ನಟ ಯೋಗಿ ನೋಡ ನೋಡುತ್ತಲೇ 51ನೇ ಸಿನಿಮಾಗೆ ಹೀರೋ. ಹೌದು, ಲೂಸ್ ಮಾದ ಯೋಗಿ ಸಿನಿಮಾರಂಗಕ್ಕೆ ಕಾಲಿಟ್ಟು ಎರಡು ದಶಕ ಕಳೆದಿದೆ. ಈಗ ಅವರು ಹೊಸ ಸಿನಿಮಾಗೆ ಹೀರೋ ಆಗಿದ್ದಾರೆ. ಆ ಸಿನಿಮಾಗೆ “ಫಾರೆವರ್” ಎಂದು ನಾಮಕರಣ ಮಾಡಲಾಗಿದೆ. ಅಂದಹಾಗೆ, ಇದು ಸುಪ್ರೀಮ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಎಂ.ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣ ಮಾಡುತ್ತಿದ್ದಾರೆ.

“ಚಂದ್ರಿಕ” ಖ್ಯಾತಿಯ ಯೋಗೇಶ್ ಎಂ ಈ ಸಿನಿಮಾದ ನಿರ್ದೇಶಕರು. “ಫಾರೆವರ್” ಚಿತ್ರಕ್ಕೆ ಪೂಜೆ ನಡೆದಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಶಾಸಕ ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದ್ದಾರೆ. “ನಾಗರಹಾವು” ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದ್ದಾರೆ.

“ನಾನು ಹಾಗೂ ಧ್ರುವ ಸರ್ಜಾ ಒಂದೇ ಸ್ಕೂಲ್ ನಲ್ಲಿ ಓದಿದವರು. ಅವರು ನನ್ನ ಪ್ರೀತಿಯ ಗೆಳೆಯ. ಅವರು ಬಂದು ನಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಖುಷಿಯಾಗಿದೆ. ಸುಮಾರು ಎರಡು ವರ್ಷಗಳ ನಂತರ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರವಿದು. ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ. ನಿರ್ದೇಶಕರು ಒಂದೊಳ್ಳೆ ಕಥೆ ಬರೆದಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಫಸ್ಟ್ ಲುಕ್ ಪೋಸ್ಟರ್ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಅಲ್ಲದೆ ಮತ್ತೊಂದು ಇದೆ. ಅದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ.

ನಾನು ತುಂಬಾ ಬೈಕ್ ಇಷ್ಟ ಪಡುತ್ತೇನೆ. ಬೈಕ್ ರೈಡರ್ ಕೂಡ. ಈ ಕಥೆ ಅದಕ್ಕೆ ಹತ್ತಿರವಾಗಿರುವುದು ಮತ್ತಷ್ಟು ಇಷ್ಟವಾಯಿತು. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುವುದಾಗಿ ಹೇಳಿರುವ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ಹೀರೋ ಯೋಗಿ.

ನಾನು ಮೂರು ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ವಿಮಾನ ಹತ್ತಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟು ಈ ಚಿತ್ರದ ಕಥೆ ಬರೆಯುತ್ತಿದ್ದೆ. ಪ್ರತಿಬಾರಿ ಯೋಗಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗ ಈ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರ ಆರಂಭ ಮಾಡೋಣ ಅಂತ ಹೇಳುತ್ತಿದ್ದೆ. ಕಾಲ ಈಗ ಕೂಡಿ ಬಂದಿದೆ. ಇತ್ತೀಚೆಗಷ್ಟೇ ಯೋಗಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಮುಹೂರ್ತ ನಡೆದಿರುವುದು ಖುಷಿಯಾಗಿದೆ. ನಮ್ಮ ಚಿತ್ರಕ್ಕೆ “ಯುಗ ಮರೆಯದ ಪ್ರೇಮ ಕಥೆ” ಎಂಬ ಅಡಿಬರಹವಿದೆ. ಹಾಗಾಗಿ ಇದೊಂದು ಪ್ರೇಮಕಥೆ. ಆದರೆ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ವಿಶೇಷವಾದ್ದದ್ದು ಮತ್ತೊಂದಿದೆ ಅದು ಸಸ್ಪೆನ್ಸ್ ಎಂದರು ನಿರ್ದೇಶಕ ಯೋಗೇಶ್ ಮುನಿಸಿದ್ದಪ್ಪ.

ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಂ.ವೆಂಕಟನಾರಾಯಣ(ಟಾಗೂರ್ ಕೃಷ್ಣ). ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದರು ನಾಯಕಿ ಆಕಾಂಕ್ಷ ರಾವ್ ಪ್ರದ್ಯೂತನ್ ಸಂಗೀತವಿದೆ. ಸಂಕೇತ್ ಕ್ಯಾಮೆರಾ ಹಿಡಿಯುತ್ತಿದ್ದಾರೆ.






