ನಾ ದಿವಾಕರ
ಜಗತ್ತಿನ ಎಲ್ಲ ಯುದ್ಧಗಳಿಗೂ, ಲಕ್ಷಾಂತರ ಜನರ ಸಾವು ನೋವುಗಳಿಗೂ, ಪ್ರಜಾಪ್ರಭುತ್ವಗಳ ವಿನಾಶಕ್ಕೂ ಮೂಲ ಕಾರಣಕರ್ತರಾಗಿದ್ದರೂ ನೊಬೆಲ್ ಶಾಂತಿ ಪ್ರಶಸ್ತಿಯ ಹಂಬಲವನ್ನು ಬಿಟ್ಟುಕೊಡದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷವೂ ನಿರಾಸೆ ಎದುರಿಸಬೇಕಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಂಬಲಿಸುವ ಸರ್ವಾಧಿಕಾರಿ ಮನಸ್ಥಿತಿಯ ವಿಶ್ವ ನಾಯಕರೂ ಹೆಚ್ಚಾಗುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯ ಮೇಲೆ ಆಧಿಪತ್ಯ ಸಾಧಿಸುವ ಸಲುವಾಗಿ ನಡೆಯುತ್ತಲೇ ಇರುವ ವಿನಾಶಕಾರಿ ಯುದ್ಧಗಳನ್ನು ತಡೆಗಟ್ಟುವುದು ರಾಜತಾಂತ್ರಿಕ ಕ್ರಿಯೆಯಾಗುವುದೇ ಹೊರತು ಶಾಂತಿ ಸ್ಥಾಪನೆಯ ನಡೆ ಆಗುವುದಿಲ್ಲ. ಸಾವಿರಾರು ಹೆಣಗಳ ಮೇಲೆ ನೆಲೆಸುವ ಶಾಂತಿಯ ಸ್ಥೂಪಗಳು ಸಂವೇದನಾಶೀಲ ಸಮಾಜಗಳನ್ನು ಶಾಶ್ವತವಾಗಿ ಕಾಡುವ ದುರಂತ ಸ್ಮಾರಕಗಳಾಗಿಯೇ ಕಾಣುತ್ತವೆ.
ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ, ಜನಾಧಿಕಾರದ ಸಂವಿಧಾನಗಳನ್ನೇ ಅವಲಂಬಿಸಿ, ನಿರಂಕುಶಾಧಿಕಾರವನ್ನು ಸ್ಥಾಪಿಸುವ ಯುಗದಲ್ಲಿ ನವ ಶತಮಾನ ಚಲಿಸುತ್ತಿದೆ. ನೈಸರ್ಗಿಕ ಸಂಪನ್ಮೂಲಗಳು, ಆರ್ಥಿಕ ಮಾರುಕಟ್ಟೆ, ಕಾರ್ಪೋರೇಟ್ ಔದ್ಯಮಿಕ ಸಾಮ್ರಾಜ್ಯ ಹಾಗೂ ಬಲಪಂಥೀಯ ಮತೀಯ ದೃಷ್ಟಿಕೋನದ ರಾಜಕೀಯ ಈ ನಾಲ್ಕು ನೆಲೆಗಳಲ್ಲಿ ಇಂದು ಜಗತ್ತು ಪ್ರಕ್ಷುಬ್ಧತೆಯ ವಾತಾವರಣ ಎದುರಿಸುತ್ತಿದೆ. ನವ ಉದಾರವಾದ ಸೃಷ್ಟಿಸಿರುವ ಅನಿಶ್ಚಿತತೆ ಮತ್ತು ಅಭದ್ರತೆ ಏಷ್ಯಾ, ಯೂರೋಪ್ ಮತ್ತಿತರ ಪಶ್ಚಿಮ ರಾಷ್ಟ್ರಗಳಲ್ಲಿ ಜನಾಂದೋಲನಗಳಿಗೆ ಪ್ರಶಸ್ತ ಭೂಮಿಕೆಯನ್ನು ಒದಗಿಸುತ್ತಿದೆ. ಈ ನಡುವೆ ಸಂಪತ್ತಿನ ಮೂಲ ಕೋಶಗಳನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸಾಧಿಸುವ ಸಾಮ್ರಾಜ್ಯಶಾಹಿಯ ದಾಹ ನಿರಂತರ ಯುದ್ಧ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದೆ.

