ನವದೆಹಲಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಟನಿಗೆ ನ್ಯಾಯಾಲಯವು ಎರಡು ತಿಂಗಳ ಕಾಲಾವಕಾಶ ನೀಡಿದೆ.

ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜೈಲು ಶಿಕ್ಷೆಯ ತೀರ್ಪು ಕೊಡುವ ಮೂಲಕ ಶಾಕ್ ನೀಡಿದೆ. ಹಲವು ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಟನಿಗೆ ವಿಧಿಸಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠ, ಈ ತೀರ್ಪು ನೀಡಿದೆ. ರಾಜ್‌ಪಾಲ್ ಯಾದವ್ ವಿರುದ್ಧದ ಏಳು ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರಲಿವೆ ಎಂದು ಕೋರ್ಟ್ ತಿಳಿಸಿದೆ. ಇದರೊಂದಿಗೆ, ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂ. ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ.

ಕೇವಲ ರಾಜ್‌ಪಾಲ್ ಯಾದವ್ ಮಾತ್ರವಲ್ಲ. ಅವರ ಪತ್ನಿ ರಾಧಾ ಯಾದವ್ ಅವರಿಗೂ ಕೋರ್ಟ್ ದಂಡ ವಿಧಿಸಿದೆ. ಪ್ರತಿ ಪ್ರಕರಣದಲ್ಲೂ ದೂರುದಾರರಿಗೆ ತಲಾ 5 ಕೋಟಿ 51 ಲಕ್ಷದ 380 ರೂಗಳನ್ನು ಪಾವತಿಸುವಂತೆ ರಾಧಾ ಯಾದವ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿಂದೆ ರಾಜ್‌ಪಾಲ್ ಯಾದವ್ ಪಾವತಿಸಿದ್ದ 2.25 ಕೋಟಿ ರೂ. ಬಾಕಿ ಮೊತ್ತದಲ್ಲಿ ಕಡಿತಗೊಳಿಸಿ ಹೊಂದಾಣಿಕೆ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂಧಾನದ ಮೂಲಕ ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಕೋರ್ಟ್‌ಗೆ ಈ ಹಿಂದೆ ಹಲವು ಬಾರಿ ಭರವಸೆ ನೀಡಿದ್ದರು. ಸೆಟಲ್‌ಮೆಂಟ್ ಮಾಡಿಕೊಳ್ಳಲು ನ್ಯಾಯಾಲಯವು ಅವರಿಗೆ ಹತ್ತಾರು ಬಾರಿ ಅವಕಾಶಗಳನ್ನು ನೀಡಿತ್ತಾದರೂ, ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ವಿಚಾರಣೆಯ ಕೊನೆಯ ಹಂತದಲ್ಲಿ, ದೂರುದಾರ ಕಂಪನಿಯಾದ ‘ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ಗೆ ಇನ್ನು ಮುಂದೆ ಯಾವುದೇ ಹಣ ಪಾವತಿಸಲು ಸಾಧ್ಯವಿಲ್ಲ, ಬದಲಿಗೆ ತಾವು ಜೈಲಿಗೆ ಹೋಗಲು ಸಿದ್ಧ ಎಂದು ರಾಜ್‌ಪಾಲ್ ಯಾದವ್ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಸದ್ಯ ದೆಹಲಿ ಹೈಕೋರ್ಟ್ ನೀಡಿರುವ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್‌ಪಾಲ್ ಯಾದವ್ ಅವರಿಗೆ ನ್ಯಾಯಾಲಯವು ಎರಡು ತಿಂಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ಅವರ ಶಿಕ್ಷೆ ಜಾರಿಗೆ ತಡೆ ಇರಲಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಪರಿಹಾರ ಸಿಗುತ್ತೋ, ಜೈಲು ಪಾಲಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.






