನೆಯ ಉತ್ತುಂಗ ಸಾಧನ ಎನ್ನಬಹುದಾದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮುಖಾಂತರ ಅವೈಚಾರಿಕ ಶ್ರಾದ್ಧ, ಪಿಂಡಧಾನ, ಆರಾಧನೆಗಳನ್ನು ಮಾಡುವ ಮೂಲಕ ಈಗಾಗಲೇ ಸಾಂಪ್ರದಾಯಿಕ ಸಮಾಜ ತನ್ನ ಪ್ರಭಾವಳಿಯನ್ನು ವಿಸ್ತರಿಸಿಕೊಂಡಿದೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಮೌಢ್ಯಗಳ ವಿರುದ್ಧ ವೈಚಾರಿಕ ಆಲೋಚನೆಗಳನ್ನು ತಳಮಟ್ಟಕ್ಕೆ ತಲುಪಿಸಲು ನಮಗೇಕೆ ಸಾಧ್ಯವಾಗುತ್ತಿಲ್ಲ ? ಹಬ್ಬ, ಉತ್ಸವ, ಜಾತ್ರೆ, ಜನಪದೀಯ ದೈವ ನಂಬಿಕೆಗಳು ಇವೆಲ್ಲವೂ ವೈಚಾರಿಕತೆಯನ್ನು ಭಂಗಗೊಳಿಸುವ ಸಾಂಪ್ರದಾಯಿಕ ಅಸ್ತ್ರಗಳು. ಇದಕ್ಕೆ ಪ್ರತಿಯಾಗಿ ನಮ್ಮ ನಡುವೆ ದೈವ ಭಂಜಕ ಬುದ್ಧ ಮತ್ತು ಅಂಬೇಡ್ಕರ್, ವಿಗ್ರಹ ಭಂಜಕ ಪೆರಿಯಾರ್ ಗಟ್ಟಿಯಾಗಿ ನೆಲೆಯೂರಿದರೆ ಪ್ರತ್ಯಾಸ್ತ್ರಗಳನ್ನು ಸಿದ್ಧಪಡಿಸುವುದು ಸುಲಭ ಅಲ್ಲವೇ ?

ಈ ಪ್ರತ್ಯಾಸ್ತ್ರಗಳು ಏಕೆ ಬೇಕು ?

ಏಕೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಬಯಸಿದ ಸಾಂವಿಧಾನಿಕ ಭಾರತವನ್ನು ಕಟ್ಟಬೇಕಾದರೆ ನಾವು ಮೂರು ಎದುರಾಳಿಗಳ ವಿರುದ್ಧ ಹೋರಾಡಬೇಕು. ಊಳಿಗಮಾನ್ಯ ಯಜಮಾನಿಕೆ, ವೈದಿಕಶಾಹಿ ಸಾಂಸ್ಕೃತಿಕ ಆಧಿಪತ್ಯ, ಇವರೆಡರಲ್ಲೂ ಅಡಗಿರುವ ಪಿತೃಪ್ರಧಾನತೆ. ಈ ಮೂರನ್ನೂ ತನ್ನ ಸ್ವಾರ್ಥಕ್ಕಾಗಿ ಕಾಪಾಡಿ ಪೋಷಿಸುವ ನವ ಉದಾರವಾದಿ ಆರ್ಥಿಕತೆ ನಾಲ್ಕನೆಯ ಎದುರಾಳಿ. ಈ ತಾತ್ವಿಕ ಸಂಘರ್ಷ ಮತ್ತು ಬೌದ್ಧಿಕ ಸಮರದಲ್ಲಿ ನಮಗೆ “ ಬುದ್ಧ-ಬಸವ-ಅಂಬೇಡ್ಕರ್ ” ಕೇವಲ ಒಂದು Template ಆದರೆ ಸಾಲದು. ಸ್ಥೂಪದೊಳಗಿನ ಬುದ್ಧ, ಗರ್ಭಗುಡಿಯ ಬಸವ ಮತ್ತು ಪ್ರತಿಮಾರೂಪದ ಅಂಬೇಡ್ಕರ್ ನಮ್ಮ ನಡುವೆ ಜೀವಂತಿಕೆಯಿಂದಿರಬೇಕಾದರೆ, ನಾವು ಸ್ಥಾವರ ಭಂಜಕರಾಗಬೇಕು. ಈ ಮೂವರನ್ನಲ್ಲದೆ ಗಾಂಧಿಯನ್ನೂ, ಸಹವರ್ತಿಯಾಗಿ ಮಾರ್ಕ್ಸ್ನನ್ನೂ ನಮ್ಮ ನಡುವೆ ಜಂಗಮ ರೂಪದಲ್ಲಿರುವಂತೆ ಎಚ್ಚರವಹಿಸಬೇಕು.