ದುರ್ಭರ ಸ್ಥಿತಿಯಲ್ಲಿ ಶಾಂತಿಗೆ ಮನ್ನಣೆ
ಇಂತಹ ಕ್ರೂರ ವಾತಾವರಣದಲ್ಲಿ (Vicious Atmosphere) ನಾರ್ವೆಯ ನೊಬೆಲ್ ಸಮಿತಿ 2026ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು, ದಮನಿತರ ಹಾಗೂ ಅಧಿಕಾರ ವಂಚಿತರ (Powerless) ನೋವಿನ ದನಿಗೆ ದನಿಯಾಗಿ ಅವಿರತ ಶ್ರಮಿಸುತ್ತಿರುವ ದಕ್ಷಿಣ ಆಫ್ರಿಕಾದ ನವನೇತಮ್ ನವಿ ಪಿಳ್ಳೆ (Navanethem ́Navi ʼ Pillay) ಅವರಿಗೆ ನೀಡಿರುವುದು, ಶಾಂತಿ ಸಹಬಾಳ್ವೆ ಬಯಸುವ ಜಗತ್ತಿನ ಪ್ರತಿಯೊಂದು ಮನಸ್ಸಿಗೂ ಸಮಾಧಾನ, ಸಂಭ್ರಮ ತರುವಂತಹ ವಿಷಯ. ಭಾರತೀಯ ವಂಶಾವಳಿಯ ಮೂಲ ಹೊಂದಿರುವ ನವಿ ಪಿಳ್ಳೆ 1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ಪ್ರಾಂತ್ಯದ ಒಂದು ಬಡ ಕುಟುಂಬದಲ್ಲಿ ಜನಿಸಿದವರು. ಈಕೆಯ ಪೂರ್ವಜರು ಭಾರತೀಯ ಮೂಲದವರಾಗಿದ್ದು 1890ರಲ್ಲಿ ಒಪ್ಪಂದದ ಕಾರ್ಮಿಕರಾಗಿ (Indentured labour) ಆಫ್ರಿಕಾದ ಶುಗರ್ ಪ್ಲಾಂಟೇಷನ್ಗಳಲ್ಲಿ ದುಡಿಯಲು ವಲಸೆ ಬಂದವರು.
ಭಾವನಾತ್ಮಕವಾಗಿ ನವಿ ಪಿಳ್ಳೆ ಅವರ ಭಾರತೀಯ ಮೂಲವನ್ನು ಸಂಭ್ರಮಿಸಬಹುದಾದರೂ, ಈಕೆ ತನ್ನ ಬದುಕು ಕಟ್ಟಿಕೊಂಡಿರುವುದು ದಕ್ಷಿಣ ಆಫ್ರಿಕಾದ ದಮನಿತ ಸಮುದಾಯಗಳ ನಡುವೆ, ಶೋಷಿತರೊಡನೆ ಹಾಗೂ ಅವಕಾಶವಂಚಿತ ಸಮಾಜಗಳಲ್ಲಿ. ಈಕೆಯ ತಂದೆ ಬಸ್ ಚಾಲಕರಾಗಿ ಬದುಕು ಸವೆಸಿದವರು. ನಾಟಾಲ್ ಪ್ರಾಂತ್ಯದಲ್ಲಿ ತಮ್ಮ ಕಾನೂನು ಪದವಿ ಪಡೆದ ನವಿ ಪಿಳ್ಳೆ 1967ರಲ್ಲಿ ತಮ್ಮ ಕಾನೂನು ಸೇವೆಯನ್ನು ಆರಂಭಿಸಿದರು. ಈ ಪ್ರಾಂತ್ಯದಲ್ಲಿ ಕಾನೂನು ಸೇವೆಯನ್ನು ಆರಂಭಿಸಿದ ಮೊಟ್ಟಮೊದಲ ಮಹಿಳೆಯಾಗಿ ನವಿ ಪಿಳ್ಳೆ ದಾಖಲಾಗಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ಹೋರಾಡುವವರ ಹಾಗೂ ರಾಜಕೀಯ ಖೈದಿಗಳ ಪರ ವಕಾಲತ್ತು ವಹಿಸಲಾರಂಭಿಸಿದ ನವಿ ಪಿಳ್ಳೆ ತದನಂತರದಲ್ಲಿ ಶಾಂತಿ, ಸಹಬಾಳ್ವೆ, ಪ್ರಜಾಪ್ರಭುತ್ವ ಮತ್ತು ಮಾನವೀಯ ಸಮಾಜಕ್ಕಾಗಿ ಇಡೀ ಜೀವನವನ್ನು ಅರ್ಪಿಸಿದ್ದಾರೆ.
