ನಾ ದಿವಾಕರ
“ಸಂವಾದಾತ್ಮಕವಾಗಿ(Dialogically) ವರ್ತಿಸದೆ, ತಮ್ಮ ನಿರ್ಧಾರಗಳನ್ನು ಹೇರುವುದನ್ನೇ ಪ್ರಧಾನವಾಗಿ ಅನುಕರಿಸುವ ನಾಯಕರು ಜನರನ್ನು ಸಂಘಟಿಸುವುದಿಲ್ಲ—ಬದಲಾಗಿ ಅವರನ್ನು ತಮ್ಮ ಇಚ್ಛೆಯಂತೆ ಬಳಸಿಕೊಳ್ಳುತ್ತಾರೆ ಅಥವಾ ದುರ್ಬಳಕೆ (Manipulate) ಮಾಡಿಕೊಳ್ಳುತ್ತಾರೆ. ಅವರೂ ವಿಮೋಚನೆ ಹೊಂದುವುದಿಲ್ಲ ಜನರನ್ನೂ ವಿಮೋಚನೆಗೊಳಿಸುವುದಿಲ್ಲ. ಬದಲಾಗಿ ದಮನಕಾರಿಗಳಾಗುತ್ತಾರೆ.” ― ಪಾಲೊ ಫ್ರೈರೆ, ‘ದಮನಿತರ ಶಿಕ್ಷಣಶಾಸ್ತ್ರ’ (Pedagogy of the Oppressed). 20ನೆಯ ಶತಮಾನದ ಮಾರ್ಕ್ಸ್‌ವಾದಿ ತತ್ವಜ್ಞಾನಿಯ ಈ ಮಾತುಗಳು ದಶಕಗಳ ನಂತರವೂ ಧ್ವನಿಸುತ್ತಿರುವುದನ್ನು ಕಾಣಬೇಕಾದರೆ ʼ ಭಾರತ ದರ್ಶನ ʼ ಮಾಡಬೇಕು. ಪಾಲೋ ಫ್ರೈರೆ ಅವರ ಈ ದಾರ್ಶನಿಕ ನುಡಿಗಳ ಸಾರ್ವಕಾಲಿಕ ಪ್ರಸ್ತುತತೆ ಇರುವುದು ಅದರ ಅಂತರ್‌ದೃಷ್ಟಿಯ ವಿಶಾಲ ಹಂದರದಲ್ಲಿ.
ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ಭಾರತ ಇನ್ನು ಎರಡು ದಶಕಗಳಲ್ಲಿ ʼ ವಿಕಸಿತ ʼ ಎಂದು ಬೆನ್ನುತಟ್ಟಿಕೊಳ್ಳಲು ಸಿದ್ಧವಾಗುತ್ತಿದೆ. ʼವಿಕಾಸʼ ಪದದ ಕಲ್ಪನೆ-ಅರ್ಥವನ್ನು ಹಿಗ್ಗಿಸುತ್ತಾ ಹೋಗುವುದಕ್ಕಿಂತಲೂ ಆದಷ್ಟೂ ಸಂಕುಚಿತಗೊಳಿಸುತ್ತಿರುವುದು ನಾವು ಕಾಣುತ್ತಿರುವ ಒಂದು ವಿಲಕ್ಷಣ. ಈ ವಿಕಾಸದ ಹೆಬ್ಬಾಗಿಲು ಗುರುತಿಸಬಹುದಾದ ಒಂದು ಬೆಳವಣಿಗೆ ಎಂದರೆ “ ಸಾರ್ವಜನಿಕ ಜೀವನದ ನಿರ್ಲಿಪ್ತ ಮನಸ್ಥಿತಿ ಸಾಂಸ್ಥೀಕರಣಕ್ಕೊಳಗಾಗಿರುವುದು”. ವ್ಯಕ್ತಿ ತನ್ನ ಲಜ್ಜೆ ಕಳೆದುಕೊಂಡಾಗ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಬದುಕಬಹುದು. ಆದರೆ ಒಂದು ಸಮಾಜ ನಿರ್ಲಜ್ಜವಾದರೆ ಇಡೀ ನಾಗರಿಕತೆಯನ್ನೇ (Civilisation) ನೈತಿಕತೆಯ ಪಾತಾಳಕ್ಕೆ ದೂಡುತ್ತದೆ.
ಈ ವಿಲಕ್ಷಣಕ್ಕೆ ವಿಕಾಸದ ಹಾದಿಯ ಭಾರತ ಸಾಕ್ಷಿಯಾಗುತ್ತಿದೆ. ಅತ್ಯಾಚಾರ-ದೌರ್ಜನ್ಯಗಳಿಗೆ ಭಾರತೀಯ ಸಮಾಜ ಸದಾ ಸಾಪೇಕ್ಷ ಕಣ್ಣೋಟವನ್ನೇ ರೂಢಿಸಿಕೊಂಡುಬಂದಿದೆ. ಸಮಾಜದ ಬೌದ್ಧಿಕ ಉನ್ನತಿ (Intellectual upliftment) ಈ ಕಣ್ಣೋಟವನ್ನು ಸೂಕ್ಷ್ಮಗ್ರಾಹಿಯಾಗಿಸಬೇಕು. ಲಿಂಗತ್ವ ಸೂಕ್ಷ್ಮತೆ (Gender Sensitivity) ಕೇವಲ ತರಗತಿಗಳಲ್ಲಿ, ಶಿಬಿರಗಳಲ್ಲಿ ಬೋಧನೆಯ ಪಠ್ಯವಾಗುವುದು, ಅಭಿವೃದ್ಧಿ ಹೊಂದಿದ ಸಮಾಜಕ್ಕೆ ಶೋಭೆ ತರುವುದಿಲ್ಲ. ವಿಕಸಿತ ದೇಶಕ್ಕೆ ಇದು ಅಪಮಾನಕರ. ವಿಪರ್ಯಾಸವೆಂದರೆ ತನ್ನ ವಿಕಾಸದ ಹಾದಿಯಲ್ಲಿ ಭಾರತ ಲಿಂಗತ್ವ ಅಸೂಕ್ಷ್ಮತೆಯನ್ನು (Gender Insensitivity) ಢಾಳಾಗಿ ಪ್ರದರ್ಶಿಸುತ್ತಿದೆ.
