• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಳ್ಳುವುದು ಪ್ರಜಾತಂತ್ರದ ಅವಸಾನದ ಆರಂಭ

ಪ್ರತಿಧ್ವನಿ by ಪ್ರತಿಧ್ವನಿ
May 26, 2026
in ಅಂಕಣ
0
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌
Share on WhatsAppShare on FacebookShare on Telegram

ನಾ ದಿವಾಕರ
ಭಾರತದ ಪ್ರಜಾತಂತ್ರ ವ್ಯವಸ್ಥೆ ಹಲವು ಮಗ್ಗುಲುಗಳಿಂದ ಹಲ್ಲೆಗೊಳಗಾಗುತ್ತಿದೆ. ಮೂಲತಃ ತಳಪಾಯದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳೇ ಇಲ್ಲದ ಒಂದು ದೇಶದಲ್ಲಿ ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳನ್ನು ಬಿತ್ತುವ ಕಠಿಣ ಕೆಲಸವನ್ನು ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ನಿರ್ವಹಿಸಲಾಗಿತ್ತು. ರಾಜಕೀಯ ತತ್ವ ಸಿದ್ಧಾಂತಗಳ ವೈವಿಧ್ಯತೆ ಮತ್ತು ವೈರುಧ್ಯಗಳ ಹೊರತಾಗಿಯೂ ಈ ಬಿತ್ತನೆಯ ಕಾರ್ಯ ಯಶಸ್ವಿಯಾಗಲು ಕಾರಣ, ಭಾರತದ ಬಲಾಢ್ಯ ಸಮಾಜಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಸಹ ತಮ್ಮ ಸುಭದ್ರ ಅಡಿಪಾಯವನ್ನು ಕಂಡುಕೊಂಡಿರಲಿಲ್ಲ. ಈ ಪ್ರಕ್ರಿಯೆಗೆ ಅಗತ್ಯವಾಗಿದ್ದುದು ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸಾಮರ್ಥ್ಯ, ಅರ್ಥಾತ್‌ ದೇಶದ ಸಂಚಿತ ಸಂಪತ್ತಿನ ಒಡೆಯರ ಬೆಂಬಲ. ಕಾರ್ಪೋರೇಟ್‌ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಇದು ಆಪ್ತ ಬಂಡವಾಳಶಾಹಿಗೆ ಆಪ್ತವಾಗುತ್ತದೆ. ಇದು ಸಾಕಾರಗೊಂಡಿರುವುದರ ಪ್ರಾತ್ಯಕ್ಷಿಕೆಯನ್ನು ಕಳೆದ 12 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ನೋಡುತ್ತಿದ್ದೇವೆ.

ADVERTISEMENT

ಈ ತಾತ್ವಿಕ ಬಲವೇ ಬಿಜೆಪಿ ಸರ್ಕಾರಕ್ಕೆ ಜನವಿರೋಧಿ ನೀತಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ನೆರವಾಗುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಸಿಎಎ, ಎನ್‌ಆರ್‌ಸಿ, ಕಾರ್ಮಿಕ ಸಂಹಿತೆಗಳು, ವಿಬಿ ಗ್ರಾಮ್‌ ಜಿ ಮತ್ತು ಈಗ ವಿವಾದಾಸ್ಪದವಾಗಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)‌, ಈ ಎಲ್ಲ ಆಡಳಿತ ನೀತಿಗಳು ಸರಾಗವಾಗಿ ಶಾಸನ ಗ್ರಂಥಗಳನ್ನು ಪ್ರವೇಶಿಸಲು ನೆರವಾಗಿರುವುದು ಈ ತಾತ್ವಿಕ ಬಲ. ಇದರ ಆವರಣದಲ್ಲಿ ಮಾರುಕಟ್ಟೆಯನ್ನು ಪ್ರತಿನಿಧಿಸುವ ಉದ್ಯಮಿಗಳು ಆರ್ಥಿಕ ರೂಪದಲ್ಲಿ ಕಂಡರೆ, ಎನ್‌ಡಿಎ ಸರ್ಕಾರಕ್ಕೆ ಬೇಷರತ್‌ ಬೆಂಬಲ ನೀಡಿ ಹೆಗಲು ನೀಡುತ್ತಿರುವ ಅಂಬೇಡ್ಕರ್‌ವಾದಿ-ಸಮಾಜವಾದಿ ಸಂಸದರು ಮತ್ತು ಪ್ರಾದೇಶಿಕ ಪಕ್ಷಗಳು ಸಾಂವಿಧಾನಿಕ ನೆಲೆಯಲ್ಲಿ ಗೋಚರಿಸುತ್ತಾರೆ. ಕರ್ನಾಟಕ ಮಣ್ಣಿನ ಮಕ್ಕಳ ಪಕ್ಷದಿಂದ ಬಿಹಾರದ ಲೋಹಿಯಾ ಸಮಾಜವಾದಿಗಳವರೆಗೆ ಇದನ್ನು ಗುರುತಿಸಬಹುದು. ಸಂವಹನ ಮಾಧ್ಯಮಗಳನ್ನೂ ಒಳಗೊಂಡಂತೆ ಸಂವಿಧಾನ-ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳನ್ನು ಶಿಥಿಲಗೊಳಿಸಲು ಅಥವಾ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ನೆರವಾಗುವುದು ಈ ʼ ಸಂಚಿತ ಶಕ್ತಿ ʼ (Accumulated Power) .