ಈ ಕಾರಣಗಳಿಗಾಗಿಯೇ ನವಿ ಪಿಳ್ಳೆ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 125 ವರ್ಷಗಳ ನೊಬೆಲ್ ಇತಿಹಾಸದಲ್ಲಿ ಶಾಂತಿ ಪ್ರಶಸ್ತಿ ಪಡೆದ ಅತ್ಯಂತ ಅರ್ಹ ವ್ಯಕ್ತಿ ಎಂದೇ ನವಿ ಪಿಳ್ಳೆ ಅವರನ್ನು ಬಣ್ಣಿಸಲಾಗುತ್ತಿದೆ. ಇದು ಉತ್ಪ್ರೇಕ್ಷೆಯ ಮಾತುಗಳಲ್ಲ. ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸಿದ ಕೆಲವೇ ವರ್ಷಗಳಲ್ಲೇ, 1973ರಲ್ಲಿ ರಾಬನ್ ದ್ವೀಪದಲ್ಲಿ ಖೈದಿಯಾಗಿದ್ದ ನೆಲ್ಸನ್ ಮಂಡೇಲಾ ಅವರಿಗೆ ಕಾನೂನುಬದ್ಧವಾಗಿ ಪ್ರತಿನಿಧಿಸಲ್ಪಡುವ (Legal representation) ಹಕ್ಕನ್ನು ನವಿ ಪಿಳ್ಳೆ ದಕ್ಕಿಸಿಕೊಂಡಿದ್ದರು. ತದನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ನವಿ ಪಿಳ್ಳೆ , ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ನಂತರದ ಹೊಸ ಸಂವಿಧಾನದಲ್ಲಿ ಸಮಾನತೆಯ ನಿಯಮವನ್ನು ಅಳವಡಿಸಲು ಆಂದೋಲನವನ್ನು ಹಮ್ಮಿಕೊಂಡಿದ್ದರು.

ವಿಶ್ವ ಶಾಂತಿಯ ಪರಿಚಾರಕಿಯಾಗಿ
1995ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ನೆಲ್ಸನ್ ಮಂಡೇಲಾ ನವಿ ಪಿಳ್ಳೆ ಅವರನ್ನು ರವಾಂಡಾದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಲಿಗೆ ನೇಮಿಸಿದ್ದರು. ನಾಲ್ಕು ವರ್ಷಗಳ ಕಾಲ ನ್ಯಾಯಮಂಡಲಿಯ ಅಧ್ಯಕ್ಷರಾಗಿ ಒಟ್ಟು ಎಂಟು ವರ್ಷಗಳ ಸೇವಾವಧಿಯನ್ನು ಪೂರೈಸಿದ್ದರು. ತಮ್ ಕಾರ್ಯಾವಧಿಯಲ್ಲಿ ನವಿ ಪಿಳ್ಳೆ ಎರಡು ಮಹತ್ವದ ನಿರ್ಣಯಗಳಿಗೆ ಕಾರಣರಾಗಿದ್ದರು. ಮೊದಲನೆಯದು, “ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ನರಮೇಧಕ್ಕೆ ಸಮನಾಗುತ್ತದೆ ” ಎಂಬ ಕಾಯ್ದೆ. (ಇದನ್ನು ಅಕಾಯೇಸು ಪ್ರಕರಣ ಎಂದೂ ಗುರುತಿಸಲಾಗುತ್ತದೆ.) ಎರಡನೆಯದು, “ ಟೂಟ್ಸಿ ಸಮುದಾಯಗಳ ವಿರುದ್ಧ ರೇಡಿಯೋ ಅಥವಾ ಮುದ್ರಣ ಮಾಧ್ಯಮಗಳ ಮೂಲಕ ದ್ವೇಷ ಹರಡುವುದನ್ನು ನರಮೇಧದ ಪ್ರಚೋದನೆ ”ಎಂದು ತೀರ್ಪು ನೀಡಿದ್ದರು. (ಇದನ್ನು ಮೀಡಿಯಾ ಪ್ರಕರಣ ಎನ್ನಲಾಗುತ್ತದೆ). ಭಾರತವನ್ನೂ ಒಳಗೊಂಡಂತೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳೆಂದು ಬೆನ್ನುತಟ್ಟಿಕೊಳ್ಳುವ ದೇಶಗಳಲ್ಲಿ ಇದನ್ನು ಊಹಿಸಿಕೊಳ್ಳಲಾದರೂ ಸಾಧ್ಯವೇ ?