ಅತ್ಯಾಚಾರ ಒಂದು ಪರಂಪರೆಯಾಗಿ
ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜಧಾನಿ ನವದೆಹಲಿ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಎರಡೂ ಘಟನೆಗಳಲ್ಲಿ ಬಲಿಯಾದವರು ಅಪ್ರಾಪ್ತ ವಯಸ್ಸಿನ ಬಾಲೆಯರೇ ಆಗಿದ್ದಾರೆ. ಚಲಿಸುತ್ತಿರುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಯುವುದು ವಿಶಿಷ್ಟ ಲಕ್ಷಣವಾಗಿ ನಮ್ಮ ನಡುವೆ ಚಾಲ್ತಿಯಲ್ಲಿದೆ. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ದೆಹಲಿಯ ಸ್ವರೂಪ್ ನಗರದಲ್ಲಿ 17 ವರ್ಷದ ಬಾಲೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವುದು ವರದಿಯಾಗಿದೆ. ಕೊಲೆಯಾದ ಹಲವು ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹದ ಕೆಲವು ಭಾಗಗಳು ಬೀದಿ ನಾಯಿಗಳ ಪಾಲಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಕಾಣಬಹುದಾದ ಸಮಾನ ಎಳೆ ಎಂದರೆ ಅತ್ಯಾಚಾರ ಎಸಗಿದವರಲ್ಲಿ ಅಪ್ರಾಪ್ತ ಬಾಲಕರೂ ಇರುವುದು. ಮತ್ತೊಂದು ಸಮಾನ ಲಕ್ಷಣ ಎಂದರೆ ಎರಡೂ ಘಟನೆಗಳು ಸ್ಥಳೀಯವಾಗಿಯೇ ತೆರೆಮರೆಗೆ ಸರಿದಿರುವುದು. ಭಾರತದ ಮಹಿಳಾ ಸಂಘಟನೆಗಳು ಇನ್ನೆಷ್ಟು ಮೇಣದ ಬತ್ತಿಗಳನ್ನು ಹಿಡಿದು, ವೃತ್ತಗಳಲ್ಲಿ ನಿಲ್ಲಬೇಕು ? ಇನ್ನೆಷ್ಟು STOP RAPE (ಅತ್ಯಾಚಾರ ನಿಲ್ಲಿಸಿ) ಎಂಬ ಫಲಕಗಳನ್ನು ಹಿಡಿದು ಮೆರವಣಿಗೆ ಮಾಡಬೇಕು ? ಇನ್ನೆಷ್ಟು ಮಾನವ ಸರಪಳಿಗಳನ್ನು (Human Chains) ಆಯೋಚಿಸಬೇಕು ? ಸಮಾಜದ ಈ ಕ್ರೌರ್ಯ ಮತ್ತು ಪಿತೃಪ್ರಧಾನ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಸಾರ್ವಜನಿಕವಾಗಿ ಖಂಡಿಸಲು ಮಹಿಳಾ ಸಂಘಟನೆಗಳೇ ಮುಂದಡಿಯಿಡಬೇಕು. ಇಲ್ಲವಾದರೆ ಇವೆಲ್ಲವೂ ಸಹನೀಯವಾಗಿಬಿಡುತ್ತವೆ (Tolerable) ̧
ಮಥುರಾದಿಂದ ಸ್ವರೂಪ್‌ನಗರದವರೆಗೂ ವಿಸ್ತರಿಸುವ ಸ್ವತಂತ್ರ ಭಾರತದ ಈ ಕತ್ತಲ ಪಯಣದಲ್ಲಿ ನೊಂದವರೆಷ್ಟೋ, ಬೆಂದವರೆಷ್ಟೋ, ಅಳಿದವರೆಷ್ಟೋ, ಉಳಿದು ಸತ್ತಂತಿರುವವರು ಎಷ್ಟೋ ? ಯಾರು ಬಲ್ಲರು. ದಾಖಲೆಗಳಾದರೂ ಎಲ್ಲಿವೆ ? ಈ ಘೋರ ಕೃತ್ಯಗಳ ವಿರುದ್ಧ ದನಿಎತ್ತಬೇಕಾದ ಕನಿಷ್ಠ ವಿವೇಕವನ್ನೂ ಪುರುಷ ಕೇಂದ್ರಿತ ಸಾಂಸ್ಥಿಕ ಕೇಂದ್ರಗಳು ಕಳೆದುಕೊಂಡಿರುವುದು ಏನನ್ನು ಸೂಚಿಸುತ್ತದೆ ? ಈ ದುರ್ಗತಿಗೆ ಕಾರಣ ಯಾರು ? ಕೇವಲ ರಾಜಕೀಯ ಪಕ್ಷಗಳಲ್ಲ ಅಥವಾ ಪಕ್ಷಗಳ ಸೈದ್ಧಾಂತಿಕ ಆಡಳಿತ ನೀತಿಗಳೂ ಅಲ್ಲ. ಕಾಂಗ್ರೆಸ್ ಇರಲಿ, ಆಮ್ ಆದ್ಮಿ ಇರಲಿ, ಬೇಟಿ ಬಚಾವೋ ಫಲಕ ಹಿಡಿದ ಬಿಜೆಪಿ ಇರಲಿ, ರಾಜಧಾನಿಯ ಅತ್ಯಾಚಾರ ಪ್ರಕರಣಗಳಿಗೇನೂ ವ್ಯತ್ಯಯ ಉಂಟಾಗುವುದಿಲ್ಲ.
