ತುರ್ತು ಆರ್ಥಿಕ ಅಗತ್ಯಗಳು ಎದುರಾದಾಗ ಹೆಚ್ಚಿನ ಜನರು ವೈಯಕ್ತಿಕ ಸಾಲ (Persoanl Loan) ಮೊರೆ ಹೋಗುತ್ತಾರೆ. ಉದ್ಯೋಗಿಗಳು ಅಥವಾ ವ್ಯಾಪಾರಸ್ಥರಿಗೆ ಅವರ ಆದಾಯದ ಪುರಾವೆ ಹಾಗೂ ಉತ್ತಮ ಸಿಬಿಲ್ (CIBIL) ಸ್ಕೋರ್ ಆಧಾರದ ಮೇಲೆ ಬ್ಯಾಂಕುಗಳು ಸುಲಭವಾಗಿ ಸಾಲ ಮಂಜೂರು ಮಾಡುತ್ತವೆ. ಆದರೆ, ಸಾಲ ಪಡೆದ ನಂತರ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮಾಸಿಕ ಕಂತು (EMI) ಮರುಪಾವತಿ ಮಾಡುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯ ಅಥವಾ ಅನಿವಾರ್ಯ ಕಾರಣಗಳಿಂದ ಒಂದು ತಿಂಗಳ ಇಎಂಐ ಮಿಸ್ ಆದರೂ ಗ್ರಾಹಕರು ಭಾರಿ ಬೆಲೆ ತೆರಬೇಕಾಗುತ್ತದೆ.
ಇಎಂಐ ವಿಳಂಬಕ್ಕೆ ಕಾರಣಗಳು ಮತ್ತು ಉಂಟಾಗುವ ನಷ್ಟ
ಸಂಬಳ ಜಮೆಯಾಗುವುದು ತಡವಾಗುವುದು, ಬ್ಯಾಂಕಿಂಗ್ ಸರ್ವರ್ ಸಮಸ್ಯೆ ಅಥವಾ ಆಟೋ ಡೆಬಿಟ್ ವಿಫಲವಾಗುವ ಕಾರಣಗಳಿಂದ ಕೆಲವೊಮ್ಮೆ ಇಎಂಐ ಪಾವತಿ ತಡವಾಗಬಹುದು. ಒಂದೇ ಒಂದು ಕಂತು ತಡವಾದರೆ ಏನೂ ಆಗದು ಎಂದು ಹಲವರು ಭಾವಿಸುತ್ತಾರೆ. ಆದರೆ, ನಿಗದಿತ ದಿನಾಂಕದೊಳಗೆ ಹಣ ಪಾವತಿಯಾಗದಿದ್ದರೆ ಬ್ಯಾಂಕುಗಳು ದೊಡ್ಡ ಮೊತ್ತದ ಲೇಟ್ ಫೀಸ್ ಹಾಗೂ ದಂಡದ ಬಡ್ಡಿಯನ್ನು ವಿಧಿಸುತ್ತವೆ. ಇದು ಸಾಲಗಾರನ ಮೇಲಿನ ಆರ್ಥಿಕ ಹೊರೆಯನ್ನು ಅನಗತ್ಯವಾಗಿ ಹೆಚ್ಚಿಸುತ್ತದೆ.
ಸಿಬಿಲ್ ಸ್ಕೋರ್ ಕುಸಿತ ಹಾಗೂ ಭವಿಷ್ಯದ ಸಾಲಕ್ಕೆ ಕಂಟಕ
ಇಎಂಐ ಮರುಪಾವತಿಯಲ್ಲಿ ವಿಳಂಬವಾದರೆ ಅದು ನೇರವಾಗಿ ಕ್ರೆಡಿಟ್ ಸ್ಕೋರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬ್ಯಾಂಕುಗಳು ನಿಯಮಿತವಾಗಿ ಸಾಲ ಮರುಪಾವತಿಯ ವರದಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ ರವಾನಿಸುತ್ತವೆ. ಕೇವಲ ಒಂದು ತಿಂಗಳ ಮಿಸ್ಸಿಂಗ್ ಕೂಡ ಸಿಬಿಲ್ ಸ್ಕೋರ್ ದಿಢೀರ್ ಕುಸಿಯಲು ಕಾರಣವಾಗುತ್ತದೆ. ಒಮ್ಮೆ ಸ್ಕೋರ್ ಹಾಳಾದರೆ, ಭವಿಷ್ಯದಲ್ಲಿ ಗೃಹ ಸಾಲ, ವಾಹನ ಸಾಲ ಅಥವಾ ಇನ್ನಾವುದೇ ತುರ್ತು ಸಾಲಗಳನ್ನು ಪಡೆಯುವುದು ಕಷ್ಟಸಾಧ್ಯವಾಗುತ್ತದೆ.
ಬ್ಯಾಂಕ್ ಕರೆಗಳನ್ನು ನಿರ್ಲಕ್ಷಿಸಬೇಡಿ
ಕಂತು ಪಾವತಿ ತಡವಾದಾಗ ಹಣಕಾಸು ಸಂಸ್ಥೆಗಳು ಸಂದೇಶಗಳು ಹಾಗೂ ಕಾಲ್ ಮೂಲಕ ನೆನಪಿಸುತ್ತವೆ. ಇಂತಹ ಸಂದರ್ಭದಲ್ಲಿ ಆತಂಕದಿಂದ ಕರೆಗಳನ್ನು ಕಟ್ ಮಾಡುವುದು ಅಥವಾ ನಿರ್ಲಕ್ಷಿಸುವುದು ತಪ್ಪು. ಬ್ಯಾಂಕ್ ಪ್ರತಿನಿಧಿಗಳೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ವಿವರಿಸಿದರೆ, ಅವರು ಹೆಚ್ಚುವರಿ ದಂಡ ಮನ್ನಾ ಮಾಡಲು ಅಥವಾ ಮರುಪಾವತಿಗೆ ಸೂಕ್ತ ಪರಿಹಾರ ನೀಡಲು ಮುಂದಾಗುವ ಸಾಧ್ಯತೆಗಳಿರುತ್ತವೆ.
ಮುಂಜಾಗ್ರತೆ ಹಾಗೂ ತುರ್ತು ನಿಧಿಯ ಮಹತ್ವ
ಒಂದು ತಿಂಗಳ ಇಎಂಐ ಮುಂದೂಡಿದರೆ, ಮುಂದಿನ ತಿಂಗಳು ಒಂದೇ ಬಾರಿಗೆ ಎರಡು ಕಂತುಗಳನ್ನು ದಂಡ ಸಮೇತ ಕಟ್ಟುವುದು ಮಧ್ಯಮ ವರ್ಗದವರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡುತ್ತದೆ. ಆದ್ದರಿಂದ ಯಾವುದೇ ಅನಿರೀಕ್ಷಿತ ಪರಿಸ್ಥಿತಿಗಳು ಎದುರಾದರೂ ಕನಿಷ್ಠ ಮೂರರಿಂದ ನಾಲ್ಕು ತಿಂಗಳ ಇಎಂಐ ಪಾವತಿಗೆ ಆಗುವಷ್ಟು ಹಣವನ್ನು ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ರೂಪದಲ್ಲಿ ಪ್ರತ್ಯೇಕವಾಗಿ ಕಾಯ್ದಿರಿಸುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಜಂಬೂ ಸವಾರಿಗೂ ಮುನ್ನ ಸುತ್ತೂರು ಶಾಖಾ ಮಠಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ : ವಿಶೇಷ ಪ್ರಾರ್ಥನೆ