ಈ ಹುದ್ದೆಯನ್ನು ತೊರೆದ ನಂತರ ನವಿ ಪಿಳ್ಳೆ 2003-08ರ ಅವಧಿಗೆ ಆಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ, 2008-14ರ ಅವಧಿಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ 2021-25ರ ಅವಧಿಯಲ್ಲಿ ಆಕ್ರಮಿತ ಪ್ಯಾಲೆಸ್ಟೈನ್ ಭೂಪ್ರದೇಶದ ಬಗ್ಗೆ ತನಿಖಾ ಆಯೋಗಕ್ಕೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮ್ಯಾನ್ಮಾರ್ ವಿರುದ್ಧ ನರಮೇಧ ಮೊಕದ್ದಮೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆಯಾಗಿ ಗ್ಯಾಂಬಿಯಾ ದೇಶದಿಂದ ನೇಮಿಸಲ್ಪಟ್ಟಿದ್ದಾರೆ. ನವಿ ಪಿಳ್ಳೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವುದರ ಮೂಲಕ ನೊಬೆಲ್ ಸಮಿತಿ, ಕಳೆದ ವರ್ಷ ಅಮೆರಿಕದ ಕಟ್ಟಾ ಬೆಂಬಲಿಗರಾದ ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೋ ಅವರಿಗೆ ಶಾಂತಿ ಪ್ರಶಸ್ತಿ ನೀಡಿದ ಕಳಂಕವನ್ನು ತೊಡೆದುಹಾಕಿದೆ. ಮಚಾಡೋ ತಮಗೆ ಸಂದ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ಗೆ ಉಡುಗೊರೆಯಾಗಿ ನೀಡುವ ಮೂಲಕ , ನೊಬೆಲ್ ಪ್ರಶಸ್ತಿಯನ್ನೇ ಅವಮಾನಿಸಿದ್ದರು.
ತತ್ವಜ್ಞಾನಿ ಪ್ಲೇಟೋನ ರಿಪಬ್ಲಿಕ್ನಲ್ಲಿ ತ್ರಾಸಿಮಾಕಸ್ ಒಂದು ಕಡೆ “ ನ್ಯಾಯ ಎನ್ನುವುದು ಬಲಾಢ್ಯರಿಗೆ ಇರುವಂತಹ ಒಂದು ಅನುಕೂಲ ” ಎಂದು ಹೇಳುತ್ತಾನೆ. ಈ ತತ್ವವನ್ನೇ ವರ್ತಮಾನದ ಸಾಮ್ರಾಜ್ಯಶಾಹಿ ದೇಶಗಳು, ಸರ್ವಾಧಿಕಾರಿ ಆಡಳಿತಗಳು ತಮ್ಮ ನೀತಿಯನ್ನಾಗಿ ಅಳವಡಿಸಿಕೊಂಡಿವೆ. ಎರಡನೆ ಮಹಾ ಯುದ್ಧದ ನಂತರ ರೂಪುಗೊಂಡ ಜಾಗತಿಕ ವಾತಾವರಣದಲ್ಲಿ “ ಶಾಶ್ವತ ಶಾಂತಿ ಸ್ಥಾಪಿಸುವುದೇ ಆದರೆ ಅದನ್ನು ಕಾನೂನುಬದ್ಧ ತತ್ವಗಳ ತಳಪಾಯದ ಮೇಲೆ ನಿರ್ಮಿಸಬೇಕೇ ಹೊರತು ಶಿಥಿಲವಾದ ಅಧಿಕಾರ ಸಮತೋಲನದ ಆಧಾರದ ಮೇಲಲ್ಲ ” ಎಂಬ ನಿಯಮವನ್ನು ವಿಶ್ವಸಂಸ್ಥೆ ಅಳವಡಿಸಿಕೊಂಡಿತ್ತು. ನವಿ ಪಿಳ್ಳೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಮೂಲಕ ಈ ತತ್ವವನ್ನು ನೊಬೆಲ್ ಸಮಿತಿ ಮತ್ತೊಮ್ಮೆ ದೃಢೀಕರಿಸಿದಂತಾಗಿದೆ.

