2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಅಕ್ಟೋಬರ್ 4ರಿಂದ ನವೆಂಬರ್ 21ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ಆಯೋಜಿಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಮೇ ತಿಂಗಳಲ್ಲಿ ಅಹಮದಾಬಾದ್ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ದಿನಾಂಕಗಳಿಗೆ ಒಪ್ಪಿಗೆ ದೊರೆತಿದ್ದು, ಜುಲೈನಲ್ಲಿ ಎಡಿನ್ಬರ್ಗ್ನಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂತಿಮ ಅನುಮೋದನೆ ಸಿಗುವ ನಿರೀಕ್ಷೆಯಿದೆ.
ಒಟ್ಟು 54 ಪಂದ್ಯಗಳ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವು ಪ್ರಮುಖ ಆತಿಥೇಯ ರಾಷ್ಟ್ರವಾಗಲಿದ್ದು, ಕನಿಷ್ಠ 41 ಪಂದ್ಯಗಳು ಅಲ್ಲಿನ ಎಂಟು ಕ್ರೀಡಾಂಗಣಗಳಲ್ಲಿ ನಡೆಯುವ ಸಾಧ್ಯತೆಯಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಹಾಗೂ ವಿಕ್ಟೋರಿಯಾ ಫಾಲ್ಸ್ನ ಮೈದಾನಗಳಲ್ಲಿ 8ರಿಂದ 10 ಪಂದ್ಯಗಳು ನಡೆಯಲಿದ್ದು, ನಮೀಬಿಯಾ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಜಿಂಬಾಬ್ವೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಫೇಲ್ ಮೊಸಿ-ಓವಾ-ತುನ್ಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವೂ ವಿಶ್ವಕಪ್ ಪಂದ್ಯಗಳಿಗೆ ಪ್ರಮುಖ ಕೇಂದ್ರವಾಗುವ ಸಾಧ್ಯತೆ ಇದೆ. ಈ ಮೈದಾನವನ್ನು ಮುಂದಿನ ವರ್ಷ ಅಧಿಕೃತವಾಗಿ ಉದ್ಘಾಟಿಸುವ ಯೋಜನೆ ರೂಪಿಸಲಾಗಿದೆ.2003ರ ಬಳಿಕ ಮೊದಲ ಬಾರಿಗೆ ಪುರುಷರ ಏಕದಿನ ವಿಶ್ವಕಪ್ ಟೂರ್ನಿ ಆಫ್ರಿಕಾ ಖಂಡಕ್ಕೆ ಮರಳುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾವು 2007ರ ಟಿ20 ವಿಶ್ವಕಪ್, 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಮಹಿಳಾ ಟಿ20 ವಿಶ್ವಕಪ್ಗೆ ಯಶಸ್ವಿಯಾಗಿ ಆತಿಥ್ಯ ವಹಿಸಿತ್ತು.

ಈ ಬಾರಿಯ ವಿಶ್ವಕಪ್ನಲ್ಲಿ 14 ತಂಡಗಳು ಪಾಲ್ಗೊಳ್ಳಲಿದ್ದು, ಕಳೆದ ಎರಡು ಆವೃತ್ತಿಗಳಲ್ಲಿ ಇದ್ದ 10 ತಂಡಗಳ ಮಾದರಿಯಿಂದ ಮತ್ತೆ ವಿಸ್ತೃತ ಸ್ವರೂಪಕ್ಕೆ ಟೂರ್ನಿ ಮರಳುತ್ತಿದೆ. ತಂಡಗಳನ್ನು ತಲಾ ಏಳರಂತೆ ಎರಡು ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ.
ಆತಿಥೇಯ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನೇರ ಪ್ರವೇಶ ಪಡೆಯಲಿದ್ದು, ನಮೀಬಿಯಾ ತಂಡವು ಅರ್ಹತಾ ಸುತ್ತಿನ ಮೂಲಕ ಸ್ಥಾನ ಪಡೆಯಬೇಕಾಗಿದೆ.






