ನವದೆಹಲಿ: ಶುದ್ಧ ಇಂಧನ ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸುವುವುದು ಎಷ್ಟು ಮುಖ್ಯವೋ ಗ್ರೀನ್ ಸ್ಟೀಲ್ ತಯಾರಿಕೆಯಲ್ಲಿ ಕೂಡ ಸ್ವಾವಲಂಭನೆ ಸಾಧಿಸುವ ನಿಟ್ಟಿನಲ್ಲಿ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ ಎಂದು ಕೆಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ನವದೆಹಲಿಯಲ್ಲಿ ನಡೆದ ಭಾರತ ಕೈಗಾರಿಕೆ ಕೈಗಾರಿಕಾ ಒಕ್ಕೂಟ (CII) 7ನೇ ಅಂತಾರಾಷ್ಟ್ರೀಯ ಇಂಧನ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಕ್ಕು ಉತ್ಪಾದನೆಯಲ್ಲಿ ಬಳಸುವ ಕಲ್ಲಿದ್ದಲು ಮತ್ತು ಸಾಂಪ್ರದಾಯಿಕ ಇಂಧನಗಳಿಗೆ ಬದಲಾಗಿ ನವೀಕರಿಸಬಹುದಾದ ಇಂಧನ (ಸೌರ ಮತ್ತು ಪವನ ವಿದ್ಯುತ್) ಹಾಗೂ ಗ್ರೀನ್ ಹೈಡ್ರೋಜನ್ ಬಳಸಿ ಉತ್ಪಾದಿಸುವ ಪರಿಸರಸ್ನೇಹಿ ಉಕ್ಕನ್ನು ಹಸಿರು ಉಕ್ಕು (Green Steel) ಎನ್ನಲಾಗುತ್ತಿದ್ದು, ಇಂಥ ಪ್ರಯತ್ನದಿಂದ ಇಂಗಾಲ ಹೊರಸೂವಿಕೆಯನ್ನು ಶೂನ್ಯಮಟ್ಟಕ್ಕೆ ತರಬಹುದು. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟ ದೃಷ್ಟಿಕೋನ ಹೊಂದಿದ್ದಾರೆ ಎಂದು ಹೇಳಿದರು.

ಇಂದಿನ ಅಗತ್ಯಗಳಿಗೆ ತಕ್ಕಂತೆ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ವಿದ್ಯಮಾನಗಳ ನಡುವೆ ಭಾರತವು ಶುದ್ಧ ಇಂಧನಗಳ ಸ್ವಾವಲಂಭನೆಯತ್ತ ಮುಖ ಮಾಡಿದೆ. ಭವಿಷ್ಯಕ್ಕೆ ಶಕ್ತಿ ತುಂಬುವ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ಸುರಕ್ಷಿತ ಪೂರೈಕೆ ಸರಪಳಿಗಳನ್ನು ರೂಪಿಸಿಕೊಳ್ಳುವ, ನಾವೀನ್ಯತೆಯ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ದೃಢವಾಗಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುವ ಭಾರತದ ಕಾರ್ಯತಂತ್ರವನ್ನು ಸಚಿವರು ವಿವರಿಸಿದರು. ಕೈಗಾರಿಕಾ ಸಾಮರ್ಥ್ಯ ಮತ್ತು ಇಂಧನ ಭದ್ರತೆ ಎಂಬ ಎರಡು ಮಹತ್ವದ ಅಂಶಗಳನ್ನು ಈಗ ಬೇರ್ಪಡಿಸಲಾಗದು ಎಂದರು.

ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಇಂಧನ ಭದ್ರತೆಯನ್ನು ಇನ್ನು ಮುಂದೆ ಇಂಧನ ಸಂಪನ್ಮೂಲಗಳ ಪ್ರವೇಶದಿಂದ ಮಾತ್ರ ವ್ಯಾಖ್ಯಾನಿಸಲಾಗುವುದಿಲ್ಲ. ಬದಲಾಗಿ ಭವಿಷ್ಯಕ್ಕೆ ಶಕ್ತಿ ತುಂಬುವ ತಂತ್ರಜ್ಞಾನಗಳನ್ನು ಹೊಂದುವ ಮತ್ತು ನಾವೀನ್ಯತೆಯೊಂದಿಗೆ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ನಮ್ಮ ಸಾಮರ್ಥ್ಯದಿಂದ ಇದು ನಿರ್ಧರಿಸಲ್ಪಡುತ್ತದೆ ಎಂದು ಸಚಿವರು ಹೇಳಿದರು.

ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು, ಪೂರೈಕೆ ಸರಪಳಿ ಅಡಚಣೆಗಳು ಮತ್ತು ನಿರ್ಣಾಯಕ ಖನಿಜಗಳಿಗೆ ಬೆಳೆಯುತ್ತಿರುವ ಸ್ಪರ್ಧೆಯು ಜಾಗತಿಕ ಕೈಗಾರಿಕಾ ಆದ್ಯತೆಗಳನ್ನು ಮರುರೂಪಿಸಿದೆ, ಉತ್ಪಾದನಾ ಸ್ಥಿರತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ರಾಷ್ಟ್ರೀಯ ಆರ್ಥಿಕ ಭದ್ರತೆಗೆ ಕೇಂದ್ರವನ್ನಾಗಿ ಪರಿವರ್ತಿಸಿವೆ. ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಮೌಲ್ಯಯುತ ಸರಪಳಿಗಳೊಂದಿಗೆ ಆಳವಾಗಿ ಸಂಯೋಜಿಸಲ್ಪಟ್ಟಿರುವಾಗ ಜಾಗತಿಕವಾಗಿ ಸ್ಪರ್ಧಾತ್ಮಕ ದೃಷ್ಟಿಗೆ ಅನುಗುಣವಾಗಿ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ ಭಾರತವು ಈ ಜಾಗತಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಭಾರತವು ಕೇವಲ ಶುದ್ಧ ಇಂಧನ ತಂತ್ರಜ್ಞಾನಗಳ ಜಗತ್ತಿನನ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಬಾರದು. ಬದಲಿಗೆ ಜಾಗತಿಕ ಇಂಧನ ಪರಿವರ್ತನೆಗೆ ಚಾಲನೆ ನೀಡುವ ಉಪಕರಣಗಳು, ಪರಿಕರಗಳು ಮತ್ತು ತಂತ್ರಜ್ಞಾನಗಳನ್ನು ತಯಾರಿಸುವ ಜಾಗತಿಕ ಶಕ್ತಿ ಆಗಬೇಕು. ಈ ಮಾರ್ಗದಲ್ಲಿ ಭಾರತವು ಮುನ್ನಡೆಯುತ್ತಿದೆ. ಈ ಪರಿವರ್ತನೆಯ ಪ್ರಯತ್ನದಲ್ಲಿ ತಮ್ಮ ಉಸ್ತುವಾರಿಯ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಲಾಯಗಳು ಅನುಷ್ಠಾನಕ್ಕೆ ತಂದಿರುವ ಸುಧಾರಣೆಗಳನ್ನು ಪಟ್ಟಿ ಮಾಡಿದ ಸಚಿವರು; ಗುಣಮಟ್ಟದ ಉಕ್ಕು, ಬೃಹತ್ ಎಂಜಿನಿಯರಿಂಗ್ ಸೌಲಭ್ಯಗಳು, ಬ್ಯಾಟರಿಗಳು, ಟ್ರಾನ್ಸ್‌ಫಾರ್ಮರುಗಳು, ವಿದ್ಯುತ್ ಉಪಕರಣಗಳು, ನಿರ್ಮಾಣ ಪರಿಕರಗಳು ಮತ್ತು ಮುಂದುವರಿದ ಕೈಗಾರಿಕಾ ತಂತ್ರಜ್ಞಾನಗಳನ್ನು ಒಳಗೊಂಡ ಬಲವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರೂಪಿಸುವ ಮೂಲಕ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಶುದ್ಧ ಇಂಧನ ಉತ್ಪಾದನೆಗೆ ಬೆನ್ನೆಲುಬಾಗಿ ನಿಂತಿರುವ ಉಕ್ಕು ವಲಯದ ಬಗ್ಗೆ ವಿವರಿಸಿದ ಕುಮಾರಸ್ವಾಮಿ ಅವರು; ಸೋಲಾರ್ ಪಾರ್ಕುಗಳು, ಪವನ ವಿದ್ಯುತ್ ಟರ್ಬೈನ್‌ಗಳ ಪ್ರಸರಣ ಜಾಲ, ಬ್ಯಾಟರಿ ಉತ್ಪಾದನಾ ಸೌಲಭ್ಯ, ಬಂದರು ಮತ್ತು ಹಸಿರು ಹೈಡ್ರೋಜನ್ ಯೋಜನೆಗಳವರೆಗೆ ನವೀಕರಿಸಬಹುದಾದ ಇಂಧನ ಮೂಲಸೌಕರ್ಯದಲ್ಲಿನ ಪ್ರತಿಯೊಂದು ಪ್ರಮುಖ ಹೂಡಿಕೆಯು ಮೂಲಭೂತವಾಗಿ ಉಕ್ಕಿನ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು.

ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿ ಭಾರತವು ಬೆಳೆಯುತ್ತಿರುವ ಜಾಗತಿಕ ಉಕ್ಕಿನ ಬೇಡಿಕೆಯನ್ನು ಪೂರೈಸುವಾಗ ದೇಶಿಯವಾಗಿ ವಿಸ್ತರಿಸುತ್ತಿರುವ ಮೂಲಸೌಕರ್ಯ ಮತ್ತು ಉತ್ಪಾದನಾ ಅವಶ್ಯಕತೆಗಳನ್ನು ಬೆಂಬಲಿಸಲು ಉತ್ತಮ ಸ್ಥಾನದಲ್ಲಿದೆ ಎಂಬ ಅಂಶವನ್ನು ಅವರು ಸಭೆಯ ಗಮನಕ್ಕೆ ತಂದರು.
20230ರ ವೇಳೆಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಸಾಮರ್ಥ್ಯವನ್ನು ಸಾಧಿಸುವ ಭಾರತದ ಆಕಾಂಕ್ಷೆಯನ್ನು ಸಚಿವರು ಪುನರುಚ್ಚರಿಸಿದರು. ಈ ಬೆಳವಣಿಗೆಯನ್ನು ಸುಸ್ಥಿರ ಮತ್ತು ಉಕ್ಕು ವಲಯದ ಪೂರಕ ವ್ಯವಸ್ಥೆಗೆ ಸಂಬಂಧಿಸಿದ ಜವಾಬ್ದಾರಿಯುತ ಉತ್ಪಾದನಾ ಪದ್ಧತಿಗಳ ಮೂಲಕ ಸಾಧಿಸಬೇಕು ಎಂದು ಹೇಳಿದರು.







