ಬೆಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಅಕ್ರಮ ತಡೆಯಲು ನಡೆಸಿದ ವಿಶೇಷ ಪರಿಶೀಲನೆಯಲ್ಲಿ 23.14 ಲಕ್ಷ ಶಂಕಾಸ್ಪದ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಈ ಪೈಕಿ 18.06 ಲಕ್ಷ ಮಂದಿಯ ಪಿಂಚಣಿ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿಧಾನಸಭೆಯ ಕಲಾಪದಲ್ಲಿ ಈ ಮಾಹಿತಿ ನೀಡಿದ್ದು, ಅರ್ಹತೆ ಇಲ್ಲದವರು ಪಿಂಚಣಿ ಪಡೆಯಲು ದಾಖಲೆಗಳ ಕೊರತೆ ಹಾಗೂ ನಿಗದಿತ ವಿಳಾಸದಲ್ಲಿ ವಾಸಿಸದಿರುವುದು ಪ್ರಮುಖ ಕಾರಣಗಳಾಗಿವೆ ಎಂದಿದ್ದಾರೆ.

ಸರ್ಕಾರವು ‘ಸಂಯೋಜನ’ ಮೊಬೈಲ್ ಅಪ್ಲಿಕೇಶನ್ ಮೂಲಕ ಆದಾಯ ತೆರಿಗೆ ಪಾವತಿದಾರರು, ಎಪಿಎಲ್ ಕಾರ್ಡ್ ಹೊಂದಿರುವವರು, ವಯಸ್ಸಿನ ಮಾನದಂಡಕ್ಕೆ ಹೊಂದದವರು ಹಾಗೂ ಆದಾಯ ಮಿತಿ ಮೀರಿ ಪಿಂಚಣಿ ಪಡೆಯುತ್ತಿರುವವರನ್ನು ಗುರುತಿಸಿದ್ದು, ಬಳಿಕ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಪರಿಶೀಲನೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲೇ ಅತಿ ಹೆಚ್ಚು ಶಂಕಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, 12.61 ಲಕ್ಷ ಫಲಾನುಭವಿಗಳು ಪರಿಶೀಲನೆಗೆ ಒಳಪಟ್ಟಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ, ಮನಸ್ವಿನಿ ಸೇರಿದಂತೆ ಇತರ ಯೋಜನೆಗಳಲ್ಲೂ ಅಕ್ರಮ ಪ್ರಕರಣಗಳು ಬೆಳಕಿಗೆ ಬಂದಿವೆ.

ಅರ್ಹತಾ ದಾಖಲೆಗಳನ್ನು ಸಲ್ಲಿಸಲು ನಿರಾಕರಿಸಿದವರು, ಆದಾಯ ಪ್ರಮಾಣಪತ್ರ ನೀಡದವರು ಹಾಗೂ ವಿಳಾಸದಲ್ಲಿ ವಾಸಿಸದಿರುವವರ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪಿಂಚಣಿ ಸ್ಥಗಿತಗೊಂಡವರು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಹತೆ ಸಾಬೀತುಪಡಿಸಿದ ಬಳಿಕ ಮತ್ತೆ ಪಿಂಚಣಿ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು 83.12 ಲಕ್ಷ ಪಿಂಚಣಿ ಫಲಾನುಭವಿಗಳಿದ್ದು, 2026ರ ಜುಲೈ ತಿಂಗಳಲ್ಲಿ 62.43 ಲಕ್ಷ ಮಂದಿಗೆ ಪಿಂಚಣಿ ಪಾವತಿಸಲಾಗಿದೆ. ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ ಬೆಳಗಾವಿಯಲ್ಲಿ 1.51 ಲಕ್ಷ, ಬೆಂಗಳೂರು ನಗರದಲ್ಲಿ 1.24 ಲಕ್ಷ, ಮೈಸೂರಿನಲ್ಲಿ 1.11 ಲಕ್ಷ, ಕಲಬುರಗಿಯಲ್ಲಿ 98,984, ದಾವಣಗೆರೆಯಲ್ಲಿ 94,012, ರಾಯಚೂರಿನಲ್ಲಿ 89,387 ಹಾಗೂ ತುಮಕೂರಿನಲ್ಲಿ 71,111 ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.






