ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ ಸಾಧ್ಯತೆ ಇದೆ. ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಸ್ತಾವನೆ ಸಿದ್ಧಪಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ್ದ ಎರಡು ವಾರಗಳ ಗಡುವಿನ ಹಿನ್ನೆಲೆಯಲ್ಲಿ ಆಗಸ್ಟ್ 28-29ರಂದು FSSAI ಈ ಪ್ರಸ್ತಾವನೆ ಮುಂದಿಟ್ಟಿದೆ. ಸದ್ಯ ಇದು ಪ್ರಸ್ತಾವನೆಯ ಹಂತದಲ್ಲಿದ್ದು, ಅಂತಿಮ ನಿಯಮಗಳು ಜಾರಿಯಾದ ಬಳಿಕ ಬಿಸ್ಕತ್, ಕೂಲ್‌ಡ್ರಿಂಕ್ಸ್, ನಮ್ಕೀನ್ ಸೇರಿದಂತೆ ಹಲವು ಪ್ಯಾಕೆಟ್ ಆಹಾರ ಉತ್ಪನ್ನಗಳ ಮೇಲೆ ಹೊಸ ಎಚ್ಚರಿಕೆ ಲೇಬಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಪ್ರಸ್ತಾವನೆ ಜಾರಿಯಾದರೆ, ಆಹಾರ ಉತ್ಪನ್ನದ ಪ್ಯಾಕೆಟ್‌ನ ಮುಂಭಾಗದಲ್ಲಿ ನ್ಯೂಟ್ರಿಷನ್ ಮಾಹಿತಿಗಿಂತ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಕೆಂಪು ಬಣ್ಣದ ಷಡ್ಭುಜಾಕಾರದ ಲೇಬಲ್ ಅಳವಡಿಸಲಾಗುತ್ತದೆ. ಅದರಲ್ಲಿ ‘HIGH SUGAR’, ‘HIGH SALT’ ಅಥವಾ ‘HIGH FAT’ ಎಂದು ನಮೂದಿಸುವ ಯೋಜನೆ ಇದೆ.
ಹಂತ ಹಂತವಾಗಿ ನಿಯಮ ಜಾರಿಗೊಳಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಹಾನಿಕಾರಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವ ಉತ್ಪನ್ನಗಳಿಗೆ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ನಂತರ ಒಂದೇ ಅಂಶದ ಪ್ರಮಾಣ ಹೆಚ್ಚಿರುವ ಉತ್ಪನ್ನಗಳಿಗೂ ನಿಯಮ ವಿಸ್ತರಿಸುವ ಪ್ರಸ್ತಾವನೆ ಇದೆ.ಆದರೆ ತುಪ್ಪ, ಎಣ್ಣೆ, ಉಪ್ಪು, ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪದಂತಹ ಮೂಲ ಆಹಾರ ಪದಾರ್ಥಗಳಿಗೆ ಈ ನಿಯಮದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ.

ಈ ಪ್ರಸ್ತಾವನೆ ಇನ್ನೂ ಅಂತಿಮಗೊಂಡಿಲ್ಲ. ಯಾವ ಪ್ರಮಾಣವನ್ನು ‘ಹೆಚ್ಚು’ ಎಂದು ಪರಿಗಣಿಸಬೇಕು ಮತ್ತು ನಿಯಮ ಯಾವ ದಿನದಿಂದ ಜಾರಿಗೆ ಬರಬೇಕು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಆಹಾರ ಪ್ಯಾಕೆಟ್‌ಗಳಲ್ಲಿ ತಕ್ಷಣ ಯಾವುದೇ ಬದಲಾವಣೆ ಆಗುವುದಿಲ್ಲ.ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್ 10ರ ಸುಮಾರಿಗೆ ಪರಿಶೀಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಗ್ರಾಹಕರು ಪ್ಯಾಕೆಟ್ ಖರೀದಿಸುವಾಗ ಕೇವಲ ‘ಸರ್ವಿಂಗ್ ಸೈಜ್’ ಗಮನಿಸುವ ಬದಲು ಪ್ರತಿ 100 ಗ್ರಾಂಗೆ ಇರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಪರಿಶೀಲಿಸುವುದು ಉತ್ತಮ. ‘No Added Sugar’ ಎಂದು ಬರೆದಿದ್ದರೂ ಉತ್ಪನ್ನದಲ್ಲಿ ನೈಸರ್ಗಿಕ ಅಥವಾ ಒಟ್ಟು ಸಕ್ಕರೆ ಪ್ರಮಾಣ ಹೆಚ್ಚಿರಬಹುದಾದ್ದರಿಂದ ನ್ಯೂಟ್ರಿಷನ್ ಲೇಬಲ್ ಅನ್ನು ಸಂಪೂರ್ಣವಾಗಿ ಓದುವುದು ಮುಖ್ಯ.
ಅದೇ ರೀತಿ, ಪದಾರ್ಥಗಳ ಪಟ್ಟಿಯಲ್ಲಿ (Ingredients) ಮೊದಲಿಗೆ ನಮೂದಿಸಿರುವ ವಸ್ತು ಉತ್ಪನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ಯಾಕೆಟ್‌ನ ಮುಂಭಾಗದ ಮಾಹಿತಿ ಮಾತ್ರವಲ್ಲದೆ ಹಿಂಭಾಗದಲ್ಲಿರುವ ಪದಾರ್ಥಗಳ ಪಟ್ಟಿ ಹಾಗೂ ಪೌಷ್ಟಿಕಾಂಶದ ವಿವರಗಳನ್ನೂ ಪರಿಶೀಲಿಸುವುದು ಅಗತ್ಯ.

ದೂರು ನೀಡುವುದು ಹೇಗೆ?
ಆಹಾರ ಉತ್ಪನ್ನದ ಲೇಬಲ್ ತಪ್ಪುದಾರಿಗೆಳೆಯುವಂತಿದ್ದರೆ ಅಥವಾ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅನುಮಾನವಿದ್ದರೆ, ಪ್ಯಾಕೆಟ್‌ನ ಮುಂಭಾಗ ಮತ್ತು ನ್ಯೂಟ್ರಿಷನ್ ಚಾರ್ಟ್‌ನ ಫೋಟೋ ತೆಗೆದಿಟ್ಟುಕೊಳ್ಳಬಹುದು. ನಂತರ FSSAIಯ ‘Food Safety Connect’ ಆ್ಯಪ್ ಅಥವಾ ‘FoSCoS’ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. 1800-11-2100 ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡುವುದರ ಜೊತೆಗೆ 9868686868ಕ್ಕೆ ವಾಟ್ಸಾಪ್ ಮೂಲಕವೂ ದೂರು ನೀಡಲು ಅವಕಾಶವಿದೆ.





