ಬೆಂಗಳೂರು: ರಾಮನಗರದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಸರ್ಕಾರ ಮನವಿಯನ್ನು ನಿರ್ಲಕ್ಷಿಸಿದರೆ ನಿರಂತರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸವಿವರವಾಗಿ ಪತ್ರ ಬರೆದಿರುವ ಹೆಚ್.ಡಿ. ದೇವೇಗೌಡರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ (ಭಾಗಶಃ) ಗ್ರಾಮಗಳಲ್ಲಿ ಇರುವ 7481 ಎಕರೆ 21.08 ಗುಂಟೆ ರೈತರ ಕೃಷಿ ಜಮೀನನ್ನು ವಶಪಡಿಸಿಕೊಂಡು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು 18,133 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ.

ಈಗಾಗಲೇ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಸಾವಿರಾರು ಎಕರೆ ರೈತರ ಕೃಷಿಭೂಮಿಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ವಶಪಡಿಸಿಕೊಂಡು ಕಾರ್ಖಾನೆಗಳನ್ನು ಸ್ಥಾಪಿಸಲು, ಅಭಿವೃದ್ಧಿ ಪಡಿಸಿದ ಕೈಗಾರಿಕಾ ಪ್ರದೇಶವನ್ನು ಹಂಚಿದೆ.

ಬಿಡದಿ ಹೋಬಳಿಯಲ್ಲಿ ರೈತ ಜೀವನಕ್ಕೆ ಉಪ-ಕಸಬು ಆಗಿರುವ ಹೈನುಗಾರಿಕೆ, ರೇಷ್ಮೆ ಬೆಳೆಗಳನ್ನು ತಮ್ಮ ಜೀವನ ನಿರ್ವಹಣೆಗೆ ಆಶ್ರಯಿಸಿಕೊಂಡಿದ್ದಾರೆ. ಟೌನ್‌ಶಿಪ್‌ಗಾಗಿ ಈ ಭೂಸ್ವಾಧೀನದಿಂದ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಳಾಗಿ ಬೀದಿಪಾಲಾಗುತ್ತಾರೆ.

ಮುಖ್ಯಮಂತ್ರಿಯವರೇ, ನಿಮಗೆ ತಿಳಿದಿರುವಂತೆ ಒಂದು ಸಾವಿರ ಎಕರೆ ಅಂಗಳವುಳ್ಳ ಮತ್ತು ಹಲವು ದಶಕಗಳಿಂದ ನೀರಾವರಿಗೆ ಆಶ್ರಯವಾಗಿದ್ದ ಭೈರಮಂಗಳ ಕೆರೆಯು ಇಂದು ವೃಷಭಾವತಿ ಕಣಿವೆಯಿಂದ ಬರುವ ತ್ಯಾಜ್ಯದ ನೀರು ಮತ್ತು ಕೈಗಾರಿಕ ಮಾಲಿನ್ಯ ನೀರಿನಿಂದ ತುಂಬಿ ಕೆರೆ ಅಂಗಳ ನೊರೆ ಮತ್ತು ಕಳೆಯಿಂದ ಅವೃತವಾಗಿದೆ. ಇದರಿಂದ ಸುತ್ತು-ಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ನಾಗರೀಕರು ಮತ್ತು ಜಾನುವಾರುಗಳ ಮೇಲೆ ಪರಿಸರ ಮಾಲಿನ್ಯ, ಕಲುಷಿತ ನೀರಿನ ವಾಸನೆಯಿಂದ ತೀವ್ರತರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಂದಾಜು ರೂ.300 ಕೋಟಿ ವೆಚ್ಚದಲ್ಲಿ ಈ ಕೆರೆಯನ್ನು ಪುನರ್ ಜೀವನಗೊಳಿಸಲು ಕೈಗೊಂಡಿರುವ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಬೈರಮಂಗಲ ಕೆರೆಯ ಪಕ್ಕದಲ್ಲಿ ಸಮಗ್ರ ಉಪನಗರ ಯೋಜನೆಯನ್ನು ಕೈಗೊಂಡು ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ ತರುವುದು ಸಾರ್ವಜನಿಕ ದೃಷ್ಟಿಯಲ್ಲಿ ಒಳ್ಳೆಯದಲ್ಲ.

ಈ ಸಮಗ್ರ ಉಪನಗರ ಯೋಜನಾ ರಚನೆಯಂತೆ, ಈ ಯೋಜನೆಯ ಸುತ್ತ-ಮುತ್ತ ಗ್ರಾಮಗಳಲ್ಲಿ ಈಗಾಗಲೇ ಕೃಷಿ ಭೂಮಿಯನ್ನು ಖರೀದಿಸಲು ಬೆಂಗಳೂರುನಗರ ಮತ್ತು ಸುತ್ತು-ಮುತ್ತಲಿನ ತಾಲೂಕಿನ ರಿಯಲ್ ಎಸ್ಟೇಟ್‌ನವರು ಮತ್ತು ಬಿಲ್ಡರ್ಸ್ ಮುಂದಾಗಿದ್ದು, ದೊಡ್ಡ ಮತ್ತು ಸಣ್ಣ-ಪುಟ್ಟ ರೈತರು ಕೃಷಿ ಭೂಮಿಗೆ ಹೆಚ್ಚಿನ ಬೆಲೆ ದೊರೆಯುವುದರಿಂದ ಮಾರಾಟಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಸಾವಿರಾರು ಎಕರೆ ಕೃಷಿ ಭೂಮಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮಾರಾಟವಾಗಿದೆ. ಇದರಿಂದ ಸಣ್ಣ ಹಿಡುವಳಿದಾರ ರೈತರು ತಮ್ಮ ಜೀವನಾಧರವನ್ನು ಮಾರಾಟ ಮಾಡಿ ಊರು ಬಿಟ್ಟು ಬೀದಿಪಾಲಾಗಿದ್ದಾರೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ರೈತರು ಹಾಗೂ ಪರಿಸರದ ಹಿತದೃಷ್ಟಿಯಿಂದ ಯೋಜನೆಯನ್ನು ಕೈ ಬಿಡುವಂತೆ ದೇವೇಗೌಡರು ಆಗ್ರಹಿಸಿದ್ದಾರೆ.

ಒಂದು ವೇಳೆ ರಾಜ್ಯ ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದರೆ, ಈಗಾಗಲೇ ನಿರಂತರ ಹೋರಾಟ ಮತ್ತು ಧರಣಿಯಲ್ಲಿ ಇರುವ ರೈತರನ್ನು ಬೆಂಬಲಿಸಿ, ನಮ್ಮ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. ಮುಂದುವರೆದು, ನನ್ನ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕೆ ಶ್ರಮಿಸುತ್ತಿದ್ದೇನೆ ಹಾಗೂ ಅಧಿಕಾರ ತ್ಯಾಗ ಮಾಡಿದ್ದೇನೆ. ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ, ಹಾಗೂ ನನ್ನ ಈ ಕೂಗಿಗೆ ಮನಕೊಡದೆ ಇದ್ದರೆ, ವಿಧಾನಸೌಧದ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ ನಡೆಸುತ್ತೇನೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.