ಅಸೂಕ್ಷ್ಮತೆಯ ಮೂಲ ಬೇರುಗಳು
ಈ ಅಸೂಕ್ಷ್ಮತೆಯ ಕಾರಣವೇನು ? 1990ರ ನಂತರದಲ್ಲಿ ಭಾರತೀಯ ಸಮಾಜವನ್ನು ರೂಪಿಸುತ್ತಿರುವ (Moulding) ಮತ್ತು ನೇಪಥ್ಯದಿಂದಲೇ ನಿರ್ದೇಶಿಸುತ್ತಿರುವ ಬಲಪಂಥೀಯ ರಾಜಕೀಯ ಹಾಗೂ ಸಾಂಪ್ರದಾಯಿಕ ಶಕ್ತಿಗಳು, ಸಹಜೀವಿಗಳ ಸಾವು ನೋವುಗಳನ್ನು ಸಾಪೇಕ್ಷವಾಗಿ ನೋಡುವ (Relative) ವಿಧಾನವನ್ನು ಕಲಿಸಿಕೊಟ್ಟಿವೆ. ಅತ್ಯಾಚಾರಕ್ಕೊಳಗಾದವರನ್ನು ಕಾನೂನು ವ್ಯವಸ್ಥೆ ವೈದ್ಯಕೀಯವಾಗಿ ಮರಣೋತ್ತರ ಪರೀಕ್ಷೆಗೊಳಪಡಿಸುತ್ತದೆ , ಇದಕ್ಕೆ ಸಮಾನಾಂತರವಾಗಿ ಈ ದೇಹಗಳ ಹುಟ್ಟಿನ ಗುರುತುಗಳನ್ನು (Born identity) ಜಾತಿ-ಧರ್ಮದ ಮಸೂರದಿಂದ ನೋಡುವ ಹೀನ ಮನಸ್ಥಿತಿಯನ್ನೂ ಈ ಸಮಾಜವೇ ಸೃಷ್ಟಿಸಿದೆ. ಈ ಮರಣೋತ್ತರ ಜಾತಿ-ಧರ್ಮ ಪರೀಕ್ಷೆಯ ಫಲಿತಾಂಶ, ಸಾರ್ವಜನಿಕ-ರಾಜಕೀಯ-ಸಾಮಾಜಿಕ ಪ್ರತಿರೋಧವನ್ನೂ ನಿರ್ಧರಿಸುತ್ತದೆ. ದೆಹಲಿಯ ಎರಡೂ ಘಟನೆಗಳು ಈ ವ್ಯಾಪ್ತಿಯಿಂದ ಹೊರಗುಳಿದಿರುವುದನ್ನು ಇನ್ನು ಹೇಗೆ ವ್ಯಾಖ್ಯಾನಿಸಲು ಸಾಧ್ಯ ?
ಪಕ್ಕದ ಸಹಜೀವಿಯ ಬದುಕು ನಾಶವಾಗುತ್ತಿದ್ದರೂ, ನಿತ್ಯ ಬದುಕುವ ಸಮಾಜ ನೈತಿಕ ಅವನತಿಯತ್ತ ಸಾಗುತ್ತಿದ್ದರೂ ನಿರ್ಲಿಪ್ತತೆಯಿಂದಿರುವ ಮನಸ್ಥಿತಿಯನ್ನು ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ರೂಪಿಸಿದೆ. ಈ ದುರ್ಗತಿಗೆ ನಾವು ಒಳಗಾಗಿರುವುದಾದರೂ ಏಕೆ ? ಹೇಗೆ ? ಬಹುಶಃ ಉತ್ತರಿಸುವುದು ಕಷ್ಟ. ಈ ಸಾಹಸವನ್ನು ಕೊಂಚ ಮುಂದೂಡಿಕೊಂಡು, ಕಣ್ಣುಗಳನ್ನು ಅಗಲವಾಗಿ ತೆರೆದು ನೋಡುವುದಕ್ಕಾದರೂ ಮನಸ್ಸಾದರೆ ಎರಡು ರಾಜ್ಯಗಳು ಥಟ್ಟನೆ ಮುಂದೆ ನಿಲ್ಲುತ್ತವೆ. ಗುಜರಾತ್ ಮತ್ತು ಮಧ್ಯಪ್ರದೇಶ ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿದಾಗ, ನಾವು ಸಾಗುತ್ತಿರುವುದು ʼ ವಿಕಾಸದ ಹಾದಿಯಲ್ಲೋ ʼ ಅಥವಾ ವಿನಾಶದ ದಾರಿಯಲ್ಲೋ ಎಂಬ ಅನುಮಾನ ಮೂಡುತ್ತದೆ.
ಹೆಣ್ಣು – ವಸ್ತುಶಃ ಹಿತ್ತಲ ವಸ್ತುವಾದಾಗ
ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣುವುದು ಭಾರತೀಯ ಪಿತೃಪ್ರಧಾನ ಸಮಾಜದ, ಶತಮಾನಗಳ ಪರಂಪರೆ. ಆಧುನಿಕತೆ ಮತ್ತು ಉನ್ನತ ಶಿಕ್ಷಣ ಸಮಾಜವನ್ನು ಈ ಕೋಶದಿಂದ ಹೊರತರಬೇಕಿತ್ತು. ಆದರೆ ತರಲು ಸಾಧ್ಯವಾಗಿಲ್ಲ. ಹೆತ್ತವರಿಗೂ ಸಹ ಹೆಣ್ಣು ಮಗು ಎಂದರೆ ʼ ಆದಷ್ಟೂ ಬೇಗನೆ ಸಾಗಿಹಾಕಬೇಕಾದ ಜೀವ ʼದಂತೆಯೇ ಕಾಣುವ ಸಾಂಪ್ರದಾಯಿಕ ಮನಸ್ಥಿತಿ ಇಂದಿಗೂ ಜೀವಂತವಾಗಿದೆ. ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಬೇಟಿ ಪಢಾವೋ-ಬೇಟಿ ಬಡಾವೋ ಈ ಸರ್ಕಾರಿ ಘೋಷಣೆಗಳ ಹೊರತಾಗಿಯೂ ಕೌಟುಂಬಿಕ ಚೌಕಟ್ಟುಗಳಲ್ಲಿ ಹೆಣ್ಣು ಮಗು ಅನಪೇಕ್ಷಿತವಾಗುವ ಅಥವಾ ಅನಿವಾರ್ಯವಾದರೆ ರವಾನಿಸಬೇಕಾದ ಜೀವವಾಗಿಯೇ ಕಾಣುವುದು ವರ್ತಮಾನದ ವಾಸ್ತವ.