ದಿಟ್ಟ ನಿರ್ಧಾರಗಳ ರೂವಾರಿಯಾಗಿ
2025ರ ಸೆಪ್ಟಂಬರ್ನಲ್ಲಿ ವಿಶ್ವಸಂಸ್ಥೆಯ ತನಿಖಾ ಆಯೋಗದ ಅಧ್ಯಕ್ಷೆಯಾಗಿ ನವಿ ಪಿಳ್ಳೆ , ಇಸ್ರೇಲ್ ಗಾಝಾ ಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಜನತೆಯ ವಿರುದ್ಧ ನರಮೇಧ ನಡೆಸಿದೆ ಎಂದು ತೀರ್ಪು ನೀಡಿದ್ದೇ ಅಲ್ಲದೆ, ಅಕ್ಟೋಬರ್ 2023ರ ನಂತರದಲ್ಲಿ ಇಸ್ರೇಲ್ 1948ರ ನರಮೇಧ ಒಪ್ಪಂದದಲ್ಲಿ (Genocide convention) ನಮೂದಿಸಲಾಗಿರುವ ಐದರಲ್ಲಿ ನಾಲ್ಕು ಅಪರಾಧಗಳನ್ನು ಎಸಗಿದೆ ಎಂದು ದೃಢೀಕರಿಸಲಾಗಿತ್ತು. ಇದೇ ರೀತಿಯಲ್ಲಿ ರವಾಂಡಾದಲ್ಲೂ ಮೂವರನ್ನು ನರಮೇಧದ ಅಪರಾಧಿಗಳಾಗಿ ನವಿ ಪಿಳ್ಳೆ ಗುರುತಿಸಿದ್ದರು. ರವಾಂಡ ಮತ್ತು ಇಸ್ರೇಲ್ನ ಆಕ್ರಮಣಗಳನ್ನು ಕೇವಲ ಯುದ್ಧಾಪಘಾತಗಳು ಎಂದು ಪರಿಗಣಿಸದೆ, ಅವುಗಳ ಹಿಂದೆ ಸಾಮಾನ್ಯ ಜನರ ವಿನಾಶ ಮಾಡುವ ವ್ಯವಸ್ಥಿತ ಷಡ್ಯಂತ್ರಗಳಿವೆ ಎಂದು ಹೇಳುವ ನವಿ ಪಿಳ್ಳೆ ಅಕ್ಟೋಬರ್ 7ರ ಹಮಾಸ್ ದಾಳಿಯನ್ನೂ ಅಷ್ಟೇ ತೀವ್ರವಾಗಿ ಖಂಡಿಸುತ್ತಾರೆ. ಯಾವುದೇ ಅಪರಾಧವಾದರೂ, ಎಷ್ಟೇ ಗಂಭೀರವಾದರೂ ನರಮೇಧವನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ ಎಂದು ನವಿ ಪಿಳ್ಳೆ ವಾದಿಸುತ್ತಾರೆ.
