ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರವಾಗಿದೆ. ಭೂ ಸರ್ವೇ ನಡೆಸಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ರೈತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಜೆಎಂಸಿ ತಂಡ ಭೂ ಸರ್ವೇ ನಡೆಸಲು ತೆರಳಿದ ವೇಳೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸರ್ವೇಗೆ ಅಡ್ಡಿಯಾದುದಲ್ಲದೆ ಅಧಿಕಾರಿಗಳೊಂದಿಗೆ ವಾಗ್ವಾದ ಮತ್ತು ತಳ್ಳಾಟ ನಡೆದಿರುವ ಆರೋಪ ಕೇಳಿಬಂದಿದೆ.

ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾಡಳಿತ ಸದ್ಯಕ್ಕೆ ಜೆಎಂಸಿ ಸರ್ವೇಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರೈತರೊಂದಿಗೆ ಮಾತುಕತೆ ನಡೆಸಿದ ಬಳಿಕ ಒಮ್ಮತದ ಮೂಲಕ ಸರ್ವೇ ಪುನರಾರಂಭಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಇದೇ ವೇಳೆ, ಯೋಜನೆಗೆ ಒಪ್ಪಿಗೆ ನೀಡಿರುವ ರೈತರ ಜಮೀನುಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಸರ್ವೇ ನಡೆಸಲು ಸಿದ್ಧತೆ ನಡೆಯುತ್ತಿದೆ. ಅಗತ್ಯವಿದ್ದರೆ ಹೆಚ್ಚುವರಿ ಪೊಲೀಸ್ ಪಡೆಯನ್ನೂ ನಿಯೋಜಿಸುವ ಸಾಧ್ಯತೆ ಇದೆ. ಬಿಡದಿ ಟೌನ್‌ಶಿಪ್ ಯೋಜನೆ ಘೋಷಣೆಯಾದ ದಿನದಿಂದಲೇ ಭೂಸ್ವಾಧೀನ, ಪರಿಹಾರ ಮತ್ತು ರೈತರ ಹಿತಾಸಕ್ತಿ ಕುರಿತು ವಿರೋಧ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿ ಯೋಜನೆ ಮತ್ತು ರೈತರ ಆತಂಕದ ನಡುವೆ ವಿವಾದ ಮುಂದುವರಿದಿದೆ.