ಭಾರತದ ಅತ್ಯಂತ ಆರ್ಥಿಕ ಹಾಗೂ ಕೈಗಾರಿಕಾ ಅಭಿವೃದ್ಧಿ ಹೊಂದಿದ ರಾಜ್ಯ ಎಂದೇ ಗುರುತಿಸಲ್ಪಟ್ಟಿರುವ ಗುಜರಾತ್, ಕಳೆದ 25 ವರ್ಷಗಳಲ್ಲಿ ಹೊಸ ಅಭಿವೃದ್ಧಿ ಮಾದರಿಯನ್ನೇ ಕಲ್ಪಿಸಿದೆ. ಗುಜರಾತ್ ಮಾಡೆಲ್ ಆಡಳಿತ ವಲಯಗಳಲ್ಲಿ, ಆರ್ಥಿಕ ಸಂಕಥನಗಳಲ್ಲಿ ಸಾಮಾನ್ಯವಾಗಿ ಉಚ್ಛ ಶ್ರೇಣಿಯಲ್ಲಿ ಕಾಣುವ ಒಂದು ವಿದ್ಯಮಾನ. ಆದರೆ ಈ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವೂ, ಆಧುನಿಕ ಶಿಕ್ಷಣ-ಆರ್ಥಿಕತೆಯ ನೆಲೆಯೂ ಆಗಿರುವ ಅಹಮದಾಬಾದ್‌ನಿಂದ 200 ಕಿಲೋಮೀಟರ್ ದೂರದಲ್ಲಿರುವ ವಾಡಿಯಾ ಗ್ರಾಮ ಈ ಶ್ರೇಣೀಕರಣವನ್ನು ಪ್ರಶ್ನಿಸುತ್ತಿದೆ. ಹೆಣ್ಣು ಮಕ್ಕಳನ್ನೂ ನಮ್ಮ ಸಮಾಜ-ನಾಗರಿಕತೆಯ ಒಂದು ಅಂಶಿಕ ಭಾಗ ಎಂದು ಭಾವಿಸುವ ಯಾವುದೇ ಮನಸ್ಸಿಗೆ ವಾಡಿಯಾ ಗ್ರಾಮ ಆಘಾತಕಾರಿಯಾಗಿ ಕಾಣುತ್ತದೆ.
ಹೆಣ್ಣು ವಿನಿಮಯದ ಸರಕು ???
ಈ ಗ್ರಾಮದಲ್ಲಿ ಹೆಣ್ಣು ಹೆತ್ತವರ ಮುಂದೆ ಎರಡೇ ಆಯ್ಕೆಗಳಿರುತ್ತವೆ ಎಂದು ಇತ್ತೀಚಿನ ವರದಿಗಳು ಹೇಳುತ್ತವೆ. (https://www.telegraphindia.com/india/i-was-engaged-at-11-gujarat-village-uses-early-engagements-to-keep-girls-out-of-sex-work/cid/2180837). ಇಲ್ಲಿನ ಮಹಿಳೆಯರು ಶತಮಾನಗಳಿಂದ ಬೇರೂರಿರುವ ಕ್ರೂರ-ಅಮಾನುಷ ಪದ್ಧತಿಯಿಂದ ವಿಮೋಚನೆಗಾಗಿ ಹಪಹಪಿಸುತ್ತಿದ್ದಾರೆ. ಹೆಚ್ಚಾಗಿ ಅಲೆಮಾರಿ ಕುಟುಂಬಗಳೇ ವಾಸಿಸುವ ಈ ಗ್ರಾಮದಲ್ಲಿ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುವ ಪರಂಪರೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ಪುರುಷರೇ ಮಹಿಳೆಯರನ್ನು ಮಾರುಕಟ್ಟೆಗೆ ವಿನಿಮಯ ಮಾಡುವ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಾರೆ. (ಪ್ರಜಾವಾಣಿ ವರದಿ 21 ಸೆಪ್ಟಂಬರ್ 2026)
ತಮ್ಮ ಹೆಣ್ಣು ಮಕ್ಕಳ ಕಾಳಜಿ ವಹಿಸುವ ಪೋಷಕರು ಇತ್ತೀಚಿನ ದಿನಗಳಲ್ಲಿ ಈ ವಿಷಜಾಲದಿಂದ ತಪ್ಪಿಸಿಕೊಳ್ಳಲು ತಮ್ಮ ಮಕ್ಕಳಿಗೆ 7-8ನೆಯ ವಯಸ್ಸಿನಲ್ಲೇ ಮದುವೆ ನಿಶ್ಚಿತಾರ್ಥ ಮಾಡುತ್ತಾರೆ ಅಥವಾ ವಿವಾಹವನ್ನೇ ಮಾಡುತ್ತಿದ್ದಾರೆ. ಬನಾಸಕಂಠಾ ಜಿಲ್ಲೆಯಲ್ಲಿರುವ ವಾಡಿಯಾ ಗ್ರಾಮದಲ್ಲಿ 750 ಜನಸಂಖ್ಯೆ ಇದೆ. ಇಲ್ಲಿನ ಪುರುಷರು ದಿನನಿತ್ಯ ಮುಂಜಾನೆ ಪಾಲನ್‌ಫುರ-ಫರಾದ್ ಹೆದ್ದಾರಿಗೆ ಹೋಗಿ ನಿಲ್ಲುತ್ತಾರೆ. ಅಲ್ಲಿ ಉದ್ಯೋಗ ಅರಸುವುದಕ್ಕಲ್ಲ, ತಮ್ಮ ಗ್ರಾಮದ ಮಹಿಳೆಯರಿಗೆ ಗ್ರಾಹಕರನ್ನು ಕರೆತರಲು. ಈ ಕ್ರೌರ್ಯವನ್ನು ಹೇಗೆ ವ್ಯಾಖ್ಯಾನಿಸುವುದು ? ಬಾಲ್ಯ ವಿವಾಹ ಸಾಂವಿಧಾನಿಕವಾಗಿ ನಿಷಿದ್ಧವಾಗಿದ್ದರೂ ವಾಡಿಯಾ ಈ ದೃಷ್ಟಿಯಿಂದ ಕತ್ತಲ ದ್ವೀಪವಾಗಿಯೇ ಉಳಿದಿದೆ.
