ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ (Cyber Fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸೈಬರ್ ವಂಚಕರು ನಾನಾ ತಂತ್ರಗಳನ್ನು ಬಳಸಿ, ಗ್ರಾಹಕರಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಗಳಿಗೆ (Bank Account) ಕನ್ನ ಹಾಕುತ್ತಿದ್ದಾರೆ. ನಕಲಿ ಲಿಂಕ್‌ಗಳು ಹಾಗೂ ಮಾಲ್‌ವೇರ್‌ಗಳ ಮೂಲಕ ಗೌಪ್ಯ ಒಟಿಪಿ ಪಡೆದುಕೊಂಡು ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ.
ಖಾತೆಯಿಂದ ಹಣ ಕಡಿತಗೊಂಡ ಸಂದೇಶ ಮೊಬೈಲ್‌ಗೆ ಬಂದಾಗಲೇ ಬಹುತೇಕರಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬರುತ್ತದೆ. ನಿಮ್ಮ ಯಾವುದೇ ಪಾತ್ರವಿಲ್ಲದೆ ಖಾತೆಯಿಂದ ಹಣ ಕಡಿತವಾದ ತಕ್ಷಣವೇ ಎಚ್ಚೆತ್ತುಕೊಂಡರೆ, ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಅವಕಾಶವಿದೆ. ಆದರೆ ಇದು ವಂಚನೆ ನಡೆದ ಸ್ವರೂಪವನ್ನು ಅವಲಂಬಿಸಿರುತ್ತದೆ. ನಿಮ್ಮ ಸ್ವಂತ ತಪ್ಪಿನಿಂದ ಹಣ ಕಳೆದುಕೊಂಡರೆ ಬ್ಯಾಂಕುಗಳು ಜವಾಬ್ದಾರಿಯಾಗುವುದಿಲ್ಲ. ಆದರೆ ಬ್ಯಾಂಕ್ ವ್ಯವಸ್ಥೆಯ ಲೋಪ ಅಥವಾ ತಾಂತ್ರಿಕ ದೋಷದಿಂದ ನಷ್ಟ ಉಂಟಾದರೆ ಪೂರ್ಣ ಹಣ ಮರಳಿ ಸಿಗಲಿದೆ. ಈ ಕುರಿತು ಆರ್‌ಬಿಐ ಸ್ಪಷ್ಟ ನಿಯಮಗಳನ್ನು ರೂಪಿಸಿದೆ.
ರೀಫಂಡ್ ಪಡೆಯಲು ನೀವು ತಕ್ಷಣ ಏನು ಮಾಡಬೇಕು?
ಆರ್‌ಬಿಐ ನಿಯಮಾವಳಿಗಳ ಪ್ರಕಾರ ಬ್ಯಾಂಕಿನ ದೋಷದಿಂದ ಗ್ರಾಹಕರು ಹಣ ಕಳೆದುಕೊಂಡರೆ, ಆ ನಷ್ಟವನ್ನು ಬ್ಯಾಂಕೇ ಸಂಪೂರ್ಣವಾಗಿ ಭರಿಸಬೇಕಾಗುತ್ತದೆ. ಖಾತೆಯಿಂದ ಅನುಮಾನಾಸ್ಪದವಾಗಿ ಹಣ ಕಡಿತವಾದ ತಕ್ಷಣವೇ ಬ್ಯಾಂಕ್ ಶಾಖೆ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ದೂರು ದಾಖಲಿಸಬೇಕು. ತಕ್ಷಣವೇ ನಿಮ್ಮ ಖಾತೆಯಿಂದ ನಡೆಯುವ ಯುಪಿಐ ಹಾಗೂ ಇತರೆ ಆನ್‌ಲೈನ್ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ವಿನಂತಿಸಬೇಕು. ಜೊತೆಗೆ ವಹಿವಾಟು ಸಂಖ್ಯೆ (ಟ್ರಾನ್ಸಾಕ್ಷನ್ ಐಡಿ) ಹಾಗೂ ಹಣ ಕಡಿತವಾದ ದಿನಾಂಕ ಮತ್ತು ಸಮಯದ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ತಕ್ಷಣವೇ ಕೇಂದ್ರ ಸರ್ಕಾರದ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಸಲ್ಲಿಸಬೇಕು. ಮೂರನೇ ವ್ಯಕ್ತಿಗಳ ಭದ್ರತಾ ಲೋಪದಿಂದ ಹಣ ಕಡಿತಗೊಂಡಿದ್ದರೆ, ಗ್ರಾಹಕರು ಮೂರು ದಿನಗಳ ಒಳಗೆ ಅಧಿಕೃತವಾಗಿ ದೂರು ನೀಡಿದರೆ ಪೂರ್ಣ ಮೊತ್ತವನ್ನು ಮರಳಿ ಪಡೆಯಬಹುದು.
ಹಣ ಮರಳಿ ಖಾತೆಗೆ ಜಮೆಯಾಗುವುದು ಹೇಗೆ?
ಬ್ಯಾಂಕಿನ ಆಂತರಿಕ ಲೋಪದಿಂದ ವಂಚನೆ ಸಂಭವಿಸಿದ್ದರೆ, ಬ್ಯಾಂಕ್ ಹತ್ತು ದಿನಗಳ ಒಳಗೆ ‘ಶ್ಯಾಡೋ ರಿವರ್ಸಲ್’ ಪ್ರಕ್ರಿಯೆಯ ಮೂಲಕ ಗ್ರಾಹಕರ ಖಾತೆಗೆ ಹಣವನ್ನು ಮರುಜಮೆ ಮಾಡಬೇಕು. ಆ ಬಳಿಕ ಬ್ಯಾಂಕ್ ತನ್ನ ಆಂತರಿಕ ತನಿಖೆಯನ್ನು ಮುಂದುವರಿಸುತ್ತದೆ. ಗ್ರಾಹಕರು ವಂಚನೆ ನಡೆದ ನಾಲ್ಕರಿಂದ ಏಳು ಕೆಲಸದ ದಿನಗಳ ಒಳಗೆ ದೂರು ದಾಖಲಿಸಿದರೆ, ಆರ್‌ಬಿಐ ನಿಯಮಾವಳಿಗೆ ಅನುಗುಣವಾಗಿ ಪರಿಹಾರ ದೊರೆಯುತ್ತದೆ. ಆದರೆ ಏಳು ದಿನಗಳ ನಂತರ ದೂರು ನೀಡಿದರೆ, ರೀಫಂಡ್ ನೀಡುವುದು ಆಯಾ ಬ್ಯಾಂಕಿನ ಆಂತರಿಕ ನೀತಿ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ. ವಂಚನೆ ಹೇಗೆಯೇ ನಡೆದಿದ್ದರೂ ತಡಮಾಡದೆ ಆದಷ್ಟು ಬೇಗ ದೂರು ನೀಡುವುದರಿಂದ ಹಣ ಶೀಘ್ರವಾಗಿ ಮರಳಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಸರ್ಕಾರಿ ಸೇವೆಗೆ ಹೊಸ ರೂಪ : ‘ಸಕಾಲ’ ಸೇವೆಗಳು ಇನ್ಮುಂದೆ ಮತ್ತಷ್ಟು ತ್ವರಿತ, ಪಾರದರ್ಶಕ!