ಸಹಜವಾಗಿ ಟ್ರಂಪ್ ಮತ್ತು ನೆತನ್ಯಾಹು ನೊಬೆಲ್ ಸಮಿತಿಯ ನಿರ್ಧಾರವನ್ನು ಖಂಡಿಸಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶಸ್ತ್ರೀಕರಣಗೊಳಿಸಲಾಗಿದೆ (Weaponised) ಎಂದು ಇಬ್ಬರೂ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಈ ಇಬ್ಬರು ನಾಯಕರ ನಿರ್ಧಾರಗಳು ಇಡೀ ಜಗತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವುದನ್ನು ಯಾರಿಂದಲೂ ಅಲ್ಲಗಳೆಯಲಾಗದು. ಅಮೆರಿಕ ತನ್ನ ಸಂಚಿತ ಶಕ್ತಿಯನ್ನೆಲ್ಲಾ ಬಳಸಿ, ಇತರ ದೇಶಗಳ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುತ್ತಿದೆ, ಇದೇ ವೇಳೆ ಇಂತಹ ಕೃತ್ಯಗಳನ್ನು ನಿಯಂತ್ರಿಸಲೆಂದೇ ಇರುವ ಜಾಗತಿಕ ಸಂಸ್ಥೆಗಳನ್ನು ಧ್ವಂಸ ಮಾಡುತ್ತಿದೆ. ಇತ್ತ ದಕ್ಷಿಣ ಭೂಗೋಳದಲ್ಲಿ ಮ್ಯಾನ್ಮಾರ್ನ ಸರ್ವಾಧಿಕಾರಿ ಆಳ್ವಿಕೆಯು ದೇಶದ ಪ್ರಜೆಗಳ ವಿರುದ್ಧವೇ ಯುದ್ಧ ಸಾರಿದೆ. 2017ರಿಂದ ಈವರೆಗೆ ರೊಹಿಂಗ್ಯಾ ಸಮುದಾಯದ ಲಕ್ಷಾಂತರ ಜನರನ್ನು ಉಚ್ಛಾಟಿಸಿದೆ. ಈ ಅಮಾನುಷ ಘಟನೆಗಳಿಗೆ ವಿಶ್ವ ಸಮುದಾಯದ ಮೌನ ಅಚ್ಚರಿ ಮೂಡಿಸುತ್ತದೆ.

ಅನಿಶ್ಚಿತತೆಯ ನಡುವೆ ಭರವಸೆ
ನವ ಉದಾರವಾದ ಮತ್ತು ಕಾರ್ಪೋರೇಟ್ ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸಿರುವ ಅನಿಶ್ಚಿತತೆ, ನಿರುದ್ಯೋಗ, ಅಭದ್ರತೆ ಮತ್ತು ದುರ್ಭರ ಜೀವನ ನಿರ್ವಹಣೆಯ ವಾತಾವರಣದಲ್ಲಿ, ಜಗತ್ತಿನ ಬಹಳಷ್ಟು ದೇಶಗಳು ಒಂದೆಡೆ ಪ್ರಜಾಸತ್ತಾತ್ಮಕ ಜನಾಂದೋಲನಗಳಿಗೆ ಸಾಕ್ಷಿಯಾಗುತ್ತಿದ್ದರೆ ಮತ್ತೊಂದು ಬದಿಯಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲೇ ಸರ್ವಾಧಿಕಾರಿ ಆಳ್ವಿಕೆಗಳಿಗೂ ಮುಖಾಮುಖಿಯಾಗುತ್ತಿವೆ. ಇಂತಹ ವಿಷಮ ಸನ್ನಿವೇಶದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಗಳ ನ್ಯಾಯಮೂರ್ತಿಗಳು , ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಎಚ್ಚೆತ್ತುಕೊಳ್ಳುವುದು ಅವಶ್ಯ. ಶಾಂತಿಯುತ ಜನಾಂದೋಲನಗಳ ವಿರುದ್ಧ ಹಿಂಸಾತ್ಮಕ ನಿಯಂತ್ರಣಾಧಿಕಾರವನ್ನು ಪ್ರಯೋಗಿಸುವ ಸರ್ಕಾರಗಳ ಅಮಾನುಷ ಪ್ರವೃತ್ತಿಯ ವಿರುದ್ಧ ವಿಶ್ವ ಸಮುದಾಯವೂ ದನಿ ಎತ್ತಬೇಕಿದೆ.