ಬೌದ್ಧ ಧ್ಯಾನಕ್ಕೆ ಬುದ್ಧ ಸ್ಥೂಪವಾಸಿ ಆಗಬೇಕಿಲ್ಲ. ಸ್ಥಾವರಗಳು ಮತಾಚರಣೆಗಳ ಸಾಂಸ್ಥೀಕರಣಕ್ಕೆ ಮೊದಲ ಮೆಟ್ಟಿಲು ಎಂಬ ವಾಸ್ತವವನ್ನು ನಾವು ಮರೆಯುವಂತಿಲ್ಲ. ಸಾಂಸ್ಥೀಕರಣಕ್ಕೊಳಗಾದ ಚಾರಿತ್ರಿಕ ದಾರ್ಶನಿಕರು ನಮ್ಮೊಳಗೊಬ್ಬರಾಗಿರದೆ ಶ್ರೇಣೀಕೃತ ಸಮಾಜದ ವರ್ಗೀಕರಣಕ್ಕೊಳಗಾಗಿ ಪ್ರತ್ಯೇಕವಾಗಿಬಿಡುತ್ತಾರೆ. ನಾವು ಈಗಾಗಲೇ ಬುದ್ಧನನ್ನು ಈ ಸ್ಥಿತಿಗೆ ತಂದಿದ್ದೇವೆ. ಅಂಬೇಡ್ಕರ್ ಅವರನ್ನು ನಿಧಾನವಾಗಿ ಆ ದಿಕ್ಕಿನಲ್ಲಿ ಕರೆದೊಯ್ಯುತ್ತಿದ್ದೇವೆ. ಬಸವಣ್ಣ ವಚನಗಳ ಮೂಲಕ ಮೌಖಿಕವಾಗಿ ಮಾತ್ರ ನಮ್ಮೊಡನಿದ್ದಾರೆ. ಹೀಗಿದ್ದರೆ “ ಬುದ್ಧ-ಬಸವ-ಅಂಬೇಡ್ಕರ್ ” ಎಂಬ Template ಯಾರಿಗೆ ಮತ್ತು ಹೇಗೆ ಉಪಯುಕ್ತವಾದೀತು ? ಚಾಮರಾಜನಗರದಲ್ಲಿ ಇಂದು (24 ಅಕ್ಟೋಬರ್ 2026) ಸಂಪನ್ನಗೊಳ್ಳಲಿರುವ ಬೌದ್ಧ ಮಹಾ ಸಮ್ಮೇಳನದ ವೇದಿಕೆಯಲ್ಲಿ ಮಹಿಳೆಯರೇ ಇಲ್ಲದಿರುವುದನ್ನು ಗಮನಿಸಿದರೆ, ನಾವು ಎಲ್ಲಿ ಸೋತಿದ್ದೇವೆ ಎಂಬ ಜಿಜ್ಞಾಸೆಯಾದರೂ ಮೂಡಲು ಸಾಧ್ಯ.