ಮತದಾರನ ಅಸ್ತಿತ್ವಕ್ಕೆ ಅಡಿಪೆಟ್ಟು
ಈಗ ಕೇಂದ್ರ ಸರ್ಕಾರದ ಆಳ್ವಿಕೆಗೆ ಬುನಾದಿಯಾಗಿರುವುದು ಈ ಸಂಚಿತ ಶಕ್ತಿ. ಮಾಜಿ ಚುನಾವಣಾ ಆಯುಕ್ತ ಮತ್ತು ಹಣಕಾಸು ಕಾರ್ಯದರ್ಶಿ ಅಶೋಕ್‌ ಲವಾಸಾ ಹಿಂದೂ ಪತ್ರಿಕೆಯ ಲೇಖನವೊಂದರ ಶೀರ್ಷಿಕೆಯಲ್ಲಿ ಈ ಸನ್ನಿವೇಶವನ್ನು ಒಂಟಿ ಕುದುರೆ ಸ್ಪರ್ಧೆ (One Horse Race) ಎಂದು ಬಣ್ಣಿಸುತ್ತಾರೆ. ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕಾದರೆ ಅಲ್ಲಿ ಸ್ಪರ್ಧೆ ಅತ್ಯವಶ್ಯವಾಗಿ ಇರಬೇಕು. ಈ ಲೇಖಕರು ಸ್ಪರ್ಧೆಯನ್ನು ಪ್ರಜಾಸತ್ತೆಯ ಹಿಮೋಗ್ಲೋಬಿನ್‌ (Hemoglobin) ಎಂದು ವರ್ಣಿಸುತ್ತಾರೆ. ಆಡಳಿತಾರೂಢ ಪಕ್ಷವೊಂದು ಎದುರಿಸುವ ರಾಜಕೀಯ ವಿರೋಧಿಗಳ ಬಲವೇ , ಚುನಾವಣೆಯ ಅಂಗಳದಲ್ಲಿ TINA (ಯಾವುದೇ ಪರ್ಯಾಯ ಇಲ್ಲದ) ಸನ್ನಿವೇಶವನ್ನು ತಪ್ಪಿಸುತ್ತದೆ. ದುರದೃಷ್ಟವಶಾತ್‌ ಭಾರತದ ರಾಜಕಾರಣದಲ್ಲಿ ಪರ್ಯಾಯ ಎನ್ನುವುದು ಸ್ಪಷ್ಟವಾಗಿ ನಿರ್ವಚಿಸಲಾಗದ, ಸಾಂದರ್ಭಿಕವಾಗಿ ವ್ಯಕ್ತವಾಗುವ ಒಂದು ರಾಜಕೀಯ ಪ್ರಕ್ರಿಯೆಯಾಗಿದೆ.