ಎಳೆಯ ವಯಸ್ಸಿನಲ್ಲೇ ವಿವಾಹ ನಿಶ್ಚಿತಾರ್ಥ ಮಾಡುವುದು ಬಾಲ್ಯ ವಿವಾಹದ ಮತ್ತೊಂದು ರೂಪ ಅಲ್ಲವೇ ? ಬಂಧನದ ಸರಳುಗಳು ಸಹ ನಿಶ್ಚಿತವಾಗುತ್ತವೆ. ಈ ರೀತಿ ಸಂಭಾವ್ಯ ಸಂಕೋಲೆಯ ಭೀತಿಯನ್ನೇ ಕನಸುತ್ತಾ ಬದುಕುವ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಹೇಗೆ ನಿಭಾಯಿಸಲು ಸಾಧ್ಯ ? ಪೋಷಕರ ದೃಷ್ಟಿಯಿಂದ ಇದು ಹೆಣ್ಣು ಮಕ್ಕಳನ್ನು ಸಂಭಾವ್ಯ ವೇಶ್ಯಾವಾಟಿಕೆಯಿಂದ ಪಾರು ಮಾಡುವ ವಿಧಾನವಾಗಿ ಕಾಣುತ್ತದೆ. ಇದು ಪಿತೃಪ್ರಧಾನ ಮೌಲ್ಯಗಳ ಹಿಂಬಾಗಿಲಿನ ಪ್ರವೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದು ಗಾಂಧಿ ಹುಟ್ಟಿದ ನಾಡು ಎಂದು ಬೆನ್ನುತಟ್ಟಿಕೊಳ್ಳುವ ಮುನ್ನ ಒಮ್ಮೆ ಯೋಚಿಸಬೇಕಾಗುತ್ತದೆ. ಸಾಬರಮತಿಯ ಮೌಲ್ಯಗಳು ಮಾರುಕಟ್ಟೆಯ ಜಗುಲಿಯಲ್ಲಿ, ಪಿತೃಪ್ರಧಾನ ಸಂತೆಯಲ್ಲಿ ಕಳೆದುಹೋಗಿವೆಯೇ ?
ಸಂಸೃತಿ ಪರಿಚಾರಕರ ರಾಜ್ಯದಲ್ಲಿ
ಗುಜರಾತ್ ಬಿಟ್ಟರೆ ಅತಿ ಹೆಚ್ಚು ಅವದಿ ನಿರಂತರ ಬಿಜೆಪಿ ಆಳ್ವಿಕೆಗೆ ಒಳಗಾಗಿರುವ ರಾಜ್ಯ ಎಂದರೆ ಮಧ್ಯಪ್ರದೇಶ. ಆರ್ಥಿಕವಾಗಿ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವಾದರೂ, ಹಿಂದುತ್ವ ರಾಜಕೀಯ ಸಾಂಸ್ಥಿಕ ಕರ್ಮಭೂಮಿಯಾಗಿ, ಸಂಘಪರಿವಾರದ ಸಾಂಸ್ಕೃತಿಕ-ಕೋಮುವಾದಿ ಪ್ರಯೋಗಾಲಯವಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದಿರುವ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಬಂಚಾಡಾಸ್ ಸಮುದಾಯ , ವಾಡಿಯಾ ಗ್ರಾಮದ ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತದೆ. (https://www.thehindu.com/news/national/madhya-pradesh/celebrated-at-birth-pushed-into-sex-work/article71290516.ece) ದ ಹಿಂದೂ ಪತ್ರಿಕೆಯ ಉಲ್ಲೇಖಿತ ವರದಿಯಲ್ಲಿ ಈ ಕತ್ತಲ ದ್ವೀಪದ ಪರಿಚಯ ಮಾಡಲಾಗಿದೆ.
ನೀಮುಚ್, ಮಂಡ್ಸೋರ್, ರತ್ಲಾಂ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಸಿಸುವ, 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಬಂಚಾಡಾಸ್ ಬುಡಕಟ್ಟು ಜನಾಂಗ ಅಧಿಸೂಚಿತವಲ್ಲದ ಸಮುದಾಯ. (De- notified Tribe)̤. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಜನಶೌರ್ಯ ಸಾಮಾಜಿಕ ಯೋಗಕ್ಷೇಮ ಮತ್ತು ಅಭಿವೃದ್ಧಿ ಸಂಸ್ಥೆ (NGO) ಅಂದಾಜು ಮಾಡಿರುವಂತೆ ಈ ಸಮುದಾಯದ ಕನಿಷ್ಠ 10 ಸಾವಿರ ಮಹಿಳೆಯರು, 3000 ಬಾಲೆಯರನ್ನೂ ಒಳಗೊಂಡಂತೆ, ಈ ವೇಶ್ಯಾವಾಟಿಕೆಯ ದಂಧೆಗೆ ಒಳಗಾಗಿದ್ದಾರೆ. 8 ಅಥವಾ 9ನೆಯ ತರಗತಿಯಲ್ಲಿದ್ದಾಗಲೇ ವಿದ್ಯಾಭ್ಯಾಸವನ್ನು ತೊರೆಯುವ ಈ ದುರ್ಭಾಗ್ಯ ಹೆಣ್ಣು ಮಕ್ಕಳು ಅವರ ಕುಟುಂಬಸ್ಥರಿಂದಲೇ ವೇಶ್ಯಾವಾಟಿಕೆಯ ಕತ್ತಲ ದ್ವೀಪಕ್ಕೆ ನೂಕಲ್ಪಡುತ್ತಾರೆ ಎಂದು ಇದೇ ಸಮುದಾಯಕ್ಕೆ ಸೇರಿದ ಎನ್‌ಜಿಒ ಕಾರ್ಯಕರ್ತ ಆಕಾಶ್ ಹೇಳುತ್ತಾರೆ.