ಅಥವಾ ಈ ಪ್ರಶ್ನೆಯನ್ನು ವಿಲೋಮ ಕ್ರಮದಲ್ಲಿ ಮುಂದಿಟ್ಟು, ನವ ಬೌದ್ಧರಲ್ಲಿ ಬೌದ್ಧ ಭಿಕ್ಕುಣಿಯೊಬ್ಬರು ಧಮ್ಮ ದೀಕ್ಷೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳಬಹುದು. ಇದರ ಸಾಧ್ಯಾಸಾಧ್ಯತೆಗಳನ್ನು ಬದಿಗಿಟ್ಟು ಯೋಚಿಸಿದಾಗ, ಬುದ್ಧ 2500 ವರ್ಷಗಳ ಹಿಂದೆ ಬೋಧಿಸಿದ ಸ್ತ್ರೀ ಸಮಾನತೆಯ ಔದಾತ್ಯವನ್ನು ನಾವು ಹೇಗೆ ನೋಡುತ್ತೇವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. 15-16ನೆ ಶತಮಾನದ ಉತ್ಪನ್ನ ʼ ಪ್ರಜಾಪ್ರಭುತ್ವ ʼವನ್ನು, 17-18ನೆ ಶತಮಾನದ ಉತ್ಪತ್ತಿ ʼ ಸಮಾಜವಾದ ʼವನ್ನು ಬುದ್ಧನಲ್ಲಿ ಅಥವಾ ಆತನ ಕಾಲದಲ್ಲಿ ಕಾಣುವುದಕ್ಕಿಂತಲೂ, ಶತಮಾನಗಳ ಹಿಂದೆಯೇ ಈ ಕಲ್ಪನೆಗಳಿಗೆ ತೆರೆದುಕೊಂಡಿದ್ದ ದೂರಗಾಮಿ ದೃಷ್ಟಿಯ ದಾರ್ಶನಿಕ ಬುದ್ಧನನ್ನು ನಮ್ಮ ನಡುವೆ ಲೌಕಿಕವಾಗಿ ನಿಲ್ಲುವಂತೆ ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ.

ಸ್ಥಾವರ ಜಂಗಮದ ಸಂಘರ್ಷದಲ್ಲಿ

ಸ್ಥಾವರ ಬಂಧಿಯನ್ನು ಜಂಗಮನನ್ನಾಗಿಸುವ ಹಾದಿಯಲ್ಲಿ ನಾವು ಬುದ್ಧನನ್ನು ಗುರುತಿಸಬೇಕಿದೆ. ಹೀಗೆ ಜಂಗಮನಾಗದೆ ಹೋದರೆ ತಳಮಟ್ಟದವರೆಗಿನ ಸಮಾಜದಲ್ಲಿ ವೈಚಾರಿಕತೆ-ವೈಜ್ಞಾನಿಕ ಮನೋಭಾವನ್ನು ಸೃಷ್ಟಿಸಲಾಗುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಅಂಬೇಡ್ಕರರ ಬೌದ್ಧ ಚಿಂತನೆಗಳನ್ನೂ ಒಳಗೊಂಡಂತೆ, ವಚನ ಚಳುವಳಿಯ, ಬುದ್ಧನ ಸೂಕ್ತಿಗಳ, ಗಾಂಧೀಜಿಯ ಸಮಕಾಲೀನ ಚಿಂತನೆಗಳ, ಮಾರ್ಕ್ಸ್ನ ಆಧುನಿಕ ಕಲ್ಪನೆಗಳ ಮರುಓದು ಅತ್ಯವಶ್ಯ. ಈ ದಾರ್ಶನಿಕರನ್ನು ಮರುಸಂಪರ್ಕಿಸುವುದು (Re visiting) ಅನಿವಾರ್ಯ. ಕೆಲವೆಡೆ ಮರುವಿಮರ್ಶೆಯೂ ಅಗತ್ಯ. ಚಲನಶೀಲ ಸಮಾಜದಲ್ಲಿ ಇದಾವುದೂ ಇಲ್ಲದೆ ಹೋದರೆ, ನಾವು ತಾತ್ವಿಕವಾಗಿ ಜಡಗಟ್ಟುತ್ತೇವೆ. ಬೌದ್ಧಿಕವಾಗಿ ಹೆಪ್ಪುಗಟ್ಟುತ್ತೇವೆ. ಸಾಂಸ್ಕೃತಿಕವಾಗಿ ಹಿಂಚಲನೆಗೊಳಗಾಗುತ್ತೇವೆ.

