ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24ರಂದು ಮೂರು ಪ್ರಮುಖ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಈ ಎರಡು ದಿನಗಳಂದು ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವ ಹಿನ್ನೆಲೆಯಲ್ಲಿ ಈ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಸರ್ಪಕ್ಷೇತ್ರವೆಂದೇ ಪ್ರಸಿದ್ಧವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳನ್ನು ಸಲ್ಲಿಸಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಮೂರು ಸೇವೆಗಳು ರದ್ದಾಗಿದ್ದರೂ ಭಕ್ತರು ದೇವಸ್ಥಾನಕ್ಕೆ ಆಗಮಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯಬಹುದು. ಮಂಗಳಾರತಿ, ಅರ್ಚನೆ, ಮಹಾಪೂಜೆ ಸೇರಿದಂತೆ ನಿತ್ಯದ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳು ಎಂದಿನಂತೆ ನಡೆಯಲಿವೆ.

ಸರ್ಪಸಂಸ್ಕಾರ ಅಥವಾ ಆಶ್ಲೇಷ ಬಲಿ ಸೇವೆಗಾಗಿ ಮುಂಗಡವಾಗಿ ದಿನಾಂಕ ನಿಗದಿಪಡಿಸಿಕೊಂಡಿರುವ ಭಕ್ತರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭೇಟಿಯ ದಿನಾಂಕವನ್ನು ಮರುಯೋಜಿಸಿಕೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.ಇದರ ನಡುವೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋ ಹರಿದಾಡುತ್ತಿರುವುದು ಬೆಳಕಿಗೆ ಬಂದಿದೆ.
ನಾಗರ ಪಂಚಮಿ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ₹750 ಮುಂಗಡ ಹಣ ಪಾವತಿಸಿದರೆ ದೇವಸ್ಥಾನದ ಸೇವೆ ನೆರವೇರಿಸಿ ಪ್ರಸಾದವನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂಬ ಸಂದೇಶ ಹರಡಲಾಗುತ್ತಿದೆ.

ಈ ಸಂದೇಶವನ್ನು ನಂಬಿ ಭಕ್ತರು ಹಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ನಕಲಿ ವಿಡಿಯೋಗೆ ಸಂಬಂಧಿಸಿದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೇವಸ್ಥಾನದ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಅಪರಿಚಿತ ಲಿಂಕ್‌ಗಳು ಅಥವಾ ಖಾತೆಗಳಿಗೆ ಹಣ ಪಾವತಿಸಬಾರದು ಎಂದು ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.