ಹೆಣ್ಣು ಮಕ್ಕಳನ್ನು ಬಾಲ್ಯದಿಂದಲೇ ಈ ವೃತ್ತಿಗೆ ಸಿದ್ಧಪಡಿಸಲು, ಪೋಷಕರು ಇದನ್ನೊಂದು ಸಂಪ್ರದಾಯ ಎಂದೇ ಮಕ್ಕಳಿಗೆ ಮನದಟ್ಟು ಮಾಡುತ್ತಾರೆ. ಈ ಅಮಾಯಕ ಹೆಣ್ಣುಮಕ್ಕಳನ್ನು ಕತ್ತಲ ದ್ವೀಪಕ್ಕೆ ನೂಕಲು ನೆರವಾಗುವ ದಲ್ಲಾಳಿಗಳಲ್ಲಿ ಮಹಿಳೆಯರು ಇರುತ್ತಾರೆ. ಒಂದು ಪ್ರಸಂಗದಲ್ಲಿ “ ಹಿರಿಯ ಮಹಿಳೆಯೊಬ್ಬಳು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಾರಿನಲ್ಲಿ ಕುಳಿತವರನ್ನು ಸಂಪರ್ಕಿಸುತ್ತಾಳೆ. ಆಕೆಯ ಮನೆಯ ಮುಂದೆ ಕುಳಿತಿರುವ ಮೂವರು ಹೆಣ್ಣು ಮಕ್ಕಳನ್ನು ತೋರಿಸಿ ಯಾರನ್ನಾದರೂ ಆಯ್ಕೆ ಮಾಡುವಂತೆ ಕೋರುತ್ತಾಳೆ. ಹತ್ತು ನಿಮಿಷದ ಅವಧಿಗೆ 300 ರೂ ನಿಗದಿಪಡಿಸುತ್ತಾಳೆ. 100 ರೂಗಳ ಟಿಪ್ಸ್ ಸಹ ಪಡೆಯುತ್ತಾಳೆ ” (ದ ಹಿಂದೂ ವರದಿ Celebrated at Birth Pushed into Sex work , 1 ಆಗಸ್ಟ್ 2026).
ಹೆದ್ದಾರಿಯಲ್ಲಿ ದಲ್ಲಾಳಿಗಳ ಸಂತೆ
ಈ ಹೆದ್ದಾರಿಯಲ್ಲಿರುವ ಢಾಬಾಗಳೂ ಸಹ ದಲ್ಲಾಳಿ ಕೆಲಸ ಮಾಡುತ್ತವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಹೆಣ್ಣು ಮಕ್ಕಳು ಲಭ್ಯವಿರುವ ಸ್ಥಳ, ದೇಹದ ಬಳಕೆಯ ಅವಧಿ ಮತ್ತು ಬಾಲೆಯ ವಯಸ್ಸು ಇವುಗಳನ್ನಾಧರಿಸಿ ದರಪಟ್ಟಿಯನ್ನೂ ಈ ಢಾಬಾಗಳು ಹೊಂದಿರುತ್ತವೆ. ಹವಾನಿಯಂತ್ರಿತ ಕೊಠಡಿ, ಕಾರ್ ಪಾರ್ಕಿಂಗ್ ವ್ಯವಸ್ಥೆ, ಪೊಲೀಸರಿಂದ ರಕ್ಷಣೆ ಇವೆಲ್ಲವೂ ಹೆಚ್ಚುವರಿ ಸೌಲಭ್ಯಗಳಾಗಿರುತ್ತವೆ. ಹತ್ತು ನಿಮಿಷಕ್ಕೆ 300 ರೂ, ಒಂದು ಗಂಟೆಗೆ 1,000 ರೂ, ಒಂದು ರಾತ್ರಿಗೆ 6,000 ರೂ ದರ ನಿಗದಿಪಡಿಸಲಾಗಿರುತ್ತದೆ. ಎಳೆಯ ಹೆಣ್ಣುಮಕ್ಕಳಾದರೆ ಇದು 10,000 ರೂಗಳಿಗೂ ಸಲ್ಲುತ್ತದೆ. ಈ ಕರಾಳ ಮಾರುಕಟ್ಟೆಯನ್ನು ಹೇಗೆ ನೋಡುವುದು, ಹೇಗೆ ವ್ಯಾಖ್ಯಾನಿಸುವುದು. ಇಲ್ಲಿ ವಸ್ತುಶಃ ಬಳಸಿ ಬಿಸಾಡುವ ಸರಕುಗಳಂತೆ ವಿನಿಯಮವಾಗುವ ಹೆಣ್ಣು ಮಕ್ಕಳನ್ನು ಯಾವ ದೃಷ್ಟಿಯಿಂದ ನೋಡುವುದು ?