ಈ ದಾರ್ಶನಿಕರೆಲ್ಲರಲ್ಲೂ ಕಾಣಬಹುದಾದ ಸಮಾನ ತಾತ್ವಿಕ ಎಳೆ ಎಂದರೆ ʼಆತ್ಯಂತಿಕ ಸತ್ಯʼ ಎನ್ನುವುದಿಲ್ಲ ಎಂಬ ನಂಬಿಕೆ. ದುರದೃಷ್ಟವಶಾತ್ ನಾವು ಇವರನ್ನೇ ʼಆತ್ಯಂತಿಕ ಸತ್ಯದʼ ಕೇಂದ್ರವಾಗಿಸಿಬಿಟ್ಟಿದ್ದೇವೆ. ಹಾಗಾಗಿ ನಮ್ಮ ಅನ್ವೇಷಣೆಗಳು ಜಡಗಟ್ಟಿವೆ. ಈ ಚಿಂತನೆಗಳು ಬೇಕಿರುವುದು ಹಿತವಲಯದ ಉಳ್ಳವರಿಗಲ್ಲ. ಅವಕಾಶವಂಚಿತ ಶೋಷಿತರಿಗೆ. ಅವರ ನಡುವೆ ಈ ದಾರ್ಶನಿಕರನ್ನು ನಿಲ್ಲಿಸಬೇಕಾದರೆ ಇವರೆಲ್ಲರ ಜಂಗಮ ರೂಪವನ್ನು ನಾವು ಅನಾವರಣಗೊಳಿಸಬೇಕು. ನಮ್ಮ ನಡುವೆ ಅಪಾರ ಸಂಖ್ಯೆಯಲ್ಲಿರುವ ಫಲಾನುಭವಿ ವರ್ಗದಲ್ಲಿ ಈ ಆಲೋಚನೆ ಮೂಡುವುದೇ ಆದರೆ, ಬುದ್ಧ ನಮ್ಮೊಳಗೊಬ್ಬನಾಗಿರುತ್ತಾನೆ. ಅಂಬೇಡ್ಕರ್ ನಮ್ಮ ಸಾರಥಿಯಾಗಿರುತ್ತಾರೆ. ಬೌದ್ಧಾರಾಧಕ ಚಿಂತಕರು ಈ ನಿಟ್ಟಿನಲ್ಲಿ ಯೋಚಿಸುವಂತಾದರೆ ಬುದ್ಧ ನಮ್ಮೊಳಗೊಂದಾಗಿರಲು ಸಾಧ್ಯ.

ಇದು ಕಾರ್ಯಗತವಾಗುವುದು ಹೇಗೆ ?

ನವ ಬೌದ್ಧ ಚಳುವಳಿ ಹೆಚ್ಚು ಯುವ ಜನರನ್ನು ಆಕರ್ಷಿಸುತ್ತಿದೆ. ಪ್ರತಿ ವರ್ಷ ನಾಗಪುರದಲ್ಲಿ ಸೇರುವ ಜನಸಂಖ್ಯೆಯನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆದರೆ ಈ ಉನ್ಮತ್ತ ಆಚರಣೆಗಳು ಕೇವಲ ಪ್ರದರ್ಶನಗಳಾಗುತ್ತವೆ (Spectacles). ಪ್ರತಿ ನಗರದಲ್ಲೂ, ಸಣ್ನ ಪುಟ್ಟ ಊರುಗಳಲ್ಲೂ ಬೌದ್ಧ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ಬೌದ್ಧ ಸ್ಥೂಪಗಳು ನಿರ್ಮಾಣವಾಗುತ್ತಿವೆ. ಇಲ್ಲಿ ಪ್ರತಿನಿತ್ಯ ಅಥವಾ ವಾರಕ್ಕೊಮ್ಮೆ ಧ್ಯಾನ ಶಿಬಿರಗಳು, ಉಪಾಸಕರಿಂದ ಉಪನ್ಯಾಸಗಳು ನಡೆಯುತ್ತವೆ. ಇವೆಲ್ಲವೂ ಸಾಂಸ್ಥೀಕರಣದ ಒಂದು ಭಾಗ. ಇದನ್ನು ದಾಟಿ ಆಗಬೇಕಿರುವುದು ವೈಚಾರಿಕ ಜಾಗೃತಿ ಮತ್ತು ವೈಜ್ಞಾನಿಕ ಅರಿವಿನ ಯಾನ. ತಳಮಟ್ಟದಲ್ಲಷ್ಟೇ ಅಲ್ಲದೆ ಎಲ್ಲ ವರ್ಗಗಳನ್ನೂ ಆವರಿಸಿರುವ ಸಾಂಪ್ರದಾಯಿಕ ಆಚರಣಾತ್ಮಕ ಮೌಢ್ಯಗಳ ವಿರುದ್ಧ ನಿರಂತರ ಪ್ರಚಾರ ನಡೆಯಬೇಕಿದೆ. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲೇ ಸುತ್ತಲಿನ ಯುವ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನಗಳಿಗೆ ನಾವು ಮುಂದಾಗಬೇಕಿದೆ.