ಈ ವಿಷಮ ಸನ್ನಿವೇಶವೇ ಕೇಂದ್ರ ಬಿಜೆಪಿ ಸರ್ಕಾರವನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಜಾರಿಯಲ್ಲಿರುವ ಜನಪರ ಶಾಸನಗಳನ್ನು ಅಳಿಸಿ, ಹೊಸ ಜನವಿರೋಧಿ-ಮಾರುಕಟ್ಟೆ ಪರ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸುತ್ತಿದೆ. ಈಗ ಹಿಂದುತ್ವ ರಾಜಕಾರಣದ ಹದ್ದಿನ ಕಣ್ಣಿಗೆ ಗುರಿಯಾಗಿರುವುದು ಪ್ರಜಾಪ್ರಭುತ್ವದ ಜೀವನಾಡಿ ಎಂದೇ ಪರಿಗಣಿಸಲ್ಪಡುವ ʼ ಮತದಾರರು ʼ. ಹಲವು ವರ್ಷಗಳಿಂದ ಮತ ಚಲಾಯಿಸುತ್ತಾ ಬಿಜೆಪಿಯನ್ನೂ ಒಳಗೊಂಡಂತೆ, ರಾಜಕೀಯ ಪಕ್ಷಗಳನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ ಭಾರತದ ಪೌರರನ್ನು (Citizens), ಸಾಂವಿಧಾನಿಕವಾಗಿ ಸಮ್ಮತಿಸಲಾಗದ ಧಾರ್ಮಿಕ ಅಸ್ಮಿತೆಗಳ ಆಧಾರದಲ್ಲಿ ವಿಂಗಡಿಸಿ, ಮತವಂಚಿತರನ್ನಾಗಿ ಮಾಡುವ ಪ್ರಕ್ರಿಯೆಗೆ ಬಿಜೆಪಿ ಸರ್ಕಾರ ಚಾಲನೆ ನೀಡಿದೆ. ಎಸ್‌ಐಆರ್‌ ಎಂದು ಕರೆಯಲಾಗುವ ಪ್ರಕ್ರಿಯೆಗೆ ಸಾಂವಿಧಾನಿಕ ಮಾರ್ಗವನ್ನೇ ಅನುಸರಿಸಿರುವುದು ಗಮನಿಸಬೇಕಾದ ಅಂಶ.
ಆದರೆ ಎಸ್‌ಐಆರ್‌ ಪ್ರಕ್ರಿಯೆ ಸಾಂದರ್ಭಿಕವಾಗಿ ಸಂವಿಧಾನದ ಸಮ್ಮತಿ ಪಡೆದರೂ , ಈಗ ನಡೆಯುತ್ತಿರುವ ಎಸ್‌ಐಆರ್‌ ಮಾದರಿ ಮತ್ತು ಅದನ್ನು ನಿರ್ದೇಶಿಸುತ್ತಿರುವ ನಿಯಮಗಳು ಅಸಾಂವಿಧಾನಿಕ ಎಂದು ಹಲವಾರು ಸಂವಿಧಾನ-ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾಗರಿಕ ಸಂಘಟನೆಗಳು (Citizen Groups ) ಮತ್ತು ನೂರಾರು ನಿವೃತ್ತ ನ್ಯಾಯಾಧೀಶರು ಈ ಉಪಕ್ರಮವನ್ನು ಅಸಾಂವಿಧಾನಿಕ ಎಂದು ಗುರುತಿಸಿದ್ದು, ಈಗ ಚೆಂಡು ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ. ಆದರೆ ನ್ಯಾಯಾಂಗ ವಿಚಾರಣೆಗೊಳಪಟ್ಟಿದ್ದರೂ (Sub judice) ಎಸ್‌ಐಆರ್‌ ಜಾರಿಗೊಳಿಸಲು ಯಾವುದೇ ಅಡ್ಡಿಯಾಗಿಲ್ಲ. ನಾಗರಿಕ ಸಂಘಟನೆಗಳ, ಮಾನವ ಹಕ್ಕು ಸಂಘಟನೆಗಳ ಪ್ರತಿರೋಧ ಬಲವಾಗಿದ್ದರೂ, ಇದಕ್ಕೆ ರಾಜಕೀಯ ಧ್ವನಿ ಇಲ್ಲದಿರುವುದು ಸೋಜಿಗದ ಸಂಗತಿ.