ಪುರುಷ ಸಮಾಜದ ವಿಕೃತ ಕಾಮಕ್ಕೆ ಬಲಿಯಾಗುವ ಅಮಾಯಕರೆಂದೇ ಅಥವಾ ಪುರುಷ ಸಮಾಜ ಸೃಷ್ಟಿಸಿರುವ ಕರಾಳ ಮಾರುಕಟ್ಟೆಗೆ ಬಲಿಯಾಗುವ ಅಸಹಾಯಕ ಜೀವಗಳೆಂದೇ ? ಈ ಕರಾಳ ಜಗತ್ತಿಗೆ ತಮ್ಮ ಹೆಣ್ಣು ಮಕ್ಕಳನ್ನೇ ದೂಡುವ ತಾಯಂದಿರು, ತಂದೆಯರು ನಮಗೆ ಹೇಗೆ ಕಾಣಬೇಕು ? ಅಥವಾ ಅಸಹಾಯಕತೆಯಿಂದ ತಮ್ಮನ್ನು ಈ ಕ್ರೂರ ಮಾರುಕಟ್ಟೆಗೆ ಒಪ್ಪಿಸಿಕೊಳ್ಳುವ ಹೆಣ್ಣು ಮಕ್ಕಳಿಗೆ ಹೇಗೆ ಸಾಂತ್ವನ ಹೇಳಬೇಕು ? 2003ರಲ್ಲಿ ಇಬ್ಬರು ಗ್ರಾಹಕರಿಗಾಗಿ ತನ್ನ ಗೆಳತಿಯೊಂದಿಗೆ ಚಿತ್ತೋರ್‌ಘರ್‌ನ ಹೋಟೆಲ್ ಒಂದರಲ್ಲಿ ತಂಗಿದ್ದಾಗ ಇನ್ನೂ ಮೂವರು ಕೋಣೆಯೊಳಗೆ ನುಗ್ಗಿ ತಮ್ಮಿಬ್ಬರ ಮೇಲೆ ಸತತ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಸಂಗವನ್ನು, ವೇಶ್ಯಾವಾಟಿಕೆಯಿಂದ ಹೊರಬಂದಿರುವ ಎನ್‌ಜಿಒ ಕಾರ್ಯಕರ್ತೆಯೊಬ್ಬರು ಹಂಚಿಕೊಳ್ಳುತ್ತಾರೆ. ಇಂತಹ ಕ್ರೌರ್ಯಕ್ಕೆ ತುತ್ತಾಗುವ ಹೆಣ್ಣುಮಕ್ಕಳು ಕುಟುಂಬದವರೊಡನೆ ತಮ್ಮ ನೋವನ್ನು ಹಂಚಿಕೊಳ್ಳುವುದೂ ಇಲ್ಲ ಎಂದು ಈಕೆ ಹೇಳುತ್ತಾರೆ.
1871ರಲ್ಲಿ ಬ್ರಿಟೀಷ್ ವಸಾಹತು ಸರ್ಕಾರ ಈ ಬಂಚಾಂಡಾ ಸಮುದಾಯವನ್ನು ಕ್ರಿಮಿನಲ್ ಬುಡಕಟ್ಟು ಎಂದು ಅಧಿಸೂಚನೆ ಹೊರಡಿಸಿತ್ತು. ಮಧ್ಯಪ್ರದೇಶದ ಮಾಲ್ವಾ ಮತ್ತು ಮೇವಾರ್ ಪ್ರದೇಶಗಳಲ್ಲಿ ವಾಸಿಸುವ ಈ ಬುಡಕಟ್ಟು ಸಮುದಾಯ ಈಗ ಕ್ರಿಮಿನಲ್ ಎಂಬ ಕಳಂಕ ಪಟ್ಟಿಯಿಂದ ಹೊರಬಂದಿದೆ. ಆದಾಗ್ಯೂ ಮುಖ್ಯವಾಹಿನಿ ಸಮಾಜದಿಂದ ಪ್ರತ್ಯೇಕವಾಗಿಯೇ ಉಳಿದಿದೆ. ಅಥವಾ ಹಾಗೆ ಉಳಿಸಿಕೊಂಡು ಬರಲಾಗಿದೆ. ಶೈಕ್ಷಣಿಕ ವಲಯದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ, ನಗರಗಳಲ್ಲಿ ಮನೆ ದೊರೆಯುವುದಕ್ಕೂ ಸಹ ಈ ಕಳಂಕ ಇವರನ್ನು ಹಿಂಬಾಲಿಸಿದೆ. ಅನೇಕ ಗ್ರಾಮಗಳಲ್ಲಿ ಬಂಚಾಂಡಾ ಸಮುದಾಯ ಪ್ರತ್ಯೇಕವಾಗಿಯೇ ವಾಸಿಸುತ್ತದೆ. ಸಾವಿರಾರು ಮಕ್ಕಳು ವಿವಾಹೇತರ ಸಂಬಂಧಗಳಿಂದಲೇ ಹುಟ್ಟಿರುವುದರಿಂದ, ತಂದೆಯ ಹೆಸರು-ಜಾತಿಯ ಗುರುತಿಲ್ಲದೆ ಉದ್ಯೋಗ ಗಳಿಸುವುದೂ ದುಸ್ತರವಾಗುತ್ತದೆ. ಇದು ಉದ್ಯೋಗ ಬಯಸುವ ಹೆಣ್ಣು ಮಕ್ಕಳನ್ನು ಪುನಃ ವೇಶ್ಯಾವಾಟಿಕೆಯ ಕತ್ತಲ ದ್ವೀಪಕ್ಕೆ ನೂಕುತ್ತದೆ.
(ಮಧ್ಯಪ್ರದೇಶದ ಬಂಚಾಂಡಾ ಸಮುದಾಯವನ್ನು ಕುರಿತ ವಿವರಗಳಿಗೆ ದ ಹಿಂದೂ ವರದಿ Celebrated at Birth Pushed into Sex work , 1 ಆಗಸ್ಟ್ 2026 ನೋಡಿ. ಲಿಂಕ್ ಇಲ್ಲಿದೆ : (https://www.thehindu.com/news/national/madhya-pradesh/celebrated-at-birth-pushed-into-sex-work/article71290516.ece )
ವಿಕಾಸದ ಹಾದಿಯಲ್ಲಿ ಅಂಧ ನಡಿಗೆ
ಬಹುತೇಕ ಮೂರು ದಶಕಗಳಿಂದ ನೆಹರೂ-ಕಾಂಗ್ರೆಸ್ ನೆರಳಿನಿಂದ ದೂರ ಉಳಿದು, ಹಿಂದೂ ಸಂಸ್ಕೃತಿಯ ಸಂರಕ್ಷಕ ಪಕ್ಷ, ಬಿಜೆಪಿಯ ಆಳ್ವಿಕೆಗೇ ಒಳಪಟ್ಟಿರುವ ಈ ಎರಡೂ ರಾಜ್ಯಗಳ ಪರಿಸ್ಥಿತಿಯನ್ನು ಮೇಲಿನ ವರದಿಗಳಲ್ಲಿ ಗಮನಿಸಬಹುದು. ದೆಹಲಿಯ ಅತ್ಯಾಚಾರಗಳಾಗಲೀ, ವಾಡಿಯಾ-ಬಂಚಾಂಡಾ ಸಮಾಜಗಳ ಕತ್ತಲ ಕೂಪಗಳಾಗಲೀ, ಭಾರತೀಯ ಸಮಾಜದ ಮತ್ತೊಂದು ಕರಾಳ ಮುಖವಾಡವನ್ನು ಪರಚಯಿಸುತ್ತವೆ. ಇದು ಕೇವಲ ಉದಾಹರಣೆಗಳಷ್ಟೇ. ಹೆಕ್ಕಿ ತೆಗೆದರೆ ದೇಶಾದ್ಯಂತ ಇಂತಹ ನೂರಾರು-ಸಾವಿರಾರು ಕತ್ತಲ ದ್ವೀಪಗಳ ಉತ್ಖನನ ಸಾಧ್ಯವಾದೀತು.
