ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಸೂಚಿಸಿರುವಂತೆ ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ನಡುವೆಯೇ ಸಿದ್ದರಾಮಯ್ಯ ಬೆಂಗಲಿಗರು ರಾಜೀನಾಮೆ ನೀಡದಂತೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ರಾಜೀನಾಮೆಯ ಸುಳಿವು ನೀಡುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್ನಲ್ಲಿ ಕುತೂಹಲ
ಸಿದ್ದರಾಮಯ್ಯ ಅವರ ಅಧಿಕೃತ ಖಾತೆಯಿಂದ, ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ ಎಂದು ಹೇಳುವ ಮೂಲಕ ತಮ್ಮ ಸಾಧನೆಯನ್ನು ಕನ್ನಡಿಗರ ಮುಡಿಗೇರಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ತಿಳಿಸಿದ್ದಾರೆ.

ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ನಾವು ಜಾರಿಗೆ ತಂದ ಗೃಹಜ್ಯೋತಿ ಯೋಜನೆ ಇಂದು ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ. ಈ ಯೋಜನೆಯಡಿ ರಾಜ್ಯದ ಒಟ್ಟು 1.64 ಕೋಟಿ ಕುಟುಂಬಗಳಿಗೆ ಮಾಸಿಕ ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ ಯೋಜನೆಗಾಗಿ ₹26,115 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ ಎಂದು ಸಿದ್ದರಾಮಯ್ಯ ಗೃಹ ಜ್ಯೋತಿ ಯೋಜನೆಯ ಯಶೋಗಾಥೆಯನ್ನು ಬಿಚ್ಚಿಟ್ಟಿದ್ದಾರೆ.
ಹೀಗಾಗಿ ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ನಡುವೆಯೇ ಸಿದ್ದರಾಮಯ್ಯ ಈ ಪೋಸ್ಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.