ಮತದಾರರ ಹಕ್ಕುಚ್ಯುತಿಯ ಹಾದಿ
ಎಸ್‌ಐಆರ್‌ ಪ್ರಕ್ರಿಯೆ 14 ರಾಜ್ಯಗಳಲ್ಲಿ ಈಗಾಗಲೇ ಪೂರ್ತಿಯಾಗಿದ್ದು ಈಗ ಕರ್ನಾಟಕದಲ್ಲಿ ಜೂನ್‌ 29ರಿಂದ ಚಾಲ್ತಿ ಪಡೆಯಲಿದೆ. ಎಸ್‌ಐಆರ್‌ ಪ್ರಕ್ರಿಯೆ ಮುಗಿದಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಯಸ್ಕ ಮತದಾರರ ಜನಸಂಖ್ಯೆಗೂ ಮತದಾರರ ಪಟ್ಟಿಯಲ್ಲಿರುವ ಸಂಖ್ಯೆಗೂ ಏಳು ಕೋಟಿ ಅಂತರ ಕಂಡುಬಂದಿದೆ. ಅಂದರೆ ಏಳು ಕೋಟಿ ಜನರು ಮತವಂಚಿತರಾಗಿದ್ದಾರೆ ಎನ್ನಲಾಗುತ್ತಿದೆ. 2024-25ರಲ್ಲಿ ಮತದಾರ ಪಟ್ಟಿಯಲ್ಲಿ (Electoral rolls) ಇದ್ದ ಮತದಾರರ ಪೈಕಿ 5 ಕೋಟಿ ಜನರು ಈಗ ಹೊರದೂಡಲ್ಪಟ್ಟಿದ್ದಾರೆ. ಈ ಹೊರಗಿಡುವಿಕೆಗೆ ಚುನಾವಣಾ ಆಯೋಗ ನೀಡಿರುವ ಕಾರಣಗಳು, “ ಗೈರುಹಾಜರಿ, ಸ್ಥಳಾಂತರಗೊಂಡವರು, ನಕಲು, ಮೃತರು (ASDD) ಅಥವಾ “ತಾರ್ಕಿಕ ವ್ಯತ್ಯಾಸ” (Logical Discrepancy ) ಇತ್ಯಾದಿ. ಈ ತಾರ್ಕಿಕ ವ್ಯತ್ಯಾಸ ಎನ್ನುವುದು ಅತಾರ್ಕಿಕ ವ್ಯಾಖ್ಯಾನ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ವೋಚ್ಛ ನ್ಯಾಯಾಲಯವೂ ಸ್ಪಷ್ಟ ವ್ಯಾಖ್ಯಾನವನ್ನು ನೀಡಲಾಗಿಲ್ಲ.
ಈಗ ಬೆಂಗಳೂರಿಗೆ ಬಂದಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್‌ ನವೀನ್‌ “ ಎಸ್‌ಐಆರ್‌ ಸರಿಯಾಗಿ ನಡೆದರೆ ಗೆಲುವು ನಮ್ಮದಾಗುತ್ತದೆ (ಕರ್ನಾಟಕದಲ್ಲಿ) ” (ಪ್ರವಾ 25 ಮೇ 2026) ಎಂದು ಹೇಳಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಜನಗಣತಿ, ಜಾತಿ ಗಣತಿ, ವಿಶೇಷ ಗಣತಿ ಮತ್ತು ಎಸ್‌ಐಆರ್‌ ಇವೆಲ್ಲವೂ ಮತದಾರರ ಪಟ್ಟಿಯನ್ನು ನವೀಕರಿಸಲು (Update ಮಾಡಲು) ನೆರವಾಗುವ ಸಾಂವಿಧಾನಿಕ ಪ್ರಕ್ರಿಯೆಗಳು. ಈ ಪ್ರಕ್ರಿಯೆಗಳೇ ಒಂದು ರಾಜಕೀಯ ಪಕ್ಷದ ಚುನಾವಣಾ ಯಶಸ್ಸನ್ನು ಖಚಿತಪಡಿಸುತ್ತದೆ ಎಂದು ಹೇಳುವುದು ಅಸಾಂವಿಧಾನಿಕವಷ್ಟೇ ಅಲ್ಲದೆ ಅಪ್ರಬುದ್ಧವೂ ಹೌದು. ಆದರೆ ಬಿಜೆಪಿ ಅಧ್ಯಕ್ಷರ ಈ ಮಾತಿನ ಒಳಸೂಕ್ಷ್ಮವನ್ನು ಗಮನಿಸಿದಾಗ ಪಶ್ಚಿಮ ಬಂಗಾಲ ಮತ್ತು ಬಿಹಾರದ ಚುನಾವಣಾ ಫಲಿತಾಂಶಗಳನ್ನು ಮರುವಿಮರ್ಶೆ ಮಾಡುವುದು ಅನಿವಾರ್ಯ ಎನಿಸುತ್ತದೆ.

