ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ಪ್ರದೇಶದಲ್ಲಿ ಅಪಘಾತಕ್ಕೀಡಾದ ಘಟನೆ ನಡೆದಿದೆ.ಮಾಹಿತಿಯ ಪ್ರಕಾರ, KA01-MU-9969 ನೋಂದಣಿ ಸಂಖ್ಯೆಯ ಫೋರ್ಡ್ ಎಂಡೋವರ್ ಕಾರು ರಸ್ತೆದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದ ತಕ್ಷಣ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿದ್ದು, ಈ ವೇಳೆ ಕಾರಿನಲ್ಲಿದ್ದ ವಿನೀಶ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದುಬಂದಿದೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಇದೇ ವೇಳೆ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿರುವ ನಟ ದರ್ಶನ್ ಅವರ ಕುಟುಂಬಕ್ಕೆ ಈ ಘಟನೆ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ. ದರ್ಶನ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಪುತ್ರ ವಿನೀಶ್ ರಸ್ತೆ ಅಪಘಾತ ಪ್ರಕರಣದಲ್ಲಿ ಸುದ್ದಿಯಾಗಿದ್ದಾರೆ.

ಇನ್ನೊಂದೆಡೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಪರವಾಗಿ ವಾದಿಸುತ್ತಿದ್ದ ಹಿರಿಯ ವಕೀಲ ಸುನೀಲ್ ಕುಮಾರ್ ಅವರು ಪ್ರಕರಣದಿಂದ ಹಿಂದೆ ಸರಿದಿರುವುದು ಕಾನೂನು ಹೋರಾಟದಲ್ಲಿ ಹೊಸ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.