ಬಹುಶಃ ನವನೇತಮ್ ನವಿ ಪಿಳ್ಳೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದು, ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ನೊಬೆಲ್ ಸಮಿತಿಯ ಈ ನಿರ್ಧಾರ ಈವರೆಗಿನ ತಪ್ಪು ನಿರ್ಣಯಗಳಿಗೆ ಪ್ರಾಯಶ್ಚಿತ್ತದಂತೆಯೂ ಕಾಣುತ್ತದೆ. ಜಗತ್ತಿಗೆ ಶಾಂತಿ ಬೇಕಿದೆ ಹಾಗೆಂದ ಮಾತ್ರಕ್ಕೆ ಆಳುವ ವರ್ಗಗಳ ದಬ್ಬಾಳಿಕೆ, ಅನ್ಯಾಯ, ಪ್ರಜಾತಂತ್ರ ವಿರೋಧಿ ನಡೆಗಳಿಗೆ ಪ್ರತಿರೋಧವನ್ನೂ ತೋರದೆ ಮೌನವಾಗಿರುವುದಲ್ಲ. ಹೋರಾಟಗಳೂ ಶಾಂತಿಯುತವಾಗಿರುವುದು ವರ್ತಮಾನದ ತುರ್ತು. ಭಾರತದ ಜೆನ್ ಝಿ ಆಂದೋಲನ ಇದನ್ನು ದೃಢೀಕರಿಸುತ್ತಿದೆ. ಸಮಾಜದಲ್ಲಿ ಶಾಂತಿ ಕಾಪಾಡುವ ನೆಪದಲ್ಲಿ ನ್ಯಾಯಕ್ಕಾಗಿ ಹೋರಾಡುವ ದನಿಗಳನ್ನು ಕ್ರೂರವಾಗಿ ಹತ್ತಿಕ್ಕುವ ಸರ್ಕಾರಗಳಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ಕಣ್ತೆರೆಸಬೇಕಿದೆ.
ವಿಶ್ವ ಶಾಂತಿಯ ಪರಿಚಾರಕರಾಗಿ ನವನೇತಮ್ ನವಿ ಪಿಳ್ಳೆ ಭಾರತೀಯ ಮೂಲವನ್ನು ಹೊಂದಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಆದರೆ ಭಾರತ ಸರ್ಕಾರ ಈವರೆಗೂ ಅಧಿಕೃತವಾಗಿ ಆಕೆಗೆ ಅಭಿನಂದನೆಗಳನ್ನು ಸಲ್ಲಿಸದೆ ಇರುವುದು ಒಪ್ಪುವಂತಹ ನಡೆಯಲ್ಲ. ಆಕೆಯ ಪೂರ್ವಜರು ಭಾರತದ ನೆಲದಲ್ಲಿ ಬದುಕು ಸವೆಸಿದ್ದಾರೆ ಎನ್ನುವುದು ಕಾಕತಾಳೀಯ ಆಕಸ್ಮಿಕವಷ್ಟೇ. ತಳಸಮುದಾಯದ ಓರ್ವ ಮಹಿಳೆ ವಿಶ್ವ ಶಾಂತಿಗಾಗಿ ತಮ್ಮ ಬದುಕು ಸವೆಸುತ್ತಿರುವುದು, ಈಗ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವುದು ಮನುಕುಲದ, ವಿಶ್ವ ಮಹಿಳಾ ಸಂಕುಲದ ಹೆಮ್ಮೆಯ ವಿಚಾರ. ಡಿಜಿಟಲ್ ಮಾರುಕಟ್ಟೆ ಆರ್ಥಿಕತೆಯಲ್ಲಿ ಸಾಂಸ್ಕೃತಿಕ ಜಗತ್ತೂ ಸೇರಿದಂತೆ ಸಕಲವೂ ಸರಕೀಕರಣಕ್ಕೊಳಗಾಗುತ್ತಿರುವಾಗ (Commodification) ಪ್ರಶಸ್ತಿಗಳು ವಿನಿಯಮದ ಸರಕುಗಳಂತಾಗಿರುವುದು ವಾಸ್ತವ.
ಈ ಮಾರುಕಟ್ಟೆ ವಾತಾವರಣದಲ್ಲೂ ತಮ್ಮ ಅರ್ಹತೆ-ದಕ್ಷತೆ-ಬದ್ಧತೆ ಮತ್ತು ಸಾಧನೆಯ ಪುರಸ್ಕಾರವಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ನವನೇತಮ್ ನವಿ ಪಿಳ್ಳೆ ಅಭಿನಂದನಾರ್ಹರು.
(ಈ ಲೇಖನದ ಆಧಾರ : The Jurist and a redemption – ಶ್ರೀನಿವಾಸನ್ ರಮಣಿ – ದ ಹಿಂದೂ 11 ಅಕ್ಟೋಬರ್ 2026)