ಈಗಾಗಲೇ ಹಲವಾರು ಸಂವಿಧಾನ ತಜ್ಞರು ಹೇಳಿರುವಂತೆ, ಚುನಾವಣಾ ಆಯೋಗ ಈಗ ಅನುಸರಿಸುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯ ಮಾದರಿ ಹಲವು ಲೋಪಗಳಿಂದ ಕೂಡಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ನೈಜ ಪ್ರಜೆಗಳು (True Citizens) ಮತವಂಚಿತರಾಗುತ್ತಾರೆ. ಸಂವಿಧಾನದ ಅನುಚ್ಛೇದ 326ರ ಅನುಸಾರ ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ 18 ವರ್ಷಕ್ಕೆ ಮೇಲ್ಪಟ್ಟಿರುವವರಾದರೆ, ಕಾನೂನಾತ್ಮಕವಾಗಿ ನಿಷೇಧಕ್ಕೊಳಗಾಗದೆ ಇದ್ದರೆ, ಮತದಾನದ ಹಕ್ಕನ್ನು ಪಡೆಯುತ್ತಾರೆ. ಹಾಗಾಗಿ ಮತದಾರ ಎಂಬ ಅರ್ಹತೆ ಪಡೆಯಲು ಮೂಲತಃ ಅವಶ್ಯವಾಗಿರುವುದು ದೇಶದ ಪೌರತ್ವ (Citizenship).
ಸಾಂವಿಧಾನಿಕ ನಿಯಮಗಳ ಚೌಕಟ್ಟಿನಲ್ಲಿ
ಸಂವಿಧಾನದ ಅನುಚ್ಛೇದ 324ರ ಅನ್ವಯ ಪೌರತ್ವ ಕಾನೂನು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಪೌರತ್ವವನ್ನು ನಿರ್ಧರಿಸಲು ಅಗತ್ಯವಾದ ದಾಖಲೆಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಹಕ್ಕು ಇರುವುದು ಗೃಹ ಸಚಿವರಿಗೆ ಮಾತ್ರ. ಚುನಾವಣಾ ಆಯೋಗಕ್ಕೆ ಈ ಹಕ್ಕು ಇರುವುದಿಲ್ಲ. ಆದರೂ ಎಸ್‌ಐಆರ್‌ ಜಾರಿಗೊಳಿಸುವ ಮುನ್ನ ಚುನಾವಣಾ ಆಯೋಗ ಈ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಐಆರ್‌ ಕುರಿತ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌ ಸಹ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಅಚ್ಚರಿ ಮೂಡಿಸುತ್ತದೆ. (Electoral Purges raise constitutional questions –ಪಿ ಡಿ ಟಿ ಆಚಾರಿ – ದ ಹಿಂದೂ 28 ಏಪ್ರಿಲ್‌ 2026).

ಚುನಾವಣೆಗಳನ್ನು ಎದುರಿಸಲಿದ್ದ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಕಾನೂನಿಗೆ ವಿರುದ್ಧವಾಗಿ ನಡೆಸಲಾಗಿದೆ. 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 21ರ ಅನ್ವಯ ಮತದಾರರ ಪಟ್ಟಿಯನ್ನು ಪ್ರತಿ ಮಹಾ ಚುನಾವಣೆಗಳ ಮುನ್ನ ಅಥವಾ ಉಪ ಚುನಾವಣೆಯ ಮುನ್ನ ಪರಿಷ್ಕರಿಸಬಹುದು. ಅಥವಾ ಚುನಾವಣಾ ಆಯೋಗ ಸೂಚಿಸುವ ಯಾವುದೇ ವರ್ಷದಲ್ಲಿ ಕೈಗೊಳ್ಳಬಹುದು. ಇದಲ್ಲದೆ ಒಂದು ಚುನಾವಣಾ ಕ್ಷೇತ್ರ ಅಥವಾ ಅದರ ಒಂದು ಭಾಗದಲ್ಲಿ ವಿಶೇಷ ವಿಶೇಷ ಪರಿಷ್ಕರಣೆಯನ್ನು , ದಾಖಲಿತ ಕಾರಣಗಳ ದೃಷ್ಟಿಯಿಂದ ನಡೆಸಲು ಆಯೋಗಕ್ಕೆ ಅಧಿಕಾರ ಇರುತ್ತದೆ. 1960ರ ಮತದಾರ ನೋಂದಣಿ ನಿಯಮ 25ರ ಅನುಸಾರ ಈ ಪರಿಷ್ಕರಣೆ ಚುನಾವಣೆಗೆ ಮುನ್ನ ಸಂಕ್ಷಿಪ್ತವಾಗಿಯೂ (Summarily) ಯಾವುದೇ ನಿಗದಿತ ವರ್ಷದಲ್ಲಿ ತೀವ್ರತೆಯಿಂದಲೂ (Intensively) ನಡೆಸಬಹುದು. 1950ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 21(2) ಮತ್ತು ಮತದಾರರ ನೋಂದಣಿ ನಿಯಮ 25ನ್ನು ಒಟ್ಟಾಗಿ ನೋಡಿದಾಗ, ಯಾವುದೇ ಚುನಾವಣೆಗೆ ಮುನ್ನ ಸಂಕ್ಷಿಪ್ತ ಪರಿಷ್ಕರಣೆಯನ್ನು ಮಾತ್ರ ಕೈಗೊಳ್ಳಬಹುದು. (Electoral Purges raise constitutional questions – ಪಿ ಡಿ ಟಿ ಆಚಾರಿ – ದ ಹಿಂದೂ 28 ಏಪ್ರಿಲ್‌ 2026).

