ಬೆಂಗಳೂರು, ಆಗಸ್ಟ್ 21: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕಿಯೋನಿಕ್ಸ್ ಅಭಿವೃದ್ಧಿಪಡಿಸಿರುವ KEO AI PC-2026 ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಬಳಕೆ ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅಡಿಪಾಯವಾಗಲಿದೆ. KEO AI PC-2026 ಮೂಲಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನ ಕಲಿಕೆಯ ಅವಕಾಶ ದೊರೆಯಲಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಂದ ಹಿಡಿದು ನಗರ ಪ್ರದೇಶದ ವಿದ್ಯಾರ್ಥಿಗಳವರೆಗೆ ಪ್ರತಿಯೊಬ್ಬರೂ AI ತಂತ್ರಜ್ಞಾನವನ್ನು ಕಲಿತು, ಭವಿಷ್ಯವನ್ನು ರೂಪಿಸುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಯಲ್ಲಿ ಕಿಯೋನಿಕ್ಸ್ ಪ್ರಮುಖ ಪಾತ್ರ ವಹಿಸಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದೂರದೃಷ್ಟಿಯಿಂದ ಎಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿಗೆ ಚಾಲನೆ ದೊರೆಯಿತು. 1978ರಲ್ಲಿ ಕಿಯೋನಿಕ್ಸ್ ಸಂಸ್ಥೆ ಎಲೆಕ್ಟ್ರಾನಿಕ್ ಸಿಟಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಬಳಿಕ ಎಸ್.ಎಂ. ಕೃಷ್ಣ ಅವರು ರಾಜ್ಯದ ತಂತ್ರಜ್ಞಾನ ಮೂಲಸೌಕರ್ಯಕ್ಕೆ ಮತ್ತಷ್ಟು ಉತ್ತೇಜನ ನೀಡಿದರು ಎಂದು ಅವರು ಸ್ಮರಿಸಿದರು.ಕಿಯೋನಿಕ್ಸ್ ಕೇವಲ ಒಂದು ಸಂಸ್ಥೆಯಲ್ಲ. ಕರ್ನಾಟಕದಲ್ಲಿಯೇ ವಿಶ್ವದರ್ಜೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಜನರಿಗೆ ತಲುಪಿಸಬಹುದು ಎಂಬ ಆತ್ಮವಿಶ್ವಾಸದ ಪ್ರತೀಕವಾಗಿದೆ ಎಂದು ಶಿವಕುಮಾರ್ ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ 1,000 KEO AI PCಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗೂ ಈ ಸಾಧನವನ್ನು ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ದೊರೆಯುವ ಆಧುನಿಕ ತಂತ್ರಜ್ಞಾನ ಸೌಲಭ್ಯಗಳು ಸರ್ಕಾರಿ ಶಾಲೆಗಳ ಮಕ್ಕಳಿಗೂ ದೊರೆಯಬೇಕು. ಯಾವುದೇ ಮಗುವಿನ ಪ್ರದೇಶ ಅಥವಾ ಪಿನ್‌ಕೋಡ್ ಅದರ ತಂತ್ರಜ್ಞಾನ ಮತ್ತು ಅವಕಾಶಗಳ ಲಭ್ಯತೆಯನ್ನು ನಿರ್ಧರಿಸಬಾರದು ಎಂದು ಅವರು ಹೇಳಿದರು.

KEO ಮೂಲಕ ಗ್ರಾಮೀಣ ವಿದ್ಯಾರ್ಥಿಗಳು ಕೋಡಿಂಗ್, AI, ಮೆಷಿನ್ ಲರ್ನಿಂಗ್ ಹಾಗೂ ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸಿಕೊಳ್ಳಲು ಅವಕಾಶ ದೊರೆಯಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಅಗತ್ಯವಿರುವ ತಂತ್ರಜ್ಞಾನ ಮಾನವ ಸಂಪನ್ಮೂಲವನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.
KEO AI PC-2026 ಯೋಜನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಯಿತು.

KEO AI PCಗಳನ್ನು ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗೆ ತಲುಪಿಸುವಲ್ಲಿ ಉದ್ಯಮಿಗಳು ಹಾಗೂ CSR ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳ ಅಭಿವೃದ್ಧಿಗೆ CSR ನಿಧಿಯನ್ನು ಬಳಸುವಂತೆ ಅವರು ಉದ್ಯಮ ವಲಯಕ್ಕೆ ಕರೆ ನೀಡಿದರು. ಇದು ಕೇವಲ ಕಾರ್ಪೊರೇಟ್ ಜವಾಬ್ದಾರಿಯಲ್ಲ, ರಾಜ್ಯದ ಸಾಮೂಹಿಕ ಭವಿಷ್ಯಕ್ಕೆ ಮಾಡುವ ಹೂಡಿಕೆಯಾಗಿದೆ ಎಂದು ಹೇಳಿದರು.

AI ತಂತ್ರಜ್ಞಾನದ ಬೆಳವಣಿಗೆಗೆ ಕರ್ನಾಟಕದ ವಿದ್ಯಾರ್ಥಿಗಳು ಕೇವಲ ಸಾಕ್ಷಿಗಳಾಗಬಾರದು. ಅವರು AI ಕಲಿಯಬೇಕು, ಬಳಸಬೇಕು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಬೇಕು. ಇಂದಿನ ವಿದ್ಯಾರ್ಥಿಗಳೇ ನಾಳೆಯ ನಾವೀನ್ಯಕಾರರು, ಉದ್ಯಮಿಗಳು, ವಿಜ್ಞಾನಿಗಳು ಹಾಗೂ ನಾಯಕರು ಎಂದು ಶಿವಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ಉದ್ಯಮಿಗಳಾದ ಕ್ರಿಶ್ ಗೋಪಾಲಕೃಷ್ಣ, ಪ್ರಶಾಂತ್ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