ಬೌದ್ಧ ಸ್ಥೂಪಗಳು ಕೇವಲ ಧ್ಯಾನ-ಉಪನ್ಯಾಸ-ಉಪಾಸನಾ ಕೇಂದ್ರಗಳಾಗಿ ಉಳಿಯದೆ, ವೈಚಾರಿಕ ಪ್ರಜ್ಞೆಯನ್ನು ಹರಡುವ ಗ್ರಂಥಾಲಯಗಳಾಗಬೇಕಿದೆ. ಬುದ್ಧ ಅರ್ಥವಾಗಬೇಕಾದರೆ ಕೇವಲ ಬುದ್ಧ-ಅಂಬೇಡ್ಕರರನ್ನು ಓದಿದರೆ ಸಾಲದು, ತುಲನಾತ್ಮಕವಾಗಿ ಗಾಂಧಿ, ಮಾರ್ಕ್ಸ್ ಇತರ ವಿಚಾರಧಾರೆಗಳನ್ನೂ ಅಧ್ಯಯನ ಮಾಡಬೇಕು. ಚರಿತ್ರೆ ಮತ್ತು ವರ್ತಮಾನದ ಅನುಸಂಧಾನದಲ್ಲಿ ನಮಗೇ ಅರಿವಿಲ್ಲದ ಹಾಗೆ ಹೊಸ ವಿಚಾರಗಳು ಚಿಮ್ಮುತ್ತಿರುತ್ತವೆ. ಈ ಚಿಮ್ಮುವ ಆಲೋಚನೆಗಳನ್ನು ಸಂಗ್ರಹಿಸಿ, ಕ್ರೋಢೀಕರಿಸಿ, ಹಂಚುವ ಜವಾಬ್ದಾರಿ ನವಬೌದ್ಧರ ಮೇಲಿರುವಷ್ಟೇ ದಲಿತ ಚಳುವಳಿಗಳ ಮೇಲೆ, ಎಡಪಂಥೀಯ ಸಂಘಟನೆಗಳ ಮೇಲೆ ಇದೆ. ಇದನ್ನು ಭೌತಿಕವಾಗಿ ಹೇಗೆ ನಿಭಾಯಿಸುವುದು ? ಸಂಘಟಿತ ಪ್ರಯತ್ನದಿಂದ ಮಾತ್ರ ಸಾಧ್ಯ. ಐಕ್ಯತೆಯ ನಡಿಗೆಯಿಂದ ಮಾತ್ರ ಸಾಧ್ಯ ಈ ನಡಿಗೆಯಲ್ಲಿ ನಮ್ಮ ಎದೆಯಾಳದಲ್ಲಿ ಮೂಡುವುದನ್ನೇ ʼ ಬುದ್ಧ ಪ್ರಜ್ಞೆ ʼ ಎಂದು ನಿರ್ವಚಿಸಲು ಸಾಧ್ಯ.