ಸಾಮಾನ್ಯವಾಗಿ ತೀವ್ರ ಪರಿಷ್ಕರಣೆಯನ್ನು ಹತ್ತಿರದಲ್ಲೇ ಚುನಾವಣೆಗಳು ನಡೆಯದೆ ಇರುವ ಸಂದರ್ಭಗಳಲ್ಲಿ ಕೈಗೊಳ್ಳಬಹುದು. ಹೀಗೆ ಮಾಡುವುದರಿಂದ ಸಮಗ್ರ ಪರಿಷ್ಕರಣೆ (Comprehensive Revision) ನಡೆಸಿ ಮತದಾರ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಬಹುದು. ಇದು ದೀರ್ಘಕಾಲಿಕ ಪ್ರಕ್ರಿಯೆಯಾಗಿದ್ದು ಅವಸರದಲ್ಲಿ ಮಾಡುವಂತಹುದಲ್ಲ. ಆದರೆ ಚುನಾವಣಾ ಆಯೋಗವು ಬಿಹಾರ, ಪಶ್ಚಿಮ ಬಂಗಾಲ, ಕೇರಳ, ತಮಿಳುನಾಡು, ಚುನಾವಣೆಗಳು ಸಮೀಪಿಸುತ್ತಿರುವಾಗ ಎಸ್‌ಐಆರ್‌ ನಡೆಸಿರುವುದು ಕಾನೂನಾತ್ಮಕವಾಗಿ ಒಪ್ಪುವಂತಹುದಲ್ಲ. ಪಶ್ಚಿಮ ಬಂಗಾಲದಲ್ಲಿ ನಡೆಸಿದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 91 ಲಕ್ಷ ಮತದಾರರನ್ನು ʼ ತಾರ್ಕಿಕ ವ್ಯತ್ಯಾಸ ʼ (Logical Discrepancy)ದ ನೆಪದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಪ್ರಜೆಗಳ ಈ ರೀತಿಯ ವರ್ಗೀಕರಣವನ್ನು ಯಾವುದೇ ಚುನಾವಣಾ ಕಾನೂನಿನಲ್ಲೂ ಕಾಣಲಾಗುವುದಿಲ್ಲ. ಹಾಗಾಗಿ ಈ ವಿಶೇಷ ತೀವ್ರ ಪರಿಷ್ಕರಣೆಯ ಮೂಲ ಗುರಿಯೇ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಹಾಕುವುದಾಗಿದೆ ಎಂದು ಸ್ಪಷ್ಟವಾಗುತ್ತದೆ.

ಎಸ್‌ಐಆರ್‌ ಪ್ರಕ್ರಿಯೆಯ ಗೊಂದಲಗಳು
ಜೂನ್‌ 2025ರಲ್ಲಿ ಭಾರತೀಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಿದಾಗ , ಈ ಪ್ರಕ್ರಿಯೆಯ ಮೂಲ ಉದ್ದೇಶ ಸಂವಿಧಾನದ ಅನುಚ್ಛೇದ 326ರ ಅಡಿಯಲ್ಲಿ ಅನರ್ಹ ಮತದಾರರನ್ನು ಗುರುತಿಸುವುದಾಗಿದೆ ಎಂದು ಘೋಷಿಸಿತ್ತು. ಆದರೆ ಬಿಹಾರದಲ್ಲಾಗಲಿ ಪಶ್ಚಿಮ ಬಂಗಾಲದಲ್ಲಾಗಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣವಾದ ನಂತರ , ಈ ಅನುಚ್ಚೇದದ ಅನ್ವಯ ಅನರ್ಹಗೊಳಿಸಲಾದ ಮತದಾರರ ಹೆಸರುಗಳನ್ನು ಪ್ರಕಟಿಸಿಲ್ಲ. ಈ ಪ್ರಕ್ರಿಯೆಯಲ್ಲಿ ಪಟ್ಟಿಯಿಂದ ತೆಗೆದುಹಾಕಿರುವ ಮತದಾರರ ಪೈಕಿ ಮೃತಪಟ್ಟವರು, ಬೇರೆಡೆಗೆ ವರ್ಗಾವಣೆಯಾಗಿರುವವರು, ಒಂದಕ್ಕಿಂತಲೂ ಹೆಚ್ಚು ಪಟ್ಟಿಯಲ್ಲಿರುವ ನಕಲಿ ಮತದಾರರು ಮಾತ್ರ ಕಾಣುತ್ತಾರೆ. ಪಶ್ಚಿಮ ಬಂಗಾಲದಲ್ಲಿ ಗುರುತಿಸಿದ್ದು ʼವಿಚಾರಣೆಯಡಿಯಲ್ಲಿʼ (Under Adjudication) ಎಂದು ವರ್ಗೀಕರಿಸಲಾದ 60 ಲಕ್ಷ ಮತದಾರರನ್ನು.