ಇದಕ್ಕೆ ಯಾರು ಕಾರಣ ಎಂದು ರಾಜಕೀಯ ದೃಷ್ಟಿಯಲ್ಲಿ ಯೋಚಿಸುವುದಕ್ಕಿಂತಲೂ, ವಿಕಾಸದ ಹಾದಿಯಲ್ಲಿ ಸಾಗುತ್ತಿರುವ 80ರ ಹರೆಯದ ನವ ಭಾರತ ಏಕೆ ಈ ಅವನತಿಯ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಯೋಚಿಸುವುದು ವಿವೇಕಯುತ. ಈ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಶತಮಾನಗಳ ಮೌಲ್ಯಗಳನ್ನು ಕೊನೆಗೊಳಿಸುವುದರಲ್ಲಿ ನಮ್ಮ ಸಮಾಜ ವಿಫಲವಾಗಿದೆ ಎನಿಸುವುದಿಲ್ಲವೇ ? ಡಿಜಿಟಲ್ ಯುಗದ ವಿಶ್ವಗುರು ಎಂದು ಎದೆಯುಬ್ಬಿಸಿ ಹೇಳುವ ಮುನ್ನ ಪ್ರತಿಯೊಬ್ಬ ಭಾರತೀಯ ನಾಗರಿಕ ಪ್ರಜೆಗೂ ಈ ಪ್ರಶ್ನೆ ಬಾಧಿಸಬೇಕಲ್ಲವೇ ? ಕತ್ತಲ ದ್ವೀಪಗಳೆಲ್ಲವನ್ನೂ ಮರೆಮಾಚಿ, ಕಾರ್ಗತ್ತಲಿನಲ್ಲೇ ಪಯಣಿಸುವ ಸಮಾಜಗಳೆಲ್ಲವನ್ನೂ ಮುಖ್ಯವಾಹಿನಿಯಿಂದ ಪ್ರತ್ಯೇಕಿಸುತ್ತಾ, ಇಲ್ಲಿ ಶೋಷಣೆಗೊಳಗಾಗುವ ಅಮಾಯಕ ಹೆಣ್ಣು ಮಕ್ಕಳನ್ನು ʼ ನಮ್ಮವರಲ್ಲ ʼ ಎಂದು ಭಾವಿಸುತ್ತಾ ಮುನ್ನಡೆಯುತ್ತಿರುವ ಭಾರತೀಯ ಸಮಾಜದ ವ್ಯಾಧಿಗೆ ಚಿಕಿತ್ಸೆಯಾದರೂ ಏನು ?
ಈ ಪ್ರಶ್ನೆ ನಮ್ಮನ್ನು ಕಾಡಿದಾಗ ನಮ್ಮ ಸುತ್ತಲೂ ಆಮರಿಕೊಂಡಿರುವ ವಾಡಿಯಾಗಳು, ಬಂಚಾಡಾಗಳು, ದೆಹಲಿಯ ಸ್ವರೂಪ್ ನಗರಗಳು, ಚಲಿಸುವ ವಾಹನಗಳು ಎಲ್ಲವೂ ಸಾಲುಗಟ್ಟಿ ನಿಲ್ಲುತ್ತವೆ. ನಮ್ಮ ನಡುವೆ ಇಂತಹ ಲೋಕವೊಂದು ಇಲ್ಲವೇ ಇಲ್ಲ ಎಂದು ಪ್ರಮಾಣಿಸಿ ಹೇಳುವಷ್ಟು ನೈತಿಕ ಸ್ಥೈರ್ಯ ನಮ್ಮಲ್ಲಿದೆಯೇ ? ಅಥವಾ ಈ ಅದ್ಭುತ ಕಲ್ಪನೆಯ ಸಮಾಜ ಕಟ್ಟುತ್ತೇವೆ ಎಂದು ಹೇಳುವ ದಿಟ್ಟತನ ನಮ್ಮಲ್ಲಿದೆಯೇ ? ಅಥವಾ ನಮ್ಮನ್ನಾಳುವ ಚುನಾಯಿತ ಸರ್ಕಾರ-ಜನಪ್ರತಿನಿಧಿಗಳಲ್ಲಿ ಈ ಬದ್ಧತೆ ಇದೆಯೇ ? ಉತ್ತರ ಬೇಕಿದೆ. ಅಂತಿಮವಾಗಿ ಶೋಷಣೆಗೊಳಗಾಗುತ್ತಿರುವುದು ಹೆಣ್ಣೇ ಅಲ್ಲವೇ ? ಈ ಶೋಷಿತ ಜೀವಗಳ ಪರ ದನಿಎತ್ತುವ ಜವಾಬ್ದಾರಿಯ ನೊಗ ಹೊತ್ತಿರುವುದೂ ಮಹಿಳಾ ಸಂಘಟನೆಗಳೇ ಏಕಾಗಬೇಕು ?
ಪುರುಷಪ್ರಧಾನ ಸಾಂಸ್ಥಿಕ ವೇದಿಕೆಗಳು, ರಾಜಕೀಯ ಪಕ್ಷಗಳು, ಸಾಂಘಿಕ ಚೌಕಟ್ಟುಗಳು ಈ ಪ್ರಶ್ನೆಗೆ ಉತ್ತರಿಸಬೇಕಿದೆ.
-೦-೦-೦-೦-






