ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಲೇವಡಿ ಮಾಡುವ ಕರ್ನಾಟಕ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ ಎಂದಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಆರ್ಎಸ್ಎಸ್ ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ ಎಂದು ಆರ್ಎಸ್ಎಸ್ನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷ ಏಕೆ ಬೇಕಾಯಿತು ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ. ಅವರು ನಿಜವಾಗಿ ಯಾರ ಸಂವಿಧಾನಕ್ಕೆ ನಿಷ್ಠೆ ತೋರುತ್ತಾರೆ — ಬಾಬಾಸಾಹೇಬರ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ.

ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು, ತೆರಿಗೆ ಪಾವತಿಸಲು ಏಕೆ ನಿರಾಕರಿಸುತ್ತಾರೆ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ. ಆರ್ಎಸ್ಎಸ್ ಬೋಧಿಸುವುದನ್ನು ಆರ್ಎಸ್ಸ್ಗೆ ಪಾಲಿಸುವಂತೆ ಕೇಳಿಕೊಂಡರೆ – ಬಿಜೆಪಿ ಬುಸುಗುಡುತ್ತದೆ. ಬಿಜೆಪಿ ಎಂದಿಗೂ ಕೇವಲ ಆರ್ಎಸ್ಎಸ್ನ ಜೊತೆಗಾರನನ್ನ, ಬದಲಿಗೆ ಅದು ಸದಾ ಆರ್ಎಸ್ಎಸ್ನ ಸಾಧನ ಆಗಿದೆ. ಬಿಜೆಪಿಯ ಪ್ರತಿ ಬುಸುಗುಡುವಿಕೆ, ಅದರ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.