ಇವರ ಪೈಕಿ 27.16 ಲಕ್ಷ ಮತದಾರರನ್ನು ಸುಪ್ರೀಂಕೋರ್ಟ್‌ ನೇಮಿಸಿದ ನ್ಯಾಯಾಂಗ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆಯ ಮೂಲಕ ಹೊರ ಹಾಕಲಾಯಿತು. ಇವರ ಮನವಿಗಳನ್ನು ಪುರಸ್ಕರಿಸಲಾಗುವುದೋ ಇಲ್ಲವೋ ಅಥವಾ ಎಂದು ಮರು ವಿಚಾರಣೆಗೊಳಪಡಿಸಲಾಗುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಲಿದೆ. ಒಂದು ವೇಳೆ ಈ 27 ಲಕ್ಷ ಮತದಾರರನ್ನು ಪರಿತ್ಯಕ್ತರೆಂದು ಪರಿಗಣಿಸಿದಲ್ಲಿ “ ಯಾವುದೇ ಮತದಾರರನ್ನು ಹೊರಹಾಕಲಾಗುವುದಿಲ್ಲ ” ಎಂಬ ಆಯೋಗದ ಘೋಷಣೆಗೆ ಅರ್ಥವೇನಿರುತ್ತದೆ ? ಒಂದು ವೇಳೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ವಿಶ್ವಾಸ ಇಲ್ಲದಿದ್ದರೆ , ಚುನಾವಣೆಗಳನ್ನು ಮುಂದೂಡಬಹುದಿತ್ತಲ್ಲವೇ ? ಏಕೆ ಸುಪ್ರೀಂಕೋರ್ಟ್‌ ಅನುಮತಿ ಕೋರಬಾರದಿತ್ತು ? ನ್ಯಾಯಾಲಯವೂ ಸಹ, ಸ್ವಲ್ಪ ಕಾಲ ತಡಮಾಡುವಂತೆ ಆಯೋಗಕ್ಕೆ ಏಕೆ ಆದೇಶಿಸಲಿಲ್ಲ. ಈ ಗಂಭೀರ ಪ್ರಶ್ನೆಗಳು ಚರ್ಚೆಗೊಳಗಾಗಬೇಕಿದೆ. (One-Horse Races are no triumph of democracy – ಅಶೋಕ್‌ ಲವಾಸಾ – ದ ಹಿಂದೂ 18-5-2026).

ಒಂದು ಅಂದಾಜಿನ ಪ್ರಕಾರ ಗುಜರಾತ್‌ ಮತ್ತು ಉತ್ತರಪ್ರದೇಶದಲ್ಲಿ ವಲಸಿಗರ ಲಕ್ಷಣಗಳು ಬೇರೆಯೇ ಆಗಿದ್ದರೂ, ಶೇಕಡಾ 17ರಷ್ಟು ವಯಸ್ಕ ಜನಸಂಖ್ಯೆ ಮತದಾರರ ಪಟ್ಟಿಯಿಂದ ಹೊರಗುಳಿಯುವ ನಿರೀಕ್ಷೆ ಇದೆ. ಚುನಾವಣಾ ಆಯೋಗದ ಅನುಸಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಕೈಗೊಂಡಿರುವುದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಸಲುವಾಗಿ, ಅಂದರೆ ಅನರ್ಹ ಮತದಾರರನ್ನು ಹೊರತುಪಡಿಸುವ ಉದ್ದೇಶದಿಂದ. ಅದರೆ ಈ ಪ್ರಕ್ರಿಯೆಯ ಸಾಂವಿಧಾನಿಕತೆಯನ್ನೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಇನ್ನೂ ವಿಚಾರಣೆಯ ಹಂತದಲ್ಲಿದೆ. ಮತದಾರರ ಪಟ್ಟಿ ಪೌರತ್ವವನ್ನು ನಿರ್ಧರಿಸುವ ಶಾಸನಬದ್ದ ದಾಖಲೆಯಾಗಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮತದಾರ ಪಟ್ಟಿಯ ವ್ಯಾಪ್ತಿಯನ್ನು ಚುನಾವಣೆಗಳ ಉದ್ದೇಶದಿಂದ ಹೊರಗೆ ವಿಸ್ತರಿಸುವುದು ಅಪಾಯಕಾರಿಯಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ಎಚ್ಚರಿಸುತ್ತಾರೆ.

ಮತದ ಮೌಲ್ಯ ಮತ್ತು ಮತದಾನದ ಪಾವಿತ್ರ್ಯ
ಈ ಸಾಂವಿಧಾನಿಕ ಆಕ್ಷೇಪ ಮತ್ತು ಸಾಮಾಜಿಕ ಆತಂಕಗಳ ನಡುವೆಯೂ ಎಸ್‌ಐಆರ್‌ ಎಲ್ಲ ರಾಜ್ಯಗಳಲ್ಲೂ ಜಗನ್ನಾಥ ರಥದಂತೆ (Juggernaut) ಮುಂದುವರೆಯುತ್ತಿದೆ. ತಮ್ಮ ಮತದಾನದ ಹಕ್ಕನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎಂಬ ಭೀತಿಯಲ್ಲಿ ಜನಸಾಮಾನ್ಯರಿದ್ದಾರೆ. ವಿಶೇಷವಾಗಿ ಅಲೆಮಾರಿ ಸಮುದಾಯಗಳು, ಬುಡಕಟ್ಟು ಕುಟುಂಬಗಳು, ವಲಸೆ ಕಾರ್ಮಿಕರು ಮತ್ತು ಅಂಚಿನಲ್ಲಿರುವ ಜನರು ಈ ಆತಂಕಕ್ಕೆ ಬಲಿಯಾಗುತ್ತಿದ್ದಾರೆ. ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳನ್ನು ಸಲ್ಲಿಸುವುದೇ ದುಸ್ತರವಾಗಿ ಕಾಣುವ ಈ ಜನಸಮುದಾಯಗಳಿಗೆ ಮತವಂಚಿತರಾಗುವ ಆತಂಕ ಕಾಡುತ್ತಿದೆ. ಎಸ್‌ಐಆರ್‌ ಸಾಂವಿಧಾನಿಕ ಪ್ರಕ್ರಿಯೆಯೇ ಆದಲ್ಲಿ ಅದನ್ನು ಸಂವಿಧಾನದ ನಿಯಮಗಳ ಅನುಸಾರ, ಶಾಸನಗಳ ಚೌಕಟ್ಟಿನ ಒಳಗೇ ನಿರ್ವಹಿಸುವುದು ಮುಖ್ಯ ಚುನಾವಣಾ ಆಯೋಗದ ಕರ್ತವ್ಯ ಮತ್ತು ಬಾಧ್ಯತೆ.

ಒಂದು ವೇಳೆ ಆಯೋಗದ ನಡೆ ತಪ್ಪಾಗಿದ್ದರೆ ಅದನ್ನು ಸರಿಪಡಿಸುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆ. ಸುಪ್ರೀಂಕೋರ್ಟ್‌ ಮುಂದಿರುವ ಹಲವಾರು ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು ಅಂತಿಮ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ. ಜನಸಾಮಾನ್ಯರ, ವಿಶೇಷವಾಗಿ ತಳಸಮಾಜದ ನಿರ್ಲಕ್ಷಿತ ಸಮುದಾಯಗಳ ಆತಂಕಗಳನ್ನು ಸಾರ್ವಜನಿಕ ಚರ್ಚೆಗೊಳಪಡಿಸಿ, ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಮುಂಚೂಣಿಯಲ್ಲಿರಬೇಕಿತ್ತು. ದುರದೃಷ್ಟವಶಾತ್‌ ಭಾರತದ ಬಹುತೇಕ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಉದ್ದೇಶಪೂರ್ವಕವಾಗಿಯೇ ಮರೆತಿವೆ. ರಾಜಕೀಯ ಪಕ್ಷಗಳೂ ಸಹ ಎಸ್‌ಐಆರ್‌ ವಿರುದ್ದ ಸ್ಪಷ್ಟ ನಿಲುವು ತಳೆಯದೆ, ಅದರ ವಿರುದ್ಧ ಜನಾಂದೋಲನಗಳನ್ನು ರೂಪಿಸದೆ ಇರುವುದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿಯಾಗಿದೆ. ನಾಗರಿಕ ಸಂಘಟನೆಗಳು (Civil Groups) ಮತ್ತು ಸಾಮಾಜಿಕ ಗುಂಪುಗಳು ನಡೆಸುತ್ತಿರುವ ಹೋರಾಟಗಳನ್ನು ಈ ಆತಂಕದ ನಡುವೆ ಇಟ್ಟು ನೋಡಬೇಕಿದೆ.
( ಮುಂದಿನ ಭಾಗದಲ್ಲಿ ಎಸ್‌ಐಆರ್‌ ಮತ್ತು ಸಾಂವಿಧಾನಿಕ ಹಕ್ಕುಗಳ ಸಂಘರ್ಷ)
-೦—೦—೦—೦–

Tags: #Constitution#DemocraticInstitutions#DemocraticValues#IndianDemocracy#InstitutionalTest#politicsDemocracyeditorialgovernanceIndiaPoliticsPoliticalAnalysispratidavaniPublicPolicyRuleOfLawSIR
Previous Post

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

Next Post

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada