ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಎರಡು ವರ್ಷಗಳ ನಂತರ ಅಧಿಕಾರ ಹಸ್ತಾಂತರಿಸುವ ಒಪ್ಪಂದ ನಡೆದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೆಲ ತಿಂಗಳುಗಳ ಹಿಂದೆ ನೀಡಿದ್ದ ಸಂದರ್ಶನದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಬಂದಿದೆ.
ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರನ್ನು ಲೋಕಭವನದಲ್ಲಿ ಭೇಟಿ ಮಾಡಲು ಸಮಯ ಕೇಳಿರುವ ಹಿನ್ನೆಲೆ, ರಾಜೀನಾಮೆ ಕುರಿತು ಊಹಾಪೋಹಗಳು ಮತ್ತಷ್ಟು ಗರಿಗೆದರಿವೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದಲ್ಲಿ ಇನ್ನೂ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಹಿಂದುಳಿದ ವರ್ಗದ ಏಳಿಗೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ” – ಸುನಿಲ್ ಕುಮಾರ್
ಬಿಜೆಪಿ ನಾಯಕ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, “ಹಿಂದುಳಿದ ವರ್ಗದ ನಾಯಕರನ್ನು ಕಾಂಗ್ರೆಸ್ ಯಾವತ್ತೂ ಸಹಿಸಿಲ್ಲ. ದೇವರಾಜ್ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದಂತೆ ಇದೀಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರ ಮಾಡಲಾಗುತ್ತಿದೆ. ಇದು ಓಬಿಸಿ ಸಮುದಾಯಕ್ಕೆ ಕಾಂಗ್ರೆಸ್ ನೀಡುತ್ತಿರುವ ಮತ್ತೊಂದು ದ್ರೋಹ” ಎಂದು ಆರೋಪಿಸಿದರು.
“ರಾಜ್ಯಕ್ಕೆ ಬೇಕಾಗಿರುವುದು ಸರ್ಕಾರ ಬದಲಾವಣೆ” – ಆರ್. ಅಶೋಕ
ವಿಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, “ಕರ್ನಾಟಕಕ್ಕೆ ಈಗ ಮುಖ್ಯಮಂತ್ರಿ ಬದಲಾವಣೆ ಮಾತ್ರ ಸಾಲದು, ಜನವಿರೋಧಿ ಕಾಂಗ್ರೆಸ್ ಸರ್ಕಾರವೇ ಬದಲಾಗಬೇಕು. ಕಾಂಗ್ರೆಸ್‌ಗೆ ಕುರ್ಚಿ ಮತ್ತು ಬೊಕ್ಕಸ ಲೂಟಿ ಮಾಡುವುದೇ ಏಕೈಕ ಅಜೆಂಡಾ” ಎಂದು ಕಿಡಿಕಾರಿದರು.
“ಸಿದ್ದರಾಮಯ್ಯ ಹಳೇ ಹುಲಿ” – ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಅವರು ಹಳೇ ಹುಲಿ. ಅವರು ರಾಜೀನಾಮೆ ನೀಡಿದ ನಂತರವೇ ಎಲ್ಲವೂ ಸ್ಪಷ್ಟವಾಗಲಿದೆ. ಅವರು ಮುಂದಿನ ರಾಜಕೀಯ ಹೆಜ್ಜೆ ಏನು ಇಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು” ಎಂದರು.
“ದಲಿತರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನವೇ ಇಲ್ಲ” – ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ದಲಿತರು ಕಾಂಗ್ರೆಸ್‌ಗೆ ಕೇವಲ ಮತಬ್ಯಾಂಕ್ ಮಾತ್ರ. ಅಧಿಕಾರ ಸಿಕ್ಕ ಬಳಿಕ ಅವರನ್ನು ಕಡೆಗಣಿಸುವುದು ಕಾಂಗ್ರೆಸ್‌ನ ಚಾಳಿ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ನಿರ್ಧಾರ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
“ಹೊಸ ಎಟಿಎಂ ಗೇಟ್‌ಕೀಪರ್ ಹುಡುಕುತ್ತಿದೆ ಕಾಂಗ್ರೆಸ್” – ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, “ಮುಖ್ಯಮಂತ್ರಿಯನ್ನು ಬದಲಿಸಿದರೆ ರಾಜ್ಯದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಹಳೇ ಬಾಟಲಿಯಲ್ಲಿ ಹೊಸ ವೈನ್ ಹಾಕಿದಂತಾಗುತ್ತದೆ. ರಾಜ್ಯದ ಖಜಾನೆಯಲ್ಲಿ ಹಣವೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಹೊಸ ಎಟಿಎಂ ಗೇಟ್‌ಕೀಪರ್ ಹುಡುಕುತ್ತಿದೆ” ಎಂದು ಟೀಕಿಸಿದರು.
“ರೈತರು ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ” – ಸಿಟಿ ರವಿ
ವಿಧಾನ ಪರಿಷತ್ ಸದಸ್ಯ ಸಿಟಿ ರವಿ, “ರೋಮ್‌ಗೆ ಬೆಂಕಿ ಬಿದ್ದಾಗ ನಿರೊ ಪಿಟೀಲು ನುಡಿಸುತ್ತಿದ್ದನಂತೆ. ಅದೇ ರೀತಿ ರೈತರು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ಮುಂದೆ ನಿಂತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಸಿದ್ದರಾಮಯ್ಯರನ್ನು ಕೆಳಗಿಳಿಸುವ ಪರಿಣಾಮ ಕಾಂಗ್ರೆಸ್‌ಗೆ ಕಾಡಲಿದೆ” – ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಸಿದ್ದರಾಮಯ್ಯ ಓಬಿಸಿ ಸಮುದಾಯದ ಪ್ರಭಾವಿ ನಾಯಕ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸಾಮಾನ್ಯ ಬೆಳವಣಿಗೆಯಲ್ಲ. ಇದರ ಪರಿಣಾಮ ಕಾಂಗ್ರೆಸ್ ಮಾತ್ರವಲ್ಲ, ಇಂಡಿಯಾ ಮೈತ್ರಿಕೂಟಕ್ಕೂ ತಟ್ಟಲಿದೆ” ಎಂದು ಎಚ್ಚರಿಸಿದರು.