Tags: AmbedkarBuddha
Previous Post

ಕರ್ನಾಟಕದಲ್ಲಿ ಚಳಿಯ ಅಬ್ಬರ ಶುರು! ಮುಂದಿನ 7 ದಿನಗಳ ಹವಾಮಾನ ಹೇಗಿರಲಿದೆ?ಹವಾಮಾನ ತಜ್ಞರು ಹೇಳಿದ್ದೇನು?

Next Post

ಆರ್‌ಸಿಬಿ ಬೆಳವಣಿಗೆಗೆ ಧೋನಿ ಫಿದಾ! ಸಿಎಸ್‌ಕೆ ವೈಫಲ್ಯ ಒಪ್ಪಿಕೊಂಡ ಮಾಜಿ ನಾಯಕ ಹೇಳಿದ್ದೇನು?

Related Posts

Significant surge in women's travel due to free bus services: Statistics from 4 states, including Karnataka, revealed
Top Story

ಉಚಿತ ಬಸ್ ನಿಂದ ಮಹಿಳೆಯರ ಪ್ರಯಾಣದಲ್ಲಿ ಭಾರೀ ಏರಿಕೆ :  ಕರ್ನಾಟಕ ಸೇರಿ 4 ರಾಜ್ಯಗಳ ಅಂಕಿಅಂಶಗಳು ಬಹಿರಂಗ

by ಪ್ರತಿಧ್ವನಿ
October 26, 2026
0

ನವದೆಹಲಿ : ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ  ಕಲ್ಪಿಸಿರುವ ರಾಜ್ಯಗಳಲ್ಲಿ ಮಹಿಳೆಯರ ಓಡಾಟ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ...

Read moreDetails
Why was Vijay asked to get married 100 times? Rashmika gives a sharp reply to trolls!

100 ಬಾರಿ ಮದುವೆಯಾಗುವಂತೆ ವಿಜಯ್‌ಗೆ ಕೇಳಿದ್ದೇಕೆ? ಟ್ರೋಲಿಗರಿಗೆ ರಶ್ಮಿಕಾ ಖಡಕ್ ಉತ್ತರ!

October 26, 2026
'There’s no smoke without fire': B.K. Hariprasad reacts to Mallikarjun Kharge’s statement regarding PM Modi’s father!

`ಬೆಂಕಿ ಇಲ್ಲದೇ ಹೊಗೆಯಾಡಲ್ಲ’ : ಪ್ರಧಾನಿ ಮೋದಿ ತಂದೆ ಬಗ್ಗೆ ಮಲ್ಲಿಕಾರ್ಜನ್ ಖರ್ಗೆ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ!

October 26, 2026
Gang turns to counterfeit ₹500 note racket after watching 'Farzi' web series; 6 arrested

‘ಫರ್ಜಿ’ ವೆಬ್ ಸೀರೀಸ್ ನೋಡಿ 500 ರೂ. ನಕಲಿ ನೋಟು ದಂಧೆಗೆ ಇಳಿದ ಗ್ಯಾಂಗ್ : 6 ಜನರ ಬಂಧನ

October 26, 2026
CM D.K. Shivakumar offers special prayers at the shrine of Savadatti Yellamma

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ : ನಾಡಿನ ಸುಖ-ಶಾಂತಿಗೆ ಪ್ರಾರ್ಥನೆ

October 26, 2026
Next Post
ಆರ್‌ಸಿಬಿ ಬೆಳವಣಿಗೆಗೆ ಧೋನಿ ಫಿದಾ! ಸಿಎಸ್‌ಕೆ ವೈಫಲ್ಯ ಒಪ್ಪಿಕೊಂಡ ಮಾಜಿ ನಾಯಕ ಹೇಳಿದ್ದೇನು?

ಆರ್‌ಸಿಬಿ ಬೆಳವಣಿಗೆಗೆ ಧೋನಿ ಫಿದಾ! ಸಿಎಸ್‌ಕೆ ವೈಫಲ್ಯ ಒಪ್ಪಿಕೊಂಡ ಮಾಜಿ ನಾಯಕ ಹೇಳಿದ್ದೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada